ಪ್ರಯಾಗರಾಜ ಕುಂಭಮೇಳ 2025
ಎರಡೂವರೆ ಲಕ್ಷ ರುದ್ರಾಕ್ಷಿ ಧರಿಸಿದ ಮಹಾಂತ ಗೀತಾನಂದ ಗಿರಿ ಮಹಾರಾಜ್ ಅವರಿಂದ ಮಹತ್ವದ ಘೋಷಣೆ!
ಪ್ರಯಾಗರಾಜ್, ಫೆಬ್ರವರಿ 14 (ಸುದ್ದಿ) – ದೇವರನ್ನು ಮೆಚ್ಚಿಸಿ ವರವನ್ನು ಪಡೆಯುವುದು ಮತ್ತು ವರವನ್ನು ಸನಾತನಿಗಳಿಗಾಗಿ, ರಾಷ್ಟ್ರ ಮತ್ತು ಧರ್ಮದ ಒಳಿತಿಗಾಗಿ ಬಳಸುವುದು ಸಾಧುಗಳ ಕರ್ತವ್ಯವಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಎಲ್ಲಾ ಸಂತರು ಒಗ್ಗೂಡಬೇಕು. ಗುರುಗಳು ಮತ್ತು ಸಂತರ ಮಾರ್ಗದರ್ಶನದಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡಲು ಕಾರ್ಯ ಮಾಡೋಣ ಎಂದು ಶ್ರೀ ಪಂಚದಶನಾಮ್ ಆವಾಹನ ಅಖಾಡದ ಮಹಂತ ಸ್ವಾಮಿ ಗೀತಾನಂದ ಗಿರಿ ಮಹಾರಾಜರು ಘೋಷಿಸಿದರು. ಮಹಾಕುಂಭ ಮೇಳದಲ್ಲಿ ‘ಸನಾತನ ಪ್ರಭಾತ’ದ ಪ್ರತಿನಿಧಿಗಳು ಮಹಂತ ಸ್ವಾಮಿ ಗೀತಾನಂದ ಗಿರಿ ಮಹಾರಾಜರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಮಹಾಂತ ಗೀತಾನಂದ ಗಿರಿ ಮಹಾರಾಜ್ ಅವರು ಕೇವಲ ಎರಡನೇ ವಯಸ್ಸಿನಲ್ಲಿಯೇ ತಮ್ಮ ಹೆತ್ತವರಿಂದ ಪಂಜಾಬ್‌ನ ಸಂತರ ಪಾದಗಳಿಗೆ ಅರ್ಪಿಸಲ್ಪಟ್ಟರು. ಮಹಂತ ಗೀತಾನಂದ ಗಿರಿ ರುದ್ರಾಕ್ಷಿ ಧರಿಸಲು ಸಂಕಲ್ಪ ಮಾಡಿದ್ದರು. ಅವರು ಕಳೆದ ಆರು ವರ್ಷಗಳಲ್ಲಿ ಎರಡೂವರೆ ಲಕ್ಷ ರುದ್ರಾಕ್ಷಿಗಳನ್ನು ಧರಿಸಿದ್ದಾರೆ. ಅವರು ಧರಿಸಿರುವ ಎಲ್ಲಾ ರುದ್ರಾಕ್ಷಿಗಳ ಒಟ್ಟು ತೂಕ 45 ಕೆಜಿ ಇದೆ.
ಮಹಾಕುಂಭಮೇಳದಲ್ಲಿ, ಶ್ರೀ ಪಂಚದಶನಾಮ ಆವಾಹನ ಅಖಾಡದ ಶಿಬಿರದಲ್ಲಿ ‘ಸನಾತನ ಪ್ರಭಾತ’ದ ಪ್ರತಿನಿಧಿಗಳು ಅವರನ್ನು ಭೇಟಿಯಾಗಿ ಅವರ ಈ ವಿಶಿಷ್ಟ ಸಾಧನೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಮಹಂತ ಗೀತಾನಂದ ಗಿರಿ ಮಹಾರಾಜರು, “ಒಬ್ಬ ಸಾಧು ಸನಾತನ ಧರ್ಮದ ಉಳಿವಿಗಾಗಿ, ಸನಾತನ ಧರ್ಮವನ್ನು ಅನುಸರಿಸುವವರಿಗಾಗಿ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ತಪಸ್ಸು ಮಾಡಬೇಕಾಗುತ್ತದೆ. ತಪಸ್ಸು, ಹಠಯೋಗ ಇತ್ಯಾದಿಗಳ ಮೂಲಕ ದೇವರನ್ನು ಪ್ರಸನ್ನಗೊಳಿಸುವುದು ಸಂತರ ಮುಖ್ಯ ಕಾರ್ಯವಾಗಿದೆ. ನಾಗಾ ಸಾಧುಗಳು ಕಾಡುಗಳು, ಪರ್ವತಗಳು, ಮಠಗಳು, ದೇವಸ್ಥಾನಗಳು ಮುಂತಾದ ಸ್ಥಳಗಳಲ್ಲಿ ವಾಸಿಸಿ, ರಾಷ್ಟ್ರ ಮತ್ತು ಧರ್ಮದ ಹಿತಕ್ಕಾಗಿ ತಪಸ್ಸು ಮಾಡುತ್ತಾರೆ”, ಎಂದು ನುಡಿದರು.