ಬೇಸಿಗೆ ಕಾಲದಲ್ಲಿ ಮುಂದಿನ ಜಾಗರೂಕತೆ ವಹಿಸಿ ವಿವಿಧ ಕಾಯಿಲೆಗಳಿಂದ ದೂರವಿರಿ !

ವೈದ್ಯ ಮೇಘರಾಜ ಪರಾಡಕರ್

ಸದ್ಯ ಬೇಸಿಗೆ ಕಾಲವು ಆರಂಭವಾಗಿದೆ. ಈ ಕಾಲದಲ್ಲಿ ಶರೀರದ ತಾಪಮಾನವು ಹೆಚ್ಚಾಗುವುದು, ಬೆವರು ಬರುವುದು, ಶಕ್ತಿ ಕಡಿಮೆ ಆಗುವುದು ಮುಂತಾದ ತೊಂದರೆಗಳಾಗುತ್ತವೆ. ತಾಪಮಾನ ಹೆಚ್ಚಾಗುವುದರಿಂದ ವ್ಯಕ್ತಿಗೆ ಉಷ್ಣಾಘಾತವಾಗಿ ಬಳಲುವ ಕೆಲವು ಉದಾಹರಣೆಗಳಿವೆ. ಬೇಸಿಗೆಯಲ್ಲಾಗುವ ವಿವಿಧ ಕಾಯಿಲೆಗಳಿಂದ ದೂರವಿರಲು ಎಲ್ಲರೂ ಮುಂದಿನ ಕಾಳಜಿ ವಹಿಸುವುದು ಆವಶ್ಯಕವಾಗಿದೆ.

೧. ದಿನವಿಡೀ ಅಗತ್ಯವಿದ್ದಷ್ಟು ನೀರು ಅಥವಾ ತತ್ಸಮವಾದ ಪಾನೀಯಗಳನ್ನು ಕುಡಿಯಬೇಕು. ನೀರು ಕುಡಿಯಲು ಬಾಯಾರಿಕೆಯಾಗುವ ತನಕ ಕಾಯಬಾರದು. ಗಾಢ ಬಣ್ಣದ ಮೂತ್ರ ವಿಸರ್ಜನೆ ಆಗುತ್ತಿದ್ದರೆ ‘ಹೆಚ್ಚು ನೀರು ಕುಡಿಯಬೇಕು’, ಎಂಬುದನ್ನು ಗಮನದಲ್ಲಿಡಬೇಕು. ಶೀತಕಪಾಟಿನಲ್ಲಿನ ನೀರು ಕುಡಿಯುವುದನ್ನು ತಡೆಗಟ್ಟಬೇಕು. ಬೆಳಗ್ಗೆ ಮನೆಯಿಂದ ಹೊರಗೆ ಹೋಗುವ ಮೊದಲು ಒಂದು ಲೋಟ ನೀರು ಕುಡಿದು ಹೋಗಬೇಕು. ಹೊರಗೆ ಹೋಗುವಾಗ ಜೊತೆಯಲ್ಲಿ ನಮ್ಮದೇ ಆದ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಬೇಕು.

೨. ಒಂದೇ ಸಲಕ್ಕೆ ಗಟಗಟನೆ ನೀರು ಕುಡಿಯದೇ ನಿಧಾನವಾಗಿ ಕುಡಿಯಬೇಕು. ಬಿಸಿಲಿನಿಂದ ಬಂದ ತಕ್ಷಣ ನೀರು ಕುಡಿಯದೆ ೫ – ೧೦ ನಿಮಿಷಗಳು ಶಾಂತವಾಗಿ ಕುಳಿತು ನಂತರ ನೀರು ಕುಡಿಯಬೇಕು.

೩. ಸಕ್ಕರೆ ಇರುವ ಪಾನೀಯಗಳನ್ನು ಕುಡಿಯಬಹುದು; ಆದರೆ ಹೆಚ್ಚು ಸಕ್ಕರೆ ಇರುವ ಪಾನೀಯಗಳು ಪಚನಕ್ಕೆ ಜಡವಾದುದರಿಂದ ಸಾಧ್ಯವಿದ್ದಷ್ಟು ಅವುಗಳನ್ನು ಕುಡಿಯಬಾರದು. ಸಾಧ್ಯವಾದರೆ ಪ್ರತಿದಿನದ ಆಹಾರದಲ್ಲಿ ಮಜ್ಜಿಗೆ ಅಥವಾ ಪಾನಕವನ್ನು ಬಳಸಬಹುದು.

೪. ಹೊರಗಿನ ತಿಂಡಿ-ತಿನಿಸುಗಳನ್ನು ತಿನ್ನುವುದನ್ನು ತಪ್ಪಿಸಬೇಕು.

೫. ಸಡಿಲವಾದ, ತಿಳಿಬಣ್ಣದ ಮತ್ತು ಹಗುರವಾದ (ಸಾಧ್ಯವಾದರೆ ಹತ್ತಿಯ) ಬಟ್ಟೆಗಳನ್ನು ಉಪಯೋಗಿಸಬೇಕು.

೬. ಈ ದಿನಗಳಲ್ಲಿ ಹೆಚ್ಚು ಬೆವರು ಬರುವುದರಿಂದ ಬೇಗನೆ ಆಯಾಸವಾಗುತ್ತದೆ. ಆದುದರಿಂದ ವ್ಯಾಯಾಮವನ್ನು ಕಡಿಮೆ ಪ್ರಮಾಣದಲ್ಲಿ ಮಾಡಬೇಕು.

೭. ಬಿಸಿಲಿದ್ದಾಗ ಮನೆಯಲ್ಲಿ ಅಥವಾ ನೆರಳಿರುವಲ್ಲಿ ನಿಲ್ಲಬೇಕು.

೮. ವಾತಾವರಣವನ್ನು ತಂಪಾಗಿರಲು ಕೂಲರ್‌ನ (ವಾಯು ತಂಪು ಮಾಡುವ ಯಂತ್ರದ) ಸೌಲಭ್ಯವಿದ್ದಲ್ಲಿ, ದಿನದಲ್ಲಿ ಕೆಲವು ಗಂಟೆಗಳ ಕಾಲ ಅದನ್ನು ಉಪಯೋಗಿಸಬಹುದು.

೯. ಸಾಧ್ಯವಿದ್ದಷ್ಟು ಬೆಳಗ್ಗೆ ೧೦ ಗಂಟೆಯ ಮೊದಲು ಮತ್ತು ಮಧ್ಯಾಹ್ನ ೪ ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಬೇಕು. ‘ಬಿಸಿಲಿನ ಶಾಖ ತಾಗಬಾರದೆಂದು’, ಹೊರಗೆ ಹೋಗುವಾಗ ಕಣ್ಣುಗಳಿಗೆ ‘ಗಾಗಲ್’ ಹಾಕಬೇಕು. ಛತ್ರಿ ಅಥವಾ ತಲೆಯ ಮೇಲೆ ಎಲ್ಲ ಬದಿಗಳಿಂದ ನೆರಳು ಬರುವಂತಹ, ಟೊಪ್ಪಿಗೆಯನ್ನು (‘ಹ್ಯಾಟ್’) ಉಪಯೋಗಿಸಬೇಕು. ಟೊಪ್ಪಿಗೆಯು ಲಭ್ಯವಿಲ್ಲದಿದ್ದರೆ ತಲೆಗೆ ಮತ್ತು ಕಿವಿಗಳಿಗೆ ದೊಡ್ಡ ಬಿಳಿ ಕೈವಸ್ತ್ರವನ್ನು ಕಟ್ಟಬೇಕು.

೧೦. ಕೆಲವರಿಗೆ ಅಧ್ಯಾತ್ಮಪ್ರಸಾರದ ಸೇವೆ ಅಥವಾ ಇತರ ಕಾರಣಗಳಿಗೆ ಹೊರಗೆ ಹೋಗಬೇಕಾಗುತ್ತದೆ ಅಥವಾ ಪ್ರಯಾಣ ಮಾಡಬೇಕಾಗುತ್ತದೆ. ‘ಬಿಸಿಲಿನ ತೊಂದರೆಯಾಗಬಾರದೆಂದು’, ಪುರುಷರು ಜೇಬಿನಲ್ಲಿ ಮತ್ತು ಸ್ತ್ರೀಯರು ತಮ್ಮ ಪರ್ಸ್‌ನಲ್ಲಿ (ಕೈಚೀಲದಲ್ಲಿ)ಈರುಳ್ಳಿ ಇಟ್ಟುಕೊಳ್ಳಬೇಕು. ಈರುಳ್ಳಿ ಶರೀರದಲ್ಲಿನ ಉಷ್ಣತೆಯನ್ನು ಹೀರಿಕೊಳ್ಳುವುದರಿಂದ ೩-೪ ದಿನಗಳ ನಂತರ ಅದು ಒಣಗುತ್ತದೆ. ಒಣಗಿದ ಈರುಳ್ಳಿ ಎಸೆದು ಹೊಸ ಈರುಳ್ಳಿ ಜೊತೆಗಿಟ್ಟುಕೊಳ್ಳಬೇಕು.

೧೧. ಜಾಗರಣೆಯನ್ನು ಮಾಡುವುದರಿಂದ ಶರೀರದಲ್ಲಿ ಪಿತ್ತ ಮತ್ತು ವಾತ ಈ ದೋಷಗಳು ಹೆಚ್ಚಾಗುತ್ತವೆ. ಆದುದರಿಂದ ಅತೀ ಜಾಗರಣೆ ಮಾಡುವುದನ್ನು ತಪ್ಪಿಸಬೇಕು. (ಈ ಕಾಳಜಿಯನ್ನು ಎಲ್ಲ ಕಾಲಗಳಲ್ಲಿ (ಋತುಗಳಲ್ಲಿ) ತೆಗೆದುಕೊಳ್ಳುವುದು ಆವಶ್ಯಕವಾಗಿದೆ.)

೧ ವರ್ಷಕ್ಕಿಂತ ಚಿಕ್ಕ ಮಕ್ಕಳ, ಹಾಗೆಯೇ ೬೫ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳು ಮೇಲಿನ ಅಂಶಗಳ ಆಧಾರದಲ್ಲಿ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೩.೨೦೨೨)