ಯುಗಾದಿಯ ಪ್ರಾಚೀನತೆಯನ್ನು ಹೇಳುವ ಕೆಲವು ಕಥೆಗಳು

ನಾರದ ಮುನಿಗಳಿಗೆ ೬೦ ಪುತ್ರರಿದ್ದರು. ಪ್ರತಿಯೊಬ್ಬ ಪುತ್ರನು ಚೈತ್ರ ಶುಕ್ಲ ಪಾಡ್ಯದಂದು ಜನಿಸಿದ್ದನು ಮತ್ತು ಪ್ರತಿಯೊಬ್ಬ ಪುತ್ರನ ಜನನದ ಸಮಯದಲ್ಲಿ ದೇವತೆಗಳು ಬ್ರಹ್ಮಧ್ವಜ-ಪತಾಕೆಯನ್ನು ಸ್ಥಾಪಿಸಿ ಆನಂದೋತ್ಸವವನ್ನು ಆಚರಿಸಿದರು. ಅಂದಿನಿಂದ ಈ ಹೊಸ ಸಂವತ್ಸರವನ್ನು ಸ್ವಾಗತ ಮಾಡುವಾಗ ಮನೆಯ ಹೊರಗೆ ಒಂದು ಎತ್ತರದ ಬ್ರಹ್ಮಧ್ವಜ ಸ್ಥಾಪಿಸುವ ಪರಂಪರೆಯು ಪ್ರಾರಂಭವಾಯಿತು. ಬಿದಿರಿನ ಒಂದು ಉದ್ದನೆಯ ಕೋಲನ್ನು ತಂದು ಅದಕ್ಕೆ ರೇಷ್ಮೆಯ ವಸ್ತ್ರವನ್ನು ಸುತ್ತಿ, ಬೆಳ್ಳಿಯ ತಂಬಿಗೆ ಅಥವಾ ತಾಮ್ರದ ಪಾತ್ರೆಯನ್ನು ಮಗುಚಿ ಹಾಕುತ್ತಾರೆ. ಅದಕ್ಕೆ ಹೂವಿನ ಹಾರವನ್ನು ಹಾಕಿ ಕೋಲನ್ನು ಮನೆಯ ಮಾಳಿಗೆಯ ಮೇಲೆ ಎತ್ತರಕ್ಕೆ ಸ್ಥಾಪಿಸುವುದು ಎಂದರೆ ಬ್ರಹ್ಮಧ್ವಜವನ್ನು ಸ್ಥಾಪಿಸುವುದು ಎಂದರ್ಥ. ಬ್ರಹ್ಮದೇವನು ಯುಗಾದಿಯ ದಿನದಂದು ಸಂಪೂರ್ಣ ಜಗತ್ತನ್ನು ನಿರ್ಮಿಸಿದನು ಮತ್ತು ಕಾಲಗಣನೆಯನ್ನು ಪ್ರಾರಂಭಿಸಿದನು ಎನ್ನುವ ನಂಬಿಕೆಯಿದೆ.
ಯುಗಾದಿಯ ವಿಷಯದಲ್ಲಿ ಮಹಾಭಾರತದಲ್ಲಿರುವ ಉಲ್ಲೇಖ ಮಹಾಭಾರತದ ಆದಿಪರ್ವದಲ್ಲಿ(೧.೬೩) ಉಪರಿಚರ ರಾಜನು ತನಗೆ ಇಂದ್ರನು ಕೊಟ್ಟಿದ್ದ ಬಿದಿರಿನ ಕೋಲನ್ನು ಇಂದ್ರನ ಗೌರವಾರ್ಥ ಭೂಮಿಯಲ್ಲಿ ನೆಟ್ಟನು ಮತ್ತು ಮರುದಿನ ಅಂದರೆ ಹೊಸವರ್ಷದ ಪ್ರಾರಂಭದ ದಿನದಂದು ಅದನ್ನು ಪೂಜಿಸಿದನು. ಈ ಪರಂಪರೆಯ ಗೌರವಾರ್ಥವೆಂದು ಇತರ ರಾಜರೂ ಕೋಲಿಗೆ ಶಲ್ಯದಂತಹ ವಸ್ತ್ರವನ್ನು ಸುತ್ತಿ ಅದನ್ನು ಪೂಜಿಸುತ್ತಾರೆ. ಮಹಾಭಾರತದ ಖಿಲಪರ್ವದಲ್ಲಿ ಕೃಷ್ಣನು ಇಂದ್ರನ ಕ್ರೋಧವನ್ನು ಪರಿಗಣಿಸದೇ ವಾರ್ಷಿಕ ಶಕ್ರೋತ್ಸವ (ಇಂದ್ರೋತ್ಸವ)ವನ್ನು ಸ್ಥಗಿತಗೊಳಿಸುವಂತೆ ಉಪದೇಶಿಸುತ್ತಾನೆ. ಮಹಾಭಾರತದ ಆದಿಪರ್ವದಲ್ಲಿ ಈ ಉತ್ಸವವನ್ನು ವರ್ಷದ ಪಾಡ್ಯದಂದು ಆಚರಿಸುವಂತೆ ತಿಳಿಸಲಾಗಿದೆ. (ಆಧಾರ – ವಿಕಿಪೀಡಿಯಾ ಜಾಲತಾಣ)