|
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಸರಕಾರವು ಪದಚ್ಯುತಗೊಂಡ ಬಳಿಕ ಆರಂಭವಾದ ಅರಾಜಕತೆಯ ಪರಿಣಾಮಗಳು ಇದೀಗ ಗೋಚರಿಸಲು ಆರಂಭವಾಗಿವೆ. ಬಾಂಗ್ಲಾದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಜವಳಿ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಬಟ್ಟೆ ರಫ್ತಿನಲ್ಲಿ ದೊಡ್ಡ ಪಾತ್ರ ವಹಿಸುವ ಬಾಂಗ್ಲಾದೇಶದಲ್ಲಿ ಕಳೆದ 7 ತಿಂಗಳಲ್ಲಿ 140 ಕ್ಕೂ ಹೆಚ್ಚು ಜವಳಿ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಇದರಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಗಾಜಿಪುರ, ಸಾವರ್, ನಾರಾಯಣಗಂಜ್ ಮತ್ತು ನರಸಿಂಗ್‌ದಿಯಲ್ಲಿ 50 ಕ್ಕೂ ಹೆಚ್ಚು ಕಾರ್ಖಾನೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ, ಸುಮಾರು 40 ಕಾರ್ಖಾನೆಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಈದ್ ನಂತರ ಇನ್ನಷ್ಟು ಕಾರ್ಖಾನೆಗಳು ಮುಚ್ಚುವ ಸಾಧ್ಯತೆ ಇದೆ. ಕೆಲವು ಜವಳಿ ಸಂಸ್ಥೆಗಳು ಕಾರ್ಮಿಕರಿಗೆ 2 ರಿಂದ 14 ತಿಂಗಳಿನಿಂದ ವೇತನ ನೀಡದ ಕಾರಣ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
1 .ಕಾರ್ಖಾನೆಗಳು ಮುಚ್ಚುತ್ತಿರುವುದರಿಂದ 20% ಬೇಡಿಕೆ ಇತರ ದೇಶಗಳಿಗೆ ಹೋಗಿದೆ. ಭಾರತ, ವಿಯೆಟ್ನಾಂ, ಶ್ರೀಲಂಕಾ, ಇಂಡೋನೇಷ್ಯಾ ಮತ್ತು ಪಾಕಿಸ್ತಾನಗಳಿಗೆ ಈ ಬೇಡಿಕೆ ಹೋಗಿವೆ.
2 .ಬಟ್ಟೆ ಕಾರ್ಖಾನೆಗಳು ಇದ್ದಕ್ಕಿದ್ದಂತೆ ಮುಚ್ಚಲು ಅಲ್ಲಿನ ಆರ್ಥಿಕ ಹಿಂಜರಿತ ಮತ್ತು ರಾಜಕೀಯ ಅಸ್ಥಿರತೆಯೇ ಕಾರಣ. ಮುಚ್ಚಲ್ಪಡುತ್ತಿರುವ ಹೆಚ್ಚಿನ ಕಾರ್ಖಾನೆಗಳು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್‌ಗೆ ಸಂಬಂಧಿಸಿದ ನಾಯಕರದ್ದಾಗಿವೆ. ಹಸೀನಾ ಅವರ ವಿದೇಶೀ ಹೂಡಿಕೆ ಸಲಹೆಗಾರರಾಗಿದ್ದ ಸಲ್ಮಾನ್ ಎಫ್. ಅವರ ಕಾರ್ಖಾನೆಯೂ ಬಂದ್ ಆಗಿದೆ.
3 .ಕಾರ್ಮಿಕ ಮುಖಂಡ ಮೊಹಮ್ಮದ್ ಮಿಂಟು ಅವರು ಈ ಬಗ್ಗೆ ಮಾತನಾಡಿ, ‘ಬೆಕ್ಸಿಮ್ಕೋ’ ಜವಳಿ ಕ್ಷೇತ್ರದಲ್ಲಿ ಒಂದು ದೊಡ್ಡ ಸಂಸ್ಥೆಯಾಗಿತ್ತು. ಅದು ಮುಚ್ಚಿದ್ದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಹೇಳಿದ್ದಾರೆ.
4 .ಮೂಲಗಳ ಪ್ರಕಾರ ಅನೇಕ ದೊಡ್ಡ ಬಟ್ಟೆ ವ್ಯಾಪಾರಿಗಳು ದೇಶ ತೊರೆದಿದ್ದಾರೆ. ಆದ್ದರಿಂದ ಕಾರ್ಖಾನೆಗಳು ಮುಚ್ಚುವ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.
5 .ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಕೆಯಾಗಿದ್ದು ಉತ್ಪಾದನೆ ಸ್ಥಗಿತಗೊಂಡಿದೆ ಇದರಿಂದಾಗಿ ಕಾರ್ಖಾನೆಗಳು ಬಂದ್ ಆಗಿವೆ ಎಂದು ಸರ್ಕಾರ ಹೇಳಿದೆ; ಆದರೆ ‘ಗಾರ್ಮೆಂಟ್ ವರ್ಕರ್ಸ್ ಟ್ರೇಡ್ ಯೂನಿಯನ್ ಸೆಂಟರ್’ನ ಕಾನೂನು ವ್ಯವಹಾರ ಕಾರ್ಯದರ್ಶಿ ಖೈರುಲ್ ಮಾಮುನ್ ಮಿಂಟು ಈ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ. ಬೇಡಿಕೆ ಬರುತ್ತಿದೆ; ಆದರೆ ಉಳಿದಿರುವ ಕಾರ್ಖಾನೆಗಳ ಮೇಲೆ ಹೆಚ್ಚುವರಿ ಒತ್ತಡವಿದೆ ಎಂದಿದ್ದಾರೆ.
84% ವಿದೇಶೀ ವಿನಿಮಯ ನೀಡುವ ಜವಳಿ ಉದ್ಯಮಜವಳಿ ಉದ್ಯಮವು ಪ್ರತಿ ವರ್ಷ 84% ವಿದೇಶೀ ವಿನಿಮಯವನ್ನು ಗಳಿಸುತ್ತದೆ ಮತ್ತು 50 ಲಕ್ಷ ಜನರಿಗೆ ನೇರವಾಗಿ ಮತ್ತು 1.5 ಕೋಟಿ ಜನರಿಗೆ ಪರೋಕ್ಷವಾಗಿ ಉದ್ಯೋಗವನ್ನು ನೀಡುತ್ತದೆ. ವಿಶೇಷವಾಗಿ ಈ ಉದ್ಯಮದಲ್ಲಿ ಮಹಿಳೆಯರ ಪಾಲು ದೊಡ್ಡದಾಗಿದೆ. |
ಶೇಖ್ ಹಸೀನಾ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಸೇನೆ ವಿರೋಧಿಸುತ್ತಿದೆ ಎಂಬ ಪ್ರತಿಪಕ್ಷಗಳ ಹೇಳಿಕೆಯನ್ನು ಸೇನೆ ನಿರಾಕರಿಸಿದೆ
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಹೊಸ ಪಕ್ಷ ‘ನ್ಯಾಷನಲ್ ಸಿಟಿಜನ್ ಪಾರ್ಟಿ’ ಮತ್ತು ಸೇನೆಯ ನಡುವಿನ ವಿವಾದ ಹೆಚ್ಚುತ್ತಿದೆ. ಪಕ್ಷದ ನಾಯಕ ಹಾಸನತ್ ಅಬ್ದುಲ್ಲಾ ಮತ್ತು ಸರ್ಗಿಸ್ ಆಲಂ ಅವರು ಸೇನೆಯು ಅವಾಮಿ ಲೀಗ್ ಹೆಸರನ್ನು ಬದಲಾಯಿಸಿ ಹೊಸ ಪಕ್ಷವನ್ನು ಸ್ಥಾಪಿಸಬಹುದು, ಇದರಿಂದ ಹಸೀನಾ ಅವರು ಮತ್ತೊಮ್ಮೆ ರಾಜಕೀಯಕ್ಕೆ ಪ್ರವೇಶಿಸಬಹುದು ಎಂದು ಆರೋಪಿಸಿದ್ದಾರೆ. ಆದರೆ ಸೇನೆಯು ಈ ಹೇಳಿಕೆಯನ್ನು ನಿರಾಕರಿಸುತ್ತಾ ನಮಗೆ ಅಂತಹ ಯಾವುದೇ ಯೋಜನೆಗಳಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದ ಜವಳಿ ಉದ್ಯಮವು 84% ವಿದೇಶೀ ವಿನಿಮಯವನ್ನು ತರುತ್ತದೆ, ಅದೇ ಈಗ ಸಂಕಷ್ಟದಲ್ಲಿದ್ದರೆ, ಬಾಂಗ್ಲಾದೇಶದ ಸ್ಥಿತಿ ಪಾಕಿಸ್ತಾನದಂತೆ ಆಗುವುದು ಇನ್ನಷ್ಟು ಸ್ಪಷ್ಟವಾಗಿದೆ. ಬಾಂಗ್ಲಾದೇಶವು ಭವಿಷ್ಯದಲ್ಲಿ ಪಾಕಿಸ್ತಾನದಂತೆಯೇ ಜಗತ್ತಿನ ಅನ್ಯ ರಾಷ್ಟ್ರಗಳ ಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ! |