ಯುದ್ಧದಿಂದಾಗಿ ಜಾಗತಿಕ ಆಹಾರದ ಕೊರತೆ ಮತ್ತು ಧಾನ್ಯಗಳ ಬೆಲೆ ಏರಿಕೆಯಾಗಬಹುದು !

  • ‘ಯಾರಾ ಇಂಟರನ್ಯಾಶನಲ್‌’ ಎಂಬ ಗೊಬ್ಬರ ತಯಾರಿಸುವ ಜಾಗತಿಕ ಸಂಸ್ಥೆಗೆ ಭಯ

  • ಯುರೋಪ ಮತ್ತು ಆಫ್ರಿಕಾದಲ್ಲಿ ಆಹಾರದ ಕೊರತೆಯ ಸಂಕಟ

ಕೀವ (ಉಕ್ರೇನ) – ರಷ್ಯಾ-ಉಕ್ರೇನ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ನಿರ್ಮಾಣವಾಗಲಿದ್ದು ಧಾನ್ಯಗಳ ಬೆಲೆ ಏರಿಕೆಯಾಗಬಹುದು ಎಂಬ ಭಯವನ್ನು ‘ಯಾರಾ ಇಂಟರನ್ಯಾಶನಲ್‌’ ಎಂಬ ಗೊಬ್ಬರ ತಯಾರಿಸುವ ಜಾಗತಿಕ ಸಂಸ್ಥೆಯು ವ್ಯಕ್ತಪಡಿಸಿದೆ. ೬೦ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಕಾರ್ಯನಿರತವಾಗಿರುವ ಈ ಸಂಸ್ಥೆಯ ಪ್ರಮುಖರಾದ ಸ್ವೀನ ಟೋರ ಹೊಲಸೇಥರರವರು ‘ಬಿಬಿಸಿ’ಯೊಂದಿಗೆ ಮಾತನಾಡುವಾಗ ಈ ಭಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆಯಲ್ಲಿ ಯುರೋಪ ಮತ್ತು ಆಫ್ರಿಕಾದಲ್ಲಿನ ದೇಶಗಳಿಗೆ ಈ ಯುದ್ಧದ ಹೊಡೆತ ತಾಗಿ ಅಲ್ಲಿ ಧಾನ್ಯದ ಕೊರತೆಯ ಸಂಕಟವು ಹೆಚ್ಚುತ್ತಿರುವ ವಾರ್ತೆಯನ್ನು ‘ಅಸೋಸಿಯೇಟೆಡ ಪ್ರೆಸ್‌ (ಎಪಿ)’ ಎಂಬ ಅಂತರಾಷ್ಟ್ರೀಯ ವಾರ್ತಾಸಂಸ್ಥೆಯು ಪ್ರಸಾರ ಮಾಡಿದೆ.

ರಷ್ಯಾ ಮತ್ತು ಉಕ್ರೇನಗಳ ಧಾನ್ಯನಿರ್ಮಿತಿಯ ಕ್ಷೇತ್ರದಲ್ಲಿನ ಜಾಗತಿಕ ಮಹತ್ವ !

  • ರಷ್ಯಾ ಮತ್ತು ಉಕ್ರೇನ ಇವು ಆಹಾರ ಮತ್ತು ಇತರ ಕೃಷಿ ಉತ್ಪಾದನೆಗಳ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಮಹತ್ವಪೂರ್ಣ ಭೂಮಿಕೆಯನ್ನು ನಿಭಾಯಿಸುತ್ತವೆ.
  • ಉಕ್ರೇನಿನಲ್ಲಿರುವ ಕಪ್ಪು ಸಮುದ್ರದ ಪ್ರದೇಶವು ಫಲವತ್ತಾಗಿದ್ದು ಅದು ಜಗತ್ತಿನ ‘ಬ್ರೆಡಬಾಸ್ಕೆಟ್‌’ (ಉಪಜೀವನದ ಮಾಧ್ಯಮ) ಎಂದು ಪರಿಚಿತವಾಗಿದೆ.
  • ರಷ್ಯಾ ಮತ್ತು ಉಕ್ರೇನ ಇವು ಗೋಧಿ ಮತ್ತು ಸಜ್ಜೆಯ ಅತ್ಯಂತ ಹೆಚ್ಚಿನ ರಫ್ತು ಮಾಡುವ ದೇಶಗಳಾಗಿವೆ.
  • ಜಗತ್ತಿನ ಗೋಧಿ ಮತ್ತು ಸಜ್ಜೆಯ ರಫ್ತಿನಲ್ಲಿ ಸುಮಾರು ೧ನೇ ತೃತೀಯಾಂಶದಷ್ಟು ರಫ್ತು ಈ ಎರಡು ದೇಶಗಳಿಂದಲೇ ಆಗುತ್ತವೆ.
  • ಜಗತ್ತಿನ ಒಟ್ಟೂ ಸೂರ್ಯಕಾಂತಿ ಎಣ್ಣೆಯ ರಫ್ತಿನಲ್ಲಿ ಈ ಎರಡೂ ದೇಶಗಳ ರಫ್ತಿನ ಪ್ರಮಾಣವು ಶೇ. ೭೫ರಷ್ಟಿದೆ.
  • ಉಕ್ರೇನ ಮೆಕ್ಕೆಜೋಳವನ್ನು ಪೂರೈಸುವ ಪ್ರಮುಖ ದೇಶವಾಗಿದೆ.
  • ರಷ್ಯಾವು ಗೊಬ್ಬರಕ್ಕಾಗಿ ಆವಶ್ಯಕವಾಗಿರುವ ವಿವಿಧ ಘಟಕಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುತ್ತದೆ. ಜಗತ್ತಿನಲ್ಲಿರುವ ಅರ್ಧ ಜನಸಂಖ್ಯೆಯು ಈ ಗೊಬ್ಬರದಿಂದ ನಿರ್ಮಾಣವಾದ ಆಹಾರವನ್ನು ಸೇವಿಸುತ್ತದೆ. ಈ ಗೊಬ್ಬರ ನಿರ್ಮಿತಿಯ ಮೇಲೆ ಪರಿಣಾಮವಾದರೆ ಸರಿಸುಮಾರು ಶೇ. ೫೦ರಷ್ಟು ಆಹಾರ ನಿರ್ಮಿತಿಯ ಮೇಲೆ ಸಂಕಟವೆರಗಲಿದೆ, ಎಂದು ‘ಯಾರಾ ಇಂಟರನ್ಯಾಶನಲ್‌’ನ ಪ್ರಮುಖರಾದ ಹೊಲಸೆಥರರವರು ಹೇಳಿದ್ದಾರೆ.

ಪ್ರತಿ ಗಂಟೆಗೆ ಸ್ಥಿತಿಯು ಚಿಂತಾಜನಕವಾಗುತ್ತಿದೆ ! – ಯಾರಾ ಇಂಟರನ್ಯಾಶನಲ್‌

‘ಯಾರಾ ಇಂಟರನ್ಯಾಶನಲ್‌’ ಸಂಸ್ಥೆಯ ಪ್ರಮುಖರಾದ ಹೊಲಸೆಥರ

‘ಯಾರಾ ಇಂಟರನ್ಯಾಶನಲ್‌’ ಸಂಸ್ಥೆಯ ಪ್ರಮುಖರಾದ ಹೊಲಸೆಥರರವರು ಮಾತನಾಡುತ್ತ,

೧. ಪ್ರತಿ ಗಂಟೆಗೆ ಸ್ಥಿತಿಯು ಚಿಂತಾಜನಕವಾಗುತ್ತಿದೆ. ಉತ್ತರ ಗೋಲಾರ್ಧದಲ್ಲಿನ ದೇಶಗಳಿಗೆ ಸದ್ಯದ ಋತುವು ಧಾನ್ಯನಿರ್ಮಿತಿಗಾಗಿ ಮಹತ್ವಪೂರ್ಣವಾಗಿದ್ದು ಈ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೊಬ್ಬರದ ಆವಶ್ಯಕತೆಯ ಅರಿವಾಗುತ್ತದೆ; ಆದರೆ ಈಗ ನಡೆಯುತ್ತಿರುವ ಯುದ್ಧದಿಂದಾಗಿ ಈ ಸ್ಥಿತಿಯು ಇನ್ನಷ್ಟು ಬಿಕ್ಕಟ್ಟಾಗಿದೆ.

೨. ಯುರೋಪಿನಲ್ಲಿ ಆಹಾರ ಉತ್ಪಾದನೆಯಲ್ಲಿನ ಸುಮಾರು ಶೇ. ೨೫ರಷ್ಟು ಭಾಗವು ರಷ್ಯಾದ ಕಚ್ಚಾ ವಸ್ತುಗಳ ಮೇಲೆ ಅವಲಂಬಿಸಿದೆ. ಇದರಿಂದ ಒಟ್ಟಿನಲ್ಲಿ ಆಹಾರ ಉತ್ಪಾದನೆಗಾಗಿ ಜಗತ್ತು ರಷ್ಯಾದ ಮೇಲೆ ಅವಲಂಬಿಸಿರಬಾರದು.

೩. ಕೊರೋನಾ ಮಹಾಮಾರಿ ಮತ್ತು ಅದರ ಮೊದಲಿನ ಸಮಯದಲ್ಲಿ ಆಹಾರ ಉತ್ಪಾದನೆಯ ಮೇಲೆ ಅನೇಕ ಸಂಕಟಗಳಿದ್ದವು. ಅದರಲ್ಲಿ ರಷ್ಯಾ-ಉಕ್ರೇನ ಯುದ್ಧವು ಈ ‘ಸಂಕಟದ ಮೇಲಿನ ಸಂಕಟ’ವಾಗುತ್ತಿದೆ.

೪. ಬಡ ದೇಶಗಳಲ್ಲಿ ಆಹಾರದ ಅಸುರಕ್ಷಿತತೆ ನಿರ್ಮಾಣವಾಗುವ ಭಯವಿದೆ.

೫. ಮೊದಲೇ ಕಳೆದ ೨ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ೧೦ ಕೋಟಿಗಿಂತಲೂ ಹೆಚ್ಚಿನ ಜನರು ಹಸಿವಿನಲ್ಲಿ ಮಲಗುತ್ತಿದ್ದಾರೆ. ಆದುದರಿಂದ ಈಗಿನ ಯುದ್ಧದಿಂದ ಈ ಚಿಂತೆಯು ಇನ್ನೂ ಹೆಚ್ಚಾಗಲಿದೆ.

ಪ್ರತ್ಯಕ್ಷದಲ್ಲಿ ಪರಿಸ್ಥಿತಿಯು ಹೇಗಿದೆ ?

ರಷ್ಯಾದ ಆಕ್ರಮಣದಿಂದಾಗಿ ಉಕ್ರೇನಿನಲ್ಲಿರುವ ರೈತರು ದೇಶ ಬಿಟ್ಟು ಹತ್ತಿರದ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದರ ಪರಿಣಾಮವಾಗಿ ಜಗತ್ತಿನಾದ್ಯಂತ ಗೋಧಿ ಮತ್ತು ಇತರ ಖಾದ್ಯಪದಾರ್ಥಗಳ ರಫ್ತು ನಿಂತಿದೆ. ಅದರೊಂದಿಗೆ ಪಾಶ್ಚಾತ್ಯ ದೇಶಗಳು ರಷ್ಯಾದ ಮೇಲೆ ಹೇರಿರುವ ನಿರ್ಬಂಧದಿಂದಾಗಿ ಜಗತ್ತಿನಾದ್ಯಂತ ಧಾನ್ಯದ ರಫ್ತು ಕಡಿಮೆಯಾಗಿ ಅದರ ಕೊರತೆ ಉಂಟಾಗುವ ಸಾಧ್ಯತೆಯು ನಿರ್ಮಾಣವಾಗಿದೆ.
ಆಫ್ರಿಕಾದ ದೇಶಗಳಲ್ಲಿ ೨೦೨೦ರಲ್ಲಿ ರಷ್ಯಾದಿಂದ ನಾಲ್ಕುನೂರು ಕೋಟಿ ಡಾಲರ (೩೦ ಸಾವಿರದ ೮೫೩ ಕೋಟಿ ಭಾರತೀಯ ರೂಪಾಯಿಗಳು) ಮೌಲ್ಯದ ಕೃಷಿ ಉತ್ಪಾದನೆಗಳ ಆಮದು ಆಗುತ್ತಿತ್ತು. ಇದರಲ್ಲಿ ಅಂದಾಜು ಶೇ. ೯೦ರಷ್ಟು ಗೋಧಿ ಸೇರಿದೆ, ಎಂಬ ಮಾಹಿತಿಯನ್ನು ದಕ್ಷಿಣ ಆಫ್ರಿಕಾದ ‘ಕೃಷಿ ಉದ್ಯೋಗ ಚೆಂಬರ’ನ ಪ್ರಮುಖ ಅರ್ಥಶಾಸ್ತ್ರಜ್ಞರಾದ ವಾಂಡಿಲೆ ಸಿಹಲೋಬೊರವರು ನೀಡಿದ್ದಾರೆ.

ಗೋಧಿಯ ಬೆಲೆಯು ಶೇ. ೫೫ರಷ್ಟು ಹೆಚ್ಚಾಗಿದೆ.

ಉಕ್ರೇನಿನ ಮೇಲಿನ ಆಕ್ರಮಣದ ಹೆದರಿಕೆಯಿಂದಾಗಿ ಒಂದು ವಾರದ ಹಿಂದೆಯೇ ಗೋಧಿಯ ಬೆಲೆಯು ಶೇ. ೫೫ರಷ್ಟು ಹೆಚ್ಚಾಗಿದೆ. ಯುದ್ಧವು ಮುಂದುವರಿದರೆ ಉಕ್ರೇನಿನಲ್ಲಿ ನಿರ್ಮಾಣವಾಗುವ ಉತ್ತಮ ಗೋಧಿಯ ರಫ್ತಿನ ಮೇಲೆ ಅವಲಂಬಿಸಿರುವ ದೇಶಗಳಿಗೆ ಜುಲೈನಿಂದ ಕೊರತೆಯನ್ನು ಎದುರಿಸಬೇಕಾಗಬಹುದು, ಎಂದು ‘ಅಂತರಾಷ್ಟ್ರೀಯ ಧಾನ್ಯ ಪರಿಷತ್ತಿ’ನ ಸಂಚಾಲಕರಾದ ಅರನಾಡ ಪೆಟೀಪ ರವರು ‘ಎಪಿ’ ವಾರ್ತಾಸಂಸ್ಥೆಯೊಂದಿಗೆ ಮಾತನಾಡುವಾಗ ಹೇಳಿದೆ.

ಉಕ್ರೇನಿನಿಂದ ಗೋಧಿ ಮತ್ತು ಮೆಕ್ಕೆಜೋಳದ ಪೂರೈಕೆಯ ರಫ್ತು ನಿಂತಿದ್ದರಿಂದ ಆಹಾರದ ಸುರಕ್ಷತೆಯ ಗಂಭೀರವಾದ ಪ್ರಶ್ನೆಯು ಎದುರಾಗುವ ಸಾಧ್ಯತೆಯಿದೆ. ಇಜಿಪ್ತ ಮತ್ತು ಲೆಬನಾನಗಳಂತಹ ದೇಶಗಳಲ್ಲಿ ಬಡತನವು ಇನ್ನೂ ಹೆಚ್ಚಿರುವ ಭಯ ವ್ಯಕ್ತವಾಗುತ್ತಿದೆ; ಏಕೆಂದರೆ ಈ ದೇಶಗಳಲ್ಲಿನ ಜನರು ಸರಕಾರದಿಂದ ರಿಯಾಯ್ತಿಯ ದರದಲ್ಲಿ ದೊರೆಯುವ ಆಹಾರದ ಮೇಲೆ ಅವಲಂಬಿಸಿದ್ದಾರೆ.