ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ ಮಾಲಿಕೆ ೧೨
೧೬.೧೨.೨೦೨೧ ಈ ದಿನದಂದು ಗುಜರಾತದ ಆಣಂದ ಎಂಬಲ್ಲಿ ನೈಸರ್ಗಿಕ ಕೃಷಿಗೆ ಸಂಬಂಧಿಸಿದ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಗುಜರಾತದ ಮಾ. ರಾಜ್ಯಪಾಲ ಆಚಾರ್ಯ ದೇವವ್ರತ ಇವರು ನೈಸರ್ಗಿಕ ಕೃಷಿಯ ಬಗೆಗಿನ ತಮ್ಮ ಅನುಭವವನ್ನು ಹೇಳಿದರು. ಕಳೆದ ಸಂಚಿಕೆಯಲ್ಲಿ ಲೇಖನದ ಮೊದಲ ಭಾಗದಲ್ಲಿ ಆಚಾರ್ಯ ದೇವವ್ರತ ಇವರು ರಾಸಾಯನಿಕ ಮತ್ತು ಸಾವಯವ ಈ ಕೃಷಿ ಪದ್ಧತಿಗಳಿಂದ ನೈಸರ್ಗಿಕ ಕೃಷಿಯ ಕಡೆಗೆ ಹೇಗೆ ಹೊರಳಿದರು, ಹಾಗೆಯೇ ರಾಸಾಯನಿಕ ಕೃಷಿಯಿಂದ ಅವರು ಬಾಡಿಗೆ ಆಧಾರದಲ್ಲಿ ನೀಡಿದ ೧೦೦ ಎಕರೆ ಭೂಮಿಯು ಹೇಗೆ ಬಂಜರಾಯಿತು, ಎಂಬುದನ್ನು ನೋಡಿದೆವು. ಅದರ ಮುಂದಿನ ಭಾಗವನ್ನು ಈ ಲೇಖನದಲ್ಲಿ ನೋಡೋಣ. ! (ಭಾಗ ೨)
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/59293.html |
೧೦. ಆಚಾರ್ಯ ದೇವವ್ರತ ಇವರು ಕೃಷಿ ವಿಜ್ಞಾನಿಗಳ ದುಬಾರಿ ಮತ್ತು ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಪರ್ಯಾಯವನ್ನು ನಿರಾಕರಿಸಿ ನೈಸರ್ಗಿಕ ಪದ್ಧತಿಯಿಂದ ಭೂಮಿಯನ್ನು ಪುನಃ ಫಲವತ್ತಾಗಿ ಮಾಡಲು ನಿಶ್ಚಯಿಸುವುದು
ನನ್ನ ೧೦೦ ಎಕರೆ ಭೂಮಿಯು ಬಂಜರಾಗಿತ್ತು. ಅದಕ್ಕೆ ನಾನು (ಆಚಾರ್ಯ ದೇವವ್ರತ) ಡಾ. ಹರಿ ಓಮ ಇವರಿಗೆ, “ಈಗ ನಾನು ಏನು ಮಾಡಲಿ ?”, ಎಂದು ಕೇಳಿದೆನು. ಅದಕ್ಕೆ ಅವರು ಮುಂದಿನ ಉಪಾಯವನ್ನು ಸೂಚಿಸಿದರು. ‘ಇಂತಿಷ್ಟು ಪ್ರಮಾಣದಲ್ಲಿ ಯುರಿಯಾ, ಇಂತಿಷ್ಟು ಪ್ರಮಾಣದಲ್ಲಿ ಡಿಎಪಿ, ಫಾಸ್ಫರಸ್, ಝಿಂಕ್, ಪೋಟ್ಯಾಶ್ ಈ ರಾಸಾಯನಿಕ ದ್ರವ್ಯಗಳನ್ನು, ಹಾಗೆಯೇ ಹಸಿರು ಹುಲ್ಲಿನ ಗೊಬ್ಬರವನ್ನು ಮಣ್ಣಿನಲ್ಲಿ ಹಾಕಿರಿ. ಈ ರೀತಿ ಪ್ರತಿ ವರ್ಷ ನಿಯಮಿತವಾಗಿ ಮಾಡಿರಿ. ಮುಂದಿನ ೨೦ ರಿಂದ ೩೦ ವರ್ಷಗಳಲ್ಲಿ ನಿಮ್ಮ ಭೂಮಿಯು ನಿಧಾನವಾಗಿ ಫಲವತ್ತಾಗುತ್ತಾ ಹೋಗುವುದು ಎಂದು ಅವರು ಇಷ್ಟೊಂದು ದೀರ್ಘ ಕಾಲಾವಧಿಯ ಯೋಜನೆಯನ್ನು ಹೇಳಿದರು ! ನಾನು, “ಡಾಕ್ಟರ್, ನೀವು ಯಾವುದರ ಪಟ್ಟಿಯನ್ನು ತಯಾರಿಸಿರುವಿರೋ, ಅವೆಲ್ಲವನ್ನು ಹಾಕಿಯೇ ನನ್ನ ಭೂಮಿಯು ಬಂಜರಾಗಿದೆ. ನೀವು ನನಗೆ ಪುನಃ ಅದನ್ನೇ ಮಾಡಲು ಹೇಳುತ್ತಿರುವಿರಿ !”, ಎಂದು ಹೇಳಿದೆನು. ಅದಕ್ಕೆ ಅವರು, “ನೀವು ಬೇರೆ ಏನು ಮಾಡುವಿರಿ ?” ಎಂದು ಕೇಳಿದರು. ನಾನು, “ಉಳಿದ ಭೂಮಿಯಲ್ಲಿ ನಾನು ಯಾವ “ನೈಸರ್ಗಿಕ ಕೃಷಿ’ಯನ್ನು ಮಾಡುತ್ತಿರುವೆನೋ, ಅದನ್ನೇ ಅಲ್ಲಿಯೂ ಮಾಡುವೆನು”, ಎಂದು ಹೇಳಿದೆನು. ಅವರಿಗೆ ಅಲ್ಲಿಯವರೆಗೆ ಈ ನೈಸರ್ಗಿಕ ಕೃಷಿಯ ಬಗ್ಗೆ ಮಾಹಿತಿ ಇರಲಿಲ್ಲ. ಅವರು, “ಸೆಗಣಿ ಮತ್ತು ಗೋಮೂತ್ರದಿಂದ ಏನಾಗುವುದು ?” ಎಂದರು, ಆಗ “ನಾನು ಮಾಡಿ ನೋಡುತ್ತೇನೆ, ಏನೂ ಆಗದಿದ್ದರೆ ನಾನು ಪುನಃ ನಿಮ್ಮ ಕಡೆಗೆ ಬರುತ್ತೇನೆ”, ಎಂದು ಹೇಳಿದೆನು.
೧೧. ಬರಡು ಭೂಮಿಯಲ್ಲಿಯೂ ಜೀವಾಮೃತದ ಬಳಕೆಯಿಂದ ಮೊದಲನೇ ವರ್ಷವೇ ಬಹಳಷ್ಟು ಉತ್ಪನ್ನ ಬರುವುದು
೧೫.೪.೨೦೧೭ ಈ ದಿನದಂದು ರೈತರು ನನ್ನ ೧೦೦ ಎಕರೆ ಭೂಮಿಯನ್ನು ನನಗೆ ಬಿಟ್ಟುಕೊಟ್ಟಿದ್ದರು. ಅದರಲ್ಲಿ ಯಾವುದೇ ಫಲವತ್ತತೆ ಉಳಿದಿರಲಿಲ್ಲ. ೧೫.೬.೨೦೧೭ ಈ ದಿನದಂದು ನಾನು ಅದರಲ್ಲಿ ೧ ಎಕರೆಗೆ ೫ ಕ್ವಿಂಟಲ್‌ನಂತೆ ಘನಜೀವಾಮೃತವನ್ನು ಹಾಕಿ ಭತ್ತವನ್ನು ಬಿತ್ತಿದೆನು. ಪ್ರತಿಸಲ ನೀರಿನೊಂದಿಗೆ ಜೀವಾಮೃತವನ್ನು ನೀಡಿದೆನು ಮತ್ತು ಅದರ ಸಿಂಪಡಣೆಯನ್ನೂ ಮಾಡಿದೆನು. ೨ ತಿಂಗಳುಗಳಲ್ಲಿ ಭತ್ತದ ಬೆಳೆಯು ಬರತೊಡಗಿತು. ಮತ್ತು ಕೊಯ್ಲಾದಾಗ ನನ್ನ ೧ ಎಕರೆ ಭೂಮಿಯಲ್ಲಿ ೨೬ ರಿಂದ ೨೮ ಕ್ವಿಂಟಲ್ ಭತ್ತದ ಉತ್ಪನ್ನವೂ ಸಿಕ್ಕಿತು. ನಾನು ಇದನ್ನು ಡಾ. ಹರಿ ಓಂ ಇವರಿಗೆ ತೋರಿಸಿದೆನು. ಅವರು ಆಶ್ಚರ್ಯ ಚಕಿತರಾದರು ಮತ್ತು ಅವರು, “ಇದು ಹೇಗೆ ಸಾಧ್ಯ ? ಸಾವಯವ ಕರ್ಬ (ಕಾರ್ಬನ್) ಅತಿಕಡಿಮೆ ಇರುವ ಭೂಮಿಯೆಂದರೆ, ಬರಡು ಭೂಮಿ, ಹೀಗಿರುವಾಗ ಅದರಲ್ಲಿ ಇಷ್ಟೊಂದು ಉತ್ಪನ್ನ ?”, ಎಂದು ಹೇಳಿ ಅವರು ಹೊರಟು ಹೋದರು. ನಾನು ಮುಂದಿನ ವರ್ಷವೂ ಅದೇ ಭೂಮಿಯಲ್ಲಿ ಪುನಃ ಬೆಳೆಯನ್ನು ಪಡೆದೆನು. ಈ ಸಮಯದಲ್ಲಿಯೂ ಜೀವಾಮೃತ ಮತ್ತು ಘನ ಜೀವಾಮೃತದ ಬಳಕೆಯನ್ನು ಮುಂದುವರಿಸಿದೆನು. ಈ ಸಮಯದಲ್ಲಿ ಹೊಲದಲ್ಲಿ ಎಕರೆಗೆ ಸರಾಸರಿ ೩೨ ಕ್ವಿಂಟಲ್ ಭತ್ತದ ಉತ್ಪನ್ನವು ಬಂದಿತು. (ಒಂದು ಕ್ವಿಂಟಲ್ ಅಂದರೆ ಒಂದು ನೂರು ಕಿಲೋ (ಕೆ.ಜಿ))
೧೨. ಜೀವಾಮೃತದ ಬಳಕೆಯಿಂದ ಭೂಮಿಯಲ್ಲಿನ ಸಾವಯವ ಕಾರ್ಬದ ಪ್ರಮಾಣ ಬಹಳಷ್ಟು ಹೆಚ್ಚಾಗಿರುವುದನ್ನು ನೋಡಿ ಕೃಷಿ ವಿಜ್ಞಾನಿಗಳಿಗೂ ಆಶ್ಚರ್ಯವಾಗುವುದು
ಒಂದು ಎಕರೆಯಲ್ಲಿ ೩೨ ಕ್ವಿಂಟಲ್ ಭತ್ತ ಬಂದಿದ್ದನ್ನು ನೋಡಿ ಡಾ. ಹರಿ ಓಂ ಇವರಿಗೆ ವಿಶ್ವಾಸವೇ ಆಗುತ್ತಿರಲ್ಲ ! ಅವರು, “ಇದೊಂದು ಚಮತ್ಕಾರವೇ ಆಗಿದೆ ! ಇದು ಅರ್ಥ ಮಾಡಿಕೊಳ್ಳಲಾಗದ ವಿಷಯವಾಗಿದೆ. ನಾನು ಇಲ್ಲಿಯವರೆಗೆ ಕೃಷಿಶಾಸ್ತ್ರದ ಯಾವ ಅಧ್ಯಯನವನ್ನು ಮಾಡಿರುವೆನೋ, ಅದಕ್ಕನುಸಾರ ಈ ರೀತಿಯಾಗುವುದು ಸಾಧ್ಯವೇ ಇಲ್ಲ. ಈಗ ನಾನು ನನ್ನ ವಿಜ್ಞಾನಿಗಳನ್ನು ಕರೆಯಿಸಿ ನಿಮ್ಮ ಭೂಮಿಯನ್ನು ಪುನಃ ಪರೀಕ್ಷೆ ಮಾಡಿ ನೋಡುತ್ತೇನೆ”, ಎಂದರು. ಅವರು ಪುನಃ ಆ ಭೂಮಿಯ ನೂರಾರು ಮಾದರಿಗಳನ್ನು ತೆಗೆದುಕೊಂಡು ಅವನ್ನು ಅಧ್ಯಯನಕ್ಕಾಗಿ ವಿಶ್ವವಿದ್ಯಾಲಯಕ್ಕೆ ಕಳುಹಿಸಿದರು. ನಂತರ ವರದಿಯು ಬಂದಿತು. ಒಂದೇ ವರ್ಷದ ನಂತರ ನನ್ನ ಭೂಮಿಯಲ್ಲಿ ಸಾವಯವ ಕಾರ್ಬದ (ಕಾರ್ಬನ್ನಿನ) ಪ್ರಮಾಣ ೦.೩ ರಿಂದ ೦.೮ ರವರೆಗೆ ಹೆಚ್ಚಾಗಿತ್ತು. ಆ ವರದಿಯು ಬಂದಾಗ, ಅವರು ಮೊದಲಿಗಿಂತ ಹೆಚ್ಚು ಆಶ್ಚರ್ಯರಾದರು. ಅವರು, “ರಾಸಾಯನಿಕ ಹೊಲದಲ್ಲಿ ಒಂದು ವರ್ಷದಲ್ಲಿ ಸಾವಯವ ಕಾರ್ಬ ಇಷ್ಟು ಹೆಚ್ಚಾಗಲು ಸಾಧ್ಯವೇ ಇಲ್ಲ ! ಜಗತ್ತಿನ ಯಾವುದೇ ವಿಜ್ಞಾನಿಗಳು ‘ಒಂದು ವರ್ಷದಲ್ಲಿ ಸಾವಯವ ಕಾರ್ಬದ (ಕಾರ್ಬನ್ನಿನ) ಪ್ರಮಾಣ ೦.೩ ರಿಂದ ೦.೮ ರವರೆಗೆ ಹೆಚ್ಚಾಗಿದೆ’, ಎಂದು ಒಪ್ಪಿಕೊಳ್ಳುವುದಿಲ್ಲ. ಇದು ನಿಜವಾಗಿಯೂ ಆಶ್ಚರ್ಯ”, ಎಂದರು.
೧೩. ಮಿತ್ರಕೀಟಗಳನ್ನು ನಾಶ ಮಾಡುವ ರಾಸಾಯನಿಕ ಕೃಷಿ
ರಸಾಯನಶಾಸ್ತ್ರದ ವಿಜ್ಞಾನಿಗಳು ಈ ಸತ್ಯವನ್ನು ಒಪ್ಪಿಕೊಳ್ಳುವುದೇ ಇಲ್ಲ. ಸಾವಯವ ಕಾರ್ಬವನ್ನು ಹೆಚ್ಚಿಸುವ ಕೆಲಸವನ್ನು ಹೊಲದಲ್ಲಿನ ಜೀವಾಣುಗಳು, ಎರೆಹುಳುಗಳು ಮತ್ತು ಮಿತ್ರ ಕೀಟಗಳು ಮಾಡುತ್ತಿರುತ್ತವೆ. ರಾಸಾಯನಿಕ ಕೃಷಿಯಿಂದ ಈ ಜೀವಾಣುಗಳು ಸಾಯುತ್ತವೆ. ಹೀಗಿರುವಾಗ ಸಾವಯವ ಕಾರ್ಬ ಹೇಗೆ ಹೆಚ್ಚಾಗಲು ಸಾಧ್ಯ ?
೧೪. ಒಂದು ಗ್ರಾಮ್‌ನಲ್ಲಿ ಕೃಷಿಗಾಗಿ ಉಪಯುಕ್ತವಾಗಿರುವ ೩೦೦ ಕೋಟಿಗಳಿಗಿಂತ ಹೆಚ್ಚು ಸೂಕ್ಷ್ಮ ಜೀವಾಣುಗಳಿರುವ ದೇಶಿ ಆಕಳುಗಳ ಸೆಗಣಿ ರೈತರಿಗೆ ವರದಾನ !
ಡಾ. ಹರಿ ಓಂ ಇವರು ಡಾ. ಬಲಜೀತ ಸಾರಂಗ ಇವರನ್ನು ಅಧ್ಯಯನಕ್ಕಾಗಿ ಜೊತೆಗಿಟ್ಟುಕೊಂಡರು. ಡಾ. ಬಲಜೀತ ಸಾರಂಗ ಇವರು ಸದ್ಯ ಹಿಸ್ಸಾರ ಕೃಷಿ ವಿಶ್ವವಿದ್ಯಾಲಯ, ಹರಿಯಾಣಾದಲ್ಲಿನ ಸೂಕ್ಷ್ಮಜೀವಶಾಸ್ತ್ರದ ಹಿರಿಯ ಉಪನ್ಯಾಸಕರಾಗಿದ್ದಾರೆ. ಅವರು ಅನೇಕ ವರ್ಷ ಅಮೇರಿಕಾ, ಇಂಗ್ಲೆಂಡ್ ಮತ್ತು ಜರ್ಮನಿಯಲ್ಲಿ ಸೂಕ್ಷ್ಮಜೀವಶಾಸ್ತ್ರದ ವಿಜ್ಞಾನಿಗಳೊಂದಿಗೆ ಕೆಲಸವನ್ನು ಮಾಡಿದ್ದಾರೆ. ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ನನ್ನ ಗುರುಕುಲಕ್ಕೆ ಬಂದರು ಮತ್ತು ಅವರು ಜೀವಾಮೃತದ ಸಂಶೋಧನೆಯನ್ನು ಮಾಡಿದರು. ಅವರು ದೇಶಿ ಆಕಳು, ಎಮ್ಮೆ, ಹಾಗೆಯೇ ‘ಜರ್ಸಿ’ ಮತ್ತು ‘ಹೊಲ್ಸ್ಟೀನ್ ಫ್ರಿಜಿಯನ್’ ಈ ವಿದೇಶಿ ಆಕಳುಗಳ ಸೆಗಣಿಗಳ ಮಾದರಿಗಳನ್ನು ತೆಗೆದುಕೊಂಡರು. ಇವೆಲ್ಲವುಗಳ ಮೇಲೆ ಅನೇಕ ತಿಂಗಳು ವಿವಿಧ ಸಂಶೋಧನೆಯನ್ನು ಮಾಡಿದರು. ಅದರಲ್ಲಿ ಅವರಿಗೆ, ದೇಶಿ ಆಕಳುಗಳ ೧ ಗ್ರಾಂ ಸೆಗಣಿಯಲ್ಲಿ ಕೃಷಿಗಾಗಿ ಉಪಯುಕ್ತವಾಗಿರುವ ೩೦೦ ಕೋಟಿಗಳಿಗಿಂತ ಹೆಚ್ಚು ಸೂಕ್ಷ್ಮ ಜೀವಾಣುಗಳಿರುತ್ತವೆ.
ಸಾಹಿವಾಲ, ಥಾರಪಾರಕರ, ರಾಠೀ, ಗೀರ, ಹರಿಯಾಣವಿ, ಲಾಲ ಸಿಂಧಿ, ಕಾಂಕರೇಜ್, ಓಂಗಲ್ ಇತ್ಯಾದಿ ಎಲ್ಲ ಭಾರತೀಯ ವಂಶದ ಆಕಳುಗಳ ಸೆಗಣಿಯ ಗುಣಮಟ್ಟವು ಹೆಚ್ಚುಕಡಿಮೆ ಒಂದೇ ರೀತಿಯದ್ದಾಗಿರುತ್ತದೆ; ಆದರೆ ವಿದೇಶಿ ವಂಶದ ಆಕಳು ಮತ್ತು ಎಮ್ಮೆಗಳ ಸೆಗಣಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೃಷಿಗಾಗಿ ಉಪಯುಕ್ತ ಜೀವಾಣುಗಳು ಇರುವುದಿಲ್ಲ. ‘ದೇಶಿ ಆಕಳುಗಳ ಮೂತ್ರವು ಖನಿಜಗಳ ಭಂಡಾರವಾಗಿದೆ’, ಎಂದು ಸಹ ಅವರಿಗೆ ಸಂಶೋಧನೆಯಲ್ಲಿ ಕಂಡು ಬಂದಿತು. ಪಾಳೆಕರ ಗುರುಜಿಯವರು ಈ ರೀತಿಯ ಸಂಶೋಧನೆಯನ್ನು ಅನೇಕ ಬಾರಿ ಮಾಡಿದ್ದಾರೆ. ಇದರಿಂದ ಒಂದು ಪೂರ್ಣ ಸತ್ಯ ಜಗತ್ತಿನೆದುರು ಬಂದಿದೆ.
೧೫. ಜೀವಾಮೃತವನ್ನು ತಯಾರಿಸುವ ಪದ್ಧತಿ ಮತ್ತು ಅದರ ಹಿಂದಿನ ಶಾಸ್ತ್ರ
ಒಂದು ಎಕರೆ ಹೊಲಕ್ಕಾಗಿ ಬೇಕಾಗುವ ಜೀವಾಮೃತವನ್ನು ತಯಾರಿಸಲು ೨೦೦ ಲೀಟರ್‌ನ ಡ್ರಮ್ ತೆಗೆದುಕೊಳ್ಳಬೇಕು. ಡ್ರಮ್ ಅನ್ನು ನೆರಳಿನಲ್ಲಿಟ್ಟು ಅದರಲ್ಲಿ ಸುಮಾರು ೧೮೦ ಲೀಟರ್ ನೀರನ್ನು ತುಂಬಬೇಕು. ನಂತರ ಅದರಲ್ಲಿ ಒಂದೂವರೆಯಿಂದ ೨ ಕಿಲೋದಷ್ಟು ಬೆಲ್ಲ, ಯಾವುದೇ ಬೇಳೆಯ ಒಂದೂವರೆಯಿಂದ ೨ ಕಿಲೋದಷ್ಟು ಹಿಟ್ಟು, ೧ ಮುಷ್ಠಿ ಮಣ್ಣು, ದೇಶಿ ಆಕಳ ೧೦ ಕಿಲೋ ಸೆಗಣಿ, ಹಾಗೆಯೇ ದೇಶಿ ಆಕಳ ೧೦ ಲೀಟರ್ ಗೋಮೂತ್ರ ಇವೆಲ್ಲವುಗಳನ್ನು ಸೇರಿಸಿ ಆ ನೀರಿನಲ್ಲಿ ಬಿಡಬೇಕು. ವಿಚಾರ ಮಾಡಿರಿ, ೧ ಗ್ರಾಂ ಸೆಗಣಿಯಲ್ಲಿ ೩೦೦ ಕೋಟಿ ಜೀವಾಣುಗಳಿರುತ್ತವೆ, ಹೀಗಿರುವಾಗ ೧೦ ಕಿಲೋ ಸೆಗಣಿಯಲ್ಲಿ ಎಷ್ಟು ಜೀವಾಣುಗಳಿರಬಹುದು !
ಈ ಜೀವಾಣುಗಳಿಗೆ ಬೇಳೆಯ ಹಿಟ್ಟಿನ ರೂಪದಲ್ಲಿ ಪ್ರೊಟೀನ್ಸ್ ಸಿಗುತ್ತವೆ. ಇದರಿಂದ ಅವು ಬಲಶಾಲಿ ಆಗುತ್ತವೆ. ಬೆಲ್ಲದಿಂದ ಅವುಗಳಿಗೆ ಊರ್ಜೆ ಸಿಗುತ್ತದೆ ಮತ್ತು ಅವುಗಳ ಸಂಖ್ಯೆಯು ಹೆಚ್ಚಾಗುತ್ತಾ ಹೋಗುತ್ತದೆ. ಮಣ್ಣಿನಲ್ಲಿರುವ ಜೀವಾಣುಗಳ ಸಂಪರ್ಕ ಬಂದಾಗ, ಅವು ಎಷ್ಟು ಹೆಚ್ಚಾಗುತ್ತವೆ ಎಂದರೆ, ಪ್ರತಿ ೨೦ ನಿಮಿಷಗಳ ನಂತರ ಅವುಗಳ ಸಂಖ್ಯೆಯು ಸಾಧಾರಣ ದುಪ್ಪಟ್ಟಾಗುತ್ತದೆ. ೭೨ ಗಂಟೆಗಳಲ್ಲಿ ಅವು ಅಸಂಖ್ಯ ಪ್ರಮಾಣದಲ್ಲಿ ಹೆಚ್ಚಾಗುತ್ತವೆ ಮತ್ತು ೧ ಎಕರೆ ಭೂಮಿಗೆ ಬೇಕಾಗುವಷ್ಟು ಗೊಬ್ಬರ ತಯಾರಾಗುತ್ತದೆ.
೧೬. ಜೀವಾಮೃತವು ಗಿಡಗಳಿಗೆ ಆಹಾರವನ್ನು ತಯಾರಿಸುವ ಕೆಲಸವನ್ನು ಮಾಡುವ ಜೀವಾಣುಗಳ ಹೆಪ್ಪು
ಜಗತ್ತಿನಲ್ಲಿ ಈ ರೀತಿ ೪-೫ ದಿನಗಳಲ್ಲಿ ತಯಾರಾಗುವ ಬೇರೆ ಗೊಬ್ಬರವಿಲ್ಲ ! ದೇಶಿ ಆಕಳ ಒಂದು ದಿನದ ಸೆಗಣಿ ಮತ್ತು ಗೋಮೂತ್ರದಿಂದ ೧ ಎಕರೆ ಹೊಲಕ್ಕಾಗಿ ಬೇಕಾಗುವ ಜೀವಾಮೃತವು ತಯಾರಾಗುತ್ತದೆ. ಯಾವಾಗ ಅದು ಹೊಲದಲ್ಲಿನ ಜೀವಾಣುಗಳೊಂದಿಗೆ ಸಂಯೋಗವಾಗುತ್ತದೆಯೋ, ಆಗ ಅದು ಹಾಲಿಗೆ ಹೆಪ್ಪಾಕುವ ಮೊಸರಿನಂತೆ ಕೆಲಸವನ್ನು ಮಾಡುತ್ತದೆ. ಅದರಿಂದ ಅಸಂಖ್ಯ ಜೀವಾಣುಗಳು ತಯಾರಾಗುತ್ತವೆ. ಗಾಳಿಯಲ್ಲಿ ಶೇ. ೭೮ ರಷ್ಟು ನೈಟ್ರೋಜನ್ ಇರುತ್ತದೆ. ಈ ಜೀವಾಣುಗಳು ಗಾಳಿಯಲ್ಲಿನ ನೈಟ್ರೋಜನ್‌ಅನ್ನು ಹೀರಿಕೊಂಡು ಗಿಡಗಳಿಗೆ ಆಹಾರವನ್ನು ಲಭ್ಯ ಮಾಡಿಕೊಡುತ್ತವೆ.
(ಮುಂದುವರಿಯುವುದು)
ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ ! ಕೈದೋಟಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ಲೇಖನ ಕಳುಹಿಸಿ‘ಗಿಡಗಳನ್ನು ಬೆಳೆಸುವುದು (ಕೃಷಿ ಮಾಡುವುದು) ಇದು ಒಂದು ಪ್ರಾಯೋಗಿಕ ವಿಷಯವಾಗಿದೆ. ಇದರಲ್ಲಿ ಚಿಕ್ಕ ಚಿಕ್ಕ ಅನುಭವಗಳಿಗೂ ಬಹಳ ಮಹತ್ವವಿರುತ್ತದೆ. ಯಾವ ಸಾಧಕರು ಇಲ್ಲಿಯವರೆಗೆ ಕೃಷಿಯನ್ನು ಮಾಡಿಲ್ಲವೋ, ಅವರು ಕೃಷಿಯನ್ನು ಮಾಡುವಾಗ ತಮಗೆ ಬಂದ ಅನುಭವ, ಆದ ತಪ್ಪುಗಳು, ಆ ತಪ್ಪುಗಳಿಂದ ಕಲಿಯಲು ಸಿಕ್ಕಿದ ಅಂಶಗಳು, ಕೃಷಿಗೆ ಸಂಬಂಧಿಸಿದಂತೆ ಮಾಡಿದ ವೈಶಿಷ್ಟ್ಯಪೂರ್ಣ ಪ್ರಯೋಗ ಇವುಗಳ ಬಗೆಗಿನ ಬರವಣಿಗೆಯನ್ನು ತಮ್ಮ ಛಾಯಾಚಿತ್ರದೊಂದಿಗೆ ಕಳುಹಿಸಬೇಕು. ಈ ಬರವಣಿಗೆಯನ್ನು ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಇತರರಿಗೂ ಕಲಿಯಲು ಸಿಗುತ್ತದೆ. ಬರವಣಿಗೆಯನ್ನು ಕಳುಹಿಸಲು ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/O ‘ಸನಾತನ ಆಶ್ರಮ’, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧ ಗಣಕೀಯ ವಿಳಾಸ : [email protected] |