ಅಸಂಸ್ಕೃತರ ಸಂಸ್ಕೃತ ದ್ವೇಷ !

ದೇಶದಲ್ಲಿ ಸಂಸ್ಕೃತದ ಹಿತಾಸಕ್ತಿಯ ವಿಷಯ ಬಂದಾಗಲೆಲ್ಲ ಮತಾಂಧರು, ಕಾಂಗ್ರೆಸ್ಸಿಗರು, ಪ್ರಗತಿ (ಅಧೋಗತಿ)ಪರರು, ಹಿಂದೂದ್ವೇಷಿಗಳು ಮುಂತಾದವರಿಗೆ ಪ್ರತಿಬಾರಿ ಹೊಟ್ಟೆನೋವು ಬರುತ್ತಲೇ ಇದೆ. ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಅಂತಹದ್ದೇ ಘಟನೆ ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ೧೦೦ ಎಕರೆ ಭೂಮಿ ನೀಡಲು ನಿರ್ಧರಿಸಿದ್ದಾರೆ. ನಿರೀಕ್ಷೆಯಂತೆ, ಈ ನಿರ್ಧಾರವನ್ನು ಆ ಕ್ಷಣದಿಂದಲೇ ಸಂಸ್ಕೃತದ್ವೇಷಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಸ್ಕೃತದ್ವೇಷಿಗಳು ಟ್ವಿಟ್ಟರ್‌ನಲ್ಲಿ ಸೇ ನೋ ಟು ಸಂಸ್ಕೃತ ಎಂಬ ‘ಹ್ಯಾಶ್‌ಟ್ಯಾಗ’ನ್ನು ಬಳಸಿ ಇದಕ್ಕೆ ವ್ಯಾಪಕರೂಪ ನೀಡಲು ಪ್ರಯತ್ನಿಸಿದರು. ಪ್ರಾಂತೀಯ ಮತ್ತು ಭಾಷಾ ಭಾವೈಕ್ಯದ ಹೆಸರಿನಡಿಯಲ್ಲಿ ಅನೇಕ ಗುಂಪುಗುಂಪುಗಳೂ ಇದರಲ್ಲಿ ಮೂಗು ತೂರಿಸಲು ಪ್ರಾರಂಭಿಸಿವೆ. ಇದರಲ್ಲಿ ಸರಕಾರದ ನಿರ್ಧಾರವನ್ನು ವಿರೋಧಿಸುವಂತೆ ರಾಜ್ಯದ ಕೆಲವು ಗುಂಪುಗಳಿಗೆ ಕಾಂಗ್ರೆಸ್ ಬಹಿರಂಗವಾಗಿ ಮನವಿ ಮಾಡಿದೆ.

ಅಂದರೆ ಈ ವಿರೋಧದ ಹಿಂದೆ ಯಾವುದೇ ನಿರ್ದಿಷ್ಠ ಕಾರಣವಿಲ್ಲ, ಕೇವಲ ಸಂಸ್ಕೃತದ್ವೇಷವೇ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ. ೨೦೧೦ ರಲ್ಲಿಯೇ ಅಂದಿನ ರಾಜ್ಯ ಸರಕಾರವು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತ್ತು. ಈ ವಿಶ್ವವಿದ್ಯಾನಿಲಯದ ಅಡಿಯಲ್ಲಿ, ೨೧ ಘಟಕ ಮಹಾವಿದ್ಯಾಲಯಗಳು ಮತ್ತು ೩೫೦ ಕ್ಕೂ ಹೆಚ್ಚು ಸಂಸ್ಕೃತ ಪಾಠಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದಾಗ್ಯೂ, ವಿಶ್ವವಿದ್ಯಾಲಯಕ್ಕೆ ಯಾವುದೇ ಶಾಶ್ವತ ಪ್ರಾಂಗಣ ಲಭ್ಯವಿರಲಿಲ್ಲ. ಈಗಿನ ರಾಜ್ಯ ಸರಕಾರದ ನಿರ್ಧಾರದಿಂದಾಗಿ ಅದು ಸಿಗುವ ಹಾದಿಯಲ್ಲಿದೆ.

ವಾಸ್ತವದಲ್ಲಿ ಸಂಸ್ಕೃತವು ಭಾರತದ ಮೂಲ ಭಾಷೆಯಾಗಿದೆ. ವೇದಗಳು, ಉಪನಿಷತ್ತುಗಳು, ಪ್ರಾಚೀನ ಗ್ರಂಥಗಳು, ವೇದ ಸಾಹಿತ್ಯ ಇತ್ಯಾದಿಗಳೆಲ್ಲವೂ ಸಂಸ್ಕೃತ ಭಾಷೆಯಲ್ಲಿವೆ; ಆದರೆ, ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ತನ್ನನ್ನು ‘ಪಂಡಿತ’ ಎಂದು ಕರೆಸಿಕೊಂಡ ವ್ಯಕ್ತಿಯೊಬ್ಬ ಸಂಸ್ಕೃತವನ್ನು ‘ಮೃತಭಾಷೆ’ ಎಂದು ಘೋಷಿಸಿಬಿಟ್ಟನು. ವಾಸ್ತವದಲ್ಲಿ, ನಾಸಾ ವಿಜ್ಞಾನಿಗಳು ಸಹ ಸಂಸ್ಕೃತವು ಉಚ್ಚಾರಣೆಯ ರೀತಿಯಲ್ಲಿಯೇ ಬರೆಯಲ್ಪಟ್ಟ ಅತ್ಯಂತ ವೈಜ್ಞಾನಿಕ ಭಾಷೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರನ ಐಐಟಿಯಲ್ಲಿಯೂ ಪ್ರಾಚೀನ ಭಾರತೀಯ ವಿಜ್ಞಾನವನ್ನು ಸಂಸ್ಕೃತದಲ್ಲಿ ಕಲಿಸುವ ಪಠ್ಯಕ್ರಮವನ್ನು ಸಹ ನಡೆಸಲಾಗುತ್ತಿದೆ. ಒಟ್ಟರೆಯಾಗಿ ಹೇಳುವುದಾದರೆ ದೇಶ-ವಿದೇಶಗಳ ವಿಜ್ಞಾನಿಗಳು ಇಂದು ಸಂಸ್ಕೃತ ಭಾಷೆಯ ಗುಣಗಾನ ಮಾಡುತ್ತಿರುವಾಗ ಭಾರತದಲ್ಲಿ ತಥಾಕಥಿತ ಪ್ರಗತಿ(ಅಧೋಗತಿ) ಪರರು, ವಿಜ್ಞಾನವಾದಿಗಳು, ಕಾಂಗ್ರೆಸ್ಸಿಗರು ಮುಂತಾದವರು ಸಂಸ್ಕೃತ ವಿರೋಧಿ ಕೋಲಾಹಲವೆಬ್ಬಿಸುತ್ತಿದ್ದಾರೆ. ಇದಕ್ಕೆಲ್ಲ ಬಗ್ಗದೇ ರಾಜ್ಯ ಸರಕಾರವು ತಮ್ಮ ನಿರ್ಧಾರವನ್ನು ಶೀಘ್ರವಾಗಿ ಜಾರಿಗೊಳಿಸಬೇಕು.

ಉರ್ದು ವಿಶ್ವವಿದ್ಯಾಲಯಕ್ಕೆ ವಿರೋಧ ಏಕಿಲ್ಲ ?

೨೦೧೮ ರಲ್ಲಿ ಕರ್ನಾಟಕದಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ಎಚ್.ಡಿ. ಕುಮಾರಸ್ವಾಮಿ ಸರಕಾರ ಅಧಿಕಾರದಲ್ಲಿದ್ದಾಗ ಕಲ್ಬುರ್ಗಿಯಲ್ಲಿ ಉರ್ದು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ತೀರ್ಮಾನಿಸಲಾಗಿತ್ತು. ರಾಜ್ಯ ಸರಕಾರ ನಡೆಸುತ್ತಿರುವ ಇತರ ವಿಶ್ವವಿದ್ಯಾಲಯಗಳು ಸಂಕಷ್ಟದಲ್ಲಿರುವಾಗಲೇ ಸರಕಾರ ಉರ್ದು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಹೊರಟಿತ್ತು. ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಇಂದಿನಂತೆ ವಿರೋಧಿಸುವ ಜಾತ್ಯತೀತವಾದಿಗಳು, ಕಾಂಗ್ರೆಸ್ಸಿಗರು, ಪ್ರಗತಿ(ಅಧೋಗತಿ) ಪರರು ಮುಂತಾದವರು ಆಗ ಒಂದೇ ಒಂದು ಶಬ್ದದಿಂದ ಸಹ ಅದನ್ನು ವಿರೋಧಿಸಲಿಲ್ಲ ಅಥವಾ ಅವರು ಟ್ವಿಟರ್‌ನಲ್ಲಿ ‘ಸೇ ನೋ ಟು ಉರ್ದು’ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಅನ್ನು ಮಾಡಿರುವುದು ಕೇಳಿ ಬರಲಿಲ್ಲ. ಇದರಿಂದ ಅವರ ಸಂಸ್ಕೃತವಿರೋಧಿ ನಿಲುವು ಪಕ್ಷಪಾತಿ ಮತ್ತು ಅವಕಾಶವಾದಿ ಎಂಬುದು ಸ್ಪಷ್ಟವಾಗುತ್ತದೆ. ಪ್ರತಿಪಕ್ಷಗಳ ಪ್ರಕಾರ, ಸಂಸ್ಕೃತ ಭಾಷೆಯಿಂದ ರಾಜ್ಯದ ಭಾಷಾ ಭಾವೈಕ್ಯಕ್ಕೆ ಧಕ್ಕೆಯಾಗುತ್ತದೆಯಾದರೆ, ರಾಜ್ಯದ ಯಾವ ಭಾಷಾ ಭಾವೈಕ್ಯವನ್ನು ಉರ್ದು ರಕ್ಷಿಸುತ್ತದೆ ? ಎಂದು ಅವರು ಸ್ಪಷ್ಟಪಡಿಸಬೇಕು. ಆದುದರಿಂದ ಇದು ಈ ಸಮೂಹಗಳ ಸಂಸ್ಕೃತದ ವಿರೋಧವಷ್ಟೇ ಅಲ್ಲ,  ಹಿಂದೂ ಧರ್ಮದ ವಿರೋಧವೂ ಆಗಿದೆ ಮತ್ತು ಇದು ಅವರ ವಿರೋಧದ ಕೇಂದ್ರಬಿಂದುವಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

‘ಸಂಸ್ಕೃತ ಭಾಷೆಯ ಮಹತ್ವ ಕೇವಲ ಸಂಸ್ಕೃತಿಗೆ ಮಾತ್ರ ಸೀಮಿತವಾಗಿದೆ’ ಎಂದಿಲ್ಲ, ರಾಷ್ಟ್ರೀಯ ಐಕ್ಯತೆಗೆ ಸಹ ಅದು ಪೂರಕವಾಗಿದೆ. ಭಾರತದ ಮೂಲೆ ಮೂಲೆಯ ಜನರನ್ನು ಒಂದುಗೂಡಿಸುವ ಏಕೈಕ ಭಾಷೆ ಎಂದರೆ ಸಂಸ್ಕೃತ. ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ದೈನಂದಿನ ಆಚಾರ ಧರ್ಮವನ್ನು ಪಾಲಿಸುವಾಗ ಉಚ್ಚರಿಸುವ ಸಂಸ್ಕೃತ ಶ್ಲೋಕಗಳನ್ನೇ ಕನ್ಯಾಕುಮಾರಿಯ ವರೆಗಿನ ಜನರು ತಮ್ಮ ದೈನಂದಿನ ಆಚಾರಧರ್ಮವನ್ನು ಪಾಲಿಸುವಾಗ ಉಚ್ಚರಿಸು ತ್ತಾರೆ. ಇದರಿಂದ ತಿಳಿದು-ತಿಳಿಯದೇ ದೇಶದ ನಾಗರಿಕರಲ್ಲಿ ಐಕ್ಯತೆಯು ಉಂಟಾಗುತ್ತದೆ, ಆದರೆ ಕಳೆದ ೭೪ ವರ್ಷಗಳಲ್ಲಿ ಯಾವುದೇ ಆಡಳಿತಗಾರನಿಂದ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಂತಹ ಶಕ್ತಿ ಬೇರೆ ಯಾವ ಭಾಷೆಗೂ ಇಲ್ಲ ಎಂಬುದು ವಸ್ತುಸ್ಥಿತಿಯಾಗಿದೆ.

ಸಂಸ್ಕೃತ ಭಾಷೆಗೆ ರಾಜಾಶ್ರಯ ಬೇಕು !

ಸಂಸ್ಕೃತವು ಎಲ್ಲ ಭಾಷೆಗಳ ಜನನಿಯಾಗಿದೆ. ಅದರ ಶ್ರೇಷ್ಠತೆ ಮತ್ತು ಪ್ರಾಮುಖ್ಯತೆಯು ವಾದಾತೀತವಾಗಿದೆ. ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ವಿರೋಧಿಸುವ ರಾಜ್ಯದ ಸಂಸ್ಕೃತದ್ವೇಷಿಗಳು ಮೈಸೂರು ಮಹಾರಾಜರು ಕಾಲಕಾಲಕ್ಕೆ ಸಂಸ್ಕೃತ ಭಾಷೆಯ ಪ್ರಚಾರಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದರು ಎಂದು ತಿಳಿದುಕೊಂಡಿರಬೇಕು. ಹಾಗೆ ಮಾಡುವಾಗ ಮಹಾರಾಜರಿಗೆ ಸಂಸ್ಕೃತ ಭಾಷೆಯು ತಮ್ಮ ಭಾಷೆಯ ಭಾವೈಕ್ಯಕ್ಕೆ ಸಮಸ್ಯೆಯಾಗಿ ಕಂಡು ಬರಲಿಲ್ಲ. ಹಾಗಾದರೆ ಕಾಂಗ್ರೆಸ್‌ಗೆ ಏಕೆ ಹಾಗೆ ಅನ್ನಿಸುತ್ತಿದೆ ?

ಅಷ್ಟೇ ಅಲ್ಲದೇ ಈಗಷ್ಟೇ ೫೦ ವರ್ಷ ಪೂರೈಸಿರುವ ‘ಸುಧರ್ಮ’ ಎಂಬ ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆಯನ್ನು ಇದೇ ಮೈಸೂರಿನಿಂದ ಮುದ್ರಿಸಲಾಗುತ್ತದೆ. ೧೯೭೦ ರಲ್ಲಿ ಆಗಿನ ಕಾಂಗ್ರೆಸ್‌ನ ಪ್ರಧಾನಿ ಇಂದಿರಾಗಾಂಧಿ ಅವರ ಅವಧಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು, ೧೯೭೪ ರಲ್ಲಿ ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆಗಳು ಆರಂಭವಾದವು ಎಂಬುದು ಇಂದಿನ ಕೆಲವೇ ಕೆಲವು ಕಾಂಗ್ರೆಸ್ಸಿಗರಿಗೆ ತಿಳಿದಿದೆ. ೧೯೯೪ ರಲ್ಲಿ ಇದೇ ಕಾಂಗ್ರೆಸ್‌ನ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಅವಧಿಯಲ್ಲಿ ದೂರದರ್ಶನದಲ್ಲಿ ಸಂಸ್ಕೃತ ವಾರ್ತೆಗಳು ಪ್ರಸಾರವಾಗುತ್ತಿದ್ದವು. ಸಂಸ್ಕೃತದ ಉನ್ನತಿಗಾಗಿ ಮೊದಲೆರಡು ಆಯೋಗಗಳನ್ನು ಕೂಡ ಕಾಂಗ್ರೆಸ್ ಅಧಿಕಾರಾವಧಿಯಲ್ಲಿಯೇ ಸ್ಥಾಪಿಸಲಾಯಿತು. ಕಾಂಗ್ರೆಸ್ ಪಕ್ಷವೇ ಈ ನಿರ್ಧಾರವನ್ನು ಕೈಗೊಂಡಿದ್ದರೂ ಅದರ ಅಧಿಕಾರಾವಧಿಯಲ್ಲಿ ಸಂಸ್ಕೃತವನ್ನು ಕಡೆಗಣಿಸಿರುವುದು ಅಷ್ಟೇ ಸತ್ಯ. ಈಗಿನ ಸರಕಾರವು ಈ ತಪ್ಪನ್ನು ಸರಿಪಡಿಸಿ ಸಂಸ್ಕೃತಕ್ಕೆ ರಾಜಾಶ್ರಯ ನೀಡಬೇಕು. ಅದೇ ನಿಜವಾದ ಆತ್ಮನಿರ್ಭರದತ್ತ ಹಾಕಿದ ದಿಟ್ಟಹೆಜ್ಜೆಯಾಗುವುದು !