ಸ್ವಾ. ಸಾವರಕರ ಅವರ ಚಿಂತನೆಗಳನ್ನು ಅನುಸರಿಸಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ, ದೇಶ ವಿಶ್ವಗುರುವಾಗುತ್ತಿತ್ತು ! – ಶ್ರೀ. ಉದಯ ಮಾಹೂರಕರ, ಕೇಂದ್ರ ಮಾಹಿತಿ ಆಯುಕ್ತ

ಕೇಂದ್ರ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹೂರಕರ ಮತ್ತು ಸಹಲೇಖಕರಾದ ಶ್ರೀ. ಚಿರಾಯು ಪಂಡಿತ ಅವರು ಬರೆದ ‘ವೀರ ಸಾವರಕರ – ದಿ ಮ್ಯಾನ್ ಹು ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶನ್’ ಪುಸ್ತಕವು ಗೋವಾದಲ್ಲಿ ಬಿಡುಗಡೆ

ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಎಡದಿಂದ ಶ್ರೀ. ಚೇತನ ರಾಜಹಂಸ, ಶ್ರೀ. ಉದಯ ಮಾಹರೂಕರ, ಶ್ರೀ. ರಮೇಶ ಶಿಂದೆ

ಪಣಜಿ (ಗೋವಾ) – ಸ್ವಾ. ಸಾವರಕರರು ದೂರದೃಷ್ಟಿಯುಳ್ಳ ರಾಷ್ಟ್ರೀಯವಾದಿ ಮತ್ತು ರಾಷ್ಟ್ರೀಯ ಭದ್ರತೆಯ ಕೇಂದ್ರ ಬಿಂದುವಾಗಿದ್ದರು. ಸ್ವಾ. ಸಾವರಕರ ಅವರ ವಿಚಾರಗಳನ್ನು ಪಾಲಿಸದ ಕಾರಣ ದೇಶವು ಭಾರೀ ನಷ್ಟವನ್ನು ಅನುಭವಿಸಿತು. ಸ್ವಾ. ಸಾವರಕರ ಅವರ ವಿಚಾರಗಳನ್ನು ದೇಶ ಅನುಸರಿಸಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ, ದೇಶ ವಿಶ್ವಗುರುವಾಗುತ್ತಿತ್ತು ಎಂದು ಕೇಂದ್ರ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹೂರಕರ ಅವರು ಪ್ರತಿಪಾದಿಸಿದರು. ಸ್ವಾತಂತ್ರ್ಯವೀರ ಸಾವರಕರ ಇವರ ಜೀವನದ ಮೇಲೆ ಹೊಸದಾಗಿ ಬೆಳಕು ಚೆಲ್ಲುವ, ಶ್ರೀ. ಉದಯ ಮಾಹೂರಕರ ಮತ್ತು ಸಹಲೇಖಕರಾದ ಶ್ರೀ. ಚಿರಾಯು ಪಂಡಿತ ಅವರು ಬರೆದ ‘ವೀರ ಸಾವರಕರ – ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶನ್’ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಈ ಸಮಾರಂಭವು ಪಣಜಿಯ ಗೋಮಾಂತಕ ಮರಾಠಾ ಸಮಾಜ-ರಾಜಾರಾಮ ಸ್ಮೃತಿ ಸಭಾಂಗಣದಲ್ಲಿ ಉತ್ಸಾಹದಿಂದ ನೆರವೇರಿತು. ಕಾರ್ಯಕ್ರಮಕ್ಕೆ ಮುಂಬೈಯ ‘ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕದ ಅಧ್ಯಕ್ಷ ಶ್ರೀ. ಪ್ರವೀಣ ದೀಕ್ಷಿತ್ (ನಿವೃತ್ತ ಪೊಲೀಸ್ ಮಹಾನಿರ್ದೇಶಕರು) ಅವರು ಮುಖ್ಯ ಅತಿಥಿಯಾಗಿ ‘ಆನ್‌ಲೈನ್’ ಮೂಲಕ ಉಪಸ್ಥಿತರಿದ್ದರು.

ಶಂಖನಾದ, ದೀಪಪ್ರಜ್ವಲನೆ, ಸ್ವಾ. ಸಾವರಕರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಚಿತ್ರಗಳ ಪೂಜೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಬಳಿಕ ಶ್ರೀ ಕ್ಷೇತ್ರ ತಪೋಭೂಮಿಯ ಧರ್ಮಭೂಷಣ ಪ.ಪೂ. ಬ್ರಹ್ಮೇಶಾನಂದ ಸ್ವಾಮಿ ಮಹಾರಾಜರ ಸಂದೇಶವನ್ನು ಓದಲಾಯಿತು. ದೇಶಭಕ್ತಿಯ ಜ್ಯೋತಿಯನ್ನು ನಿರಂತರವಾಗಿ ಪ್ರಜ್ವಲಿಸಿಡಬೇಕು ಎಂದು ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಈ ಸಮಯದಲ್ಲಿ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಅವರು ‘ಸ್ವಾ. ಸಾವರಕರರ ವಿಚಾರಗಳು ೭೦ ವರ್ಷಗಳ ನಂತರವೂ ದೇಶದ ವೈಚಾರಿಕ ಆಸ್ತಿಯಾಗಿವೆ. ‘ಹಿಂದೂ ರಾಷ್ಟ್ರ’ ಸ್ಥಾಪಿಸುವ ಸ್ವಾ. ಸಾವರಕರ ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ಈಗ ಹಿಂದೂಗಳ ಮೇಲಿದೆ. ಈ ಪುಸ್ತಕವನ್ನು ಓದುವುದರಿಂದ ಹಿಂದೂಗಳಿಗೆ ಹೊಸ ಶಕ್ತಿ ಬರುವುದು’, ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಈ ವೇಳೆ ಮಾತನಾಡುತ್ತಾ, ‘ಒಂದೊಮ್ಮೆ ನನ್ನ ‘ಮಾರ್ಸೆಲ್ ಜಿಗಿತವನ್ನು ಮರೆತರೂ ಪರವಾಗಿಲ್ಲ ಆದರೆ ನಾನೊಬ್ಬ ‘ಹಿಂದೂ ಸಂಘಟಕ’ ಎಂಬುದನ್ನು ಮರೆಯಬೇಡಿ ಎಂದು ಸ್ವಾ. ಸಾವರಕರ ಹೇಳಿದ್ದರು’. ಈ ವಿಚಾರಗಳನ್ನು ಅಂಗೀಕರಿಸುವ ಮೂಲಕ, ಸ್ವಾ. ಸಾವರಕರರ ಹಿಂದೂ ರಾಷ್ಟ್ರಕ್ಕಾಗಿನ ಕಾರ್ಯವನ್ನು ಮುಂದುವರಿಸಬೇಕು. ‘ಚರಕದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು’ ಎನ್ನುತ್ತಾರೆ. ಹಾಗಿದ್ದರೆ ಗೋವಾ, ದಮನ-ದೀವ್ ಈ ಪ್ರದೇಶಗಳಿಗೆ ಸ್ವಾತಂತ್ರ್ಯ ಸಿಗಲು ೧೯೬೧ ರ ತನಕ ಏಕೆ ಕಾಯಬೇಕಾಯಿತು ? ಗೋವಾ ಮುಕ್ತಿಗಾಗಿ ಸೇನಾ ಕಾರ್ಯಾಚರಣೆ ಏಕೆ ಮಾಡಬೇಕಾಯಿತು ? ನಮ್ಮಲ್ಲಿ ಸ್ವಾ. ಸಾವರಕರ ಅವರ ವಿಚಾರಗಳಿವೆ. ಈ ವಿಚಾರಗಳ ಆಧಾರದಲ್ಲಿ ನಾವು ದೇಶದ ಮತ್ತಷ್ಟು ವಿಭಜನೆಯನ್ನು ತಡೆಯಬಹುದು’, ಎಂದರು.

ಈ ವೇಳೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಶ್ರೀ. ಪ್ರವೀಣ ದೀಕ್ಷಿತ್ ಅವರು ಮಾತನಾಡುತ್ತಾ, ‘ಸ್ವಾ. ಸಾವರಕರರ ವಿವರಗಳಿಂದ ಸ್ಫೂರ್ತಿ ಪಡೆದು ಅನೇಕರು ದೊಡ್ಡ ಕಾರ್ಯಗಳನ್ನು ಮಾಡಿದ್ದಾರೆ. ಆದುದರಿಂದ ಸ್ವಾ. ಸಾವರಕರರ ವಿಚಾರಗಳು ಇಂದಿಗೂ ಅನುಕರಣೀಯವಾಗಿವೆ, ಎಂದರು. ಶ್ರೀ. ಶೈಲೇಶ ಬೆಹರೆಯವರು ಈ ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಸಮಿತಿಯ ಗೋವಾ ರಾಜ್ಯ ಸಮನ್ವಯಕರಾದ ಶ್ರೀ. ಸತ್ಯವಿಜಯ ನಾಯ್ಕ್ ಇವರು ಧನ್ಯವಾದ ಸಮರ್ಪಣೆ ಮಾಡಿದರು. ಈ ಕಾರ್ಯಕ್ರಮವನ್ನು ಟ್ವಿಟರ್ ಮತ್ತು ಯೂ-ಟ್ಯೂಬ್ ಸಾಮಾಜಿಕ ಮಾಧ್ಯಮಗಳ ಮೂಲಕ ಸಾವಿರಾರು ಜನರು ವೀಕ್ಷಿಸಿದ್ದಾರೆ. ಸಂಪೂರ್ಣ ವಂದೇ ಮಾತರಂ ಹಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.