ಮಹಾರಾಷ್ಟ್ರ ಸರಕಾರದಿಂದ ‘ಛತ್ರಪತಿ ಸಂಭಾಜಿ ಮಹಾರಾಜ ಮಹಾರಾಷ್ಟ್ರ ಪ್ರೇರಣಾಗೀತೆ’ ಪುರಸ್ಕಾರದ ಘೋಷಣೆ

ಸ್ವಾತಂತ್ರ್ಯವೀರ ಸಾವರ್ಕರ್ ಅವರ ‘ಅನಾದಿ ಮೀ, ಅನಂತ ಮೀ’ ಗೀತೆಗೆ ಪುರಸ್ಕಾರ!

ಮುಂಬಯಿ – ಮಹಾರಾಷ್ಟ್ರ ಸರಕಾರದ ಸಾಂಸ್ಕೃತಿಕ ಕಾರ್ಯ ಇಲಾಖೆಯು ‘ಛತ್ರಪತಿ ಸಂಭಾಜಿ ಮಹಾರಾಜ ಮಹಾರಾಷ್ಟ್ರ ಪ್ರೇರಣಾ ಗೀತೆ ಪುರಸ್ಕಾರ’ ಘೋಷಿಸಿದೆ. 2025 ರಿಂದ ಈ ಪುರಸ್ಕಾರವನ್ನು ಪ್ರಾರಂಭಿಸಲಾಗುತ್ತಿದ್ದು, ಮೊದಲ ಪುರಸ್ಕಾರವನ್ನು ಸ್ವಾತಂತ್ರ್ಯವೀರ ಸಾವರ್ಕರ್ ಅವರು ಬರೆದ ‘ಅನಾದಿ ಮೀ, ಅನಂತ ಮೀ, ಅವಧ್ಯ ಮೀ ಭಲಾ..’ ಈ ಅಮರ ಗೀತೆಗೆ ನೀಡುವ ಘೋಷಣೆಯನ್ನು ಸಾಂಸ್ಕೃತಿಕ ಕಾರ್ಯ ಸಚಿವ ಆಶಿಶ್ ಶೆಲಾರ್ ಮಾಡಿದ್ದಾರೆ. ಬ್ರಿಟಿಷರ ಹಿಡಿತದಿಂದ ತಪ್ಪಿಸಿಕೊಳ್ಳಲು ಸ್ವಾತಂತ್ರ್ಯವೀರ ಸಾವರ್ಕರ್ ಅವರು ಯಾವ ಸ್ಥಳದಲ್ಲಿ ಸಮುದ್ರಕ್ಕೆ ಜಗತ್ಪ್ರಸಿದ್ಧ ಜಿಗಿತವನ್ನು ಮಾಡಿದ್ದರೋ, ಆ ಫ್ರಾನ್ಸ್‌ನ ಮಾರ್ಸೆಲಿಸ್ ಬಂದರಿನಿಂದ ಸಚಿವ ಆಶಿಶ್ ಶೆಲಾರ್ ಅವರು ಈ ಪುರಸ್ಕಾರವನ್ನು ಘೋಷಿಸಿದ್ದಾರೆ.

ಮಾರ್ಸೆಲಿಸ್ ಬಂದರಿನಲ್ಲಿ ಜಿಗಿದ ನಂತರ ಸ್ವಾತಂತ್ರ್ಯವೀರ ಸಾವರ್ಕರ್ ಅವರು ಮತ್ತೆ ಬ್ರಿಟಿಷರ ಕೈಗೆ ಸಿಕ್ಕಿಬಿದ್ದರು. ಅವರ ಮೇಲೆ ಭಾರತದಲ್ಲಿ ಮೊಕದ್ದಮೆ ಹೂಡಲಾಯಿತು ಮತ್ತು ಅವರಿಗೆ 2 ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಜೀವನದ ಈ ಕಠಿಣ ಸಮಯದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಅವರಿಗೆ ‘ಅನಾದಿ ಮೀ, ಅನಂತ ಮೀ, ಅವಧ್ಯ ಮೀ ಭಲಾ, ಮಾರಿಲ ರಿಪು ಜಗತಿ ಅಸಾ ಕವಣ ಜನ್ಮಲಾ’, ಈ ಆತ್ಮಬಲವನ್ನು ಹೆಚ್ಚಿಸುವ ಗೀತೆ ಸ್ಫೂರ್ತಿಯಾಯಿತು.

ಪುರಸ್ಕಾರದ ಸ್ವರೂಪ ಮತ್ತು ಆಯ್ಕೆಯ ಮಾನದಂಡಗಳನ್ನು ತಿಳಿಯಿರಿ!

ಸಾಂಸ್ಕೃತಿಕ ಕಾರ್ಯ ಇಲಾಖೆಯಿಂದ ಪ್ರತಿವರ್ಷ ‘ಛತ್ರಪತಿ ಸಂಭಾಜಿ ಮಹಾರಾಜ ಮಹಾರಾಷ್ಟ್ರ ಪ್ರೇರಣಾ ಗೀತೆ’ ಪುರಸ್ಕಾರವನ್ನು ನೀಡಲಾಗುತ್ತದೆ. 2 ಲಕ್ಷ ರೂಪಾಯಿಗಳು ಈ ಪುರಸ್ಕಾರದ ಮೊತ್ತವಾಗಿದ್ದು, ಇದನ್ನು ಗೀತೆ ರಚನೆಕಾರರಿಗೆ ನೀಡಲಾಗುತ್ತದೆ. ಯಾವ ಗೀತೆ ರಚನೆಕಾರರು ಬದುಕಿಲ್ಲವೋ, ಅವರ ವಾರಸುದಾರರಿಗೆ ಈ ಮೊತ್ತವನ್ನು ನೀಡಲಾಗುತ್ತದೆ. ಈ ಪುರಸ್ಕಾರಕ್ಕಾಗಿ ಗೀತೆಯನ್ನು ಆಯ್ಕೆ ಮಾಡಲು ಸಾಂಸ್ಕೃತಿಕ ಕಾರ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಪುರಸ್ಕಾರಕ್ಕೆ ಆಯ್ಕೆಯಾಗುವ ಗೀತೆಯು ಕನಿಷ್ಠ 5 ವರ್ಷಗಳ ಹಿಂದಿನದಾಗಿರಬೇಕು ಮತ್ತು ಮರಾಠಿ ಭಾಷೆಯಲ್ಲಿರುವುದು ಕಡ್ಡಾಯವಾಗಿರುತ್ತದೆ ಹಾಗೂ ಇದು ರಾಷ್ಟ್ರ ಕಾರ್ಯಕ್ಕೆ ಸ್ಫೂರ್ತಿ ಮತ್ತು ಪ್ರೇರಣೆ ನೀಡುವಂತಿರಬೇಕು, ಇತ್ಯಾದಿ ಮಾನದಂಡಗಳನ್ನು ಪುರಸ್ಕಾರದ ಗೀತೆಗಾಗಿ ನಿರ್ಧರಿಸಲಾಗಿದೆ.