ಮೆಲ್ಬರ್ನ್ (ಆಸ್ಟ್ರೇಲಿಯಾ) ದಲ್ಲಿ ಮೋಹನದಾಸ ಗಾಂಧಿಯವರ ಪುತ್ಥಳಿಯು ಅನಾವರಣಗೊಂಡ ಕೆಲವೇ ಗಂಟೆಗಳಲ್ಲಿ ಧ್ವಂಸ

ಮೆಲ್ಬರ್ನ್ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಇವರು ಭಾರತದ ಸ್ವಾತಂತ್ರ್ಯದ ೭೫ ವರ್ಷಗಳ ಸ್ಮರಣಾರ್ಥವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾರತದ ಮಹಾವಾಣಿಜ್ಯ ರಾಯಭಾರಿ ಮತ್ತು ಆಸ್ಟ್ರೇಲಿಯಾದ ನೇತಾರರೊಂದಿಗೆ ರಾವಿಲದಲ್ಲಿನ ‘ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್’ನಲ್ಲಿ ಮೋಹನದಾಸ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಅನಂತರ ಕೆಲವೇ ಗಂಟೆಗಳಲ್ಲಿ ಈ ಪುತ್ಥಳಿಯನ್ನು ಒಡೆದು ಹಾಕಲಾಯಿತು. ಈ ಪುತ್ಥಳಿಯನ್ನು ಭಾರತ ಸರಕಾರವು ಉಡುಗೊರೆಯಾಗಿ ನೀಡಿತ್ತು.

ಪ್ರಧಾನಿ ಸ್ಕಾಟ್ ಮಾರಿಸನ್ ಇವರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅವರು ಈ ಬಗ್ಗೆ ಮಾತನಾಡುತ್ತಾ ‘ಈ ಮಟ್ಟದಲ್ಲಿ ಅವಮಾನಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ಅತ್ಯಂತ ನಿರಾಶಾಜನಕವಾಗಿದೆ. ಈ ದೇಶದಲ್ಲಿನ ಸಾಂಸ್ಕೃತಿಕ ಸ್ಮಾರಕಗಳ ಮೇಲಾಗುವ ಆಕ್ರಮಣಗಳನ್ನು ಸಹಿಸಲು ಸಾಧ್ಯವಿಲ್ಲ. ಇದಕ್ಕೆ ಯಾರು ಜವಾಬ್ದಾರರಾಗಿರುವವರು ಅವರು ಆಸ್ಟ್ರೇಲಿಯಾದಲ್ಲಿನ ಭಾರತೀಯ ಸಮುದಾಯಕ್ಕೆ ಬಹುದೊಡ್ಡ ಅಪಮಾನ ಮಾಡಿದ್ದಾರೆ. ಅವರಿಗೆ ನಾಚಿಕೆಯಾಗಬೇಕು’ ಎಂದು ಹೇಳಿದರು.

’ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ ಆಫ್ ವಿಕ್ಟೋರಿಯಾ’ ದ ಅಧ್ಯಕ್ಷರಾದ ಸೂರ್ಯಪ್ರಕಾಶ ಸೋನಿಯವರು ಮಾತನಾಡುತ್ತಾ, ಈ ಕೃತ್ಯದಿಂದ ಭಾರತೀಯ ಸಮುದಾಯಕ್ಕೆ ಆಘಾತವಾಗಿದೆ. ಹಾಗೆಯೇ ದುಃಖವೂ ಆಗಿದೆ. ರಾವಿಲ ಸೆಂಟರ್ ವಿಕ್ಟೋರಿಯ ರಾಜ್ಯದಲ್ಲಿನ ಮೊದಲನೇಯ ಭಾರತೀಯ ಸಮುದಾಯ ಕೇಂದ್ರವಾಗಿದ್ದು ೩೦ ವರ್ಷಗಳ ಪ್ರಯತ್ನಗಳ ನಂತರ ಇದನ್ನು ಸ್ಥಾಪಿಸಲಾಗಿದೆ’ ಎಂದು ಹೇಳಿದರು.