ಕೇಂದ್ರ ಸರಕಾರವು ಭಗವಾನ್ ಶ್ರೀರಾಮ, ಭಗವಾನ್ ಶ್ರೀಕೃಷ್ಣ, ಶ್ರೀಮದ್ ಭಗವದ್ಗೀತೆ ಇವುಗಳನ್ನು ಗೌರವಿಸಲು ಸಂಸತ್ತಿನಲ್ಲಿ ಕಾನೂನು ನಿರ್ಮಿಸಬೇಕು ! – ಅಲಹಾಬಾದ್ ಉಚ್ಚ ನ್ಯಾಯಾಲಯದ ಸೂಚನೆ

ಹೀಗೆ ನ್ಯಾಯಾಲಯಕ್ಕೆ ಏಕೆ ಹೇಳಬೇಕಾಗುತ್ತದೆ ? ಸರಕಾರಕ್ಕೆ ಇದು ಅರ್ಥವಾಗಬೇಕು ! ಹಿಂದೂ ಧರ್ಮ, ದೇವತೆಗಳು, ಗ್ರಂಥಗಳು ಇತ್ಯಾದಿಗಳನ್ನು ಗೌರವಿಸಲು ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿಸುವುದೊಂದೇ ಪರ್ಯಾಯ !- ಸಂಪಾದಕರು

ಪ್ರಯಾಗರಾಜ (ಉತ್ತರಪ್ರದೇಶ) – ಭಗವಾನ್ ಶ್ರೀರಾಮ, ಭಗವಾನ್ ಶ್ರೀಕೃಷ್ಣ, ಹಾಗೆಯೇ ರಾಮಾಯಣ, ಶ್ರೀಮದ್ ಭಗವದ್ಗೀತೆ, ರಾಮಾಯಣವನ್ನು ಬರೆದ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವ್ಯಾಸರು ದೇಶದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದಾರೆ. ದೇಶದ ಸಂಸತ್ತಿನಲ್ಲಿ ಈ ಕುರಿತು ಕಾನೂನನ್ನು ಅಂಗೀಕರಿಸುವ ಮೂಲಕ ಅವರನ್ನು ರಾಷ್ಟ್ರ ಮಟ್ಟದಲ್ಲಿ ಗೌರವಿಸಬೇಕು, ಎಂದು ಅಲಹಾಬಾದ್ ಉಚ್ಚನ್ಯಾಯಾಲಯವು ಕೇಂದ್ರಕ್ಕೆ ಸೂಚನೆ ನೀಡಿದೆ.

1. ಭಗವಾನ್ ಶ್ರೀರಾಮ ಮತ್ತು ಭಗವಾನ್ ಶ್ರೀಕೃಷ್ಣನ ಬಗ್ಗೆ ಫೇಸ್‍ಬುಕ್‍ನಲ್ಲಿ ಆಕ್ಷೇಪಾರ್ಹ ಭಾಷೆಯಲ್ಲಿ ಪೋಸ್ಟ್ ಮಾಡಿದ್ದ ಆಕಾಶ ಜಾಟವ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡುವಾಗ ಈ ಸೂಚನೆಯನ್ನು ನೀಡಿದೆ. ಜಾಟವ್ ಕಳೆದ 10 ತಿಂಗಳುಗಳಿಂದ ಈ ಅಪರಾಧಕ್ಕಾಗಿ ಜೈಲಿನಲ್ಲಿದ್ದರು. ಈ ಸಲ ಅವರಿಗೆ ಜಾಮೀನು ನೀಡಲಾಯಿತು.

2. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಶೇಖರ ಯಾದವ ಅವರು, ಆರೋಪಿಯು ಭಗವಾನ್ ಶ್ರೀರಾಮ ಮತ್ತು ಭಗವಾನ್ ಶ್ರೀಕೃಷ್ಣ ಈ ಮಹಾನ್ ವ್ಯಕ್ತಿಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರಿಂದ ದೇಶದ ಬಹುಸಂಖ್ಯಾತ ನಾಗರಿಕರ ಶ್ರದ್ಧೆಯ ಮೇಲೆ ಘಾಸಿಯನ್ನುಂಟುಮಾಡಿವೆ. ಆದ್ದರಿಂದ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುತ್ತದೆ ಮತ್ತು ಮುಗ್ಧ ನಾಗರಿಕರು ಇದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಇದರ ಜೊತೆಗೆ, ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಕಠಿಣವಾದ ನಿಲುವನ್ನು ತೆಗೆದುಕೊಳ್ಳದಿದ್ದರೆ, ಅಂತಹ ಜನರ ಧೈರ್ಯ ಹೆಚ್ಚಾಗುತ್ತದೆ ಮತ್ತು ಇದು ದೇಶದ ಸೌಹಾರ್ದತೆಗೆ ಧಕ್ಕೆ ತರುತ್ತದೆ ಎಂದು ಹೇಳಿದರು.

3. ನ್ಯಾಯಮೂರ್ತಿ ಶೇಖರ ಯಾದವರು ತಮ್ಮ ಮಾತನ್ನು ಮುಂದುವರೆಸುತ್ತಾ, ದೇಶದ ಸಂವಿಧಾನದಲ್ಲಿ ಸಾರ್ವಭೌಮ ಮತ್ತು ಸ್ವತಂತ್ರ ನಿಯಮಾವಳಿ ಇದೆ. ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಪ್ರಜೆಗೂ ಈಶ್ವರನ ಮೇಲೆ ವಿಶ್ವಾಸ ಇರುವುದು ಅಥವಾ ಇಲ್ಲದಿರುವ ಬಗ್ಗೆ ಸ್ವಾತಂತ್ರ್ಯವಿದೆ. ಆದಾಗ್ಯೂ, ಯಾರಿಗೆ ಈಶ್ವರ ಮೇಲೆ ವಿಶ್ವಾಸವಿಲ್ಲವೋ ಅಂತಹ ನಾಗರಿಕರು ಈಶ್ವರನ ಆಕ್ಷೇಪಾರ್ಹ ಚಿತ್ರಗಳನ್ನು ಬಿಡಿಸಿ ಪ್ರಸಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.