ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ‘ಐ.ಐ.ಟಿ, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್‌ನಲ್ಲಿ ಪಿ.ಎಚ್.ಡಿ. ಪಡೆದ ಪ್ರಾಧ್ಯಾಪಕರೆಂದು ಕಾರ್ಯ ನಿರತರಾಗಿದ್ದರು. ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಇತ್ಯಾದಿ ವಿಷಯಗಳಲ್ಲಿ ೧೧ ಗ್ರಂಥಗಳನ್ನು ಪ್ರಕಾಶನ ಮಾಡಿದ್ದಾರೆ. ಅದರಲ್ಲಿ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ? ಈ ಹಿಂದಿ ಭಾಷೆಯ ಗ್ರಂಥದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಇಷ್ಟರವರೆಗೆ ಪ್ರಕಟಿಸಲಾದ ಲೇಖನಗಳಲ್ಲಿ ‘ಭಾರತೀಯ ಸಂಸ್ಕೃತಿಯು ಸರ್ವೋತ್ತಮ ಶಿಕ್ಷಣದ ಆಧಾರಸ್ತಂಭವಾಗಿರುತ್ತದೆ, ಭಾರತೀಯ ಸಂಸ್ಕೃತಿಯು ಮನುಷ್ಯ ಜೀವನದ ವಾಸ್ತವಿಕತೆಯ ಮೇಲೆ ಬೆಳಕು ಚೆಲ್ಲುತ್ತಿದ್ದು ‘ಆತ್ಮವು ಮನುಷ್ಯನ ಶರೀರದಲ್ಲಿ ಅವ್ಯಕ್ತ ಹಾಗೂ ಇಂದ್ರಿಯಾತೀತ ರೂಪದಲ್ಲಿ ವಿರಾಜಮಾನವಾಗಿದೆ ಎಂಬ ಜ್ಞಾನವು ವೇದಗಳಿಂದ ಪ್ರಾಪ್ತವಾಗುತ್ತದೆ ಎನ್ನುವ  ಮಾಹಿತಿಯನ್ನು ಪಡೆದುಕೊಂಡೆವು. ಈ ವಾರ ಅದರ ಮುಂದಿನ ಲೇಖನವನ್ನು ನೋಡೋಣ. 

(ಭಾಗ ೪)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/49453.html
ಪೂ. ಡಾ. ಶಿವಕುಮಾರ ಓಝಾ

೨. ಆಧುನಿಕ ಸಮಾಜದ ಸಭ್ಯತೆಯ ಸಂಕಲ್ಪನೆ ಮತ್ತು ದೋಷ

‘ಆಧುನಿಕ ಸಮಾಜದ ಸಭ್ಯತೆಯ ಸಂಕಲ್ಪನೆ ಮತ್ತು ಸಾಮಾಜಿಕ ವ್ಯವಸ್ಥೆಗೆ ಪುಷ್ಟಿಯನ್ನು ನೀಡುವ ಅನುಕೂಲಕರವಾದ ಶಿಕ್ಷಣವು ಈಗ ಬಳಕೆಯಲ್ಲಿದೆ. ಆದುದರಿಂದ ಈಗಿನ ಶಿಕ್ಷಣದ ಸ್ವರೂಪವನ್ನು ತಿಳಿದುಕೊಳ್ಳಲು ಆಧುನಿಕ ಸಮಾಜ ಮತ್ತು ಅದರ ಸಭ್ಯತೆಯ ಸಂಕಲ್ಪನೆಯ ಪರಿಶೀಲನೆಯನ್ನು ಮಾಡುವುದು ಆವಶ್ಯಕವಾಗಿದೆ. ವರ್ತಮಾನ ಸ್ಥಿತಿಯಲ್ಲಿ ಈಗ ಬಳಕೆಯಲ್ಲಿರುವ ಸಾಮಾಜಿಕ ವ್ಯವಸ್ಥೆ ಮತ್ತು ಸಭ್ಯತೆಯ ಸಂಕಲ್ಪನೆ ಇವುಗಳೊಂದಿಗೆ ನಾವೆಲ್ಲರೂ ಸುಪರಿಚಿತರಾಗಿರುವುದರಿಂದ ಅವುಗಳ ಅತ್ಯಂತ ಸಂಕ್ಷಿಪ್ತ ವಿವರಣೆಯನ್ನು ಈ ಖಂಡದಲ್ಲಿ ಪ್ರಸ್ತುತಪಡಿಸಲಾಗಿದೆ.

೨ ಅ. ಸಮಾಜವ್ಯವಸ್ಥೆ ಸರಿಯಾಗಿ ನಡೆಯಲು ಪ್ರತಿಯೊಬ್ಬ ಮನುಷ್ಯನು ರಾಷ್ಟ್ರ ಮತ್ತು ಸಮಾಜ ರಚಿಸಿದ ನಿಯಮಗಳನ್ನು ಪಾಲಿಸುವುದು ಆವಶ್ಯಕವಾಗಿದೆ : ಮನುಷ್ಯನು ಸಮಾಜಪ್ರಿಯ ಪ್ರಾಣಿಯಾಗಿದ್ದಾನೆ. ಸಮಾಜದ ರಚನೆ ಹೇಗಿರಬೇಕೆಂದರೆ, ಅದರಿಂದ ಪ್ರತಿಯೊಬ್ಬ ಮನುಷ್ಯನಿಗೆ ಕಡಿಮೆ ಎಂದರೂ, ತನ್ನ ಜೀವನವನ್ನು ಒಳ್ಳೆಯ ರೀತಿಯಿಂದ ನಡೆಸಲು ಸಾಕಾಗುವಷ್ಟಾದರೂ ಭೌತಿಕ ಸುಖಸೌಲಭ್ಯಗಳು ಅವಶ್ಯವಾಗಿ ಸಿಗಬೇಕು. ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಶಾರೀರಿಕ ಮತ್ತು ಬೌದ್ಧಿಕ ಕ್ಷಮತೆಯ ವಿಕಾಸ ಮಾಡಿಕೊಳ್ಳುವ ಅವಕಾಶ ಸಿಗಬೇಕು. ‘ಸಮಾಜದಲ್ಲಿನ ಜನರನ್ನು ವಿವಿಧ ವರ್ಗಗಳಲ್ಲಿ (ಉಚ್ಚ-ನೀಚ, ಕಪ್ಪು-ಬಿಳುಪು ಇತ್ಯಾದಿ ವರ್ಗಗಳಲ್ಲಿ) ವರ್ಗೀಕರಣ ಮಾಡಬಾರದು, ಎಂಬ ಆದರ್ಶವನ್ನು ಹೇಳಲಾಗುತ್ತದೆ; ಆದರೆ ಪ್ರತ್ಯಕ್ಷ ವ್ಯವಹಾರದಲ್ಲಿ ಮಾತ್ರ ಸಮಾಜವನ್ನು ಧನಸಂಪತ್ತು, ಭಾಷೆ, ಪ್ರಾಂತ ಮತ್ತು ಬಣ್ಣದ ಆಧಾರದ ಮೇಲೆ ವರ್ಗೀಕರಣ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ನಮ್ಮ ಯೋಗ್ಯತೆಗನುಸಾರ ಎಲ್ಲರಿಗೂ ಧನ (ಧನಸಂಪತ್ತು) ಪ್ರಾಪ್ತಮಾಡಿಕೊಳ್ಳಲು ಮತ್ತು ಇಚ್ಛೆಯನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವ ಅಧಿಕಾರವಿದೆ. ಈ ಕಾರ್ಯಕ್ಕಾಗಿ ಸಮಾಜದಲ್ಲಿ ಮನುಷ್ಯನ ಯಾವುದೇ ರೀತಿಯ ವರ್ಗೀಕರಣವನ್ನು ಮಾಡಲಾಗಿಲ್ಲ; ಆದರೆ ತಮ್ಮ ತಮ್ಮ ಕಾರ್ಯಕ್ಕನುಸಾರ (ರಾಜಕೀಯ, ನೌಕರಿ, ಚಿಕಿತ್ಸೆ, ವ್ಯಾಪಾರ ಇತ್ಯಾದಿ) ಸಮಾಜವು ವಿವಿಧ ವರ್ಗಗಳಲ್ಲಿ ತಾನಾಗಿಯೇ ವಿಭಜಿಸಲ್ಪಡುತ್ತದೆ. ಸಮಾಜವ್ಯವಸ್ಥೆ ಸರಿಯಾಗಿ ನಡೆಯಲು ಪ್ರತಿಯೊಬ್ಬ ಮನುಷ್ಯನು ರಾಷ್ಟ್ರ ಮತ್ತು ಸಮಾಜದಿಂದ ರಚಿಸಲಾದ ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ ಮನುಷ್ಯನು ದಂಡಕ್ಕೆ ಅರ್ಹನಾಗುತ್ತಾನೆ.

೨ ಆ. ಆಧುನಿಕ ಮಾನ್ಯತೆ ಮತ್ತು ದೋಷ : ವಿಚಾರ ಮತ್ತು ದೋಷ ಇವುಗಳ ವರ್ಣನೆಯನ್ನು ಮುಂದಿನಂತೆ ಬೇರೆ ಬೇರೆ ಮಾಡಲಾಗಿದೆ. ಇಲ್ಲಿ ಪ್ರತಿಯೊಂದು ಮಾನ್ಯತೆಯ ಜೊತೆಗೆ ಅದರಲ್ಲಿನ ದೋಷಗಳ ಬಗ್ಗೆಯೂ ವರ್ಣನೆ ಇದೆ.

೨ ಆ ೧. ಈ ಜಗತ್ತಿನಲ್ಲಿ ಪ್ರತ್ಯಕ್ಷ ಪದಾರ್ಥಗಳ ಅಸ್ತಿತ್ವವಿದೆ ! : ಜಗತ್ತಿನಲ್ಲಿ ಯಾವ ಪದಾರ್ಥಗಳ ಅಸ್ತಿತ್ವವನ್ನು ಜ್ಞಾನೇಂದ್ರಿಯಗಳ ಮೂಲಕ ಪ್ರತ್ಯಕ್ಷ ತಿಳಿದುಕೊಳ್ಳಬಹುದೋ, ಅಷ್ಟೇ ಪದಾರ್ಥಗಳು ಅಸ್ತಿತ್ವದಲ್ಲಿವೆ, ಇತರ ಯಾವುದೇ ವಿಷಯಗಳು ಅಸ್ತಿತ್ವದಲ್ಲಿಲ್ಲ.

೨ ಆ ೧ ಅ. ಈ ವಿಚಾರದಲ್ಲಿನ ದೋಷ : ಈ  ಮಾನ್ಯತೆಯನ್ನು ತಿಳಿದುಕೊಳ್ಳುವುದು ಸುಲಭವಾಗಿದೆ. ಆದರೆ ಅದು ದೋಷಪೂರಿತವಾಗಿದೆ. ಏಕೆಂದರೆ ಅತೀಂದ್ರಿಯ (ಇಂದ್ರಿಯಗಳ ಜ್ಞಾನದ ಆಚೆಗಿನ) ವಿಷಯಗಳ ಅಸ್ತಿತ್ವವಿದೆ, ಉದಾ. ಮನುಷ್ಯ ನಿಗಾಗುವ ಬಹಳಷ್ಟು ಶಾರೀರಿಕ ರೋಗಗಳ ಆರಂಭ ಅವ್ಯಕ್ತ ಪದಾರ್ಥಗಳಿಂದ ಆಗುತ್ತದೆ. ಬಹಳಷ್ಟು ರೋಗಗಳು ಸಹ ನಮ್ಮ ಅತ್ಯಂತ ಪ್ರಾರಂಭಿಕ ಅವಸ್ಥೆಯಲ್ಲಿ ಅವ್ಯಕ್ತವಾಗಿರುತ್ತವೆ. ಇವುಗಳ ಅರಿವು ಜ್ಞಾನೇಂದ್ರಿಯಗಳ ಮೂಲಕ ಆಗುವುದು ಸಾಧ್ಯವಿಲ್ಲ. ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು.

೨. ಆ ೨. ನಿಸರ್ಗವೇ (Nature) ಎಲ್ಲವೂ ಆಗಿದೆ ! : ಈ ಜಗತ್ತು ನಿಸರ್ಗದ ವಿಸ್ತಾರವಾಗಿದೆ ಮತ್ತು ಮನುಷ್ಯನು ಸಹ ನಿಸರ್ಗದತ್ತ ಜೀವವಾಗಿದ್ದಾನೆ. ಈ ಜಗತ್ತಿನಲ್ಲಿ ನಿಸರ್ಗದ ವ್ಯತಿರಿಕ್ತ ಬೇರೆ ಯಾವುದೂ ಇಲ್ಲ.

೨ ಆ ೨ ಅ. ಈ ವಿಚಾರದ ದೋಷ : ನಿಸರ್ಗವು ಜಡ ಪದಾರ್ಥವಾಗಿದೆ. ಎಲ್ಲಿಯವರೆಗೆ ನಿಸರ್ಗದ ಜೊತೆಗೆ ಚೇತನಾಶಕ್ತಿ ಇರುವುದಿಲ್ಲವೋ, ಅಲ್ಲಿಯವರೆಗೆ ಅದಕ್ಕೆ ತಾನಾಗಿಯೇ ಏನನ್ನೂ ಮಾಡಲು ಆಗುವುದಿಲ್ಲ. ಜಡ ಶಕ್ತಿಯ ನಿಯಮಬದ್ಧತೆಯು ಚೇತನಾಶಕ್ತಿಯಿಂದಾಗಿ ಇರುತ್ತದೆ. ಮನುಷ್ಯನು ಕೇವಲ ನಿಸರ್ಗದತ್ತ ಪದಾರ್ಥವಲ್ಲ, ಅವನಲ್ಲಿ ಚೇತನಾಶಕ್ತಿಯು ಸಹ ಇರುತ್ತದೆ.

೨ ಆ ೩. ನಿಸರ್ಗವು ಕೇವಲ ಮನುಷ್ಯನ ಭೋಗಕ್ಕಾಗಿ ಇದೆ ! : ನಿಸರ್ಗದಲ್ಲಿನ ಎಲ್ಲ ಪದಾರ್ಥಗಳು ಮನುಷ್ಯನ ಭೋಗಕ್ಕಾಗಿ ಇವೆ. ಮನುಷ್ಯನು ತನ್ನ ಸಾಮರ್ಥ್ಯಕ್ಕನುಸಾರ ಅವನಲ್ಲಿರುವ ಎಷ್ಟು ಇಚ್ಛೆಯಿದೆಯೋ, ಅಷ್ಟು, ಅವುಗಳನ್ನು ಉಪಭೋಗಿಸಬಹುದು.

೨ ಆ ೩ ಅ. ಈ ವಿಚಾರದಲ್ಲಿನ ದೋಷ : ನಿಸರ್ಗದಲ್ಲಿರುವ ಎಲ್ಲ ಪದಾರ್ಥಗಳು ಮನುಷ್ಯನ ಭೋಗಕ್ಕಾಗಿ ಇವೆ ಎಂದು ತಿಳಿದಿದ್ದರಿಂದ, ಅವುಗಳನ್ನು ಆದಷ್ಟು ಹೆಚ್ಚೆಚ್ಚು ಉಪಭೋಗಿಸಲು ಮನುಷ್ಯನು ಹೆಚ್ಚೆಚ್ಚು ನೈಸರ್ಗಿಕ ಪದಾರ್ಥಗಳನ್ನು ಕಂಡು ಹಿಡಿಯ ಬಹುದು. ನಿಸರ್ಗವನ್ನು ಭೋಗಿಸುವ ಸ್ಪರ್ಧೆಯಿಂದ ‘ನೈಸರ್ಗಿಕ ಸಂಪತ್ತು ಸೀಮಿತ ಪ್ರಮಾಣದಲ್ಲಿದೆ ಮತ್ತು ಅದು ಮುಗಿದರೆ ಅಥವಾ ವಿಕೃತವಾದರೆ ಮನುಷ್ಯನ ಸ್ಥಿತಿ ಏನಾಗಬಹುದು ?, ಈ ವಿಚಾರದ ಅವಗಣನೆ ಆಗಬಹುದು. ಭೌತಿಕ ಸಂಪತ್ತನ್ನು ಪ್ರಾಪ್ತಮಾಡಿಕೊಳ್ಳಲು ಮನುಷ್ಯನು ಕಠಿಣ ಪರಿಶ್ರಮವನ್ನು ಮಾಡಬಹುದು. ತನ್ನ ಪ್ರಯತ್ನಗಳಲ್ಲಿ ಯಶಸ್ವಿಯಾದ ನಂತರ ಮನುಷ್ಯನು ಸುಖ ಮತ್ತು ಸಂತೃಪ್ತಿಯನ್ನು ಅನುಭವಿಸಬಹುದು  ಮತ್ತು ಅವನಿಗೆ ಭೌತಿಕ ಐಶ್ವರ್ಯದ ಪ್ರಾಪ್ತಿಯೂ ಆಗಬಹುದು; ಆದರೆ ಅನಂತರ ಹೆಚ್ಚೆಚ್ಚು ಪ್ರಾಪ್ತ ಮಾಡಿಕೊಳ್ಳುವ ಅವನ ಆಸೆಯು ಹೆಚ್ಚಾಗುತ್ತಾ ಹೋಗುವುದು. ಇದು ಅವನ ಸುಖ ಮತ್ತು ಸಂತೋಷವನ್ನು ಕಡಿಮೆ ಮತ್ತು ಕ್ಷೀಣ ಮಾಡಬಹುದು; ಏಕೆಂದರೆ ಈ ಆಸೆಯು ದುಃಖದಾಯಕವಾಗಿರುತ್ತದೆ. ಸಂಗ್ರಹಿಸಿದ ನೈಸರ್ಗಿಕ ಸಂಪತ್ತು, ಮನುಷ್ಯ ಮತ್ತು ಸಮಾಜದ ಅಹಂಕಾರಕ್ಕೆ ಪುಷ್ಟಿಯನ್ನು ಕೊಡುತ್ತದೆ. ಈ ಅಹಂಕಾರವು ಮನುಷ್ಯ ಮತ್ತು ಸಮಾಜದಲ್ಲಿನ ವಿವಿಧ ಸಮಸ್ಯೆಗಳಿಗೆ ಒಂದು ಪ್ರಮುಖ ಕಾರಣವಾಗಿದೆ. ‘ನಿಸರ್ಗವು ಕೇವಲ ಮನುಷ್ಯನ ಭೋಗಕ್ಕಾಗಿದೆ, ಈ ವಿಚಾರವು ಯೋಗ್ಯವಾಗಿಲ್ಲ. ಒಂದು ವೇಳೆ ಮನುಷ್ಯನು ತಪಸ್ಸು ಮಾಡಿದರೆ, ನಿಸರ್ಗವು ಮನುಷ್ಯನಿಗೆ ದಿವ್ಯ ಶಕ್ತಿಯನ್ನು ಪ್ರದಾನಿಸುತ್ತದೆ. ನಿಸರ್ಗವು ಮನುಷ್ಯನ ಮೋಕ್ಷದ ಸಾಧನೆಯೂ ಆಗಿದೆ. ನಿಸರ್ಗವೇ ಮನುಷ್ಯನಿಗೆ ಪ್ರೇಮವನ್ನು ಮಾಡಲು ಹೃದಯವನ್ನು ನೀಡಿದೆ.

೨ ಆ ೪. ಮನುಷ್ಯನ ಅಸ್ತಿತ್ವದ ಕಾಲವು ಅವನ ಜನ್ಮದಿಂದ ಮೃತ್ಯುವಿನ ವರೆಗಷ್ಟೇ ಇರುತ್ತದೆ ! : ಮನುಷ್ಯನ ಜನ್ಮ ಮತ್ತು ಮೃತ್ಯು ಆಗುತ್ತಿರುತ್ತದೆ. ಮನುಷ್ಯನ ಜೀವನದ ಕಾಲವು ಈ ಎರಡು ಬಿಂದುಗಳ ನಡುವಿನ ಕಾಲವಾಗಿದೆ. ಜನ್ಮಕ್ಕೂ ಮೊದಲು ಮತ್ತು ಮೃತ್ಯುವಿನ ನಂತರ ಆ ಮನುಷ್ಯನ ಅಸ್ತಿತ್ವವು ಯಾವುದೇ ರೂಪದಲ್ಲಿ ಉಳಿಯುವುದಿಲ್ಲ.

೨ ಆ ೪ ಅ. ಈ ವಿಚಾರದಲ್ಲಿನ ದೋಷ : ಮನುಷ್ಯನ ಅಸ್ತಿತ್ವದ ಬಗೆಗಿನ ಮೇಲಿನ ವಿಚಾರವು ನಿರಾಧಾರವಾಗಿದೆ. ಜನ್ಮದ ಮೊದಲು ಮತ್ತು ಮೃತ್ಯುವಿನ ನಂತರ, ಈ ಎರಡೂ ಸ್ಥಿತಿಗಳಲ್ಲಿ ಆ ಮನುಷ್ಯನ ಅಸ್ತಿತ್ವವು ಯಾವುದಾದರೊಂದು ರೂಪದಲ್ಲಿ ಇರುತ್ತದೆ. ಪುನರ್ಜನ್ಮದ ಸಂಕಲ್ಪನೆಯು ನಿಜವಾದ ಅರ್ಥದಲ್ಲಿ ಸತ್ಯವಾಗಿದೆ. ಮನುಷ್ಯನ ಅಸ್ತಿತ್ವವು ಜನ್ಮದ ಮೊದಲು ಮತ್ತು ಮೃತ್ಯುವಿನ ನಂತರವೂ ಸೂಕ್ಷ್ಮರೂಪದಲ್ಲಿರುತ್ತದೆ, ಇದು ಅದನ್ನು ಸಿದ್ಧಮಾಡುತ್ತದೆ. ಸತ್ಯಕಾರ್ಯವಾದ ಸಿದ್ಧಾಂತ ಮತ್ತು ಕರ್ಮಫಲ ಸಿದ್ಧಾಂತ ಇವೆರಡೂ ಪುನರ್ಜನ್ಮದ ಸಿದ್ಧಾಂತಕ್ಕೆ ಪುಷ್ಟಿಯನ್ನು ನೀಡುತ್ತವೆ. ಮನುಷ್ಯನ ಜೀವನಕಾಲಕ್ಕೆ ಮಿತಿ ಇರುವುದರ ಬಗ್ಗೆ ತಿಳಿದರೆ ಭೋಗವಾದಿ ಪ್ರವೃತ್ತಿಯ ಮೇಲಿನ ನಿಷ್ಠೆಯು ಹೆಚ್ಚಾಗುತ್ತದೆ ಮತ್ತು ಮನುಷ್ಯನು ಸಹಜ ಸ್ವಾಭಾವಿಕ (ನೈಸರ್ಗಿಕ) ಪ್ರವೃತ್ತಿಗಳಿಗೆ ಪೂರಕ ಮತ್ತು ಆಸಕ್ತನಾಗಿ ಉಳಿಯಬಹುದು. ನಾಲ್ಕು ಸ್ವಾಭಾವಿಕ ಪ್ರವೃತ್ತಿಗಳಿವೆ – ಆಹಾರ (ಭೋಜನ), ನಿದ್ರೆ (ವಿಶ್ರಾಂತಿ), ಭಯ ಮತ್ತು ಮೈಥುನ (ಕಾಮವಾಸನೆ). ಈ ನಾಲ್ಕೂ ಪ್ರವೃತ್ತಿಗಳು ಮನುಷ್ಯ ಮತ್ತು ಪಶುಗಳಲ್ಲಿ ಸಮಾನ ಪ್ರಮಾಣದಲ್ಲಿ ಕಂಡು ಬರುತ್ತವೆ. ಒಂದು ವೇಳೆ ನಾವು ವಿಚಾರ ಮಾಡಿ ನೋಡಿದರೆ, ಮನುಷ್ಯನ ಬುದ್ಧಿಯು ಈ ಪ್ರವೃತ್ತಿಗಳಿಗೆ ಸಂಬಂಧಿಸಿದ ಕಾರ್ಯವನ್ನು ಮಾಡುವಲ್ಲಿ ಅತ್ಯಧಿಕ ಸಂಲಗ್ನವಾಗಿರುತ್ತದೆ. ಈ ಪ್ರವೃತ್ತಿಗಳಲ್ಲಿ ಆಸಕ್ತನಾಗಿದ್ದು ಮನುಷ್ಯನು ತನ್ನ ಬುದ್ಧಿಯ ಮೂಲಕ ಪಾಶವಿ ವೃತ್ತಿಯನ್ನು ಹೆಚ್ಚಿಸಬಹುದು, ಎಂಬುದು ಗಮನಕ್ಕೆ ಬರುತ್ತದೆ.

೨ ಆ ೫. ಮನುಷ್ಯನು ಸಾಮಾಜಿಕ ಪ್ರಾಣಿಯಾಗಿದ್ದಾನೆ ! : ಮನುಷ್ಯನು ಸಮಾಜದಲ್ಲಿ ಉತ್ಪನ್ನನಾಗಿದ್ದಾನೆ; ಆದುದರಿಂದ ಅವನು ಸಾಮಾಜಿಕ ಪ್ರಾಣಿಯಾಗಿದ್ದಾನೆ. ಸಮಾಜವು ಸರಿಯಾಗಿ ನಡೆಯಲು ಅವನು ನೈತಿಕ ಜೀವನವನ್ನು ನಡೆಸಬೇಕು ಮತ್ತು ಸಮಾಜದ ಪ್ರಗತಿಗಾಗಿ ಅವನು ಕಾರ್ಯನಿರತನಾಗಿರಬೇಕು.

೨ ಆ ೫ ಅ. ಈ ವಿಚಾರದಲ್ಲಿನ ದೋಷ : ಮನುಷ್ಯನನ್ನು ಸಾಮಾಜಿಕ ಪ್ರಾಣಿಯೆಂದು ಒಪ್ಪಿಕೊಳ್ಳುವುದು ಯೋಗ್ಯ ಮತ್ತು ವ್ಯಾವಹಾರಿಕವೆನಿಸುತ್ತದೆ; ಆದರೆ ಈ ವಿಚಾರದ ಮೇಲಿನ ಹೆಚ್ಚು ನಿಷ್ಠೆ ಅವನ ಸಂಪೂರ್ಣ ಪ್ರಗತಿಯಲ್ಲಿ ಬಾಧಕವೂ ಆಗಿದೆ. ಸಾಮಾಜಿಕ ಪ್ರಾಣಿಯಾಗಿರುವುದರಿಂದ, ಸಮಾಜದಲ್ಲಿದ್ದು ಒಳ್ಳೆಯ ನಾಗರಿಕನಾಗಬೇಕು, ಸಮಾಜದ ಉನ್ನತಿಗಾಗಿ ಕಾರ್ಯನಿರತನಾಗಿರಬೇಕು ಮತ್ತು ನೈತಿಕ ಮೌಲ್ಯಗಳನ್ನು ಪಾಲಿಸುತ್ತಿರಬೇಕು, ಇದರಿಂದ ಅವನು ಸಾಮಾಜಿಕ ಕಾರ್ಯಗಳಲ್ಲಿಯೇ ಮಗ್ನನಾಗಿ ಉಳಿಯಬಹುದು. ಅವನು ತನ್ನ ವೈಯಕ್ತಿಕ ಜೀವನದ ಉನ್ನತಿಯಿಂದ ವಂಚಿತನಾಗಬಹುದು  ಮತ್ತು ‘ಪೂರ್ಣ ವಿಕಸಿತ ವ್ಯಕ್ತಿತ್ವವೆಂದರೇನು ? ಮನುಷ್ಯನ ಸ್ವತಃದ ಪರಿಪೂರ್ಣತೆ ಯಾವುದರಲ್ಲಿದೆ ?, ಎಂಬುದನ್ನು ಸಹ ಅವನು ಗಂಭೀರದಿಂದ ತಿಳಿದುಕೊಳ್ಳಲಾರನು.

೨ ಆ ೬. ಮನುಷ್ಯನು ಸರ್ವಶ್ರೇಷ್ಠ ಪ್ರಾಣಿಯಾಗಿದ್ದಾನೆ ! : ಜಗತ್ತಿನಲ್ಲಿ ಮನುಷ್ಯನೇ ಸರ್ವಶ್ರೇಷ್ಠ ಪ್ರಾಣಿಯಾಗಿದ್ದಾನೆ ಮತ್ತು ಮನುಷ್ಯದೇಹದಲ್ಲಿ ಅತ್ಯಂತ ಮಹತ್ವಪೂರ್ಣ ಮತ್ತು ಸರ್ವೋತ್ತಮ ಪದಾರ್ಥವು ಬುದ್ಧಿಯಾಗಿದೆ.

೨ ಆ ೬ ಅ. ಈ ವಿಚಾರದಲ್ಲಿನ ದೋಷ : ಬುದ್ಧಿಗೆ ಪ್ರಾಧಾನ್ಯತೆಯನ್ನು ನೀಡಿದುದರಿಂದ ಮನುಷ್ಯನು ಇತರ ಸಂವೇದನಾಶೀಲ ಭಾವನೆಗಳ, ಉದಾ. ಕರುಣೆ, ಕ್ಷಮೆ, ದಯೆ, ಧೈರ್ಯ, ಸಾಹಸ, ಶ್ರದ್ಧೆ ಇತ್ಯಾದಿಗಳ ಮಹತ್ವವನ್ನು ಕಡಿಮೆ ಮಾಡಬಹುದು ಮತ್ತು ಒಂದು ವೇಳೆ ಅವನ ಶುಭಚಿಂತಕರು (ತಾಯಿ, ತಂದೆ, ಸಹೋದರರು ಇತ್ಯಾದಿ) ಹೆಚ್ಚು ಬುದ್ಧಿವಂತರು ಮತ್ತು ಶ್ರೀಮಂತರಿದ್ದರೆ, ಅವನು ಅವರನ್ನು ತಿರಸ್ಕರಿಸಬಹುದು. ಬುದ್ಧಿಗೆ ಮಹತ್ವವಿದೆ; ಆದರೆ ಜೀವನದಲ್ಲಿ ಬಹಳಷ್ಟು ವಿಷಯಗಳನ್ನು ಅರಿತುಕೊಳ್ಳುವುದು ಬುದ್ಧಿಯ ಆಚೆಗಿನದ್ದಾಗಿದೆ; ಏಕೆಂದರೆ ಸಂಸಾರದಲ್ಲಿರುವ ಮನುಷ್ಯನ ಬುದ್ಧಿಯು ದೋಷಯುಕ್ತ ಮತ್ತು ಸೀಮಿತ ಕ್ಷಮತೆಯದ್ದಾಗಿರುತ್ತದೆ. ಇದರಿಂದ ಮನುಷ್ಯನ ಜೀವನಸಂಗ್ರಾಮವು ಸಂಕುಚಿತವಾಗಿ ಉಳಿಯಬಹುದು. ‘ವಿಕಸಿತ ಜೀವನ ಹೇಗಿರುತ್ತದೆ ?, ಇದರ ಬಗ್ಗೆ ಅವನಿಗೆ ಅರಿವೂ ಆಗುವುದಿಲ್ಲ. ಜಗತ್ತಿನಲ್ಲಿ ಮನುಷ್ಯನು ಸರ್ವಶ್ರೇಷ್ಠ ಪ್ರಾಣಿಯಾಗಿದ್ದಾನೆ, ಎಂದು ಹೇಳುವುದು ಸಹ ಅಯೋಗ್ಯವಾಗಿದೆ. ಏಕೆಂದರೆ ಸೃಷ್ಟಿಯಲ್ಲಿ ದೇವತೆಗಳು ಮನುಷ್ಯನಿಗಿಂತ ಶ್ರೇಷ್ಠರಾಗಿದ್ದಾರೆ. ಕೆಲವು ಪಶು-ಪಕ್ಷಿಗಳ ಇಂದ್ರಿಯಗಳು ಮನುಷ್ಯನ ಇಂದ್ರಿಯ ಗಳಿಗಿಂತ ಹೆಚ್ಚು ಕುಶಲವಾಗಿರುತ್ತವೆ. ಮನುಷ್ಯನ ಶರೀರದಲ್ಲಿ ಆತ್ಮವು ಸರ್ವೋತ್ತಮ ಪದಾರ್ಥವಾಗಿದೆ. ಮನುಷ್ಯನ ಬುದ್ಧಿಯು ಮನುಷ್ಯನ ಶರೀರದಲ್ಲಿ ವ್ಯಾಪಿಸಿರುವ ಸೂಕ್ಷ್ಮ ಶರೀರದ ಒಂದು ಭಾಗವಾಗಿದೆ. ಆತ್ಮತತ್ತ್ವದಿಂದಾಗಿ ಅದರ ಅಸ್ತಿತ್ವವಿದೆ.

೨ ಆ ೭. ‘ಆಹಾರ, ವಸ್ತ್ರ ಮತ್ತು ಆಶ್ರಯ ಇವು ಮನುಷ್ಯನ ಮೂಲಭೂತ ಆವಶ್ಯಕತೆಗಳಾಗಿವೆ ! : ಪ್ರತಿಯೊಬ್ಬ ಮನುಷ್ಯನಿಗೆ ತಿನ್ನಲು ಆಹಾರ, ಧರಿಸಲು ಬಟ್ಟೆ ಮತ್ತು ವಾಸಿಸಲು ಮನೆ ಬೇಕು. ಈ ಕನಿಷ್ಠ ಆವಶ್ಯಕತೆಗಳ ಈಡೇರುವಿಕೆಯು ಸಮಾಜದ ಸ್ಥಿರತೆ (Stability) ಮತ್ತು ವಿಕಾಸ ಇವುಗಳಿಗಾಗಿ ಆವಶ್ಯಕವಾಗಿವೆ.

೨ ಆ ೭. ಅ. ಈ ವಿಚಾರದಲ್ಲಿನ ದೋಷ : ಮನುಷ್ಯನ ಭೌತಿಕ ಆವಶ್ಯಕತೆಗಳು (ಆಹಾರ, ವಸ್ತ್ರ ಮತ್ತು ಆಶ್ರಯ ಇವುಗಳು) ಈಡೇರಿದಾಗ ಪರಸ್ಪರರಲ್ಲಿ ಕಲಹದ ವಾತಾವರಣ ಉದ್ಭವಿಸಲಾರದು, ಎಂಬ ವಿಚಾರಸರಣಿಯು ತಪ್ಪಾಗಿದೆ. ಇದರ ಕಾರಣ ವೇನೆಂದರೆ, ಮನುಷ್ಯನಲ್ಲಿನ ಭೋಗವನ್ನು ಭೋಗಿಸುವ ಮತ್ತು ಸಂಗ್ರಹಿಸುವ ವಾಸನೆಯು ಸಹಜ ಶಾಂತವಾಗುವುದಿಲ್ಲ. ಆಸೆಯು ಹೆಚ್ಚಾಗುತ್ತಲೇ ಹೋಗುತ್ತದೆ. ಆರಂಭದಲ್ಲಿ ಮನುಷ್ಯನಿಗೆ ಚಿಕ್ಕ ಮನೆ ಸಿಕ್ಕಿದಾಗ ಅವನು ಸಂತೋಷಪಡುತ್ತಾನೆ; ನಂತರ ಕೆಲವು ಸಮಯದ ನಂತರ ಅವನಿಗೆ ದೊಡ್ಡ ಮನೆಯಲ್ಲಿರಬೇಕು ಎಂಬ ಇಚ್ಛೆಯಾಗತೊಡಗುತ್ತದೆ. ಅನಂತರ ಅವನಿಗೆ ಬಂಗಲೆಬೇಕು. ನಂತರ ತೋಟದ ಮನೆ (Farm House) ಬೇಕು. ಅನಂತರ ಇಂತಹದ್ದೇ ಸುಖಸೌಲಭ್ಯಗಳು ದೊಡ್ಡ ನಗರಗಳಲ್ಲಿ ಅಥವಾ ಇತರ ರಮಣೀಯ ಸ್ಥಳಗಳಲ್ಲಿ ಬೇಕು ಇತ್ಯಾದಿ. ಮನುಷ್ಯನಿಗೆ ಮನೆಯ ಬಗೆಗಿನ ಇಚ್ಛೆಗಳು ಹೆಚ್ಚಾಗುತ್ತಾ ಹೋದಂತೆ ಆಹಾರ ಮತ್ತು ವಸ್ತ್ರ ಇವುಗಳ ಬಗೆಗಿನ ವಾಸನೆಗಳೂ ಹೆಚ್ಚಾಗುತ್ತಲೇ ಹೋಗುತ್ತವೆ ಮತ್ತು ಇದರಿಂದ ಅವನಿಗೆ ಎಂದಿಗೂ ಶಾಂತಿ, ಸಮಾಧಾನ ಸಿಗುವುದಿಲ್ಲ. ವಾಸನೆಗಳನ್ನು ಹೆಚ್ಚಿಸುವ ಮನುಷ್ಯನ ತೃಷ್ಣೆಯೆ ಸಮಾಜ ಮತ್ತು ಮನುಷ್ಯ ಇವರ ಜೀವನದಲ್ಲಿ ಪರಸ್ಪರರ ಕಲಹದ ಕಾರಣವಾಗುತ್ತದೆ. ಇಂದು ಇದು ಎಲ್ಲೆಡೆ ಸ್ಪಷ್ಟವಾಗಿ ಕಾಣಿಸುತ್ತದೆ ಮತ್ತು ಕೇಳಿಸುತ್ತದೆ. ಇಂದು ‘ಎರಡು ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಅಥವಾ ಎರಡು ದೇಶಗಳಲ್ಲಿ ಭಯಂಕರ ಜಗಳಗಳಾಗುವುದು, ಇದೇನು ವಿಶೇಷ ವಿಷಯವಾಗಿ ಉಳಿದಿಲ್ಲ; ಆದುದರಿಂದ, ಆಹಾರ, ವಸ್ತ್ರ ಮತ್ತು ಆಶ್ರಯ ಇವುಗಳ ಕನಿಷ್ಠ ಆವಶ್ಯಕತೆಯನ್ನು ಈಡೇರಿಸಿದಾಗ ಮನುಷ್ಯನ ಅಥವಾ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದು, ಎಂಬ ವಿಚಾರವು ಅತ್ಯಂತ ಅಯೋಗ್ಯವಾಗಿದೆ.

– (ಪೂ.) ಡಾ. ಶಿವಕುಮಾರ ಓಝಾ, ಜ್ಯೇಷ್ಠ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು

(ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?)

(ಮುಂದುವರಿಯುವುದು)