ಮನೆಯಲ್ಲಿಯೇ ಸಸಿಗಳನ್ನು ತಯಾರಿಸಿ ಕೃಷಿ ಮಾಡಿ !

ಯಾವುದೇ ಗಿಡದಿಂದ ಹೊಸ ಸಸಿಗಳನ್ನು ತಯಾರಿಸಲು ಆ ಗಿಡದ ಯಾವ ಭಾಗ ಉಪಯುಕ್ತವಾಗಿದೆ ಎಂಬುದರ ಮಾಹಿತಿ ಇರುವುದು ಆವಶ್ಯಕವಾಗಿದೆ. ಕೆಲವು ಗಿಡಗಳನ್ನು ಟೊಂಗೆಗಳಿಂದ (ರೆಂಬೆಗಳಿಂದ), ಕೆಲವು ಗಿಡಗಳನ್ನು ಬೀಜಗಳಿಂದ, ಕೆಲವು ಗಿಡಗಳನ್ನು ಬೇರುಗಳಿಂದ ಮತ್ತು ಇನ್ನು ಕೆಲವು ಗಿಡಗಳನ್ನು ಎಲೆಗಳಿಂದ ಬೆಳೆಸಲು ಬರುತ್ತದೆ. ಗಿಡದ ಪ್ರತಿಯೊಂದು ಭಾಗವನ್ನು ಹೇಗೆ ಉಪಯೋಗಿಸಬೇಕು ಎಂಬುದು ನಮಗೆ ತಿಳಿದರೆ, ನಾವು ಅವುಗಳಿಂದ ಅನೇಕ ಗಿಡಗಳನ್ನು ಮನೆಯಲ್ಲಿಯೇ ತಯಾರಿಸಬಹುದು. ಅದಕ್ಕಾಗಿ ಸಸ್ಯವನಗಳಿಗೆ (ನರ್ಸರಿಗಳಿಗೆ) ಹೋಗುವ ಆವಶ್ಯಕತೆ ಇರುವುದಿಲ್ಲ. ಹಾಗೆಯೇ ಯಾವುದೇ ಗಿಡವು ಯಾವುದಾದರೂ ಕಾರಣದಿಂದ ಒಣಗಲಿದೆ ಎಂದು ಅನಿಸಿದರೆ, ಅದು ಜೀವಂತವಿರುವಾಗಲೇ ನಾವು ಅದರಿಂದ ಇನ್ನೊಂದು ಗಿಡವನ್ನು ಬೆಳೆಸಬಹುದು.

೧. ಟೊಂಗೆಗಳಿಂದ ತಯಾರಾಗುವ ಹೊಸ ಸಸಿಗಳು

ಅ. ಯಾವ ಗಿಡಗಳ ಟೊಂಗೆಗಳಿಂದ ಹೊಸ ಸಸಿಗಳು ತಯಾರಾಗುತ್ತವೆಯೋ, ಅಂತಹ ಗಿಡಗಳ ಟೊಂಗೆಗಳನ್ನು ನಾವು ಹೊಸ ಸಸಿಗಳನ್ನು ತಯಾರಿಸಲು ಉಪಯೋಗಿಸಬಹುದು. ಇದಕ್ಕಾಗಿ ತೀರಾ ಎಳೆಯ ಅಥವಾ ತೀರಾ ಬಲಿತಿರುವ ಟೊಂಗೆಗಳನ್ನು ಬಳಸಬಾರದು. ಆದಷ್ಟು ತೀರಾ ಎಳೆಯದೂ ಅಲ್ಲ ಅಥವಾ ತೀರಾ ಬಲಿತಿರುವುದೂ ಅಲ್ಲ ಇಂತಹ ಟೊಂಗೆಗಳ ಮಧ್ಯಭಾಗವನ್ನು ತೆಗೆದುಕೊಳ್ಳಬೇಕು.

. ಟೊಂಗೆಗಳು ಸಾಮಾನ್ಯವಾಗಿ ೬ ರಿಂದ ೮ ಇಂಚು ಉದ್ದ ಇರಬೇಕು. ೬ ರಿಂದ ೮ ಇಂಚು ಉದ್ದದ ಟೊಂಗೆಗೆ (ರೆಂಬೆಗೆ) ೪ ರಿಂದ ೫ ಗೆಣ್ಣುಗಳಿರುವುದು (ಗೆಣ್ಣು ಅಂದರೆ, ಎಲ್ಲಿ ಎಲೆ ಟೊಂಗೆಗೆ ಜೋಡಿಸಲ್ಪಟ್ಟಿರುತ್ತವೆಯೋ ಆ ಭಾಗ) ಅಪೇಕ್ಷಿತವಾಗಿದೆ. ಗೆಣ್ಣಿನ ಹತ್ತಿರ ಕಣ್ಣಿರುತ್ತದೆ. ಇದರಿಂದ ಹೊಸ ಟೊಂಗೆ ಚಿಗುರೊಡೆಯುತ್ತದೆ, ಅಂದರೆ ಹೊಸ ಟೊಂಗೆ ಚಿಗುರುತ್ತದೆ. ಹಾಗೆಯೇ ಗೆಣ್ಣಿನ ಹತ್ತಿರ ಬೇರುಗಳೂ ಹುಟ್ಟುತ್ತವೆ.

ಇ. ಹೊಸ ಗಿಡಗಳನ್ನು ತಯಾರಿಸಲು ಟೊಂಗೆಗಳನ್ನು ಮಣ್ಣಿನಲ್ಲಿ ನೆಡಬೇಕು, ಅಂದರೆ ಅವುಗಳನ್ನು ಮಣ್ಣಿನಲ್ಲಿ ನೇರವಾಗಿ ಸಿಕ್ಕಿಸಬೇಕು. ಮಣ್ಣಿನೊಳಗೆ ಹೋಗಿರುವ ಗೆಣ್ಣುಗಳಿಗೆ ಬೇರುಗಳು ಹುಟ್ಟುತ್ತವೆ ಮತ್ತು ಮೇಲಿನ ಗೆಣ್ಣುಗಳಿಂದ ಹೊಸ ಎಲೆಗಳು ಚಿಗುರುತ್ತವೆ. ಇದಕ್ಕಾಗಿ ಕನಿಷ್ಠ ೨-೩ ಗೆಣ್ಣುಗಳು ಮಣ್ಣಿನಲ್ಲಿರುವಂತೆ ನೋಡಿಕೊಳ್ಳಬೇಕು.

. ಟೊಂಗೆಗಳನ್ನು ಮಣ್ಣಿನಲ್ಲಿ ನೆಡುವಾಗ ಮಣ್ಣಿನಲ್ಲಿ ಮುಚ್ಚುವ ಗೆಣ್ಣುಗಳ ಎಲೆಗಳನ್ನು  ತೆಗೆಯಬೇಕು. ಟೊಂಗೆಗಳನ್ನು ಮಣ್ಣಿನಲ್ಲಿ ನೆಡುವ ಮೊದಲು ಕಬ್ಬಿಣದ ಸಲಾಕೆ ಅಥವಾ ಯಾವುದಾದರೊಂದು ಕೋಲನ್ನು ಮಣ್ಣಿನಲ್ಲಿ ತೂರಿಸಿ ಟೊಂಗೆಗಳನ್ನು ನೆಡುವ ಜಾಗವನ್ನು ಸ್ವಲ್ಪ ಪೊಳ್ಳು ಮಾಡಬೇಕು. ನಂತರ ಆ ಜಾಗಗಳಲ್ಲಿ ಟೊಂಗೆಗಳನ್ನು ನೆಡಬೇಕು. ಟೊಂಗೆಗಳನ್ನು ಹಾಗೆಯೇ ಮಣ್ಣಿನಲ್ಲಿ ನೇರವಾಗಿ ಊರಿದರೆ, ಟೊಂಗೆಗಳ ಕೆಳಗಿನ ಗೆಣ್ಣುಗಳಿಗೆ ಪೆಟ್ಟಾಗುತ್ತದೆ.

ಎ. ಟೊಂಗೆಗಳಿಂದ ಬೆಳೆಯುವ ಕೆಲವು ಹೂವಿನ ಗಿಡಗಳು

ನಂದಿಬಟ್ಟಲು, ಅನಂತ, ಬೋಗನ್-ವಿಲ್ಲ (ಇದು ಒಂದು ಜಾತಿಯ ಲತೆ ಇದರಲ್ಲಿ ಕೆಂಪು, ಹಳದಿ, ಗುಲಾಬಿ ಮುಂತಾದ ಬಣ್ಣಗಳ ಸುಂದರ ಹೂಗಳು ಬಿಡುತ್ತವೆ). ದಾಸವಾಳ, ಎಕ್ಝೋರಾ, ಮಲ್ಲಿಗೆ, ಗುಲಾಬಿ, ರಾತ್ರಿರಾಣಿ (Cestrum nocturnum), ಎಲ್ಲ ಬಣ್ಣಗಳ ಕ್ರೋಟನ್ ಗಿಡಗಳು (ಶೋಭೆಯ ಗಿಡಗಳು)

೨. ಬೀಜಗಳಿಂದ ತಯಾರಾಗುವ ಸಸಿಗಳು

ಬೀಜಗಳನ್ನು ಮಣ್ಣಿನಲ್ಲಿ ಎಷ್ಟು ಆಳದಲ್ಲಿ  ಹಾಕಬೇಕು, ಎಂಬುದು ಗೊತ್ತಿರದ ಕಾರಣ ಬಹಳಷ್ಟು ಸಲ ಬೀಜಗಳು ಚಿಗುರೊಡೆಯುವುದಿಲ್ಲ. ಪ್ರತಿಯೊಂದು ಬೀಜದ ಆಕಾರ ಮತ್ತು ಗಾತ್ರ ಬೇರೆ ಬೇರೆಯಾಗಿರುತ್ತದೆ. ತುಳಸಿಯ ಬೀಜವು ತೀರಾ ಚಿಕ್ಕದಾಗಿರುತ್ತದೆ ಮತ್ತು ಬಟಾಣಿ ಮತ್ತು ಅವರೆ ಕಾಳಿನ ಬೀಜಗಳ ಆಕಾರವು ತುಂಬಾ ದೊಡ್ಡದಾಗಿರುತ್ತದೆ. ಬೀಜಗಳನ್ನು ಬಿತ್ತುವಾಗ ಅದರ ಮೇಲಿನ ಮಣ್ಣು ಬೀಜದ ಆಕಾರದ ಹೆಚ್ಚೆಂದರೆ ಮೂರು ಪಟ್ಟು ಇರಬೇಕು. ಅದಕ್ಕಿಂತಲೂ ಹೆಚ್ಚು ಇರಬಾರದು. ಇದರ ಅರ್ಥವೇನೆಂದರೆ, ತುಳಸಿಯ ಬೀಜ ಅಥವಾ ಮೆಣಸಿನಕಾಯಿ, ಟೊಮೆಟೊ ಇತ್ಯಾದಿಗಳ ಬೀಜಗಳ ಮೇಲೆ ಮಣ್ಣನ್ನು ತೀರಾ ಕಡಿಮೆ ಹಾಕಬೇಕು ಮತ್ತು ಬಟಾಣಿ, ಅವರೆ ಕಾಳುಗಳ ಮೇಲೆ ೧ ಸೆಂ. ಮೀ. ಮಣ್ಣನ್ನು  ಹಾಕಬೇಕು. ಮಣ್ಣು ಹೆಚ್ಚಾದರೆ ಬೀಜಗಳಿಗೆ ಅಷ್ಟೊಂದು ಮಣ್ಣನ್ನು ಸರಿಸಿ ಮೇಲೆ ಬರಲು ಆಗುವುದಿಲ್ಲ. ಆದುದರಿಂದ ಸಾಮಾನ್ಯವಾಗಿ ಬೀಜದ ಗಾತ್ರದ ದುಪ್ಪಟ್ಟಿನಷ್ಟೇ ಮಣ್ಣನ್ನು ಅದರ ಮೇಲೆ ಹಾಕಬೇಕು.

೨ ಅ. ಬೀಜಗಳಿಂದ ಬೆಳೆಯುವ ಕೆಲವು ಗಿಡಗಳು

ಶಂಖಪುಷ್ಪ, ಕನಕಾಂಬರ, ಗೊಂಡೆ, ಕಾಶಿಕಣಗಿಲೆ, ತುಳಸಿ, ಸಂಜೆ ಮಲ್ಲಿಗೆ, ಗೋರಂಟೆಯ ಗಿಡ (Impatiens balsamina) ಸೂರ್ಯಕಾಂತಿ.

೩. ಗೆಡ್ಡೆ-ಗೆಣಸುಗಳಿಂದ ಅಂಕುರಿಸುವ ಹೊಸ ಸಸಿಗಳು

ಬಟ್ಟಲು ಹೂವು, ಬಾಳೆ, ಲಿಲೀ (ಒಂದು ಬಗೆಯ ಹೂವು) ಇತ್ಯಾದಿಗಳ ಹೊಸ ಸಸಿಗಳನ್ನು ಅವುಗಳ ಗೆಡ್ಡೆಗಳಿಂದ ತಯಾರಿಸಲು ಬರುತ್ತದೆ. ಒಂದು ಗೆಡ್ಡೆಗೆ ಗಿಡಬಂದು ಹೂವುಗಳು ಬಿಟ್ಟ ನಂತರ ಅದು ಚೆನ್ನಾಗಿ ಬೆಳೆಯತೊಡಗುತ್ತದೆ ಮತ್ತು ಅದಕ್ಕೆ ಹೊಸ ಸಸಿಗಳು ಬರುತ್ತವೆ. ಈ ಹೊಸ ಸಸಿಗಳನ್ನು ಬೇರೆ ಕಡೆಗೆ ಬೆಳೆಸುವುದಿದ್ದರೆ ಹಳೆಯ ಗಿಡದ ಹೂವುಗಳು ಮುದುಡಿ ಹೋದನಂತರ ಕಬ್ಬಿಣದ ಸಲಾಕೆ ಅಥವಾ ಕಬ್ಬಿಣದ ಪಟ್ಟಿಯ ಸಹಾಯದಿಂದ ಆ ಗೆಡ್ಡೆಯನ್ನು ಮಣ್ಣಿನಿಂದ ತೆರವು ಮಾಡಿಕೊಳ್ಳಬೇಕು (ಮಣ್ಣಿನಿಂದ ಹೊರಗೆ ತೆಗೆಯಬೇಕು) ಮತ್ತು ಹೊಸ ಸಸಿಗಳ ಎಲೆಗಳ ಕೆಳಗಿರುವ ಗೆಡ್ಡೆಯೊಂದಿಗೆ ಅದನ್ನು ಹಳೆಯ ಗೆಡ್ಡೆಯನ್ನು ಕೈಯಿಂದ ಮುರಿದು ಬೇರೆ ಮಾಡಬೇಕು. ಅದನ್ನು ಕತ್ತರಿಸಬಾರದು. ಗೆಡ್ಡೆಯನ್ನು ಮುರಿದು ಪ್ರತ್ಯೇಕಿಸಿದಾಗ ಗಿಡದ ದೃಷ್ಟಿಯಿಂದ ಅದು ಯೋಗ್ಯ ಜಾಗದಲ್ಲಿಯೇ ಮುರಿಯುತ್ತದೆ. ಈ ಗೆಡ್ಡೆಯನ್ನು ಮಣ್ಣಿನಿಂದ ಪೂರ್ತಿ ಮುಚ್ಚುವಂತೆ, ಆಳವಾದ ತಗ್ಗನ್ನು ತೆಗೆದು ಅದರಲ್ಲಿಡಬೇಕು ಮತ್ತು ಮಣ್ಣಿನಿಂದ ಪೂರ್ತಿಯಾಗಿ ಮುಚ್ಚಬೇಕು. ಹೊಸತಾಗಿ ಅಂಕುರಿಸಿದ ಸಸಿಗಳು ಎಲೆಗಳೊಂದಿಗೆ ಭೂಮಿಯ ಮೇಲಿರಬೇಕು.

೩ ಅ. ಗೆಡ್ಡೆಗಳಿಂದ ಬೆಳೆಯುವ ಕೆಲವು ಗಿಡಗಳು

ಬಟ್ಟಲು ಹೂವು, ಬಾಳೆಮರ, ಲಿಲಿ (ಒಂದು ಬಗೆಯ ಹೂವು), ರಜನಿಗಂಧ, ಆಲೂಗೆಡ್ಡೆ, ಶುಂಠಿ, ಬಜೆ, ಹೆಲಿಕೋನಿಯಾ.

೪. ಎಲೆಗಳಿಂದ ಬೆಳೆಯುವ ಹೊಸ ಸಸಿಗಳು

ಹೊಸ ಸಸಿಗಳಿಗಾಗಿ ಕೆಲವು ಗಿಡಗಳ ಎಲೆಗಳನ್ನು ಭೂಮಿಯಲ್ಲಿ ನೆಡಬೇಕಾಗುತ್ತದೆ. ಸರ್ವಸಾಧಾರಣ ಈ ಗಿಡಗಳ ಎಲೆಗಳ ಬದಿಗಿರುವ ಕಚ್ಚುಗಳಿಂದ ಬೇರುಗಳು ಒಡೆಯುತ್ತವೆ. ಎಲೆಗಳ ದಪ್ಪವು ತೀರಾ ಕಡಿಮೆ ಇರುವುದರಿಂದ ಎಲೆಗಳನ್ನು ಭೂಮಿಯ ಮೇಲೆ ಅಡ್ಡ ಇಡಬೇಕು. ಅದರ ಮೇಲೆ ಎಲೆಗಳ ಸೀಳುಗಳು ಮುಚ್ಚುವಂತೆ ಮಣ್ಣನ್ನು ಹಾಕಬೇಕು. ಅದಕ್ಕೆ ನೀರು ಹಾಕುವಾಗ ಮಣ್ಣು ಸರಿಯದಂತೆ, ಕಾಳಜಿ ವಹಿಸಬೇಕು.

೪ ಅ. ಎಲೆಗಳಿಂದ ಬೆಳೆಯುವ ಕೆಲವು ಗಿಡಗಳು : ಬ್ರಹ್ಮಕಮಲ, ಲೊನ್ನಹದನಕನಗಿಡ.

– ಡಾ. ನಂದಿನಿ ಬೋಂಡಾಳೆ, ಠಾಣೆ

(ಆಧಾರ : ದೈನಿಕ ‘ಲೋಕಮತ’)