ಸರ್ವೋಚ್ಚ ನ್ಯಾಯಾಲಯದ ಎಚ್ಚರಿಕೆಯ ನಂತರ ಉತ್ತರಪ್ರದೇಶದ ಕಾವಡ ಯಾತ್ರೆ ರದ್ದು !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸರ್ವೋಚ್ಚ ನ್ಯಾಯಾಲಯ ನೀಡಿದ ಎಚ್ಚರಿಕೆಯ ನಂತರ, ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿ ಕಾವಡ ಯಾತ್ರೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿದೆ. ಜುಲೈ ೨೫ ರಿಂದ ಆಗಸ್ಟ್ ೬ ರವರೆಗೆ ಯಾತ್ರೆ ನಡೆಯಬೇಕಿತ್ತು. ಕೊರೊನಾದ ಹಿನ್ನೆಲೆಯಲ್ಲಿ, ನ್ಯಾಯಾಲಯವು ‘ನಾಗರಿಕರ ಆರೋಗ್ಯ ಮತ್ತು ಅವರ ಬದುಕುವ ಅಧಿಕಾರ ಎಲ್ಲಕ್ಕಿಂತ ಮಹತ್ವದ್ದಾಗಿದೆ. ಇತರ ಎಲ್ಲ ಭಾವನೆಗಳು, ಧಾರ್ಮಿಕವಿರಲಿ ಅಥವಾ ಇಲ್ಲದಿರಲಿ, ಇವೆಲ್ಲವುಗಳು ಪ್ರಾಥಮಿಕ ಮೂಲಭೂತ ಅಧಿಕಾರಗಳ ಅಧೀನದಲ್ಲಿರುತ್ತವೆ’ ಎಂದು ಹೇಳಿತ್ತು ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಗೆ ಅನುಮತಿ ನೀಡಿದ ನಂತರ ನ್ಯಾಯಾಲಯವು ಸ್ವತಃ ಅರ್ಜಿಯನ್ನು ಸಲ್ಲಿಸಿತ್ತು. ಈ ಬಗ್ಗೆ ನ್ಯಾಯಾಲಯವು ಕೇಂದ್ರ ಸರಕಾರ, ಉತ್ತರಪ್ರದೇಶ ಹಾಗೂ ಉತ್ತರಾಖಂಡ ಸರಕಾರಕ್ಕೆ ನೋಟಿಸ್ ಜಾರಿ ಮಾಡುತ್ತಾ ತಮ್ಮ ಅಭಿಪ್ರಾಯವನ್ನು ಜುಲೈ ೧೯ ರಂದು ಸಲ್ಲಿಸುವಂತೆ ತಿಳಿಸಿತ್ತು ಉತ್ತರಾಖಂಡ ಸರಕಾರವು ಈ ಯಾತ್ರೆಗೆ ಅನುಮತಿ ನೀಡಿರಲಿಲ್ಲ.

ಏನಿದು ಕಾವಡ ಯಾತ್ರೆ ?

ಶ್ರಾವಣ ಮಾಸದಲ್ಲಿ ಕಾವಡ ಯಾತ್ರೆಯನ್ನು ಆಯೋಜಿಸಲಾಗುತ್ತದೆ. ಮೊದಲ ಕಾವಡ ಯಾತ್ರೆಯನ್ನು ಶಿವನ ಭಕ್ತ ಭಗವಾನ್ ಪರಶುರಾಮನು ಆಯೋಜಿಸಿದ್ದರು ಎಂದು ನಂಬಿಕೆ ಇದೆ. ಯಾತ್ರೆಯ ಸಮಯದಲ್ಲಿ, ಶಿವ ಭಕ್ತರು ಕೇಸರಿ ವಸ್ತ್ರವನ್ನು ಧರಿಸುತ್ತಾರೆ ಮತ್ತು ಗಂಗಾ ಮತ್ತು ಇತರ ಪವಿತ್ರ ನದಿಗಳಿಂದ ನೀರನ್ನು ತೆಗೆದುಕೊಂಡು ಬರಿಗಾಲಿನಲ್ಲಿ ಪಾದಯಾತ್ರೆ ಮಾಡುತ್ತಾರೆ. ಉತ್ತರಾಖಂಡದ ಹರಿದ್ವಾರ, ಗೋಮುಖ ಮತ್ತು ಗಂಗೋತ್ರಿ, ಬಿಹಾರದ ಸುಲತಾನಗಂಜ್ ಮತ್ತು ಉತ್ತರಪ್ರದೇಶದ ಪ್ರಯಾಗರಾಜ, ಅಯೋಧ್ಯೆ ಮತ್ತು ವಾರಣಾಸಿಯ ಭಕ್ತರು ಪವಿತ್ರ ನೀರಿನೊಂದಿಗೆ ತಮ್ಮ ಗ್ರಾಮಗಳಿಗೆ ಮರಳುತ್ತಾರೆ. ಭಗವಾನ್ ಶಿವನನ್ನು ಪೂಜಿಸಲು ಈ ನೀರನ್ನು ಬಳಸುತ್ತಾರೆ. ೨೦೧೯ ರಲ್ಲಿ ಈ ಯಾತ್ರೆಯ ಸಮಯದಲ್ಲಿ ಮೂರೂವರೆ ಕೋಟಿ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡಿದ್ದರು. ಈ ಅವಧಿಯಲ್ಲಿ ೨-೩ ಕೋಟಿ ಭಕ್ತರು ಉತ್ತರಪ್ರದೇಶದ ವಿವಿಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಾರೆ.