ಮಳೆಗಾಲವು ಈಗಾಗಲೇ ಆರಂಭವಾಗಿದೆ. ಮಳೆಗಾಲದಲ್ಲಿ ಆರೋಗ್ಯವಂತರಾಗಿರಲು ಏನೆಲ್ಲ ಕಾಳಜಿ ವಹಿಸಬೇಕು ? ಮಳೆಗಾಲದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು ? ಏನು ಸೇವಿಸಬಾರದು ? ಮತ್ತು ಮಳೆಗಾಲದಲ್ಲಿ ರೋಗಗಳನ್ನು ಹೇಗೆ ತಡೆಯಬೇಕು ? ಇದರ ಕುರಿತಾದ ಸವಿಸ್ತಾರ ಮಾಹಿತಿಯನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.
೧. ಮಳೆಗಾಲದಲ್ಲಿ ರೋಗ ನಿರ್ಮಿತಿಗೆ ಕಾರಣವಾದ ಘಟಕಗಳು
‘ಮಳೆಗಾಲದ ಮೊದಲು ಬೇಸಿಗೆ ಕಾಲದಲ್ಲಿ ಶರೀರವು ಶುಷ್ಕವಾಗಿರುತ್ತದೆ, ಶರೀರದ ಶಕ್ತಿಯು ಕಡಿಮೆಯಾಗಿರುತ್ತದೆ. ಕಡು ಬಿಸಿಲಿನ ನಂತರ ವಾತಾವರಣದಲ್ಲಿ ಅಕಸ್ಮಾತ್ತಾಗಿ ಪರಿವರ್ತನೆಯಾಗಿ ಮಳೆಯಿಂದಾಗಿ ತಂಪು ನಿರ್ಮಾಣವಾಗುತ್ತದೆ. ಹವೆಯ ಆರ್ದ್ರತೆಯು ಹೆಚ್ಚಾಗುತ್ತದೆ. ಆದುದರಿಂದ ಶರೀರದಲ್ಲಿ ವಾತದೋಷವು ಹೆಚ್ಚಾಗುತ್ತದೆ. ವಾತಾವರಣದಲ್ಲಿ, ವಿಶೇಷವಾಗಿ ವನಸ್ಪತಿ, ಧಾನ್ಯಗಳು, ನೀರು ಇತ್ಯಾದಿ ಎಲ್ಲ ಸ್ಥಳಗಳಲ್ಲಿ ಆಮ್ಲತೆ ಹೆಚ್ಚಾಗುವುದರಿಂದ ಪಿತ್ತವನ್ನು ಶೇಖರಿಸುವ ಕಡೆಗೆ ಶರೀರದ ಸೆಳೆತವಿರುತ್ತದೆ. ಈ ದಿನಗಳಲ್ಲಿ ಜೀರ್ಣಶಕ್ತಿಯೂ ಕಡಿಮೆಯಾಗುತ್ತದೆ. ಹಸಿವೆಯು ಕಡಿಮೆಯಾಗುವುದರಿಂದ ಅಪಚನದ ರೋಗವು ನಿರ್ಮಾಣವಾಗುತ್ತದೆ. ಮಳೆಯ ನೀರಿನೊಂದಿಗೆ ಧೂಳು, ಕಸ ಹರಿದು ಬರುವುದರಿಂದ ನೀರು ಕಲುಷಿತಗೊಂಡು ಅದು ಸಹ ರೋಗಗಳಿಗೆ ಕಾರಣವಾಗುತ್ತದೆ. ಈ ಎಲ್ಲ ಪರಿವರ್ತನೆಗಳಿಂದ ವಾತದ ರೋಗ, ಉದಾ. ಸಂಧಿವಾತ, ಆಮವಾತ ಇವುಗಳೊಂದಿಗೆ ಭೇದಿ, ಅಜೀರ್ಣ ಇತ್ಯಾದಿ ಅಜೀರ್ಣವನ್ನು ಉಂಟು ಮಾಡುವ ಕಾಯಿಲೆಗಳು ಹೆಚ್ಚಾಗುತ್ತವೆ.
೨. ಮಳೆಗಾಲದ ಆಹಾರ
೨ ಅ. ಮಳೆಗಾಲದಲ್ಲಿ ಏನು ತಿನ್ನಬೇಕು ಹಾಗೂ ಏನು ತಿನ್ನಬಾರದು ?
ಟಿಪ್ಪಣಿ : ಧರ್ಮಶಾಸ್ತ್ರಕ್ಕನುಸಾರ ಮದ್ಯ ಹಾಗೂ ಮಾಂಸ ಇವುಗಳ ಸೇವನೆಯು ನಿಷಿದ್ಧವಾಗಿದೆ; ಆದರೂ ಪ್ರಸ್ತುತ ಶರಾಬು ಹಾಗೂ ಮಾಂಸ ಸೇವನೆಯನ್ನು ಮಾಡುವವರಿಗೆ ಅವುಗಳ ಗುಣದೋಷ ಗಳು ತಿಳಿಯಲಿ, ಎಂದು ಇಲ್ಲಿ ಕೊಡಲಾಗಿದೆ.
೨. ಆ. ಲಂಘನ (ಉಪವಾಸ) : ವಾರಕ್ಕೊಮ್ಮೆ ಲಂಘನ ಅಥವಾ ಉಪವಾಸ ಮಾಡಬೇಕು. ಯಾರಿಗೆ ಸಾಧ್ಯವಿದೆ ಅವರು ದಿನವಿಡಿ ಏನನ್ನೂ ತಿನ್ನದೇ ಇರಬೇಕು. ತೀರಾ ಹಸಿವಾದರೆ ಮಂಡಕ್ಕಿ ತಿನ್ನಬೇಕು. ಅದು ಸಾಧ್ಯವಿಲ್ಲದವರು ಹುರಿದ ಧಾನ್ಯದ ಪದಾರ್ಥ ಅಥವಾ ಲಘು ಆಹಾರ (ಮಂಡಕ್ಕಿ, ಹೆಸರುಕಾಳಿನ ತೊವ್ವೆ ಇವುಗಳಂತಹ ಜೀರ್ಣಕ್ಕೆ ಹಗುರವಾದ ಆಹಾರ) ಸೇವಿಸಿ ಲಂಘನ ಮಾಡಬೇಕು. ಮಳೆಗಾಲದಲ್ಲಿ ಒಪ್ಪೊತ್ತು ಉಪವಾಸ ಇರುವುದು, ಅಂದರೆ ಮಧ್ಯಾಹ್ನ ವ್ಯವಸ್ಥಿತವಾಗಿ ಭೋಜನ ಸೇವಿಸಿ ರಾತ್ರಿ ಊಟ ಮಾಡದಿರುವುದು ಅನೇಕರಿಗೆ ಉಪಯುಕ್ತವೆನಿಸುತ್ತದೆ.
೩. ಮಳೆಗಾಲದಲ್ಲಿ ತೆಗೆದುಕೊಳ್ಳಬೇಕಾದ ವಿಶೇಷ ಕಾಳಜಿ
ಅ. ಎಲ್ಲ ಹಾಸಿಗೆ, ಬೆಚ್ಚಗಿನ ಬಟ್ಟೆಗಳನ್ನು ಮಳೆಗಾಲದ ಮೊದಲೇ ಬೇಸಿಗೆಯಲ್ಲಿ ಬಿಸಿಲಿಗೆ ಹಾಕಿ ಇಡಬೇಕು.
ಆ. ಮಳೆಗಾಲದಲ್ಲಿ ಸ್ನಾನಕ್ಕಾಗಿ ಬೆಚ್ಚಗಿನ ಅಥವಾ ಬಿಸಿ ನೀರನ್ನು ಉಪಯೋಗಿಸಬೇಕು.
ಇ. ಹಸಿಯಾದ ಅಥವಾ ತೇವವುಳ್ಳ ಜಾಗದಲ್ಲಿ ಇರಬಾರದು.
ಈ. ಹಸಿಯಾದ ಅಥವಾ ತೇವವುಳ್ಳ ಬಟ್ಟೆಗಳನ್ನು ಧರಿಸಬಾರದು.
ಉ. ಸತತ ನೀರಿನಲ್ಲಿ ಕೆಲಸ ಮಾಡಬಾರದು.
ಊ. ಮಳೆಯಲ್ಲಿ ನೆನೆಯಬಾರದು. ಅದಕ್ಕಾಗಿ ಆವಶ್ಯಕವಿರುವ ಕಾಳಜಿಯನ್ನು ತೆಗೆದುಕೊಳ್ಳಬೇಕು. ನೆನೆದರೆ ತಕ್ಷಣ ಒಣ ಬಟ್ಟೆಗಳನ್ನು ಧರಿಸಬೇಕು.
ಎ. ಮಳೆಗಾಲದಲ್ಲಿನ ತಂಪಿನಿಂದಲೂ ರಕ್ಷಣೆ ಮಾಡಿಕೊಳ್ಳಬೇಕು.
ಏ. ಜಾಗರಣೆಯಿಂದ ಶರೀರದಲ್ಲಿನ ಶುಷ್ಕತೆ ಹೆಚ್ಚಾಗಿ ವಾತವು ಹೆಚ್ಚಾಗುವುದರಿಂದ ರಾತ್ರಿಯ ಜಾಗರಣೆಯನ್ನು ತಪ್ಪಿಸಬೇಕು.
ಓ. ಹಗಲಿನಲ್ಲಿ ಮಲಗಬಾರದು.
೪. ನೊಣ ಹಾಗೂ ಸೊಳ್ಳೆ ಇವುಗಳನ್ನು ನಿಯಂತ್ರಿಸುವ ನೈಸರ್ಗಿಕ ಉಪಾಯ
ಈ ಸಮಯದಲ್ಲಿ ನೊಣ ಹಾಗೂ ಸೊಳ್ಳೆ ಇವುಗಳ ಪ್ರಮಾಣವೂ ಹೆಚ್ಚಾಗುತ್ತದೆ. ಇದನ್ನು ನಿಯಂತ್ರಿಸಲು ಮುಂದಿನ ಉಪಾಯ ಮಾಡಬೇಕು.
ಅ. ಮನೆಯಲ್ಲಿ ಬೇವಿನ ಎಲೆಗಳು, ಬೆಳ್ಳುಳ್ಳಿಯ ಸಿಪ್ಪೆ, ಧೂಪ, ಸುಗಂಧದ್ರವ್ಯ, ಓಮಕಾಳು ಇವುಗಳ ಹೊಗೆಯನ್ನು ಹಾಕಬೇಕು.
ಆ. ಮನೆಯ ಸುತ್ತಲೂ ಗಿಡಗಳಿದ್ದರೆ ಅವುಗಳ ಮೇಲೆ ಗೋಮೂತ್ರ ಸಿಂಪಡಿಸಬೇಕು.
ಇ. ಮನೆಯೊಳಗೆ ಬಜೆಯ ಸಸಿಯಿರುವ ಕುಂಡವನ್ನು ಇಡಬೇಕು. ಇದರಿಂದ ಸೊಳ್ಳೆಗಳ ಪ್ರಮಾಣವು ಕಡಿಮೆಯಾಗುತ್ತದೆ.
ಈ. ಸಾಯಂಕಾಲದ ಸಮಯದಲ್ಲಿ ‘ಗುಡ್‌ನೈಟ್ ಕಾಯಿಲ್ ಮೇಲೆ ಬೆಳ್ಳುಳ್ಳಿಯ ಪಕಳೆಗಳನ್ನಿಟ್ಟು ಸ್ವಿಚ್ ಶುರು ಮಾಡಬೇಕು. ಇದರಿಂದ ಸೊಳ್ಳೆಗಳ ಪ್ರಮಾಣವನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
೫. ಮಳೆಗಾಲದ ಕಾಯಿಲೆಗಳನ್ನು ಈ ರೀತಿ ತಡೆಗಟ್ಟಿರಿ !
ಮಳೆಗಾಲದ ಪ್ರಮುಖ ಲಕ್ಷಣವೆಂದರೆ ಹಸಿವು ಕಡಿಮೆಯಾಗುವುದು. ಹಸಿವು ಕಡಿಮೆಯಿರುವಾಗಲೂ ಮೊದಲಿನ ಹಾಗೆಯೇ ಆಹಾರ ಸೇವಿಸಿದರೆ, ಅದು ಅನೇಕ ರೋಗಗಳಿಗೆ ಆಮಂತ್ರಣವನ್ನೇ ನೀಡುತ್ತದೆ; ಏಕೆಂದರೆ ಕುಂಠಿತಗೊಂಡ ಹಸಿವು ಅಥವಾ ಜೀರ್ಣ ಶಕ್ತಿಯು ಹೆಚ್ಚಿನ ಕಾಯಿಲೆಗಳ ಮೂಲ ಕಾರಣವಾಗಿದೆ. ಹೊಟ್ಟೆ ಭಾರವೆನಿಸುವುದು, ಹುಳಿ ತೇಗು ಬರುವುದು, ಗ್ಯಾಸ್ (ಹೊಟ್ಟೆಯಲ್ಲಿ ವಾಯು) ಆಗುವುದು, ಇವು ಹಸಿವು ಕಡಿಮೆಯಾದುದರ ಲಕ್ಷಣಗಳಾಗಿವೆ. ಈ ಸಮಯದಲ್ಲಿ ಹಗುರವಾದ ಅನ್ನ, ಉದಾ. ಗಂಜಿ, ಹುರಿದು ತಯಾರಿಸಿದ ಪದಾರ್ಥವನ್ನು ಸೇವಿಸಬೇಕು. ಸ್ವಲ್ಪ ಪ್ರಮಾಣದಲ್ಲಿ ತಿನ್ನಬೇಕು. ಹೊಟ್ಟೆ ತುಂಬಿರುವಾಗಲೂ ಆಹಾರವನ್ನು ಸೇವಿಸುತ್ತಿದ್ದರೆ ಅಜೀರ್ಣ, ಭೇದಿ, ಆಮಶಂಕೆ ಈ ಕಾಯಿಲೆಗಳು ಆರಂಭವಾಗುತ್ತವೆ.
೫ ಅ. ಜೀರ್ಣಶಕ್ತಿಯನ್ನು ಹೆಚ್ಚಿಸುವ ಮನೆಮದ್ದು
೫ ಅ ೧. ಜೀರ್ಣಕ್ರಿಯೆಗೆ ಪೂರಕವಾಗಿರುವ ಮಜ್ಜಿಗೆ : ಒಂದು ಲೋಟ ತಾಜಾ ಸಿಹಿ ಮಜ್ಜಿಗೆಯನ್ನು ತೆಗೆದುಕೊಂಡು ಅದರಲ್ಲಿ ಶುಂಠಿ, ಜೀರಿಗೆ, ಓಮಕಾಳು, ಇಂಗು, ಸೈಂಧವಲವಣ, ಮೆಣಸು ಇವುಗಳ ೧-೧ ಚಿಟಿಕೆಯಷ್ಟು ಪುಡಿ ಹಾಕಿ ಮಿಶ್ರಣ ಮಾಡಬೇಕು. ದಿನದಲ್ಲಿ ೨-೩ ಬಾರಿ ಕುಡಿಯಬೇಕು.
೫ ಅ ೨. ಜೀರ್ಣಕ್ರಿಯೆಗೆ ಪೂರಕವಾಗಿರುವ ಮಿಶ್ರಣ : ಹಸಿ ಶುಂಠಿಯನ್ನು ತುರಿದು ಅದರಲ್ಲಿ ಅದು ನೆನೆಯುವಷ್ಟು ನಿಂಬೆರಸವನ್ನು ಹಾಕಬೇಕು, ರುಚಿಗೆ ತಕ್ಕಷ್ಟು ಸೈಂಧವ ಲವಣ ಹಾಕಬೇಕು. ಈ ಮಿಶ್ರಣವನ್ನು ಗಾಜಿನ ಬಾಟಲಿಯಲ್ಲಿ ತುಂಬಿಡಬೇಕು. ಊಟಕ್ಕೆ ಮೊದಲು ೧ – ೨ ಚಮಚದ ಪ್ರಮಾಣದಲ್ಲಿ ಸೇವಿಸಬೇಕು.
೫ ಅ ೩. ಶುಂಠಿ-ಸಕ್ಕರೆ ಮಿಶ್ರಣ : ೧ ಬಟ್ಟಲು ಶುಂಠಿ ಪುಡಿ ಹಾಗೂ ಅಷ್ಟೇ ಪ್ರಮಾಣದಲ್ಲಿ ಸಕ್ಕರೆಯನ್ನು ತೆಗೆದುಕೊಂಡು ಮಿಕ್ಸರ್‌ನಲ್ಲಿ ರುಬ್ಬಿ ಮಿಶ್ರಣ ಮಾಡಿ ಭರಣಿಯಲ್ಲಿ ತುಂಬಿಡಬೇಕು. ಊಟಕ್ಕೆ ಮೊದಲು ಎರಡೂ ಬಾರಿ ೧-೧ ಚಮಚದಷ್ಟು ಸೇವಿಸಬೇಕು. ಇದರಿಂದ ಶುದ್ಧ ತೇಗು ಬಂದು ಚೆನ್ನಾಗಿ ಹಸಿವೆ ಆಗುತ್ತದೆ ಹಾಗೂ ಪಿತ್ತದ ತೊಂದರೆಯೂ ಕಡಿಮೆಯಾಗುತ್ತದೆ.
೫ ಆ. ಪ್ರತಿದಿನ ಇಡೀ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಿ ! : ಮಳೆಗಾಲದಲ್ಲಿ ಇಡೀ ಶರೀರಕ್ಕೆ ನಿಯಮಿತವಾಗಿ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಈ ಎಣ್ಣೆಯನ್ನು ಸಂದುಗಳಲ್ಲಿ ಹೆಚ್ಚು ಸಮಯ ಉಜ್ಜಬೇಕು. ಮಳೆಗಾಲದಲ್ಲಿ ಹವೆಯಲ್ಲಿ ಆರ್ದ್ರತೆ ಹಾಗೂ ತಂಪು ಇರುವುದರಿಂದ ಉಷ್ಣತೆಯ ಗುಣವಿರುವ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸಬೇಕು, ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಬಾರದು. (ಮಳೆಗಾಲವನ್ನು ಬಿಟ್ಟು ಇತರ ಋತುಗಳಲ್ಲಿ ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಬಹುದು.) ಎಣ್ಣೆಯನ್ನು ಹಚ್ಚಿದ ನಂತರ ಸೂರ್ಯನಮಸ್ಕಾರ, ಯೋಗಾಸನಗಳಂತಹ ಹಗುರವಾದ ವ್ಯಾಯಾಮಗಳನ್ನು ಮಾಡಬೇಕು ಅವಯವಗಳು ನೋವಾಗುವುದು, ವೇದನೆ ಇತ್ಯಾದಿ ಲಕ್ಷಣಗಳಿದ್ದರೆ ಬಿಸಿ ನೀರಿನ ಚೀಲದಿಂದ ಅಥವಾ ‘ಹೀಟಿಂಗ್ ಪ್ಯಾಡ್ನಿಂದ ಶಾಖಕೊಡಬೇಕು. ಸ್ನಾನದ ಸಮಯದಲ್ಲಿ ಶಾಖ ಕೊಡಬೇಕೆನಿಸಿದರೆ ತಡೆದುಕೊಳ್ಳುವಷ್ಟು ಬಿಸಿ ನೀರನ್ನು ಉಪಯೋಗಿಸಬೇಕು.
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.