ಮೃತದೇಹ ಮತ್ತು ಮನುಷ್ಯತ್ವ !

ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಗಂಗಾನದಿಯಲ್ಲಿ ೨-೩ ದಿನಗಳಲ್ಲಿ ಅನೇಕ ಮೃತದೇಹಗಳು ಸಿಗುತ್ತಿವೆ. ಬಕ್ಸರ್(ಬಿಹಾರ) ಇಲ್ಲಿ ೪೦ ಮೃತದೇಹಗಳು ತೇಲಿ ಬಂದಿವೆ. ಈ ಮೊದಲು ಉತ್ತರಪ್ರದೇಶದ ಗಾಝಿಪುರ ಜಿಲ್ಲೆಯ ನದಿಯ ದಡದಲ್ಲಿ ಇದೇ ರೀತಿ ಮೃತದೇಹಗಳು ತೇಲಿ ಬಂದಿದ್ದವು. ಈ ಹಿಂದೆ ಹಮೀರಪುರ ಮತ್ತು ಕಾನಪುರ ಜಿಲ್ಲೆಯಲ್ಲಿಯೂ ಗಂಗಾನದಿಯ ದಡದಲ್ಲಿ ಮೃತದೇಹಗಳು ಸಿಕ್ಕಿದ್ದವು. ಇದರಿಂದ ಗಂಗಾನದಿಯ ದಡದಲ್ಲಿ ವಾಸವಿರುವ ಗ್ರಾಮಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ‘ಗಂಗಾನದಿಯಲ್ಲಿ ಮೃತದೇಹವನ್ನು ಬಿಟ್ಟರೆ ಮರಣಿಸಿದವನಿಗೆ ಮೋಕ್ಷ ಸಿಗುತ್ತದೆ, ಎಂದೂ ಒಂದು ನಂಬಿಕೆ ಇರುವುದರಿಂದ ಕೆಲವು ಸ್ಥಳಗಳಲ್ಲಿ ಮೃತದೇಹದ ಮೇಲೆ ಅಂತ್ಯಸಂಸ್ಕಾರ ಮಾಡದೇ ಅವುಗಳನ್ನು ಗಂಗಾನದಿಯಲ್ಲಿ ಬಿಡಲಾಗುತ್ತದೆ. ಆದರೆ ಈ ಪ್ರಮಾಣ ಅತ್ಯಲ್ಪವಿದೆ. ಸದ್ಯ ಗಂಗಾನದಿಯಲ್ಲಿ ಕಂಡು ಬರುತ್ತಿರುವ ಮೃತದೇಹಗಳಿಗೆ ಇದು ಅನ್ವಯವಾಗುವುದಿಲ್ಲ. ಇದರ ಹಿನ್ನೆಲೆಯಲ್ಲಿ ಒಂದು ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ಅಂಬುಲೆನ್ಸ್ ನಿಂದ ಕೆಲವು ಜನರು ಮೃತದೇಹವನ್ನು ನದಿಯ ದಡಕ್ಕೆ ಕೊಂಡೊಯ್ಯುತ್ತಿರುವುದು ಕಾಣಿಸುತ್ತಿದೆ. ಇದರಿಂದ ಆಡಳಿತ ವ್ಯವಸ್ಥೆಯ ಒಂದು ಗುಂಪು ಮೃತದೇಹದ ಮೇಲೆ ಅಂತ್ಯಸಂಸ್ಕಾರ ಮಾಡುವ ‘ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಈ ಮಾರ್ಗವನ್ನು ಅವಲಂಬಿಸಿದೆ ಎಂದೆನ್ನಬಹುದು. ‘ನದಿಯ ದಡದಲ್ಲಿ ತೇಲಿ ಬಂದಿರುವ ಮೃತದೇಹಗಳು ಕೊರೊನಾಪೀಡಿತ ರೋಗಿಗಳದ್ದಾಗಿದೆ, ಎಂದು ಅನುಮಾನಿಸಲಾಗುತ್ತಿದೆ. ಈ ಅನುಮಾನವು ಒಂದು ರೀತಿಯಲ್ಲಿ ಸತ್ಯವಾಗಿದೆ. ಬಕ್ಸರ್ ನಿವಾಸಿ ನರೇಂದ್ರಕುಮಾರ ಮೌರ್ಯ ಇವರು ‘ಘಾಟ್‌ನಲ್ಲಿ ೧೦೦ ರಿಂದ ೨೦೦ ಮೃತದೇಹಗಳು ಅಂತ್ಯಸಂಸ್ಕಾರಕ್ಕಾಗಿ ಬರುತ್ತವೆ; ಆದರೆ ಕಟ್ಟಿಗೆ ಲಭ್ಯವಿಲ್ಲದ ಕಾರಣ ಜನರು ಈ ಮೃತದೇಹವನ್ನು ನೀರಿಗೆ ಬಿಡುತ್ತಾರೆ ಮತ್ತು ಅದನ್ನು ತಡೆಯುವಲ್ಲಿ ಆಡಳಿತವು ವಿಫಲವಾಗಿದೆಯೆಂದು ಹೇಳಿದರು.

ಒಂದೆಡೆ ಕೊರೊನಾಪೀಡಿತ ಮೃತದೇಹವನ್ನು ನೀರಿಗೆ ಬಿಟ್ಟು ಅದನ್ನು ಕಲುಷಿತಗೊಳಿಸುವುದು ಮಹಾಪಾಪವಾಗಿದೆ. ಈ ರೀತಿ ಮಾಡುವವರನ್ನು ಶಿಕ್ಷಿಸಲೇಬೇಕು; ಆದರೆ ಇಂತಹ ಮೃತದೇಹಗಳಿಂದ ಸಮಾಜಕ್ಕೆ ಯಾವುದೇ ಅಪಾಯವಾಗಬಾರದು ಎಂದು ಎಚ್ಚರ ವಹಿಸಿ ಅವುಗಳ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆಯನ್ನು ಮಾಡುವುದು, ಮೃತರ ಕುಟುಂಬದವರಲ್ಲಿಯೂ ಜಾಗೃತಿ ಮೂಡಿಸಿ ‘ಎಲ್ಲ ಮುನ್ನೆಚ್ಚೆರಿಕಾ ಕ್ರಮಗಳನ್ನು ತೆಗೆದುಕೊಂಡು ಅಂತ್ಯಸಂಸ್ಕಾರವನ್ನು ಹೇಗೆ ಮಾಡಬೇಕು ? ಎನ್ನುವ ವಿಷಯದಲ್ಲಿ ತಿಳುವಳಿಕೆ ಮೂಡಿಸುವುದು ಸರಕಾರದ ಕರ್ತವ್ಯವಾಗಿದೆ. ಆದರೆ ಕರ್ತವ್ಯವನ್ನು ನಿರ್ವಹಿಸುವಲ್ಲಿ ಸರಕಾರವು ವಿಫಲವಾಗಿದೆ.

ಹಿಂದೂ ಸಂಸ್ಕೃತಿಯಲ್ಲಿ ೧೬ ಸಂಸ್ಕಾರಗಳಿಗೆ ಅಸಾಧಾರಣ ಮಹತ್ವವಿದೆ. ವ್ಯಕ್ತಿಯ ಮರಣದ ಬಳಿಕ ಮಾಡಿದ ಸಂಸ್ಕಾರಕ್ಕೆ ಅಂತಿಮ ಸಂಸ್ಕಾರವೆನ್ನುತ್ತಾರೆ. ವ್ಯಕ್ತಿಗೆ ಮುಂದಿನ ಗತಿ ಸಿಗಬೇಕೆಂದು ಈ ಸಂಸ್ಕಾರವನ್ನು ಯೋಗ್ಯ ರೀತಿಯಲ್ಲಿ ಮಾಡುವುದು ಅವಶ್ಯಕವಿರುತ್ತದೆ. ಕೊರೊನಾಕಾಲದಲ್ಲಿ ಈ ವಿಧಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಆಡಳಿತ ವ್ಯವಸ್ಥೆಯ ಸಂವೇದನಾಶೂನ್ಯ, ನಿರ್ಲಕ್ಷ ಮತ್ತು ಬೇಜವಾಬ್ದಾರಿ ಘಟಕಗಳಿಂದ ಈ ರೀತಿ ಮೃತದೇಹ ಗಳೊಂದಿಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಖೇದದ ಸಂಗತಿಯಾಗಿದೆ. ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿ ವರ್ತನೆಯಿಂದ ಮೃತ ವ್ಯಕ್ತಿಯ ಕುಟುಂಬದವರು ಕೋಪೋದ್ರಿಕ್ತರಾಗುತ್ತಿರುವ ಚಿತ್ರಣ ಎಲ್ಲೆಡೆ ಕಂಡು ಬರುತ್ತಿದೆ. ಮೃತರ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆಯನ್ನು ಪೂರೈಸಲು ಆಡಳಿತಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ? ಇಂತಹ ಬೇಜವಾಬ್ದಾರಿ ವರ್ತನೆಯಿಂದ ಜನತೆಯನ್ನು ಆಕ್ರೋಶಗೊಳ್ಳುವಂತೆ ಮಾಡುವ ಸರಕಾರಿ ಇಲಾಖೆಯು ಜನತೆಗೆ ಎಂದಾದರೂ ಒಳಿತನ್ನು ಮಾಡಬಹುದೇ ?

ಆಡಳಿತ ವ್ಯವಸ್ಥೆಯ ವೈಫಲ್ಯ !

ಮಹಾಮಾರಿ, ಯುದ್ಧ ಅಥವಾ ನೈಸರ್ಗಿಕ ವಿಪತ್ತುಗಳು ಎದುರಾದಾಗ ಅದಕ್ಕೆ ಬಲಿಯಾಗುವ ಜನರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿರುತ್ತದೆ. ವಿಪತ್ತುಗಳು ಎಂದಿಗೂ ಹೇಳಿ ಕೇಳಿ ಬರುವುದಿಲ್ಲ. ಆದಾಗ್ಯೂ ಅದರ ಮುನ್ಸೂಚನೆ ದೊರಕಿದಾಗ ಆಡಳಿತವು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಕೊರೊನಾ ರೋಗದ ಬಗ್ಗೆಯೂ ಇದೇ ರೀತಿ ಇತ್ತು. ಹಿಂದಿನ ವರ್ಷ ಸಂಚಾರ ನಿರ್ಬಂಧ ಜಾರಿಗೊಳಿಸಿದಾಗ ಕೊರೊನಾ ಸೋಂಕು ಇಷ್ಟು ದೊಡ್ಡ ಪ್ರಮಾಣ ದಲ್ಲಿ ಹರಡುವುದೆಂದು ಯಾರಿಗೂ ಕಲ್ಪನೆ ಇರಲಿಲ್ಲ; ಆದರೆ ಮೊದಲ ಅಲೆಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಆದರೆ ಕೊರೊನಾವನ್ನು ಭಾರತವು ಪೂರ್ಣವಾಗಿ ಸೋಲಿಸಿರಲಿಲ್ಲ. ಇದರಿಂದ ಅದು ಪುನಃ ತಲೆಯೆತ್ತಬಹುದು ಎನ್ನುವುದು ದೃಢ ವಾಗಿತ್ತು. ಆದಾಗ್ಯೂ ನಮ್ಮ ಸರಕಾರ ನಿರ್ಲಕ್ಷ್ಯವಹಿಸಿತು. ಅದರ ಪರಿಣಾಮ ಏನಾಗಬೇಕಾಗಿತ್ತೋ ಅದೇ ಆಗಿದೆ. ಎರಡನೇಯ ಅಲೆಯನ್ನು ಎದುರಿಸಲು ಭಾರತ ಸಿದ್ಧವಾಗಿಲ್ಲದ ಕಾರಣ ಆರೋಗ್ಯ ಇಲಾಖೆಯೇ ಮಕಾಡೆ ಮಲಗಿತು. ಆಕ್ಸಿಜನ್, ರೆಮಡೆಸಿವಿರ ಇತ್ಯಾದಿ ಔಷಧಿಗಳ ಕೊರತೆಯು ಇದರ ಫಲಶ್ರುತಿಯಾಗಿದೆ.

ಕೊರೊನಾದ ಕಾರಣದಿಂದ ಮರಣ ಹೊಂದಿದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾದಂತೆ, ಮೃತದೇಹಗಳ ದಹನಕ್ರಿಯೆಗೆ ಸರತಿ ಸಾಲು ಏರ್ಪಟ್ಟಿತು. ಮೃತದೇಹಗಳ ಅದಲು ಬದಲು, ಮೃತದೇಹ ಪಡೆಯಲು ಸಂಬಂಧಿಕರು ಗಂಟೆಗಟ್ಟಲೆ ಕಾಯುವುದು, ಮೃತದೇಹ ಸ್ಮಶಾನದ ವರೆಗೆ ಒಯ್ಯಲು ಆಂಬುಲೆನ್ಸ್ ಚಾಲಕರು ಕುಟುಂಬದವರಿಂದ ಸಾವಿರಾರು ರೂಪಾಯಿಗಳನ್ನು ಸುಲಿಗೆ ಮಾಡುವುದು ಇತ್ಯಾದಿ ಸುದ್ದಿಗಳು ಬಹಿರಂಗಗೊಳ್ಳತೊಡಗಿತು. ಇದರಿಂದ ಮನುಷ್ಯತ್ವಶೂನ್ಯ ವರ್ತನೆ ಕಂಡು ಬರುವುದರೊಂದಿಗೆ ಆಡಳಿತದ ವೈಫಲ್ಯ ಸ್ಪಷ್ಟವಾಗಿ ಗೋಚರಿಸಿತು. ಯಾವುದೇ ಮನೆಯ ಸದಸ್ಯರು ಮೃತಪಟ್ಟರೆ ಆ ಮನೆಗೆ ಬಹಳ ದುಃಖದ ವಿಷಯ ವಾಗಿರುತ್ತದೆ. ಇಂತಹ ಕುಟುಂಬದವರ ಮೇಲೆ ಬಂದರೆಗಿರುವ ಸಂಕಟದಲ್ಲಿ ಆ ಕುಟುಂಬಕ್ಕೆ ಆಧಾರದ ಅವಶ್ಯಕತೆಯಿರುತ್ತದೆ; ಆದರೆ ಕೊರೊನಾ ಕಾಲದಲ್ಲಿ ಮೃತಪಟ್ಟಿರುವುದರ ದುರ್ಲಾಭ ಪಡೆಯುವ ಪ್ರವೃತ್ತಿ ಎಲ್ಲೆಡೆ ಕಂಡು ಬಂದಿತು. ಈ ಪ್ರವೃತ್ತಿ ಕಂಡು ಬಂದರೂ ಅದನ್ನು ತಡೆಗಟ್ಟಲು ಆಡಳಿತವು ಯಾವುದೇ ಸೂಕ್ತ ಕ್ರಮಗಳನ್ನು ಜರುಗಿಸಲಿಲ್ಲವೆನ್ನುವುದು ಅತ್ಯಂತ ಗಂಭೀರ ವಿಷಯವಾಗಿದೆ. ಮೃತದೇಹಗಳನ್ನು ನದಿಯಲ್ಲಿ ಎಸೆಯುವುದು ಕೂಡ ಅದರ ಒಂದು ಭಾಗವಾಗಿದೆ. ಕೊರೊನಾ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ರೋಗಿಗಳು ಮರಣ ಹೊಂದುತ್ತಿರುವಾಗ ಅವರ ಅಂತ್ಯವಿಧಿಗಾಗಿ ಸರಕಾರ ಯಾವ ವ್ಯವಸ್ಥೆಯನ್ನು ಮಾಡಿದೆ ?  ಭಾರತವು ಅಸಂಖ್ಯ ಯುದ್ಧಗಳನ್ನು, ಹೋರಾಟಗಳನ್ನು ಮತ್ತು ನೈಸರ್ಗಿಕ ವಿಪತ್ತುಗಳನ್ನು ಎದುರಿಸಿದೆ,

ತೀವ್ರ ಆಪತ್ಕಾಲವನ್ನು ಹೇಗೆ ಎದುರಿಸುವರು ?

ಯಾವುದಾದರೂ ಆಪತ್ತು ಅಥವಾ ಸಂಕಟ ಬಂದಾಗ ಅದನ್ನು ಆಡಳಿತ ಯಾವ ರೀತಿ ಎದುರಿಸುತ್ತದೆ ? ಎನ್ನುವುದರಿಂದ ಅದು ಎಷ್ಟು ಸನ್ನದ್ಧವಾಗಿದೆ ? ಎನ್ನುವುದು ಗಮನಕ್ಕೆ ಬರುತ್ತದೆ. ಇಷ್ಟು ವರ್ಷಗಳಿಂದ ಆಪತ್ಕಾಲವನ್ನು ಎದುರಿಸಲು ಆಡಳಿತ ವ್ಯವಸ್ಥೆಯು ಎಷ್ಟು ಸನ್ನದ್ಧವಾಗಿದೆಯೆನ್ನುವುದರ ಪರೀಕ್ಷೆಯಾಗುತ್ತದೆ. ಕೊರೊನಾ ಮಹಾಮಾರಿಯು ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಪೊಲೀಸರು ಮುಂತಾದವರ ಬಣ್ಣವನ್ನು ಬಟಾಬಯಲು ಮಾಡಿದೆ. ‘ಅಭಿವೃದ್ಧಿಪರ ಮತ್ತು ಜನತೆಗಾಗಿ ಇರುವುದಾಗಿ ಡಂಗುರ ಸಾರುವ ಸರಕಾರವು ಜನತಾದ್ರೋಹಿಯೇ ಆಗಿರುವ ಅನುಭೂತಿ ಜನರಿಗೆ ಅನೇಕ ಸ್ಥಳಗಳಲ್ಲಿ ಕಂಡು ಬಂದಿದೆ. ಈ ಸಂದರ್ಭ ಏಕೆ ಎದುರಾಯಿತು ? ಇದರಲ್ಲಿ ಯಾರ ದೋಷವಿದೆ ? ಕೊರೊನಾದಿಂದ ಮರಣಿಸಿದವರ ಅಂತಿಮ ಪ್ರವಾಸ ಶಾಂತವಾಗಿ ಆಗಬೇಕು ಎಂದು ಸರಕಾರದ ಒಂದೇ ಒಂದು ಗುಂಪು ಪ್ರಯತ್ನಿಸುತ್ತಿಲ್ಲ. ಸರಕಾರದಲ್ಲಿ ಸಂವೇದನೆಶೀಲತೆ ಮತ್ತು ಮನುಷ್ಯತ್ವವಿದ್ದರೆ, ಆಂಬುಲೆನ್ಸ ಚಾಲಕರಿಂದ ಆಗುತ್ತಿರುವ ಹಣದ ಸುಲಿಗೆ, ಸ್ಮಶಾನ ಭೂಮಿಯಲ್ಲಿ ಆಡಳಿತದ ನಿಯೋಜನೆಯ ಕೊರತೆ ಮರಣಿಸಿದವರ ಅಂತ್ಯಸಂಸ್ಕಾರದಲ್ಲಿ ಆಗುತ್ತಿರುವ ತೊಂದರೆ ಇತ್ಯಾದಿ ಕೆಟ್ಟ ಪ್ರಕಾರಗಳು ನಿಲ್ಲುತ್ತಿತ್ತು. ಸಮಾಜದಲ್ಲಿಯೂ ಸಂವೇದನಾಶೀಲತೆಯಿಲ್ಲದೇ ಇರುವುದರಿಂದ ಈ ವಿಷಯದಲ್ಲಿ ದೊಡ್ಡದಾಗಿ ಧ್ವನಿಯೆತ್ತಿ ವ್ಯವಸ್ಥೆಯನ್ನು ಸುಧಾರಿಸಲು ಬೆಂಬತ್ತುವಿಕೆ ಆಗಲಿಲ್ಲ. ಮುಂದಿನ ಕಾಲ ಇದಕ್ಕಿಂತ ತೀವ್ರ ಕಠಿಣ ಇರಲಿದೆ. ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ ?