ಕೊರೋನಾ ವಿಷಾಣು ಜಗತ್ತಿನ ಬಹುತೇಕ ದೇಶಗಳಲ್ಲಿ ಮತ್ತೊಮ್ಮೆ ರಣತಾಂಡವವಾಡುತ್ತಿದೆ. ಸದ್ಯ ಕೊರೋನಾದ ಎರಡನೇಯ ಅಲೆಯು ಭಾರತದಲ್ಲಿ ರಣತಾಂಡವವಾಡಲು ಪ್ರಾರಂಭಿಸಿದೆ. ಈ ಸಾಂಕ್ರಾಮಿಕ ಪಿಡುಗು ಭಾರತದ ಎಲ್ಲೆಡೆ ಹರಡುತ್ತಿರುವ ವೇಗವನ್ನು ನೋಡಿದರೆ, ಮುಂದಿನ ೨ ತಿಂಗಳಲ್ಲಿ ಭಾರತವು ಅಮೇರಿಕಾವನ್ನು ಹಿಂದಿಕ್ಕುವ ಸಾಧ್ಯತೆಯಿದೆ. ಸರಕಾರಿ ಅಂಕಿ-ಅಂಶಗಳಿಗನುಸಾರ ಭಾರತದಲ್ಲಿ ಇಲ್ಲಿಯವರೆಗೆ ೧ ಕೋಟಿ ೬೨ ಲಕ್ಷಕ್ಕಿಂತ ಅಧಿಕ ನಾಗರಿಕರು ಕೊರೋನಾ ಪೀಡಿತರಾಗಿದ್ದಾರೆ. ಅಮೇರಿಕಾಗೆ ಹೋಲಿಸಿದರೆ ಅಮೇರಿಕಾದಲ್ಲಿ ೧೦೦ ರಲ್ಲಿ ೧೦ ಜನರಿಗೆ ಕೊರೋನಾ ತಗಲಿದ್ದರೆ, ೧೦೦ ಭಾರತೀಯ ನಾಗರಿಕರಲ್ಲಿ ಒಬ್ಬರಂತೆ ಈ ಪ್ರಮಾಣವಿದೆ. ಭಾರತದಲ್ಲಿರುವ ಆರೋಗ್ಯ ಸೌಲಭ್ಯಗಳ ಕ್ಷಮತೆ ಮತ್ತು ಸ್ತರವನ್ನು ನೋಡಿದರೆ ಬಹಳಷ್ಟು ‘ಕೊರೋನಾ ಪಾಸಿಟಿವ್ ಕೇಸ್ ಬಯಲಿಗೆ ಬರುತ್ತಿಲ್ಲವೆಂದು ಹೇಳಿದರೆ ತಪ್ಪಾಗಲಾರದು. ಭಾರತವು ಜಗತ್ತಿಗೆ ಕೊರೋನಾ ಲಸಿಕೆ ಪೂರೈಸುವುದರಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿದೆ. ಆದರೆ ಈಗ ಅಭಿಮಾನ ಪಡುವ ಸಮಯವಲ್ಲ, ಭಾರತದ ಭೌಗೋಳಿಕ, ಆರ್ಥಿಕ ಸಾಮಾಜಿಕ ಅಲ್ಲದೇ ಆರೋಗ್ಯ ಸೌಲಭ್ಯಗಳನ್ನು ಪೂರೈಸುವ ಕ್ಷಮತೆಯನ್ನು ಗಮನಿಸಿದರೆ, ಭಾರತೀಯರ ಜೀವವನ್ನು ಕಸಿಯುತ್ತಿರುವ ಈ ಮಹಾಭಯಾನಕ ಸಾಂಕ್ರಾಮಿಕ ಪಿಡುಗನ್ನು ವಿವಿಧ ಹಂತಗಳಲ್ಲಿ ಸಮರೋಪಾದಿಯಲ್ಲಿ ನಿಯಂತ್ರಿಸಲು ಪ್ರಯತ್ನಿಸುವ ಅವಶ್ಯಕತೆಯಿದೆ.
ಬಿಹಾರದ ರಾಜಧಾನಿ ಪಾಟಲಿಪುತ್ರದ ೬ ಆಸ್ಪತ್ರೆಗಳ ಪರಿಸ್ಥಿತಿಯು ಅಂಕಿಅಂಶಗಳಿಗಿಂತ ಭಯಾನಕವಾಗಿದೆ. ಅಲ್ಲಿಯ ಸುಮಾರು ೭೫೦ ಕ್ಕಿಂತ ಅಧಿಕ ಆಧುನಿಕ ವೈದ್ಯರು ಮತ್ತು ದಾದಿಯರು ಕೊರೋನಾ ಪೀಡಿತರಾಗಿದ್ದಾರೆ. ಈ ಅಂಕಿ-ಅಂಶಗಳಲ್ಲಿ ಏಮ್ಸ್ ಆಸ್ಪತ್ರೆಯ ೩೮೪ ರಷ್ಟು ವೈದ್ಯರು ಪೀಡಿತರಾಗಿದ್ದಾರೆ. ಕೆಲವು ಆಧುನಿಕ ವೈದ್ಯರು ‘ಸೋಶಿಯಲ್ ಮೀಡಿಯಾ ಮಾಧ್ಯಮದಿಂದ ಜನತೆಗೆ ‘ಅನಾವಶ್ಯಕವಾಗಿ ಹೊರಗೆ ಬರಬಾರದೆಂದು ಕರೆ ನೀಡುತ್ತಿದ್ದಾರೆ ಅವರು ‘ಈ ಮೊದಲು ನಾವು ಯಾವತ್ತೂ ಇಷ್ಟು ಅಸಹಾಯಕತೆಯನ್ನು ಅನುಭವಿಸಿಲ್ಲ ಎಂದು ಹೇಳುತ್ತಿದ್ದಾರೆ. ಈ ದುರ್ದಶೆಯಿಂದ ಮುಂಬರುವ ಕೆಲವು ವಾರಗಳಲ್ಲಿ ಭಾರತದ ಪಾಲಿಗೆ ಏನು ಕಾದಿದೆ ಎಂದು ಕೇವಲ ಸರಕಾರ, ಆಡಳಿತವಷ್ಟೇ ಅಲ್ಲ, ಜವಾಬ್ದಾರಿಯುತ ನಾಗರಿಕರಾಗಿ ನಾವೆಲ್ಲರೂ ಗಾಂಭೀರ್ಯದಿಂದ ವಿಚಾರ ಮಾಡಬೇಕಿದೆ.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷದಂತೆ ಭಾರತದಾದ್ಯಂತ ಕೊರೋನಾ ಸಾಂಕ್ರಾಮಿಕತೆಯನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೊಳಿಸಿ, ಲಸಿಕೆಯ ಉತ್ಪಾದನೆಯಲ್ಲಿ ವಿಕ್ರಮವನ್ನು ಸಾಧಿಸಿ, ದೇಶದ ನಾಗರಿಕರ ಲಸಿಕಾಕರಣದ ವೇಗವನ್ನು ಹೆಚ್ಚಿಸಬೇಕಾಗಿದೆ. ದೇಶದಲ್ಲಿ ಬಾಧಿಸುತ್ತಿರುವ ಆಕ್ಸಿಜನ್ ಕೊರತೆಯನ್ನು ತಕ್ಷಣವೇ ನಿಯಂತ್ರಿಸುವುದು ಮತ್ತು ಪ್ರಮುಖ ಔಷಧಿಗಳು ಕಾಳಸಂತೆಯಲ್ಲಿ ಮಾರಾಟವಾಗದಂತೆ ತಡೆಯಬೇಕು ಎಂದು ಸಮಾಜಕ್ಕೂ ಅನಿಸುತ್ತಿದೆ. ಹೀಗಾದರೆ ಮಾತ್ರ ಅನಾವಶ್ಯಕವಾಗಿ ಬಲಿಯಾಗುತ್ತಿರುವ ಜನತೆಯನ್ನು ರಕ್ಷಿಸಬಹುದು.