ದೇವಸ್ಥಾನಗಳಲ್ಲಿ ಮಾಡುವ ದೇವರ ವಿವಿಧ ಪೂಜಾವಿಧಿಗಳಲ್ಲಿ ‘ದರ್ಪಣ ಪೂಜಾವಿಧಿಯಲ್ಲಿ ದೇವರಿಗೆ ಕನ್ನಡಿಯನ್ನು ತೋರಿಸುತ್ತಾರೆ ಅಥವಾ ಕನ್ನಡಿಯಿಂದ ಸೂರ್ಯನ ಕಿರಣವನ್ನು ದೇವರ ಕಡೆಗೆ ಪರಿವರ್ತಿಸುತ್ತಾರೆ. ಅದಕ್ಕಾಗಿ ಕೇರಳದಲ್ಲಿ ಧಾತುವಿನಿಂದ ಮಾಡಿದ ವೈಶಿಷ್ಟ್ಯಪೂರ್ಣ ಕನ್ನಡಿಯನ್ನು ಉಪಯೋಗಿಸುವ ಪರಂಪರೆಯಿದೆ. ಈ ಕನ್ನಡಿಯು ‘ಆರನಮುಳಾ ಕಣ್ಣಾಡಿ ಎಂದು ಪ್ರಸಿದ್ಧವಿದೆ. ಈ ಕನ್ನಡಿಯು ಕೇರಳದ ಸಂಸ್ಕೃತಿಯಲ್ಲಿ ಹೇಳಿರುವ ‘ಅಷ್ಟಮಂಗಲ ವಸ್ತುಗಳಲ್ಲಿ, ಅಂದರೆ ವಿವಾಹಾದಿ ಪವಿತ್ರ ಧಾರ್ಮಿಕ ವಿಧಿಗಳಲ್ಲಿ ಉಪಯೋಗಿಸುವ ೮ ಪವಿತ್ರ ವಸ್ತುಗಳಲ್ಲಿ ಒಂದು ವಸ್ತು ಆಗಿದೆ. ಈ ಕನ್ನಡಿಯನ್ನು ಸಮೃದ್ಧಿ ಹಾಗೂ ಸೌಭಾಗ್ಯವೆಂದು ತಿಳಿಯಲಾಗುತ್ತದೆ. ಅದೇ ರೀತಿ ಅದೊಂದು ಪ್ರಾಚೀನ ಭಾರತದ ವಿಕಸಿತ ಧಾತುವಿಜ್ಞಾನದ ಒಂದು ಉತ್ತಮವಾದ ಉದಾಹರಣೆಯಾಗಿದೆ. ಈ ಕನ್ನಡಿಗಳ ನಿರ್ಮಾಣದ ಪ್ರಕ್ರಿಯೆ ಮತ್ತು ಅದರಲ್ಲಿನ ಧಾತುಗಳ ಮಿಶ್ರಣದ ಪ್ರಮಾಣವನ್ನು ಹಿಂದಿನ ಕಾಲದಿಂದ ಗುಪ್ತವಾಗಿ ಇಡಲಾಗಿದೆ.
ಈ ಕನ್ನಡಿಯ ವಿಷಯದಲ್ಲಿ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ೨೧.೩.೨೦೧೯ ರಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಈ ಕನ್ನಡಿಯನ್ನು ತಯಾರಿಸುವ ಸ್ಥಳಕ್ಕೆ ಅಂದರೆ ಕೇರಳದ ಪತ್ತನಮ್ತಿಟ್ಟಾ ಜಿಲ್ಲೆಯ ಆರನಮುಳಾ ಈ ಗ್ರಾಮಕ್ಕೆ ಹೋದರು. ಅಲ್ಲಿ ಅವರು ಕನ್ನಡಿಗಳನ್ನು ತಯಾರಿಸುವ ‘ಶ್ರೀಕೃಷ್ಣ ಹ್ಯಾಂಡಿಕ್ರಾಫ್ಟ್ ಸೆಂಟರ್ ಈ ಕಾರ್ಖಾನೆಗೆ ಭೇಟಿ ನೀಡಿದರು. ಅಲ್ಲಿ ಕಾರ್ಖಾನೆಯ ಮಾಲೀಕ ಶ್ರೀ. ಕೆ. ಪಿ. ಅಶೋಕನ್ ಇವರ ‘ಕನ್ನಡಿ ತಯಾರಿಸುವ ವಂಶಪಾರಂಪರ್ಯ ವ್ಯವಸಾಯವಿದೆ. ಅವರು ಇಂತಹ ಕನ್ನಡಿಗಳನ್ನು ತಯಾರಿಸುವ ಉದ್ಯಮಿಗಳ ‘ವಿಶ್ವಬ್ರಾಹ್ಮಣ ಮೆಟಲ್ ಮಿರರ್ ನಿರ್ಮಾಣ ಸೋಸೈಟಿ ಈ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದಾರೆ. ಅವರು ಈ ವೈಶಿಷ್ಟ್ಯಪೂರ್ಣ ಕನ್ನಡಿಯನ್ನು ತಯಾರಿಸುವ ಸಂಪೂರ್ಣ ಪ್ರಕ್ರಿಯೆಯ ವಿಷಯದಲ್ಲಿ ಮಹತ್ವದ ಹಾಗೂ ಉಪಯುಕ್ತ ಮಾಹಿತಿಯನ್ನು ನೀಡಿದರು.
೧. ‘ಆರನಮುಳಾ ಕಣ್ಣಾಡಿ ಎಂದರೇನು ?
‘ಆರನಮುಳಾ ಎಂಬುದು ಒಂದು ಗ್ರಾಮದ ಹೆಸರು, ಕನ್ನಡಿಗೆ ಮಲಯಾಳಮ್ ಭಾಷೆಯಲ್ಲಿ ‘ಕಣ್ಣಾಡಿ, ಎಂದು ಹೇಳುತ್ತಾರೆ. ಆದ್ದರಿಂದ ‘ಆರನಮುಳಾ ಎಂಬ ಗ್ರಾಮದಲ್ಲಿ ತಯಾರಿಸುವ ಧಾತುವಿನ ಕನ್ನಡಿಗೆ ‘ಆರನಮುಳಾ ಕಣ್ಣಾಡಿ ಎಂದು ಹೆಸರು ಬಂತು. ಕೇರಳದ ಪತ್ತನಮ್ತಿಟ್ಟಾ ಜಿಲ್ಲೆಯಲ್ಲಿ ‘ಪಂಬಾ ನದಿಯ ತೀರದಲ್ಲಿ ‘ಆರನಮುಳಾ ಈ ಗ್ರಾಮ ಇದೆ. ಅಲ್ಲಿನ ಪಾರ್ಥಸಾರಥಿ ಮಂದಿರವು ಸುಪ್ರಸಿದ್ಧವಾಗಿದೆ. ಈ ದೇವಸ್ಥಾನದ ಪರಿಸರದಲ್ಲಿರುವ ಅನೇಕ ಅಂಗಡಿಗಳಲ್ಲಿ ‘ಈ ವೈಶಿಷ್ಟ್ಯಪೂರ್ಣ ಕನ್ನಡಿಗಳು ಸಿಗುತ್ತವೆ. ಈ ಕನ್ನಡಿಗಳ ಪ್ರತಿಬಿಂಬದರ್ಶಕ ಭಾಗವನ್ನು ತಾಮ್ರ ಮತ್ತು ತವರ ಈ ಧಾತುವಿನ ವಿಶಿಷ್ಟ ಪ್ರಮಾಣದ ಮಿಶ್ರಣಕ್ಕೆ ವಿಶಿಷ್ಟ ಪ್ರಕ್ರಿಯೆಯನ್ನು ಮಾಡಿ ತಯಾರಿಸಲಾಗಿರುತ್ತದೆ, ಈ ಕನ್ನಡಿಯ ಚೌಕಟ್ಟು ಹಿತ್ತಾಳೆಯದ್ದಾಗಿರುತ್ತದೆ. ಈ ಕನ್ನಡಿಗಳ ವೈಶಿಷ್ಟ್ಯವೆಂದರೆ, ಯಾವುದೇ ವಸ್ತುವನ್ನು ಕನ್ನಡಿಗೆ ತಾಗಿಸಿ ಇಟ್ಟರೆ, ಆ ವಸ್ತು ಮತ್ತು ಕನ್ನಡಿಯಲ್ಲಿ ಕಾಣುವ ಆ ವಸ್ತುವಿನ ಪ್ರತಿಬಿಂಬವು ಒಂದೇ ಸಮಾನವಾಗಿರುತ್ತದೆ (ಅವುಗಳಲ್ಲಿ ಅಂತರವಿರುವುದಿಲ್ಲ). ಅದರ ಕಾರಣವೆಂದರೆ, ಈ ಕನ್ನಡಿಯಲ್ಲಿ ವಸ್ತುವಿನ ಪ್ರತಿಬಿಂಬವು ಕನ್ನಡಿಯ ಪೃಷ್ಟ ಭಾಗದಲ್ಲಿ ಕಾಣಿಸುತ್ತದೆ. ಸಾಮಾನ್ಯ ಕನ್ನಡಿಗಳಲ್ಲಿ ಯಾವುದೇ ಗಾಜಿನ ಹಿಂಭಾಗಕ್ಕೆ ಪ್ರತಿಫಲಿಸುವ ರಾಸಾಯನಿಕ ವಸ್ತುವಿನ ಲೇಪನವನ್ನು ಹಚ್ಚಲಾಗಿರುತ್ತದೆ. ಆ ರಾಸಾಯನಿಕ ಲೇಪನದಲ್ಲಿ ವಸ್ತುವಿನ ಪ್ರತಿಬಿಂಬ ಕಾಣುತ್ತದೆ. ಆದ್ದರಿಂದ ಇಂತಹ ಕನ್ನಡಿಗೆ ಯಾವುದೇ ವಸ್ತುವನ್ನು ತಾಗಿಸಿ ಇಟ್ಟರೆ, ಆ ವಸ್ತು ಮತ್ತು ಅದರ ಪ್ರತಿಬಿಂಬದಲ್ಲಿ ಕನ್ನಡಿಯ ಗಾಜಿನ ದಪ್ಪದಷ್ಟು ಅಂತರ ಇರುತ್ತದೆ. ಪ್ರತಿಬಿಂಬ ಕಾಣಿಸುವುದರಲ್ಲಿನ ಈ ಕೊರತೆಯು ‘ಆರನಮುಳಾ ಕಣ್ಣಾಡಿಯಲ್ಲಿ ಇರುವುದಿಲ್ಲ. ಇದು ಈ ಕನ್ನಡಿಯ ಒಂದು ಅತ್ಯಂತ ಮಹತ್ವದ ವೈಶಿಷ್ಟ್ಯವಾಗಿದೆ. (ಛಾಯಾಚಿತ್ರ ಕ್ರ. ೩ ನೋಡಿ)
೨. ‘ಆರನಮುಳಾ ಕಣ್ಣಾಡಿ ಕನ್ನಡಿಯ ಇತಿಹಾಸ
ದೇವರಿಗೆ ಉತ್ತಮೋತ್ತಮ ವಸ್ತುಗಳನ್ನು ಉಪಯೋಗಿಸುವುದು ಹಿಂದೂಗಳ ಪರಂಪರೆಯಾಗಿದೆ. ‘ದೇವರ ಪೂಜಾವಿಧಿಯ ‘ದರ್ಪಣ ಪೂಜಾವಿಧಿಯಲ್ಲಿ ಉಪಯೋಗಿಸುವ ಕನ್ನಡಿ ಕೂಡ ಉತ್ತಮವಾಗಿರಬೇಕು, ಎಂಬುದು ಭಕ್ತರ ತಳಮಳ ಮತ್ತು ದೇವತೆಯು ಮಾಡುವ ಕೃಪೆಯಿಂದ ‘ಆರನಮುಳಾ ಕಣ್ಣಾಡಿ ಈ ಕನ್ನಡಿಯ ನಿರ್ಮಾಣವಾಗಿದೆ. ಈ ಕನ್ನಡಿಗಳನ್ನು ತಯಾರಿಸುವ ವ್ಯವಸಾಯ ಮಾಡುವ ಶ್ರೀ. ಕೆ. ಪಿ. ಅಶೋಕನ್ ಇವರು ಈ ಕನ್ನಡಿಗಳ ನಿರ್ಮಾಣದ ಇತಿಹಾಸವನ್ನು ಈ ಮುಂದಿನಂತೆ ವಿವರಿಸಿದರು.
ಅವರ ಪೂರ್ವಜರು ‘ಪಾರ್ಥಸಾರಥಿ ಈ ಶ್ರೀಕೃಷ್ಣನ ದೇವಸ್ಥಾನದ ಕೆಲಸಕ್ಕಾಗಿ ತಮ್ಮ ಮೂಲ ಗ್ರಾಮವನ್ನು ತೊರೆದು ಆರನಮುಳಾ ಈ ಗ್ರಾಮಕ್ಕೆ ಬಂದು ನೆಲೆಸಿದರು. ಅವರ ಪೂರ್ವಜರಲ್ಲಿ ಒಬ್ಬರಿಗೆ ಕನಸಿನಲ್ಲಿ ಧಾತುವಿನ ಕನ್ನಡಿ ತಯಾರಿಸುವ ಜ್ಞಾನ ಪ್ರಾಪ್ತಿಯಾಯಿತು. ಅದಕ್ಕನುಸಾರ ಪ್ರಯತ್ನಿಸಿ ಅವರು ಕನ್ನಡಿಯನ್ನು ತಯಾರಿಸಿದರು ಹಾಗೂ ಅಂದಿನಿಂದ ಧಾತುವಿನ ಕನ್ನಡಿಯನ್ನು ತಯಾರಿಸಲು ಆರಂಭಿಸಲಾಯಿತು. ಇಂದು ಈ ಕನ್ನಡಿಯು ವಿವಿಧ ಆಕಾರಗಳಲ್ಲಿ ಉಪಲಬ್ಧವಿದ್ದರೂ, ಅವುಗಳ ಶಂಖ, ಪದ್ಮ ಇತ್ಯಾದಿ ಹಲವಾರು ಪರಂಪರಾಗತ ಆಕಾರ ಮತ್ತು ಅವುಗಳ ಉದ್ದ-ಅಗಲಗಳ ಪ್ರಮಾಣವನ್ನು ನಿರ್ಧರಿಸಲಾಗಿದೆ.
೩. ಆರನಮುಳಾ ಕಣ್ಣಾಡಿ (ಧಾತುವಿನ ಕನ್ನಡಿ) ತಯಾರಿಸುವ ಪ್ರಕ್ರಿಯೆ
ಆರನಮುಳಾ ಕಣ್ಣಾಡಿಯನ್ನು ತಯಾರಿಸುವ ಪ್ರಕ್ರಿಯೆಯು ಈ ಮುಂದಿನಂತಿದೆ.
೩ ಅ. ರೇಖಾಚಿತ್ರ ಬಿಡಿಸುವುದು
ಆರನಮುಳಾ ಕಣ್ಣಾಡಿಯಲ್ಲಿ ಪ್ರತಿಬಿಂಬ ಕಾಣಿಸುವ ಧಾತುವಿನ ಭಾಗ (ಕನ್ನಡಿ) ಮತ್ತು ಈ ಕನ್ನಡಿಯನ್ನು ಅಳವಡಿಸುವ ಹಿತ್ತಾಳೆಯ ಚೌಕಟ್ಟು, ಹೀಗೆ ಎರಡು ಭಾಗಗಳಿರುತ್ತವೆ. ಇವೆರಡೂ ಭಾಗಗಳ ರೇಖಾಚಿತ್ರಗಳನ್ನು ಕಾಗದದಲ್ಲಿ ಬಿಡಿಸಲಾಗುತ್ತದೆ.
೩ ಆ. ರೇಖಾಚಿತ್ರಕ್ಕನುಸಾರ ಅಚ್ಚನ್ನು ಮಾಡುವುದು
ಕಾಗದದಲ್ಲಿ ಬಿಡಿಸಿದ ರೇಖಾಚಿತ್ರಕ್ಕನುಸಾರ ಕನ್ನಡಿಯನ್ನು ತಯಾರಿಸಲು ಆವೆಮಣ್ಣು, ಹಸುವಿನ ಸೆಗಣಿ, ಮರದ ಹುಡಿ, ಕತ್ತ, ಹತ್ತಿಯ ಬಟ್ಟೆ ಇತ್ಯಾದಿಗಳಿಂದ ಅಚ್ಚನ್ನು ತಯಾರಿಸಲಾಗುತ್ತದೆ. (ಛಾಯಾಚಿತ್ರ ಕ್ರ. ೧)
೩ ಇ. ಅಚ್ಚಿನಲ್ಲಿ ಧಾತುವಿನ ಕರಗಿಸಿದ ಮಿಶ್ರಣವನ್ನು ಸುರಿದು ಕನ್ನಡಿ ಮತ್ತು ಅದರ ಚೌಕಟ್ಟನ್ನು ತಯಾರಿಸುವುದು
ಕನ್ನಡಿಯ ಪ್ರತಿಬಿಂಬ ಕಾಣುವ ಭಾಗವನ್ನು ತಯಾರಿಸಲು ಅಚ್ಚಿನಲ್ಲಿ ಯೋಗ್ಯವಾದ ಪ್ರಮಾಣದಲ್ಲಿ ಆಯ್ದುಕೊಂಡಿರುವ ತಾಮ್ರ ಮತ್ತು ತವರವನ್ನು ಕರಗಿಸಿ ತಯಾರಿಸಿದ ಮಿಶ್ರಣವನ್ನು ಸುರಿಯಲಾಗುತ್ತದೆ. ಹಾಗೂ ಕನ್ನಡಿಯ ಚೌಕಟ್ಟಿಗಾಗಿ ಅಚ್ಚಿನಲ್ಲಿ ಕರಗಿಸಿದ ಹಿತ್ತಾಳೆಯನ್ನು ಸುರಿಯಲಾಗುತ್ತದೆ. ಈ ಮಿಶ್ರಣವು ತಣ್ಣಗಾದ ನಂತರ ಬದಿಯ ಮಣ್ಣನ್ನು ತೆಗೆದು ಧಾತುವಿನ ಭಾಗವನ್ನು ಸ್ವಚ್ಛ ಮಾಡಲಾಗುತ್ತದೆ. ( ಛಾಯಾಚಿತ್ರ ಕ್ರ. ೨)
೩ ಈ. ಪ್ರಾಥಮಿಕ ಸ್ವರೂಪದ ಕನ್ನಡಿ ಮತ್ತು ಚೌಕಟ್ಟನ್ನು ಶ್ರಮಪಟ್ಟು ಪೂರ್ಣಗೊಳಿಸಲಾಗುತ್ತದೆ
ಪ್ರಾಥಮಿಕ ಸ್ವರೂಪದ ಕನ್ನಡಿಯನ್ನು ‘ಪಾಲೀಶ ಪೇಪರ್ನಿಂದ ಸತತ ತಿಕ್ಕುತ್ತಾ ಅದರಿಂದ ಪ್ರತಿಬಿಂಬ ಸ್ಪಷ್ಟವಾಗಿ ಕಾಣಿಸುವಂತೆ ಕನ್ನಡಿಯನ್ನು ತಯಾರಿಸಲಾಗುತ್ತದೆ. ಇದನ್ನು ತುಂಬಾ ಶ್ರಮಪಟ್ಟು ಮಾಡಬೇಕಾಗುತ್ತದೆ.
೩ ಉ. ಧಾತುವಿನ ಕನ್ನಡಿಯನ್ನು ಹಿತ್ತಾಳೆಯ ಚೌಕಟ್ಟಿನಲ್ಲಿ ಅಳವಡಿಸುವುದು
ಧಾತುವಿನಿಂದ ತಯಾರಿಸಿದ ಗೋಲ ಅಥವಾ ಲಂಬಗೋಲ ಆಕಾರದ ಕನ್ನಡಿಯನ್ನು ಅರಗು, ಮೇಣ ಇತ್ಯಾದಿಗಳ ಸಹಾಯದಿಂದ ಚೌಕಟ್ಟಿನಲ್ಲಿ ಅಳವಡಿಸಲಾಗುತ್ತದೆ. ಈ ರೀತಿಯಲ್ಲಿ ‘ಆರನಮುಳಾ ಕಣ್ಣಾಡಿ ಸಿದ್ಧವಾಗುತ್ತದೆ. – ಕು. ಪ್ರಿಯಾಂಕಾ ವಿಜಯ ಲೋಟಲೀಕರ್ ಮತ್ತು ರೂಪೇಶ ಲಕ್ಷ್ಮಣ ರೇಡ್‌ಕರ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೯.೧೦.೨೦೧೯)