ಧರ್ಮದ ರಕ್ಷಣೆಯ ಕಾರ್ಯದಲ್ಲಿ ಭಿನ್ನಾಭಿಪ್ರಾಯಗಳನ್ನು ಮರೆತು ಹಿಂದೂಗಳು ಸಂಘಟಿತರಾದರೆ ಹಿಂದೂ ರಾಷ್ಟ್ರದ ಸ್ಥಾಪನೆ ದೂರವಿಲ್ಲ ! – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗುವ ವಿಶೇಷ ಆದ್ಯತೆಗಳು ಮತ್ತು ರಿಯಾಯಿತಿಗಳಿಂದಾಗಿ ವಿವಿಧ ರೀತಿಯ ‘ಜಿಹಾದ್ಗಳು ತಲೆ ಎತ್ತುತ್ತಿವೆ. ಹಿಂದೂಗಳನ್ನು ತಮ್ಮ ಮೇಲಿನ ದಬ್ಬಾಳಿಕೆಯ ಇತಿಹಾಸವನ್ನು ಮರೆಯುವಂತೆ ಮಾಡಿ ಅಸಹಿಷ್ಣುಗಳೆಂದು ಬಿಂಬಿಸಲಾಗುತ್ತಿದೆ. ಆದರೆ ಈ ಅಪಪ್ರಚಾರವನ್ನು ಮರೆಯದೆ ನಿಜವಾದ ಇತಿಹಾಸವನ್ನು ಕಲಿಸುವಂತೆ ಸರಕಾರವನ್ನು ಒತ್ತಾಯಿಸಬೇಕು. ಇಂದು ‘ಹಲಾಲ್ ಸರ್ಟಿಫಿಕೇಟ್ ಎಂಬ ಹೊಸ ಸಮಾನಾಂತರ ಆರ್ಥಿಕತೆಯನ್ನು ರಚಿಸಲಾಗಿದೆ ಮತ್ತು ಅದರಿಂದ ಬರುವ ಹಣವನ್ನು ಭಾರತದಲ್ಲಿ ಅಪರಾಧಗಳಿಗೆ ಬಳಸಲಾಗುತ್ತಿದೆ. ಅದಕ್ಕಾಗಿ ‘ಹಲಾಲ್ ಮುದ್ರೆ ಇರುವ ಉತ್ಪನ್ನಗಳನ್ನು ಖರೀದಿಸಬೇಡಿ. ಧರ್ಮರಕ್ಷಣೆಯ ಕಾರ್ಯದಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು, ಸಂಘಟಿತಶಕ್ತಿ ತೋರಿಸಿದರೆ ಹಿಂದೂ ರಾಷ್ಟ್ರದ ಸ್ಥಾಪನೆ ದೂರವಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಯವರು ಹೇಳಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಆನ್‌ಲೈನ್ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಸಭೆಯು ಶಂಖನಾದದಿಂದ ಪ್ರಾರಂಭವಾಯಿತು. ಅನಂತರ ಸನಾತನ ಸಂಸ್ಥೆಯ ಸದ್ಗುರು ನಂದಕುಮಾರ ಜಾಧವ್ ಇವರು ದೀಪಪ್ರಜ್ವಲನೆ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ, ವೇದಮಂತ್ರವನ್ನು ಪಠಿಸಲಾಯಿತು. ನಂತರ ಮುಖ್ಯ ವಕ್ತಾರರ ಭಾಷಣಗಳಾದವು. ಈ ಸಭೆಯನ್ನು ‘ಯೂಟ್ಯೂಬ್ ಲೈವ್ ಮತ್ತು ‘ಫೇಸ್‌ಬುಕ್ನಲ್ಲಿ ೭೮ ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದರು. ಸಭೆಯಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಅವರು, ಹಿಂದೂ ಧರ್ಮವು ಯಾವುದೇ ಧರ್ಮವನ್ನು ಕೀಳಾಗಿ ಕಂಡಿಲ್ಲ. ದೇವರು ಒಬ್ಬನೇ; ಆದರೆ ಅವನ ಸ್ವರೂಪ ಬೇರೆಬೇರೆಯಾಗಿದೆ ಎಂದು ಹಿಂದೂ ಧರ್ಮವು ಕಲಿಸುತ್ತದೆ. ಅನೇಕ ವಿದೇಶಿಯರು ಭಾರತದ ಮೇಲೆ ದಾಳಿ ನಡೆಸಿ ಹಿಂದೂಗಳ ಮೇಲೆ ಅನೇಕ ದೌರ್ಜನ್ಯಗಳನ್ನು ನಡೆಸಿದರು, ಆಸ್ತಿಯನ್ನು ಲೂಟಿ ಮಾಡಿದರು, ದೇವಾಲಯಗಳನ್ನು ಧ್ವಂಸಗೊಳಿಸಿದರು, ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸಿದರು, ಏಕೆಂದರೆ ಹಿಂದೂ ಸಮಾಜವು ಸಂಘಟಿತವಾಗಿಲ್ಲ. ಅಂತಹ ಪರಿಸ್ಥಿತಿ ಪುನಃ ಸಂಭವಿಸದಂತೆ ಹಿಂದೂಗಳು ತಮ್ಮಲ್ಲಿ ಧರ್ಮತೇಜವನ್ನು ಸೃಷ್ಟಿಸುವ ಮೂಲಕ ದೇವರು, ದೇಶ ಮತ್ತು ಧರ್ಮವನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾರ್ಗದರ್ಶನ ಮಾಡಿದ ಸನಾತನ ಸಂಸ್ಥೆಯ ಸದ್ಗುರು ನಂದಕುಮಾರ್ ಜಾಧವ್ ಇವರು, “ಇಂದು ದೇಶ ಮತ್ತು ಧರ್ಮಗಳ ವಿಷಯದಲ್ಲಿ ಪರಿವರ್ತನೆಯ ಪರ್ವ ನಡೆಯುತ್ತಿದೆ. ಕೊರೋನಾ ಮಹಾಮಾರಿಯು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಎಷ್ಟು ಅವೈಜ್ಞಾನಿಕವಾಗಿದೆ ಎಂಬುದನ್ನು ತೋರಿಸಿತು ಮತ್ತು ಇಡೀ ಜಗತ್ತು ಕೈಜೋಡಿಸಿ ನಮಸ್ಕರಿಸುವುದನ್ನು ಕಲಿಯಿತು. ಋಷಿಮುನಿಗಳು ಹೇಳಿದ ಮತ್ತು ಧರ್ಮಗ್ರಂಥಗಳಲ್ಲಿ ಇರುವ ಧರ್ಮಾಚರಣೆಯು ಹಿಂದುಳಿದಿಲ್ಲ. ಅದರಲ್ಲಿ ಪ್ರತಿಯೊಂದು ಕೃತಿಯ ಹಿಂದಿನ ವೈಜ್ಞಾನಿಕ ಕಾರಣವಿದೆ. ಆದ್ದರಿಂದ ಹಿಂದೂ ಸಂಸ್ಕೃತಿಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಿ ಮತ್ತು ಶ್ರದ್ಧೆಯಿಂದ ಧರ್ಮಾಚರಣೆಯನ್ನು ಮಾಡಿ. ಧರ್ಮಾಚರಣೆಯು ಆತ್ಮಬಲವನ್ನು ಬೆಳೆಸುತ್ತದೆ ಮತ್ತು ಕಠಿಣ ಪರಿಸ್ಥಿತಿಯನ್ನು ಎದುರಿಸಲು ಆಗುತ್ತದೆ, ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ್ ಮಹಾಸಂಘದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಮತ್ತು ವಕ್ತಾರ ಡಾ. ವಿಜಯ ಜಂಗಮ್ (ಸ್ವಾಮಿ) ಇವರು ಮಾತನಾಡುತ್ತಾ, ‘ಹಿಂದೂಗಳಿಗೆ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕಾಗಿರುವುದು ದುರದೃಷ್ಟಕರ. ಹಿಂದೂ ಧರ್ಮದ ಅನೇಕ ಪಂಥಗಳು ತಮ್ಮದೇ ಆದ ಧರ್ಮವನ್ನು ಸ್ಥಾಪಿಸಬೇಕೆಂದು ಒತ್ತಾಯಿಸುತ್ತಿವೆ. ಇದು ಹಿಂದೂಗಳನ್ನು ವಿಭಜಿಸುವ ಪಿತೂರಿಯಾಗಿದೆ. ಲಿಂಗಾಯತ ಸಮುದಾಯವೂ ಹಿಂದೂ ಧರ್ಮದ ಒಂದು ಭಾಗವಾಗಿದೆ ಎಂಬುದನ್ನು ಗಮನಿಸಬೇಕು. ರಾಷ್ಟ್ರದ ಪ್ರಗತಿಯಾಗಬೇಕೇ ಅಥವಾ ಬೇಡವೇ ಎಂದು ನಾವು ಹಿಂದೂಗಳು ನಿರ್ಧರಿಸುತ್ತೇವೆ. ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯ ಸ್ಥಾಪನೆಯ ಆದರ್ಶ ವನ್ನಿಟ್ಟು ಹಿಂದೂ ರಾಷ್ಟ್ರದ ಸಂಕಲ್ಪ ಮಾಡೋಣ ಎಂದರು.
ಈ ಸಭೆಯಲ್ಲಿ ಧರ್ಮವೀರರು ತೋರಿಸಿದ ಸ್ವಸಂರಕ್ಷಣೆಯ ಪ್ರಾತ್ಯಕ್ಷಿಕೆ ಮತ್ತು ಬಾಲಸಾಧಕರು ಮಾಡಿದ ಧರ್ಮಚರಣೆಯ ಮನವಿ ವಿಶೇಷ ಆಕರ್ಷಣೆಯಾಗಿದ್ದವು. ಈ ಸಮಯದಲ್ಲಿ ಧರ್ಮಶಿಕ್ಷಣದ ಬಗೆಗಿನ ಫ್ಲೆಕ್ಸ್ ಪ್ರದರ್ಶನವನ್ನು ಸಹ ತೋರಿಸಲಾಯಿತು. ಸಭೆಯ ಕೊನೆಯಲ್ಲಿ, ಹಿಂದೂ ರಾಷ್ಟ್ರ ಸ್ಥಾಪನೆಗಾಗಿ, ಹಾಗೆಯೇ ಹಿಂದೂಗಳ ವಿವಿಧ ಬೇಡಿಕೆಗಳಿಗೆ ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ‘ಆನ್‌ಲೈನ್ ಪ್ರತಿಕ್ರಿಯೆ ನೀಡುವ ಮೂಲಕ ಪ್ರೇಕ್ಷಕರು ಬೆಂಬಲಿಸಿದರು.