ಕೃಷಿ ಕಾನೂನನ್ನು ರದ್ದುಪಡಿಸಬೇಕೆಂಬ ಬೇಡಿಕೆಯೊಂದಿಗೆ ಗಣರಾಜ್ಯೋತ್ಸವ ದಿನದಂದು ರಾಜಧಾನಿ ದೆಹಲಿಯಲ್ಲಿ ರೈತರ ಮುಖವಾಡವನ್ನು ತೊಟ್ಟ ಗೂಂಡಾಗಳು ಮಾಡಿದ ಹಿಂಸೆಯನ್ನು ಇಡೀ ಜಗತ್ತು ನೋಡಿದೆ. ಇದನ್ನು ನೋಡುವಾಗ ಭಾರತದಲ್ಲಿ ಕಾನೂನು ವ್ಯವಸ್ಥೆ ಎಂಬುದು ಏನಾದರೂ ಉಳಿದಿದೆಯೇ ಎಂದು ಯಾರಿಗಾದರೂ ಪ್ರಶ್ನೆ ಮೂಡದೇ ಇರಲಾರದು ! ಆಂದೋಲನದ ಹೆಸರಿನಲ್ಲಿ ಮಾಡಿದ ಈ ಹಿಂಸಾಚಾರದಲ್ಲಿ ಒಂದೆರಡಲ್ಲ, ೩೦೦ ಕ್ಕಿಂತಲೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಇಬ್ಬರು ರೈತರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾರ್ವಜನಿಕ ಆಸ್ತಿಪಾಸ್ತಿಗೆ ಎಷ್ಟು ಹಾನಿಯಾಗಿದೆ ಎಂಬುದಕ್ಕೆ ಲೆಕ್ಕವಿಲ್ಲ. ಇದೆಲ್ಲ ಆದನಂತರ ನಿತ್ಯನಿಯಮದಂತೆ ಈಗ ಸರಕಾರವು ದಡಬಡಾಯಿಸಿ ಎಚ್ಚರವಾಗಿದ್ದು ಹಿಂಸಾಚಾರ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆರಂಭಿಸಿದೆ. ನಿಜ ಹೇಳುವುದಾದರೆ, ಈ ಟ್ರ್ಯಾಕ್ಟರ್ ಮೆರವಣಿಗೆಯಲ್ಲಿ ಹಿಂಸಾಚಾರವಾಗುವ ಸಾಧ್ಯತೆಯನ್ನು ಮೊದಲೇ ಅಂದಾಜಿಸಲಾಗಿತ್ತು. ಆದರೂ ನಮ್ಮ ಪೊಲೀಸರು ಕೈಕಟ್ಟಿ ಬಾಯಿಮುಚ್ಚಿ ಕುಳಿತುಕೊಂಡಿದ್ದರು. ಯಾವಾಗಲೂ ನಿರಪರಾಧಿಗಳಿಗೆ ಖಾಕಿಯ ದರ್ಪವನ್ನು ತೋರಿಸುವ ಪೊಲೀಸರು ಹಿಂಸಾತ್ಮಕ ಆಂದೋಲನಕಾರಿಗಳ ಮುಂದೆ ಮಾತ್ರ ಜೀವವನ್ನು ರಕ್ಷಿಸಿಕೊಳ್ಳಲು ಪಲಾಯನ ಗೈಯ್ಯುವುದು ಕಾಣಿಸುತ್ತಿತ್ತು. ಉದ್ರಿಕ್ತ ಆಂದೋಲನಕಾರರು ಪೊಲೀಸರನ್ನೇ ಗುರಿ ಮಾಡಿದರು. ಅವರು ಐಟಿಒ, ಲಾಲ್ ಕಿಸ್ಸಾ, ನಾಂಗಲೋಯೀ, ಸಿಂಧೂ, ಟಕಾರೀ ಬಾರ್ಡರ್ ಮತ್ತು ಇತರ ಸ್ಥಳಗಳಲ್ಲಿ ಹಿಂಸಾಚಾರ ಮಾಡಿದರು. ನಿಯೋಜಿತ ಮಾರ್ಗವನ್ನು ಬಿಟ್ಟು ದೆಹಲಿಗೆ ನುಗ್ಗಿದ ಆಂದೋಲನಕಾರರು ಮತ್ತು ಪೊಲೀಸರ ನಡುವೆ ವಿವಿಧ ಸ್ಥಳಗಳಲ್ಲಿ ಘರ್ಷಣೆ ಯಾಯಿತು. ಈ ಸಂದರ್ಭದಲ್ಲಿ ಕೆಲವು ಆಂದೋಲನಕಾರರು ಪೊಲೀಸರ ಮೇಲೆ ಖಡ್ಗಗಳನ್ನು ಬೀಸಿದರು. ಪೊಲೀಸರ ಬಂದೂಕನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಯಿತು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಇಷ್ಟು ಮಾತ್ರವಲ್ಲ, ಬಸ್ ಮತ್ತು ಪೊಲೀಸರ ವಾಹನಗಳನ್ನು ಧ್ವಂಸ ಮಾಡಿ ಅವುಗಳನ್ನು ಅಡಿಮೇಲು ಮಾಡಲಾಯಿತು. ಎಲ್ಲಕ್ಕಿಂತ ಗಂಭೀರವಾದ ವಿಷಯವೆಂದರೆ, ಕೆಲವೊಂದು ಕಡೆ ಆಂದೋಲನ ಕಾರರು ಪೊಲೀಸರ ಮೇಲೆಯೇ ಟ್ರ್ಯಾಕ್ಟರ್ ಓಡಿಸಲು ಪ್ರಯತ್ನಿಸಿದರು. ಆಂದೋಲನಕಾರರು ಖಡ್ಗ ಹಿಡಿದು ಪೊಲೀಸರನ್ನು ಓಡಿಸಿಕೊಂಡು ಹೋಗುತ್ತಿದ್ದರು. ಅವರು ಕೆಂಪು ಕೋಟೆಯನ್ನು ಪ್ರವೇಶಿಸಿ ಅಲ್ಲಿದ್ದ ಕಂಬದ ಮೇಲೆ ಕಾಲ್ಸಾ ಪಂಥದ ಧ್ವಜವನ್ನು ಹಾರಿಸಿದರು. ಈ ಹಿಂಸಾಚಾರದ ಹಿನ್ನೆಲೆಯಲ್ಲಿ ದೆಹಲಿಯ ಮೆಟ್ರೋದ ೩೭ ನಿಲ್ದಾಣಗಳನ್ನು ಬಂದ್ ಮಾಡಬೇಕಾಯಿತು. ಇದರೊಂದಿಗೆ ಅನೇಕ ಸ್ಥಳಗಳಲ್ಲಿ ಇಂಟರ್‌ನೆಟ್ ಸೇವೆ ಕೂಡ ಸ್ಥಗಿತಗೊಳಿಸಲಾಗಿತ್ತು. ಜನಜೀವನದ ಮೇಲೆ ಇದರ ಪರಿಣಾಮವಾಯಿತು. ಇದೆಲ್ಲವನ್ನೂ ನೋಡುವಾಗ ಭಾರತದಲ್ಲಿ ಕಾನೂನು ವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿದೆಯೆಂಬುದು ಸ್ಪಷ್ಟವಾಗಿ ಅರಿವಾಯಿತು. ಇಲ್ಲಿ ಈ ಆಂದೋಲನದಲ್ಲಿ ಹಿಂಸೆಯಾಗುವ ಸಾಧ್ಯತೆ ಇದ್ದರೂ ಹಾಗಾಗಬಾರದೆಂದು ಪೊಲೀಸರು ಮೊದಲೇ ಏಕೆ ಎಚ್ಚರ ವಹಿಸಲಿಲ್ಲ ? ಎಲ್ಲ ಸಾಧ್ಯತೆಗಳನ್ನು ಗಮನದಲ್ಲಿಟ್ಟು ಭದ್ರತೆಯನ್ನು ಏಕೆ ಮಾಡಲಿಲ್ಲ ? ಮತ್ತು ಇಂತಹ ಜನರಿಗೆ ಅನುಮತಿ ಹೇಗೆ ಕೊಡಲಾಯಿತು ? ಇತ್ಯಾದಿ ಪ್ರಶ್ನೆ ಮೂಡುತ್ತದೆ. ಒಂದು ವೇಳೆ ಅನುಮತಿ ಇಲ್ಲದಿರುವಾಗಲೇ ಈ ಮೆರವಣಿಗೆಯನ್ನು ತೆಗೆದಿದ್ದರೆ, ಪೊಲೀಸರು ಸಂಬಂಧಪಟ್ಟವರನ್ನು ಸೆರೆಮನೆಗೆ ತಳ್ಳುವ ಧೈರ್ಯ ಮಾಡುವರೇ ? ಒಟ್ಟಾರೆ ಈ ಆಂದೋಲನದಲ್ಲಿ ಸರಕಾರ ಮತ್ತು ಪೊಲೀಸರ ಉದಾಸೀನತೆಯಿಂದಲೇ ಆಂದೋಲನಕಾರರ ಮನೋಬಲ ಹೆಚ್ಚಾಯಿತು ಎಂದು ಯಾರಿಗಾದರೂ ಅನಿಸಿದರೆ ತಪ್ಪಾಗದು.
ಹಿಂಸಾಚಾರದ ತಪ್ಪು ಅಡಿಪಾಯ
ಇತ್ತೀಚೆಗೆ ಯಾವುದಾದರೂ ಒಂದು ವಿಷಯವನ್ನು ಎತ್ತಿಕೊಂಡು ಸಾರ್ವಜನಿಕ ಸ್ಥಳದಲ್ಲಿ ದೀರ್ಘಕಾಲ ಆಂದೋಲನ ಮಾಡಿ ಜನರಿಗೆ ಕಿರುಕುಳ ಕೊಡುವ ತಪ್ಪು ಪದ್ಧತಿಯನ್ನು ಅವಲಂಬಿಸಲಾಗುತ್ತಿದೆ. ಅದು ಶಾಹೀನಬಾಗ್ ಆಂದೋಲನದಿಂದ ಆರಂಭವಾಯಿತು. ಇದಕ್ಕೆ ಆಂದೋಲನವೆನ್ನುವ ಸುಂದರವಾದ ಹೆಸರನ್ನು ಕೊಡಲಾಗಿದೆ ನಿಜ; ಆದರೆ ಇದನ್ನು ಉಪಯೋಗಿಸಿ ಸರಕಾರದ ವಿರುದ್ಧದ ಕೋಪವನ್ನು ಹಿಂಸೆಯಿಂದ ವ್ಯಕ್ತಗೊಳಿಸ ಲಾಗುತ್ತದೆ. ಶಾಹೀನಬಾಗ್‌ನ ಸಮಯದಲ್ಲಿಯೂ ಅದೇ ಆಗಿತ್ತು ಹಾಗೂ ಈಗ ಟ್ರ್ಯಾಕ್ಟರ್ ಮೆರವಣಿಗೆಯ ಸಮಯದಲ್ಲಿ ಆಗಿರುವ ಹಿಂಸಾಚಾರವೂ ಅದೇ ರೀತಿಯದ್ದಾಗಿತ್ತು. ಇದೆಲ್ಲವನ್ನೂ ನೋಡಿ ಜನಸಾಮಾನ್ಯರ ಮನಸ್ಸಿನಲ್ಲಿ ಇಂತಹ ಜನರನ್ನು ಸರಕಾರ ಮುದ್ದು ಮಾಡುತ್ತಿರುವುದೇಕೆ ? ಅವರನ್ನು ಸೆರೆಮನೆಗೆ ತಳ್ಳುವುದಿಲ್ಲವೇಕೆ ? ಇಂತಹ ಪ್ರಶ್ನೆಗಳು ಮೂಡುತ್ತದೆ. ಜನಸಾಮಾನ್ಯರಿಗೆ ತಿಳಿಯುವ ಈ ವಿಷಯವು ಸರಕಾರಕ್ಕೆ ಇನ್ನೂ ಏಕೆ ತಿಳಿಯುವುದಿಲ್ಲ ? ಇದನ್ನು ಏನೆಂದು ತಿಳಿದುಕೊಳ್ಳಬೇಕು ? ಇಂತಹ ಆಂದೋಲನಗಳಿಗೆ ಸಂವಿಧಾನದ ಮೂಲಭೂತ ಅಧಿಕಾರವೆನ್ನಲಾಗುತ್ತದೆ. ಇದು ಇನ್ನೂ ಹಾಸ್ಯಾಸ್ಪದವಾಗಿದೆ; ಏಕೆಂದರೆ, ಅನೇಕ ತಿಂಗಳು ಜನರನ್ನು ಒತ್ತೆಯಿಟ್ಟುಕೊಂಡು ಮಾಡಿದ ಆಂದೋಲನವು ಸಂವಿಧಾನಾತ್ಮಕ ಹೇಗೆ ಆಗುವುದು ? ಆದರೂ ಇಂತಹ ಅಡಚಣೆಗಳ ಪ್ರಶ್ನೆಗಳನ್ನು ಎದುರಿಸಿ ಉತ್ತರಗಳನ್ನು ನೀಡುತ್ತಾ ಕುಳಿತುಕೊಳ್ಳುವುದಕ್ಕಿಂತ ಮೌನದಲ್ಲಿರುವವರನ್ನು ಅಥವಾ ಪ್ರಶ್ನೆಯನ್ನು ಕೇಳುವವರನ್ನೇ ದೇಶದ್ರೋಹಿ, ಪ್ರಜಾಪ್ರಭುತ್ವವಿರೋಧಿ, ಸಂವಿಧಾನವಿರೋಧಿ, ರೈತವಿರೋಧಿ, ಸಮಾಜವಿರೋಧಿ ಎಂದು ನಿರ್ಧರಿಸುವುದು, ಇದು ಸುಲಭ ಹಾಗೂ ಅನುಕೂಲಕರ ಮಾರ್ಗವಾಗಿರುತ್ತದೆ. ಇದೇ ಮಾರ್ಗವನ್ನು ಇಂತಹ ಆಂದೋಲನಕಾರರು ಮತ್ತು ಅವರ ಬೆಂಬಲಿಗರು ಯಾವಾಗಲೂ ಆರಿಸುತ್ತಿರುವುದು ಕಾಣಿಸುತ್ತದೆ.
ಈಗ ಹಿಂಸೆಯ ಹೊಣೆಯನ್ನು ಕೂಡ ಸ್ವೀಕರಿಸಿರಿ !
ದೆಹಲಿಯ ರಸ್ತೆಯಲ್ಲಿ ನಡೆದ ಸಂಘರ್ಷದ ನಂತರ ರೈತರ ಸಂಯುಕ್ತ ಮೆರವಣಿಗೆಯು ಈ ಹಿಂಸಾಚಾರದಿಂದ ದೂರ ಸರಿಯಿತು. ಹಿಂಸಾಚಾರ ಮಾಡಿರುವ ಸಮಾಜಕಂಟಕರು ನಮ್ಮ ಆಂದೋಲನದಲ್ಲಿ ನುಸುಳಿದ್ದರು, ಎಂದು ಹೇಳಿ ಕೈಕೊಡವಲು ಪ್ರಯತ್ನಿಸಿದರು. ಏಕೆಂದರೆ ಆಂದೋಲನದ ಸಮಯದಲ್ಲಿ ಹಿಂಸೆ ಯಾಗುವ ಸಾಧ್ಯತೆ ಇದ್ದರೂ ಅದನ್ನು ತಡೆಯಲು ಆಂದೋಲನದ ಮುಖಂಡರು ಜಾಗರೂಕತೆ ವಹಿಸಲಿಲ್ಲ. ಆಂದೋಲನದ ನಿಯಂತ್ರಣ ಅವರ ಕೈಯಲ್ಲಿರಲಿಲ್ಲವೇ ? ಇಲ್ಲದಿದ್ದರೆ ಈ ಮೆರವಣಿಗೆಯನ್ನು ಏಕೆ ನಡೆಸಿದರು ? ಆದ್ದರಿಂದ ಪೊಲೀಸರು ಈ ರೈತ ಸಂಘಟನೆಗಳ ಮುಖಂಡರ ವಿರುದ್ಧ ಅಪರಾಧವನ್ನು ದಾಖಲಿಸಿ ಅವರನ್ನು ಸೆರೆಮನೆಗೆ ತಳ್ಳಬೇಕು. ಇನ್ನೊಂದು ವಿಷಯವೆಂದರೆ, ದೆಹಲಿಯ ರೈತರ ಮೆರವಣಿಗೆಗೆ ಬೆಂಬಲ ನೀಡಲು ಮುಂಬಯಿಯ ಆಝಾದ್ ಮೈದಾನದಲ್ಲಿ ಜನವರಿ ೨೫ ರಂದು ಒಂದು ಮೆರವಣಿಗೆಯನ್ನು ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಬು ಆಝಮೀ ಇವರು ‘ಮೋದಿ ಸರಕಾರವು ಕಾನೂನನ್ನು ಹೇರುವ ಪ್ರಯತ್ನಿಸಿದರೆ ಈ ಪಂಜಾಬ್‌ನ ಗಾಳಿ ಅವರನ್ನು ಮುಗಿಸದೆ ಬಿಡುವುದಿಲ್ಲ. ಅರಾಜಕತೆಯನ್ನು ಸೃಷ್ಟಿಸಿ ಎಂದು ಬಹಿರಂಗವಾಗಿ ಪ್ರಚೋದನೆ ನೀಡಿದರು. ಇಲ್ಲಿ ಅರಾಜಕತೆ ಮಾಡಿ ಎಂದು ಅಬೂ ಆಝಮೀ ಹೇಳುವಾಗಲೇ ಅಲ್ಲಿ ಮರುದಿನವೇ ಆಂದೋಲನಕಾರರು ದೆಹಲಿಯನ್ನು ಒತ್ತೆಹಿಡಿದು ಅರಾಜಕತೆಯನ್ನು ಸೃಷ್ಟಿಸಿದರು ! ಇದನ್ನು ಯೋಗಾಯೋಗ ಎಂದು ಹೇಗೆ ಹೇಳಬಹುದು? ವಿಶೇಷವೆಂದರೆ ಇಂತಹ ಉದ್ರಿಕ್ತ ಹೇಳಿಕೆಯನ್ನು ನೀಡಿದ್ದರೂ ಆಝಮೀ ಇವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುವುದಿಲ್ಲ, ಎಂಬುದನ್ನು ಗಮನದಲ್ಲಿಡಬೇಕು. ಆದ್ದರಿಂದ ಎಲ್ಲ ದೃಷ್ಟಿಯಿಂದಲೂ ಈ ಹಿಂಸೆಯ ವಿಚಾರಣೆಯಾಗಬೇಕು. ಯಾರೆಲ್ಲ ಹಿಂಸೆಯನ್ನು ಪ್ರೋತ್ಸಾಹಿಸಿದರೋ, ಅವರು ಈಗ ಹಿಂಸೆಯ ಹೊಣೆಯನ್ನು ಹೊರಬೇಕು. ರಾಜಧಾನಿ ದೆಹಲಿಯ ಟ್ರ್ಯಾಕ್ಟರ್ ಮೆರವಣಿಗೆಯ ಹಿಂಸಾಚಾರದ ನಂತರ ಒಂದು ವಿಷಯ ಮಾತ್ರ ಸ್ಪಷ್ಟವಾಗಿ ಅರಿವಾಯಿತು, ಅದೆಂದರೆ ಶಾಹೀನ್‌ಬಾಗ್ ಆಂದೋಲನದಿಂದ ಪೊಲೀಸರು ಅಥವಾ ಸರಕಾರ ಏನನ್ನೂ ಕಲಿಯಲಿಲ್ಲ. ಇಂತಹ ಹಿಂಸೆಯನ್ನು ತಡೆಯಲು ಆಗದಿರುವುದು ಸರಕಾರಿ ವ್ಯವಸ್ಥೆಗೆ ಲಜ್ಜಾಸ್ಪದ, ಎಂಬುದನ್ನು ಸರಕಾರ ಈಗಲೇ ಗಮನಿಸಬೇಕು. ಪ್ರಜಾಪ್ರಭುತ್ವವೆಂಬ ನಯವಾದ ಹೆಸರಿನಲ್ಲಿ ಸಮಾಜಕಂಟಕರು ಪದೇ ಪದೇ ರಾಷ್ಟ್ರೀಯ ಭದ್ರತೆಗೆ ಸವಾಲೆಸಗುತ್ತಿದ್ದರೆ, ಅದೇ ಪ್ರಜಾಪ್ರಭುತ್ವದ ಸರಕಾರವು ಇಂತಹವರನ್ನು ಬೇರುಸಮೇತ ಕಿತ್ತೊಗೆಯಬೇಕು.