ವರ್ಧಂತ್ಯುತ್ಸವ ನಿಮಿತ್ತ ಪರಮಪೂಜ್ಯ ಶ್ರೀ ದೇವಬಾಬಾರವರ ಸಂದೇಶ

ಸನಾತನ ಧರ್ಮದ ಶಿಖರ

ಪರಮಪೂಜ್ಯ ಶ್ರೀ ದೇವಬಾಬಾ

ಸಾಕ್ಷಾತ್ ಪರಮಶಿವನು ಮಾನವ ರೂಪದಲ್ಲಿ ಕೈಲಾಸ ಪರ್ವತಕ್ಕೆ ಬಂದು ದೈವೀಕ ಶರೀರದಲ್ಲಿ ಧ್ಯಾನಾಸಕ್ತ ನಾದುದು ಸುಮಾರು ೭೫ ಸಾವಿರ ವರ್ಷಗಳ ಹಿಂದೆ ಎಂಬ ಪ್ರತೀತಿ ಯಿದೆ. ಆ ವೇಳೆಯಲ್ಲೇ ಆತನನ್ನು ದೇವಸ್ವರೂಪಿಯಾಗಿ ಕಂಡು ಪೂಜಿಸಿದವಳು ಪರ್ವತರಾಯನ ಮಗಳು ಪಾರ್ವತಿ. ಕೆಲಕಾಲದ ಆರಾಧನೆಯ ಬಳಿಕ ತನ್ನನ್ನು ವಿವಾಹವಾಗುವಂತೆ ಪರಮೇಶ್ವರನನ್ನು ಬೇಡಿಕೊಳ್ಳುತ್ತಾಳೆ. ತನಗೆ ಮನುಷ್ಯ ಸ್ವರೂಪವಿಲ್ಲ, ದೂರದಿಂದ ನೋಡಲು ಮಾತ್ರ ಈ ರೂಪ ಕಾಣುತ್ತದೆ. ಇದರಿಂದ ನಿನಗೆ ಯಾವುದೇ ಲಾಭವಿಲ್ಲ. ನೀನು ದೈವತ್ವಕ್ಕೆ ತಲುಪದೇ ನನ್ನನ್ನು ವಿವಾಹವಾಗಲು ಸಾಧ್ಯವಿಲ್ಲ ಎಂದು ತಿಳಿಸುತ್ತಾನೆ . ಮುಂದಕ್ಕೆ ಆಕೆಯ ಬೇಡಿಕೆಯಂತೆ, ಕುಂಡಲಿನಿ ಶಕ್ತಿಯ ದೀಕ್ಷೆಯನ್ನು ಇತ್ತು ನಿರಂತರ ಅಭ್ಯಾಸದ ಪಾಠವನ್ನು ತಿಳಿಸಿ ಹೇಳಿ ಆಕೆಯನ್ನು ಪಾರ್ವತಿ ದೇವಿಯನ್ನಾಗಿ ಬದಲಾಯಿಸುತ್ತಾನೆ. ಆ ವೇಳೆಯಲ್ಲಿ ಪ್ರಕೃತಿಯೊಂದಿಗೆ ಒಂದಾಗಿ, ಪ್ರೀತಿ, ಶಾಂತಿ, ಆನಂದದಿಂದ ಬದುಕುವ ವಿಧಾನವನ್ನು ಬೋಧಿಸುತ್ತಾನೆ. ಈ ಬೋಧನೆಯೇ ಸನಾತನ ಧರ್ಮದ ತಿರುಳು. ಈ ಧರ್ಮದ ಪಾಲಕರೇ ಋಷಿ ಮುನಿಗಳು. ಅವರೇ ಹಿಂದೂಗಳು. ಅಂದಿನಿಂದ ಇಂದಿನ ತನಕ ಬದಲಾಗುವ ಪ್ರಕೃತಿಯೊಂದಿಗೆ ಸಮ್ಮಿಲಿತಗೊಂಡು ದೃಢವಾಗಿ ಮುಂದುವರಿಯುತ್ತಿದೆ ಸನಾತನ ಧರ್ಮದ ಹಿಂದೂ ಪದ್ಧತಿ, ಹಿಂದೂ ಧರ್ಮದ ತಿರುಳನ್ನು ವಿಶ್ಲೇಷಣೆ ಮಾಡಿ, ಅರ್ಥವಾಗುವಂತೆ ಮುಂದಿನ ಜನಾಂಗಕ್ಕೆ ಹಲವಾರು ಕೃತಿಗಳ ರೂಪದಲ್ಲಿ ಹೊರತಂದ ಸಂಸ್ಥೆಯೇ ಸನಾತನ ಸಂಸ್ಥೆ. ಈ ಅದ್ವಿತೀಯ ಸಂಸ್ಥೆಯ ಸ್ಥಾಪಕರೇ ಮಹಾರಾಷ್ಟ್ರದ ಥಾಣೆಯ ಪರಮ ಪೂಜ್ಯ ಡಾ. ಬಾಳಾಜಿ ಅಠವಲೆಯವರು. ಅವರ ಶ್ರಮದ ದುಡಿಮೆಯು ಇಂದು ಸನಾತನ ಸಂಸ್ಥೆಯನ್ನು ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಪಸರಿಸಿ ಹೆಸರುವಾಸಿಯಾಗುವಂತೆ ಮಾಡಿದೆ.

ಕಳೆದ ೨೩ ವರ್ಷಗಳಿಂದ ಸನಾತನ ಸಂಸ್ಥೆಯ ದೈನಿಕ, ವಾರಪತ್ರಿಕೆ, ದೈಮಾಸಿಕ ಹಾಗೂ ಮಾಸಿಕ ಪತ್ರಿಕೆಗಳು ವಿಶ್ವದಾದ್ಯಂತ ಶರವೇಗದಿಂದ ಹಿಂದೂ ಧರ್ಮದ ಶಾಂತಿ ಹಾಗೂ ಪ್ರೇಮದ ವಾತಾವರಣವನ್ನು ನಿರ್ಮಿಸುತ್ತಲಿವೆ. ಈ ಸಂಸ್ಥೆಯ ಪುರೋಗತಿಗಾಗಿ ಅನವರತ ಶ್ರಮಿಸುತ್ತಿರುವ ಪರಮಪೂಜ್ಯ ಡಾ. ಜಯಂತ ಬಾಲಾಜಿ ಅಠವಲೆಯವರಿಗೆ ಹಾಗೂ ಅವರ ಅನುಯಾಯಿಗಳಿಗೆ ಭಗವಂತನು ಉತ್ತಮ ಆರೋಗ್ಯ, ನೆಮ್ಮದಿ, ಶಾಂತಿಯನ್ನು ಎಂದೆಂದಿಗೂ ಕೊಡಲೆಂದು ಓದುಗರಾದ ನಾವು ತುಂಬು ಹೃದಯದಿಂದ ಬೇಡಿಕೊಳ್ಳೋಣ.

ಪ್ರೀತಿಯ ನಮನಗಳೊಂದಿಗೆ, ಪರಮಪೂಜ್ಯ ಶ್ರೀ ದೇವಬಾಬಾ ಶ್ರೀ ಶಕ್ತಿದರ್ಶನ ಯೋಗಾಶ್ರಮ , ಕಿನ್ನಿಗೋಳಿ , ಮಂಗಳೂರು