ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಮಾರ್ಗದರ್ಶನ !

ಪರಾತ್ಪರ ಗುರು ಡಾ. ಆಠವಲೆ

೫ ಜುಲೈ ೨೦೨೦ ರಂದು ಗುರುಪೂರ್ಣಿಮೆ ಇತ್ತು. ಈ ನಿಮಿತ್ತದಿಂದ ಸಾಧಕರಿಗೆ ‘ಪರಾತ್ಪರ ಗುರು ಡಾ. ಆಠವಲೆಯವರು ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ’, ಎಂಬ ವಿಷಯದಲ್ಲಿ ಈ ಹಿಂದೆ ಪರಾತ್ಪರ ಗುರು ಡಾಕ್ಟರರ ಸಾಧಕರೊಂದಿಗಾದ ಭೇಟಿಯ ಸಮಯದಲ್ಲಿನ ಧ್ವನಿ ಚಿತ್ರಮುದ್ರಿಕೆಯನ್ನು ತೋರಿಸಲಾಯಿತು. ಆ ಸಮಯದಲ್ಲಿ ಸಾಧಕರು ಕೇಳಿದ ಪ್ರಶ್ನೆಗಳು ಮತ್ತು ಅವುಗಳಿಗೆ ಪರಾತ್ಪರ ಗುರುದೇವರು ಮಾಡಿದ ಮಾರ್ಗದರ್ಶನವನ್ನು ಇಲ್ಲಿ ಕೊಡುತ್ತಿದ್ದೇವೆ.

೧. ಸನಾತನದ ‘ಭಾವಜಾಗೃತಿಯ ವಿಧಗಳು’ ಎಂಬ ಗ್ರಂಥದಲ್ಲಿ ಹೇಳಿದಂತೆ ಹಂತಹಂತವಾಗಿ ಭಾವಜಾಗೃತಿಯ ಪ್ರಯತ್ನವನ್ನು ಮಾಡಬೇಕು !

ಸಾಧಕ : ಗುರುದೇವರೇ, ನನಗೆ ಭಾವದ ಸ್ಥಿತಿಯನ್ನು ಏಕೆ ಅನುಭವಿಸಲು ಬರುವುದಿಲ್ಲ ? ಎಂಬುದು ತಿಳಿಯುವುದಿಲ್ಲ. ನಾನು ದಿನದಲ್ಲಿ ೩-೪ ಬಾರಿ ಭಾವಜಾಗೃತಿಯ ಪ್ರಯತ್ನವನ್ನು ಮಾಡುತ್ತೇನೆ.

ಪರಾತ್ಪರ ಗುರು ಡಾ. ಆಠವಲೆ : ಗ್ರಂಥದಲ್ಲಿ ಕೊಟ್ಟಿರುವಂತೆ ಹಂತಹಂತವಾಗಿ ಪ್ರಯತ್ನಿಸಿರಿ. ಕೆಲವು ವರ್ಷಗಳ ಹಿಂದಿನ ಒಂದು ಪ್ರಸಂಗ ಹೇಳುತ್ತೇನೆ. ಸೌ. ಅಂಜಲಿ ಗಾಡಗೀಳ (ಈಗಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ರಾಮನಾಥಿ ಆಶ್ರಮದಲ್ಲಿ ಸತ್ಸಂಗವನ್ನು ತೆಗೆದುಕೊಳ್ಳುತ್ತಿದ್ದರು. ಒಮ್ಮೆ ಅವರು ಎಲ್ಲ ಸಾಧಕರಿಗೆ ‘ಮುಂದಿನ ವಾರ ಸತ್ಸಂಗದಲ್ಲಿ ‘ಭಾವಜಾಗೃತಿ’ ಎಂಬ ವಿಷಯವನ್ನು ತೆಗೆದುಕೊಳ್ಳೋಣ. ನೀವು ಆ ಗ್ರಂಥವನ್ನು ಓದಿಕೊಂಡು ಬನ್ನಿರಿ’, ಎಂದು ಹೇಳಿದರು. ಮುಂದಿನ ವಾರದ ಸತ್ಸಂಗದಲ್ಲಿ ಅವರು ಎಲ್ಲರಿಗೂ, “ಗ್ರಂಥವನ್ನು ಓದಿದ್ದೀರಾ ?,” ಎಂದು ಕೇಳಿದರು. ಎಲ್ಲರೂ ಕೈ ಮೇಲೆ ಮಾಡಿದರು; ಆದರೆ ಕು. ಮಧುರಾ ಭೋಸಲೆ (ಜ್ಞಾನಪ್ರಾಪ್ತಕರ್ತ ಸಾಧಕಿ ಕು. ಮಧುರಾ ಭೋಸಲೆ) ಇವಳು ಕೈ ಮೇಲೆ ಮಾಡಿರಲಿಲ್ಲ. ಆಗ ಸೌ. ಅಂಜಲಿ ಗಾಡಗೀಳರವರು ಅವಳಿಗೆ, ನೀನು ಗ್ರಂಥವನ್ನು ಏಕೆ ಓದಲಿಲ್ಲ ? “ನಿನ್ನ ಆರೋಗ್ಯ ಸರಿಯಿರಲಿಲ್ಲವೇ ? ನಿನಗೆ ಹೆಚ್ಚು ಸೇವೆ ಇತ್ತೇ ?” ಎಂದು ಕೇಳಿದರು. ಆಗ ಅವಳು (ಮಧುರಾ), “ನನ್ನ ಆರೋಗ್ಯ ಸರಿಯಿತ್ತು ಮತ್ತು ನನಗೆ ಹೆಚ್ಚು ಸೇವೆಯೂ ಇರಲಿಲ್ಲ; ಆದರೆ ನಾನು ಎಷ್ಟು ಓದಿದೆನೋ ಅಷ್ಟು ಆಚರಣೆಯಲ್ಲಿ (ಕೃತಿಯಲ್ಲಿ) ತರಲು ಪ್ರಯತ್ನಿಸುತ್ತಿದ್ದೆನು”, ಎಂದು ಹೇಳಿದಳು.

ಅಧ್ಯಾತ್ಮದ ಗ್ರಂಥಗಳನ್ನು  ಕಥೆಗಳ ಪುಸ್ತಕಗಳಂತೆ ಓದಿ ಬದಿಗಿಟ್ಟರೆ ಆಗುವುದಿಲ್ಲ. ಮಧುರಾ ಅದರಲ್ಲಿನ ೧೦-೧೫ ಪುಟಗಳನ್ನು ಓದಿದಳು ಮತ್ತು ಅದರಲ್ಲಿ ಹೇಳಿದಂತೆ ಅವಳು ಕೃತಿಯನ್ನು ಮಾಡುತ್ತಿದ್ದಳು. ಹಾಗೆ ಹಂತಹಂತವಾಗಿ ಪ್ರಯತ್ನವನ್ನು ಮಾಡುತ್ತಿದ್ದಳು. ಹೀಗೆ ನೀವು ಸಹ ಹಂತಹಂತವಾಗಿ ಪ್ರಯತ್ನವನ್ನು ಮಾಡುತ್ತಾ ಹೋದರೆ ಮುಂದೆ ಹೋಗುವಿರಿ ಮತ್ತು ಭಾವಜಾಗೃತವಾಗುವುದು. ಸ್ವಲ್ಪ ಸ್ವಲ್ಪ ಓದಿ ಅದರಲ್ಲಿ ಹೇಳಿದ ಹಾಗೆ ಕೃತಿಗಳನ್ನು ಮಾಡಿರಿ.

೨. ಭಗವಂತನ ನಾಮವನ್ನು ಒಂದೇ ಸಲ ಅತ್ಯಂತ ಭಾವಪೂರ್ಣವಾಗಿ ಉಚ್ಚರಿಸಿದರೆ ಮುಕ್ತಿ ಸಿಗುತ್ತದೆ; ಆದರೆ ಹಾಗೆ ಮಾಡಲು ಮೊದಲು ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯನ್ನು ಮಾಡುವುದು ಆವಶ್ಯಕವಾಗಿದೆ !

ಸಾಧಕ : ಪರಾತ್ಪರ ಗುರುದೇವರೇ, ಗುಣಾತ್ಮಕ ನಾಮಜಪ ಮತ್ತು ಸಂಖ್ಯಾತ್ಮಕ ನಾಮಜಪ ಇವುಗಳಲ್ಲಿ ಯಾವುದಕ್ಕೆ ಹೆಚ್ಚು ಮಹತ್ವವಿದೆ ?

ಪರಾತ್ಪರ ಗುರು ಡಾ. ಆಠವಲೆ : ಗುಣಾತ್ಮಕ (ಕ್ವಾಲಿಟಿ) ನಾಮಜಪಕ್ಕೆ !

ಸಾಧಕ : ನಾನು ಯಾವಾಗ ಸಂಖ್ಯಾತ್ಮಕ ನಾಮಜಪವನ್ನು ಮಾಡಲು ಪ್ರಯತ್ನಿಸುತ್ತೇನೆಯೋ, ಆಗ ಅದು ಗುಣಾತ್ಮಕವಾಗದೇ ಯಾಂತ್ರಿಕವಾಗಿ ಆಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ : ಸಂಖ್ಯಾತ್ಮಕ ನಾಮಜಪಕ್ಕೆ ಏನೂ ಅರ್ಥವಿಲ್ಲ. ಭಗವಂತನ ನಾಮವನ್ನು ಒಂದು ಸಲವಾದರೂ ಭಾವಪೂರ್ಣವಾಗಿ ಉಚ್ಚರಿಸಿದರೆ, ಮುಕ್ತಿ ಸಿಗುತ್ತದೆ; ಆದರೆ ನಮ್ಮಲ್ಲಿ ಭಾವವಿರುವುದಿಲ್ಲ. ಆದ್ದರಿಂದ ನಮಗೆ ಲಕ್ಷಗಟ್ಟಲೆ ನಾಮಜಪವನ್ನು ಮಾಡಬೇಕಾಗುತ್ತದೆ.

ಸಾಧಕ : ಮುಕ್ತಿ ಸಿಗುವ ತನಕ ಕಡಿಮೆಪಕ್ಷ ಎಷ್ಟು ನಾಮಜಪವನ್ನು ಮಾಡಬೇಕು ?

ಪರಾತ್ಪರ ಗುರು ಡಾ. ಆಠವಲೆ : ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗೆ ಮೊದಲ ಆದ್ಯತೆಯಿದೆ. ಇದು ಮೊದಲನೇ ಹಂತವಾಗಿದೆ. ಶಾಲೆಗೆ ಹೋದಾಗ ಹೇಗೆ ನಾವು ಮೊದಲು ‘ಅ, ಆ, ಇ, ಈ ….’ ಮತ್ತು ‘ಎ. ಬಿ. ಸಿ. ಡಿ…..’ ಬರೆಯಲು ಕಲಿಯುತ್ತೇವೆ ಮತ್ತು ನಂತರ ದೊಡ್ಡ ದೊಡ್ಡ ಪುಸ್ತಕಗಳನ್ನು ಓದಲು ಕಲಿಯುತ್ತೇವೆ; ಅದೇ ರೀತಿ ಮೊದಲು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯನ್ನು ಮಾಡಬೇಕು. ನಂತರ ನಾಮಜಪ ಮುಂತಾದವುಗಳನ್ನು ಮಾಡಬಹುದು.

೩. ಅದ್ವೈತಕ್ಕೆ ಹೋಗಲು ನಾಮಜಪಕ್ಕಿಂತ ‘೨೪ ಗಂಟೆ ಭಾವದ ಸ್ಥಿತಿಯಲ್ಲಿರುವುದು’, ಸಾಧನೆಯ ಮುಂದಿನ ಹಂತವಾಗಿದೆ !

ಸಾಧಕ : ಪರಾತ್ಪರ ಗುರುದೇವರೇ, ನಾಮಜಪದ ಬದಲು ನಾನು ಭಗವಂತನ ಅಥವಾ ಅವನ ಲೀಲೆಗಳ ಸ್ಮರಣೆಯನ್ನು ಮಾಡಿದರೆ, ಅದರಲ್ಲಿ ನನ್ನ ಸಮಯ ವ್ಯರ್ಥವಾಗುತ್ತದೆಯೇ ? ನಾಮಜಪ ಮತ್ತು ಸ್ಮರಣೆ ಎರಡೂ ಒಂದೇ ಹಂತದ್ದಾಗಿವೆಯೇ ಅಥವಾ ಇಲ್ಲ ?

ಪರಾತ್ಪರ ಗುರು ಡಾ. ಆಠವಲೆ : ಎಂತಹ ಸ್ಮರಣೆಗಳನ್ನು ಮಾಡುತ್ತೀರಿ ?

ಸಾಧಕ : ಭಗವಂತನ ವಿವಿಧ ಲೀಲೆಗಳ ಕಥೆಗಳು ಅಥವಾ ಅವನ ಗುಣವೈಶಿಷ್ಟ್ಯಗಳ ಬಗ್ಗೆ ಓದುತ್ತೇನೆ

ಪರಾತ್ಪರ ಗುರು ಡಾ. ಆಠವಲೆ : ನಮಗೆ ‘ಅನೇಕದಿಂದ ಏಕತೆಗೆ’ ಬರಬೇಕಾಗಿದೆ. ಮಾಯೆಯ ಅನೇಕ-ಅನೇಕ ರೂಪಗಳಿವೆ. ಹಾಗೆ ಭಗವಂತನ ಅನೇಕ-ಅನೇಕ ರೂಪಗಳಾದವು ! ಅವುಗಳಲ್ಲಿನ ಏಕತೆಗೆ ಹೋಗಬೇಕು. ಭಗವಂತನು ಅನೇಕವಾಗಿರದೇ ಒಬ್ಬನೇ ಆಗಿದ್ದಾನೆ. ಭಕ್ತಿಮಾರ್ಗದ ಸಾಧಕನು ಮೊದಲಿಗೆ ಪೂಜೆ ಅರ್ಚನೆಯನ್ನು ಮಾಡುತ್ತಾನೆ. ಆಗ ಅವನಿಗೆ ಯಾರಾದರೂ, “ಸ್ಥೂಲದಲ್ಲಿ ಪೂಜೆಯನ್ನು ಏನು ಮಾಡುತ್ತೀಯಾ ? ಭಗವಂತನು ಸೂಕ್ಷ್ಮದಲ್ಲಿದ್ದಾನೆ ? ಪೂಜೆಗಿಂತ ಮಾನಸಪೂಜೆಯನ್ನು ಮಾಡು”, ಎಂದು ಹೇಳುತ್ತಾರೆ. ನಂತರ ಮಾನಸಪೂಜೆಯಲ್ಲಿ ತನ್ನ ಮನಸ್ಸಿನಿಂದ ಮೂರ್ತಿಯನ್ನು ತಟ್ಟೆಯಲ್ಲಿಡುವುದು, ಮೂರ್ತಿಗೆ ಸ್ನಾನ ಹಾಕುವುದು. ಅದನ್ನು ಒರೆಸುವುದು. ಅದಕ್ಕೆ ಗಂಧ, ಅಕ್ಷತೆ, ಹೂವುಗಳನ್ನು ಹಾಕುವುದು, ಇವೆಲ್ಲವೂಗಳು ಅನೇಕ ಅನೇಕವಾದವು ? ಆಗ, “ಈಗ ನೀನು ಮಾನಸಪೂಜೆ ಮಾಡಬೇಡ, ನೀನು ನಾಮಜಪವನ್ನು ಮಾಡು ಎಂದು ಹೇಳುತ್ತಾರೆ. ಒಂದು ನಾಮಜಪಕ್ಕೆ ಬಾ”, ಎಂದು ಹೇಳುತ್ತಾರೆ. ನಂತರ ಜೀವನದಲ್ಲಿ ಇನ್ನೊಬ್ಬರು ಯಾರಾದರು ಬರುತ್ತಾರೆ ಮತ್ತು “ನೀನು ನಾಮಜಪವನ್ನು ಏಕೆ ಮಾಡುತ್ತಿರುವೆ ? ಗಿಳಿಗೂ ಸಹ ‘ರಾಮ, ರಾಮ, ರಾಮ….’ ಹೇಳಲು ಕಲಿಸಿದರೆ ಗಿಳಿಯೂ ರಾಮ, ರಾಮ, ರಾಮ… ಎಂದು ಹೇಳುವುದು. ನಾಮಜಪವು ಭಾವಪೂರ್ಣವಾಗಬೇಕು.” ಆಗ ಸಾಧಕನು ಭಾವಪೂರ್ಣ ನಾಮಜಪವನ್ನು ಮಾಡುತ್ತಾನೆ. ನಂತರ ಇನ್ನೊಬ್ಬರು ಜೀವನದಲ್ಲಿ ಬಂದು, “ನೀನು ನಾಮಜಪವನ್ನು ಎಷ್ಟು ವರ್ಷಗಳವರೆಗೆ ಮಾಡುತ್ತಿರುವೆ ? ಅದು ದ್ವೈತವಾಗಿದೆ. ನಿನಗೆ ಅದ್ವೈತದಲ್ಲಿ ಹೋಗಬೇಕಾಗಿದೆ ಅಲ್ಲವೇ ? ೨೪ ಗಂಟೆಗಳ ಕಾಲ ಭಾವದ ಸ್ಥಿತಿಯಲ್ಲಿರು”, ಎಂದು ಹೇಳುತ್ತಾರೆ. ಈ ರೀತಿ ಮುಂದುಮುಂದಿನ ಹಂತಹಂತಗಳಿರುತ್ತವೆ.