ನೇಪಾಳದ ನಾಟಕ !

ನೇಪಾಳದ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ ಇವರು ಸಂಸತ್ತನ್ನು ವಿಸರ್ಜಿಸಿ ಪುನಃ ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಇದು ನೇಪಾಳದ ಸಂವಿಧಾನದಲ್ಲಿ ರೂಪಿಸಲಾಗಿರುವ ನಿಯಮಗಳ ವಿರುದ್ಧ ಕೈಕೊಂಡ ನಿರ್ಣಯವಾಗಿರುವುದರಿಂದ ಸುಮಾರು ೧೦-೧೨ ಜನರು ಅಲ್ಲಿಯ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಓಲಿಯವರ ನಿರ್ಣಯವನ್ನು ಪ್ರಶ್ನಿಸಿದ್ದಾರೆ. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ. ನೇಪಾಳದಲ್ಲಿ ‘ಯುನಿಫೈಡ್ ಮಾರ್ಕಿಸ್ಟ್ ಲೆನಿನಿಸ್ಟ್ ಪಕ್ಷ (ಯು.ಎಮ್.ಎಲ್.) ಹಾಗೂ ‘ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ(ಮಾವೋಇಸ್ಟ ಸೆಂಟರ್) (ಸಿ.ಪಿ.ಎನ್.ಮಾವೋವಾದಿ) ಇವರ ಸಂಮ್ಮಿಶ್ರ ಸರಕಾರವಿದೆ. ಓಲಿಯವರು ಯು.ಎಮ್.ಎಲ್.ನ ಮುಖಂಡರಾಗಿದ್ದರೆ, ಪುಷ್ಪ ಕಮಲ ದಹಲ ‘ಪ್ರಚಂಡ ಇವರು ಸಿ.ಪಿ.ಎನ್ ಮಾವೋವಾದಿ ಪಕ್ಷದ ಮುಖಂಡರಾಗಿದ್ದಾರೆ. ನೇಪಾಳದ ರಾಜಕಾರಣದಲ್ಲಿ ಓಲಿ ಮತ್ತು ಪ್ರಚಂಡರು ಬದ್ಧ ವಿರೋಧಿಗಳೆಂದು ಗುರುತಿಸಲಾಗುತ್ತಿತ್ತು. ಆದರೆ ರಾಜಕೀಯ ಸ್ವಾರ್ಥಕ್ಕಾಗಿ ಈ ಇಬ್ಬರೂ ಮುಖಂಡರ ಪಕ್ಷದವರು ಹೊಂದಾಣಿಕೆ ಮಾಡಿಕೊಂಡು  ನೇಪಾಳದಲ್ಲಿ ಸರಕಾರವನ್ನು ರಚಿಸಿದರು. ೫ ವರ್ಷಗಳ ಆಡಳಿತದ ಕಾಲಾವಧಿಯಲ್ಲಿ ಓಲಿ ಮತ್ತು ಪ್ರಚಂಡ ಇವರಿಬ್ಬರೂ ಸಮಾನವಾಗಿ ಎರಡೂವರೆ ವರ್ಷಗಳವರೆಗೆ ಪ್ರಧಾನಮಂತ್ರಿಗಳೆಂದು ಅಧಿಕಾರಾವಧಿಯನ್ನು ಹಂಚಿಕೊಳ್ಳಲು ನಿರ್ಧರಿಸಿದರು; ಆದರೆ ಓಲಿಯವರಿಗೆ ರಾಜಕೀಯ ಲಾಲಸೆ ಜಾಗೃತವಾಗಿದ್ದರಿಂದ ಅವರ ಮತ್ತು ಪ್ರಚಂಡರಲ್ಲಿ ಮೇಲಿಂದ ಮೇಲೆ ಘರ್ಷಣೆಗಳು ನಡೆದವು. ತದನಂತರ ಅಧಿಕಾರದಲ್ಲಿದ್ದರೂ ಎರಡೂ ಪಕ್ಷದಲ್ಲಿ ಒಡಕು ಮೂಡಿರುವುದು ಬಹಿರಂಗವಾಗಿ ಕಂಡು ಬರುತ್ತಿತ್ತು. ಅದರಲ್ಲಿ ಈಗ ಓಲಿಯವರು ಸಂಸತ್ತನ್ನು ವಿಸರ್ಜಿಸಿರುವುದರಿಂದ ರಾಜಕೀಯ ಅಸ್ಥಿರತೆ ನಿರ್ಮಾಣವಾಗಿದೆ. ‘ನೇಪಾಳದಲ್ಲಿ ಪುನಃ ಚುನಾವಣೆ ನಡೆಯುವುದೇ ?, ‘ಚುನಾವಣೆ ನಡೆದರೆ ಯಾವ ಪಕ್ಷ ಗೆಲ್ಲಲಿದೆ ?, ಮುಂತಾದ ಪ್ರಶ್ನೆಗಳು ಈಗ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಒಂದಂತೂ ಸತ್ಯ ಅದೆಂದರೆ ನಿರಂತರವಾಗಿ ಭಾರತದ ವಿರುದ್ಧ ಕೆಂಡಕಾರುವ ಮತ್ತು ಚೀನಾದ ಬಾಲಂಗೋಚಿ ಮಾಡುವ ಓಲಿಯವರು ಭವಿಷ್ಯದಲ್ಲಿ ಜರುಗಲಿರುವ ಚುನಾವಣೆಯಲ್ಲಿ ಸೋಲುವುದೇ ಭಾರತಕ್ಕೆ ಬೇಕಾಗಿದೆ; ಆದರೆ ಇಷ್ಟು ಸಾಕಾಗುವುದೇ ?

ನೇಪಾಳದ ಮಾವೋವಾದವನ್ನು ನಿರ್ನಾಮಗೊಳಿಸಿ !

ನೇಪಾಳದ ಈ ರಾಜಕೀಯ ಬೆಳವಣಿಗೆಯ ಬಳಿಕ ಭಾರತವು ಎಚ್ಚರಿಕೆಯ ಹೆಜ್ಜೆಯಿಟ್ಟು, ‘ನೇಪಾಳ ಸಂಸತ್ತಿನ ವಿಸರ್ಜನೆ ಅವರ ಆಂತರಿಕ ಸಮಸ್ಯೆಯಾಗಿದೆ, ಎಂದು ಹೇಳಿಕೆಯನ್ನಿತ್ತು, ಪರಿಸ್ಥಿತಿಯ ಮೇಲೆ ವ್ಯಾಖ್ಯಾನಿಸುವುದನ್ನು ತಳ್ಳಿದರು. ಇದು ಸೂಕ್ತವೇ ಆಗಿತ್ತು. ಯಾವುದೇ ದೇಶದಲ್ಲಿ ಅಧಿಕಾರ ಹಸ್ತಾಂತರವಾದರೆ ಅಲ್ಲಿಯ ವಿದೇಶನೀತಿಯು ಬದಲಾಗುತ್ತಿರುತ್ತದೆ; ಆದರೆ ನೇಪಾಳದಲ್ಲಿ ಓಲಿಯವರು ಅಧಿಕಾರಕ್ಕೆ ಬಂದ ಬಳಿಕ ಅಲ್ಲಿಯ ವಿದೇಶನೀತಿ ಬುಡಮೇಲಾಯಿತು. ಇಲ್ಲಿಯವರೆಗೆ ಭಾರತವನ್ನು ಮಿತ್ರನೆಂದು ನಂಬಿದ್ದ ನೇಪಾಳ ಸರಕಾರವು ಭಾರತದೊಂದಿಗೆ ಶತ್ರುತ್ವದಿಂದ ನಡೆದುಕೊಳ್ಳತೊಡಗಿತು. ಭಾರತಕ್ಕೆ ಚುಚ್ಚಿ ಮಾತನಾಡುವುದನ್ನು ಮತ್ತು ಭಾರತವನ್ನು ಟೀಕಿಸುವ ಒಂದೇ ಒಂದು ಅವಕಾಶವನ್ನು ಓಲಿಯವರು ಬಿಡಲಿಲ್ಲ. ಇಷ್ಟೇ ಏಕೆ, ನೇಪಾಳದಲ್ಲಿ ಕೊರೊನಾ ಹರಡಲು ಭಾರತವೇ ಹೊಣೆಯಾಗಿದೆಯೆಂದು ಹೇಳಿದರು. ಭಾರತದ ಭೂಭಾಗವನ್ನು ತನ್ನದೆಂದು ಹೇಳಿದರು ಮತ್ತು ನೇಪಾಳ-ಭಾರತ ಗಡಿಯನ್ನು ಮುಚ್ಚಿದರು. ಅದಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ರಾಮಾಯಣ ನೇಪಾಳದಲ್ಲಿ ನಡೆದಿದೆ, ಎನ್ನುವ ಹಾಸ್ಯಾಸ್ಪದ ಹೇಳಿಕೆಯನ್ನೂ ನೀಡಿದರು. ‘ಇವೆಲ್ಲ ಹೇಳಿಕೆಗಳ ಹಿಂದೆ ಚೀನಾ ಕೈವಾಡವಿತ್ತು, ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ನೇಪಾಳ ಸರಕಾರ ಅಸ್ಥಿರವಾಗಿದ್ದರಿಂದ ಚೀನಾ ಒತ್ತಡಕ್ಕೀಡಾಗಿದೆ. ಓಲಿಯವರು ಚೀನಾದ ಕೈಗೊಂಬೆಯಾಗಿದ್ದರು. ಮುಂದಿನ ಚುನಾವಣೆಯಲ್ಲಿ ಅವರು ಸೋತರೆ ನೇಪಾಳದ ಮೇಲಿನ ಚೀನಾದ ನಿಯಂತ್ರಣ ಕೈತಪ್ಪಲಿದೆ. ಎಂಬುದು ಚೀನಾವನ್ನು ಚಿಂತೆಗೀಡು ಮಾಡಿದೆ. ಚೀನಾಕ್ಕೆ ಅದು ಬೇಡವಾಗಿದೆ. ಆದುದರಿಂದ ಓಲಿ ಮತ್ತು ಪ್ರಚಂಡರಲ್ಲಿ ಪುನಃ ಹೊಂದಾಣಿಕೆಯನ್ನು ತರಲು ಚೀನಾ ಸಮರೋಪಾದಿಯಲ್ಲಿ ಪ್ರಯತ್ನಿಸುತ್ತಿದೆ. ‘ನೇಪಾಳದಲ್ಲಿ ಓಲಿಯವರು ಬೇಡ, ಪ್ರಚಂಡ ಇದ್ದರೂ ಪರವಾಗಿಲ್ಲ, ಎಂದೂ ಕೆಲವು ರಾಷ್ಟ್ರಪ್ರೇಮಿ ಭಾರತೀಯರ ಅನಿಸಿಕೆಯಾಗಿದೆ; ಆದರೆ ಇದು ಅಲ್ಪಸಂತುಷ್ಟಿಯೆಂದೆ ಹೇಳಬಹುದು. ಪ್ರಚಂಡರು ಕಟ್ಟಾ ಮಾವೋವಾದಿಗಳಾಗಿದ್ದಾರೆ. ಅಲ್ಲಿಯ ರಾಜಮನೆತನದ ಆಡಳಿತವನ್ನು ಕಿತ್ತೆಸೆಯುವಲ್ಲಿ ಅವರ ದೊಡ್ಡ ಕೈವಾಡವಿದೆ. ಆದುದರಿಂದ ಅವರು ಒಂದು ವೇಳೆ ಅಧಿಕಾರದ ಗದ್ದುಗೆಯನ್ನು ಹಿಡಿದರೂ, ನೇಪಾಳಿ ಜನತೆಗೆ ಎಷ್ಟು ಪ್ರಯೋಜನವಾಗಲಿದೆ ಎನ್ನು ಪ್ರಶ್ನೆಯೂ ಇದೆ.

ನೇಪಾಳದ ನಾಟಕದಿಂದ ಪಾಠ ಕಲಿಯುವುದು ಆವಶ್ಯಕ !

ಓಲಿಯವರನ್ನು ರಾಜಕೀಯವಾಗಿ ಸಿಕ್ಕಿಸುವಲ್ಲಿ ಭಾರತದ ಹಸ್ತಕ್ಷೇಪವಿದೆಯೆಂದು ಹೇಳಲಾಗುತ್ತಿದೆ. ನೇಪಾಳವು ಈ ಮೊದಲು ಹಿಂದೂ ರಾಷ್ಟ್ರವಾಗಿತ್ತು. ಆದುದರಿಂದ ಸಾಮ್ಯವಾದಿಗಳು ಕೋಟೆಯೊಳಗೆ ನುಗ್ಗಿ ಅಲ್ಲಿ ಅರಾಜಕತೆ ಹರಡಿರುವಾಗ ಭಾರತವು ಹಸ್ತಕ್ಷೇಪ ಮಾಡಿ ಅದನ್ನು ತಡೆಯಲು ಪ್ರಯತ್ನಿಸಿರುವುದರಲ್ಲಿ ಏನೂ ತಪ್ಪಿಲ್ಲ. ಪ್ರಶ್ನೆಯೇನೆಂದರೆ, ನೇಪಾಳದಲ್ಲಿ ಈ ಪರಿಸ್ಥಿತಿ ಏಕೆ ಉದ್ಭವಿಸಿತು ? ೨೦೦೮ ನೇ ಇಸವಿಯಲ್ಲಿ ಅಲ್ಲಿಯ ರಾಜಮನೆತನ ಸರಕಾರ ಮುಕ್ತಾಯಗೊಂಡಿತು. ಈ ಆಡಳಿತ ಬದಲಾವಣೆ ಪ್ರಕ್ರಿಯೆ ೯೦ ನೇ ದಶಕದಲ್ಲಿ ಪ್ರಾರಂಭವಾಗಿತ್ತು. ನೇಪಾಳದ ರಾಜಮನೆತನದಲ್ಲಿ ಜರುಗಿರುವ ಹತ್ಯಾಕಾಂಡದ ಬಳಿಕ ಅಲ್ಲಿಯ ಆಡಳಿತವನ್ನು ಕಿತ್ತೆಸೆಯುವಲ್ಲಿ ಮಾವೋವಾದಿಗಳು ದೊಡ್ಡ ಪ್ರಮಾಣದಲ್ಲಿ ಪ್ರಯತ್ನವನ್ನು ಪ್ರಾರಂಭಿಸಿದರು. ಇದಕ್ಕೆ ಚೀನಾ ಕೂಡ ಕುಮ್ಮಕ್ಕು ನೀಡಿತು. ಅದೇ ಸಮಯದಲ್ಲಿ ಇದನ್ನು ನಾವು ವಿರೋಧಿಸಿದ್ದರೆ, ನೇಪಾಳದ ಪರಿಸ್ಥಿತಿ ಬದಲಾಗಿರುತ್ತಿತ್ತು. ನೇಪಾಳದಲ್ಲಿರುವ ಇಂದಿನ ಪರಿಸ್ಥಿತಿಗೆ ಅಲ್ಲಿಯ ಹಿಂದೂ ಸಮಾಜ ಮತ್ತು ಜಾತ್ಯತೀತ ರಾಜಕಾರಣಿಗಳು ಯಾವ ರೀತಿ ಜವಾಬ್ದಾರರಾಗಿದ್ದಾರೆಯೋ, ಹಾಗೆಯೇ ಭಾರತದಲ್ಲಿರುವ ಹಿಂದೂ ಸಮಾಜ ಮತ್ತು ಎಲ್ಲ ಪಕ್ಷಗಳ ರಾಜಕಾರಣಿಗಳು ಜವಾಬ್ದಾರ ರಾಗಿದ್ದಾರೆ. ೨೦೦೮ ನೇ ಇಸವಿಯಲ್ಲಿ ಭಾರತದಲ್ಲಿ ಡಾ. ಮನಮೋಹನ ಸಿಂಹ ಇವರು ಪ್ರಧಾನಮಂತ್ರಿಗಳಾಗಿದ್ದರು. ನೇಪಾಳದಲ್ಲಿ ಮಾವೋವಾದಿಗಳ ಹಿಂಸಾತ್ಮಕ ಚಳುವಳಿ ತೀವ್ರವಾಗಿತ್ತು. ಅಲ್ಲಿಯ ಸಮಾಜ ಮತ್ತು ಮುಖಂಡರು ಭಾರತದ ಸಹಾಯವನ್ನು ಕೋರುತ್ತಿದ್ದರು; ಆದರೆ ಆ ಸಮಯದಲ್ಲಿ ಸೋನಿಯಾ ಗಾಂಧಿ ಯವರ ಕೈಗೊಂಬೆಯಾಗಿರುವ ಡಾ. ಸಿಂಹ ಇವರು ಈ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನೇಪಾಳವನ್ನು ಗಾಳಿಗೆ ತೂರಿದರು. ಇದೇ ಅವಕಾಶದ ದುರುಪಯೋಗವನ್ನು ಪಡೆದುಕೊಂಡು  ಚೀನಾ ನೇಪಾಳದ ಮೇಲೆ ಹಂತ ಹಂತವಾಗಿ ನಿಯಂತ್ರಣವನ್ನು ಹೊಂದಲು ಪ್ರಾರಂಭಿಸಿತು. ಯಾವುದೇ ಮಿತ್ರರಾಷ್ಟ್ರ ಅಥವಾ ಶತ್ರುರಾಷ್ಟ್ರಗಳ ಸಂದರ್ಭದಲ್ಲಿ ವಿದೇಶನೀತಿ ತಪ್ಪಾದರೆ ಅದರ ದೂರಗಾಮಿ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾಗಿದೆ. ಹಳಸಿರುವ ಸಂಬಂಧವನ್ನು ಪುನರ್‌ಸ್ಥಾಪಿಸುವುದು ಅತ್ಯಂತ ಕಠಿಣವಾಗಿರುತ್ತದೆ ಮತ್ತು ಅದಕ್ಕಾಗಿ ಬಹಳಷ್ಟು ಸಮಯ ಹಾಗೂ ಶಕ್ತಿ ವ್ಯಯಿಸಬೇಕಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಅವರು ನೇಪಾಳದೊಂದಿಗೆ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿದರು. ಓಲಿಯವರು ಪೂರ್ಣವಾಗಿ ಚೀನಾದ ರಾಯಭಾರಿ ಹಾವೂಯಾಂಕ ಇವರ ‘ಮೋಹಜಾಲದ ಪ್ರಭಾವದಡಿಯಲ್ಲಿದ್ದರು. ಅವರ ಭಾರತದ್ವೇಷಕ್ಕೆ ಇದು ಮೂಲಕಾರಣವಾಗಿತ್ತು. ಇತ್ತೀಚೆಗೆ ಭಾರತದ ಗೂಢಚಾರ ಇಲಾಖೆಯು ಇದನ್ನು ಬಹಿರಂಗಪಡಿಸಿತು. ಈ ತೇಜೋವಧೆಯಿಂದಲೇ ಓಲಿಯವರು ಸಿಕ್ಕಿ ಹಾಕಿಕೊಂಡು ಸಂಸತ್ತನ್ನು ವಿಸರ್ಜಿಸುವ ನಿರ್ಣಯವನ್ನು ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಒಂದು ವೇಳೆ ಓಲಿಯವರ ದುಃಸ್ಥಿತಿಗೆ ಭಾರತ ಜವಾಬ್ದಾರವಾಗಿದೆ, ಅದು ಒಳ್ಳೆಯದೇ ಆಗಿದೆ; ಆದರೆ ಇದು ಸ್ವಲ್ಪ ಮೊದಲೇ ಆಗಿದ್ದರೆ ಬಹಳ ಒಳ್ಳೆಯದಾಗುತ್ತಿತ್ತು.

ಚೀನಾದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉದ್ಧಟತನ ಪ್ರವೃತ್ತಿಯನ್ನು ನೋಡಿದರೆ ಯುದ್ಧದ ಕಿಡಿ ಯಾವಾಗ ಬೇಕಾದರೂ ಹತ್ತಬಹುದು. ಇಂತಹ ಸಮಯದಲ್ಲಿ ನೇಪಾಳ, ಭೂತಾನ, ಮಾಲ್ದೀವ್, ಶ್ರೀಲಂಕಾ ಇತ್ಯಾದಿ ದೇಶಗಳು ಮಹತ್ವಪೂರ್ಣ ಪಾತ್ರವನ್ನು ವಹಿಸಬಲ್ಲವು. ಕಾರಣ ಈ  ದೇಶಗಳು ಸಾಮೂಹಿಕ ದೃಷ್ಟಿಯಿಂದ ಭಾರತಕ್ಕೆ ಮಹತ್ವಪೂರ್ಣವಾಗಿವೆ. ಆದುದರಿಂದ ಯೋಗ್ಯ ವಿದೇಶನೀತಿಯಿಂದ ಆ ದೇಶಗಳೂ ಭಾರತದ ಪರವಾಗಿರಲು ಕಠಿಣ ಪ್ರಯತ್ನ ನಡೆಸಬೇಕಾಗಿದೆ; ಏಕೆಂದರೆ ಒಮ್ಮೆ ಸಮಯ ಕೈಮೀರಿ ಹೋದರೆ ಸಮಸ್ಯೆ ಹಿಡತಕ್ಕೆ ತರುವುದು ಬಹಳ ಕಠಿಣವಾಗುತ್ತದೆ; ನೇಪಾಳದ ನಾಟಕದಿಂದ ಭಾರತವು ಇದನ್ನೇ ಕಲಿಯಬೇಕಾಗಿದೆ !