ಮಾರ್ಗಶಿರ ಹುಣ್ಣಿಮೆಯಂದು ಮೃಗಶಿರಾ ನಕ್ಷತ್ರದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು, ಆದುದರಿಂದ ಆ ದಿನ ದತ್ತನ ಜನ್ಮೋತ್ಸವವನ್ನು ಎಲ್ಲ ದತ್ತಕ್ಷೇತ್ರಗಳಲ್ಲಿ ಆಚರಿಸಲಾಗುತ್ತದೆ.
ಇತಿಹಾಸ
‘ಹಿಂದಿನ ಕಾಲದಲ್ಲಿ ಪೃಥ್ವಿಯ ಮೇಲೆ ಸ್ಥೂಲ ಮತ್ತು ಸೂಕ್ಷ್ಮರೂಪದಲ್ಲಿ ಅಸುರೀ ಶಕ್ತಿಗಳು ಪ್ರಾಬಲ್ಯ ಬಹಳ ಹೆಚ್ಚಾಗಿತ್ತು. ಅವರನ್ನು ದೈತ್ಯರೆಂದು ಕರೆಯಲಾಗುತ್ತಿತ್ತು. ದೇವಗಣರು ಆ ಅಸುರೀ ಶಕ್ತಿಗಳನ್ನು ನಾಶಗೊಳಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಆಗ ಬ್ರಹ್ಮದೇವನ ಆಜ್ಞೆಗನುಸಾರ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ದತ್ತನು ಅವತಾರ ತಾಳಬೇಕಾಯಿತು. ಆನಂತರ ದೈತ್ಯರು ನಾಶವಾದರು. ದತ್ತನು ಅವತಾರ ತಾಳಿದ ದಿನವನ್ನು ‘ದತ್ತಜಯಂತಿಯೆಂದು ಆಚರಿಸಲಾಗುತ್ತದೆ.
ಮಹತ್ವ
ಆ ದಿನದಂದು ಪೃಥ್ವಿಯ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ.
ಜನ್ಮೋತ್ಸವವನ್ನು ಆಚರಿಸುವುದು
ದತ್ತಜಯಂತಿಯನ್ನು ಆಚರಿಸುವ ಸಂಬಂಧದಲ್ಲಿ ಶಾಸ್ತ್ರೋಕ್ತ ವಿಶಿಷ್ಟ ವಿಧಿವಿಧಾನಗಳು ಕಂಡುಬರುವುದಿಲ್ಲ. ಈ ಉತ್ಸವದ ಮೊದಲು ಏಳು ದಿನಗಳವರೆಗೆ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದಕ್ಕೆ ಗುರುಚರಿತ್ರಸಪ್ತಾಹ ಎನ್ನುತ್ತಾರೆ. ಭಜನೆ, ಪೂಜೆ ಮತ್ತು ವಿಶೇಷವಾಗಿ ಕೀರ್ತನೆ ಇತ್ಯಾದಿ ಭಕ್ತಿಯ ವಿಧಗಳು ಪ್ರಚಲಿತವಾಗಿವೆ. ಮಹಾರಾಷ್ಟ್ರದಲ್ಲಿ ಔದುಂಬರ, ನರಸೋಬಾ ವಾಡಿ, ಗಾಣಗಾಪುರ ಇತ್ಯಾದಿ ದತ್ತಕ್ಷೇತ್ರಗಳಲ್ಲಿ ಈ ಉತ್ಸವಕ್ಕೆ ವಿಶೇಷ ಮಹತ್ವವಿದೆ. ತಮಿಳುನಾಡಿನಲ್ಲಿಯೂ ದತ್ತಜಯಂತಿಯ ರೂಢಿಯಿದೆ.