ದೇಶ ವಿದೇಶಗಳಲ್ಲಿ ವಿವಿಧ ಪದ್ಧತಿಯಿಂದ ಆಚರಿಸಲ್ಪಡುವ ಹಿಂದೂಗಳ ಹಬ್ಬ ದೀಪಾವಳಿ

ಮನೆಮನೆಗಳಲ್ಲಿ ಆನಂದದ ತೋರಣವನ್ನು ಕಟ್ಟುವ ಭಾರತೀಯ ದೀಪಾವಳಿ ಈಗ ವಿದೇಶಗಳಲ್ಲಿಯೂ ಚೈತನ್ಯವನ್ನು ಹಬ್ಬಿಸುತ್ತಿದೆ. ದೀಪಾವಳಿಯು ನೇರವಾಗಿ ಅಮೇರಿಕಾದ ರಾಷ್ಟ್ರಾಧ್ಯಕ್ಷರ ಮನೆಯವರೆಗೆ ತಲುಪಿದೆ, ಇಂಗ್ಲೆಂಡಿನ ರಸ್ತೆಗಳಲ್ಲಿಯೂ ಅದರ ಮೆರುಗು ಕಾಣಿಸುತ್ತಿದೆ.

ಇತ್ತಿಚೆಗೆ ಇಡೀ ಜಗತ್ತು ಒಂದು ಗ್ಲೋಬಲ ವಿಲೇಜ ಆಗಿರುವುದರಿಂದ ಪ್ರತಿಯೊಂದು ದೇಶಗಳಲ್ಲಿಯೂ ವಿವಿಧ ದೇಶಗಳ ಜನರು ನೌಕರಿ,ವ್ಯಾಪಾರ ಮತ್ತು ಶಿಕ್ಷಣಗಳ ನಿಮಿತ್ತದಿಂದ ಹೋಗುತ್ತಾರೆ. ಕಾಲಾಂತರದಲ್ಲಿ ಅಲ್ಲಿಯೇ ನೆಲೆಸುತ್ತಾರೆ. ಭಾರತೀಯ ಜನರು ಅದಕ್ಕೆ ಅಪವಾದವಲ್ಲ. ಜನರೊಂದಿಗೆ ಅವರ ಸಂಸ್ಕೃತಿ, ಭಾಷೆ, ಮತ್ತು ಹಬ್ಬಗಳು ಎಲ್ಲವು ಬರುತ್ತವೆ. ಇದರಿಂದ ಈಗ ಜಗತ್ತಿನಾದ್ಯಂತ ಹೆಚ್ಚಿರುವ ಭಾರತೀಯರು ದಿವಾಳಿ ಅಥವಾ ದೀಪಾವಳಿ ಈ ಹಬ್ಬವೂ ಜಗತ್ತಿನಾದ್ಯಂತ ರಾರಾಜಿಸುತ್ತಿದೆ. ಇದರಲ್ಲಿ ವಿವಿಧ ಉಡಿಗೆತೊಡಿಗೆಗಳು, ಭಾರತೀಯ ಮೃಷ್ಠಾನ್ನ. ಸಿಹಿ ತಿನಿಸುಗಳು, ಸಾಂಸ್ಕೃತಿಕ ಕಾರ್ಯಕ್ರಮ,ರಂಗೋಲಿ, ಮೆಹಂದಿ,ದೀಪಗಳು, ಇತರ ಕಾರ್ಯಕ್ರಮಗಳು ಹಾಗೂ ಚಿತ್ತಾರಗಳ ಪಟಾಕಿಗಳೂ ಇರುತ್ತವೆ. ಭಾರತದಲ್ಲಿ ಅಕ್ಕ ಪಕ್ಕದಲ್ಲಿರುವ ಹಾಗೆಯೇ ಮುಂದುವರಿದ ಕೆಲವು ದೇಶಗಳಲ್ಲಿ ಅದನ್ನು ಆಚರಿಸುವಾಗ ಭಾರತಕ್ಕಿಂತ ವಿಭಿನ್ನವಾಗಿ ಯಾವ ವಿಷಯಗಳು ಇರುತ್ತವೆ ಎನ್ನುವುದನ್ನು ನೋಡೋಣ.

೧. ವಿವಿಧ ಪ್ರಾಣಿಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಲು ಅವುಗಳನ್ನು ಪೂಜಿಸಿ ದೀಪಾವಳಿ ಹಬ್ಬವನ್ನು ಆಚರಿಸುವ ನೇಪಾಳ

೧ ಅ. ‘ಕಾಗ ತಿಹಾರ ಎಂದರೆ ‘ಕಾಗೆಗಳ ದಿನ ! : ಭಾರತದ ಪಕ್ಕದಲ್ಲಿರುವ ನೇಪಾಳದಲ್ಲಿ ದೀಪಾವಳಿ ಹಬ್ಬವನ್ನು ತಿಹಾರ ಎಂದು ಆಚರಿಸಲಾಗುತ್ತದೆ. ಇದರಲ್ಲಿ ಮೊದಲ ದಿನ ಕಾಗ ತಿಹಾರ ಎಂದರೆ ಕಾಗೆಗಳ ದಿನ. ಕಾಗೆಗಳಿಗಾಗಿ ಸಿಹಿ ಪದಾರ್ಥಗಳನ್ನು ಮನೆಯ ಮಾಳಿಗೆಯ ಮೇಲೆ ಇಡಲಾಗುತ್ತದೆ. ಕಾಗೆಗಳು ಕೂಗುವುದು ದುಃಖ ಮತ್ತು ಮೃತ್ಯುವಿನ ಸಂಕೇತವಾಗಿರುವುದರಿಂದ ಹಬ್ಬದ ಮೊದಲು ಅದನ್ನು ನಿವಾರಿಸಲು ಈ ನೈವೇದ್ಯ. (ಹಿಂದೂ ಸಂಸ್ಕೃತಿಯಲ್ಲಿ ಪಿತೃಪಕ್ಷದಲ್ಲಿ ಯಾವ ರೀತಿ ಕಾಗೆಗಳಿಗೆ ಪಿಂಡದಾನ ಮಾಡಲಾಗುತ್ತದೆಯೋ, ಅದರ ಆಧಾರದಲ್ಲಿ ಈ ಪದ್ಧತಿ ಪ್ರಾರಂಭವಾಗಿರಬೇಕೆಂದು ಅನಿಸುತ್ತದೆ. – ಸಂಪಾದಕರು)

ಗೋಮಾತೆಗೆ ಮಾಡಿದ ಪೂಜೆ

೧ ಆ. ‘ಕುಕುರ ತಿಹಾರ ಎಂದರೆ ‘ಶ್ವಾನಗಳ ಪೂಜೆ ! : ಎರಡನೇಯ ದಿನ ನಾಯಿಗಳನ್ನು ಪೂಜಿಸಲಾಗುತ್ತದೆ. ಅದನ್ನು ಕುಕುರ ತಿಹಾರ ಎನ್ನುತ್ತಾರೆ. ಮನುಷ್ಯನಿಗೆ ನಾಯಿಗಳೊಂದಿಗೆ ಇರುವ ಅವಿನಾಭಾವ ಸಂಬಂಧವನ್ನು ಗೌರವಿಸುವುದೇ ಅದರ ಹಿಂದಿರುವ ಕಾರಣವಾಗಿದೆ. ಈ ದಿನದಂದು ನಾಯಿಗಳಿಗೆ ಕುಂಕುಮದ ತಿಲಕವನ್ನು ಹಚ್ಚಿ, ಕೊರಳಿಗೆ ಚೆಂಡುಹೂಗಳ ಮಾಲೆಯನ್ನು ಹಾಕಿ ಅದಕ್ಕೆ ಸಿಹಿಯನ್ನು ನೀಡುತ್ತಾರೆ.

೧ ಇ. ಗೋಪೂಜೆ ಮತ್ತು ಲಕ್ಷ್ಮೀ ಪೂಜೆ : ಬಳಿಕ ಗಾಯ ತಿಹಾರ ಅಂದರೆ ಗೋಪೂಜೆ. ಕೊನೆಯಲ್ಲಿ ಲಕ್ಷ್ಮೀ ಪೂಜೆಯೂ ಆಗುತ್ತದೆ.

೨. ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸುವ ಇಂಡೋನೇಷಿಯಾ

ಇಂಡೋನೇಷಿಯಾದಲ್ಲಿ ಅಂದರೆ ಪ್ರಮುಖವಾಗಿ ಬಾಲಿ ದ್ವೀಪದಲ್ಲಿ ದೇವಸ್ಥಾನಗಳಲ್ಲಿ ದೀಪಗಳನ್ನು ಬೆಳಗಿಸಿ ಉತ್ತಮ ರೀತಿಯಲ್ಲಿ ಆಚರಿಸಲಾಗುತ್ತದೆ. ಅಲ್ಲದೇ ದೀಪಾವಳಿಯ ಉಡುಗೊರೆಯೆಂದು ನೃತ್ಯ ಮತ್ತು ವಿವಿಧ ಪ್ರಕಾರಗಳ ಉಡುಗೆತೊಡುಗೆಗಳ ಸ್ಪರ್ಧೆಗಳನ್ನು ಏರ್ಪಡಿಸಿ ವಿವಿಧ ಸ್ಥಳಗಳಲ್ಲಿ ಸಮಾರಂಭವನ್ನು ಆಚರಿಸುತ್ತಾರೆ.

೩. ದೀಪಗಳ ಅಲಂಕಾರ ಮಾಡಿ ಉತ್ಸಾಹದಿಂದ ದೀಪಾವಳಿ ಆಚರಿಸುವ ಸಿಂಗಾಪೂರ

ಸಿಂಗಾಪೂರದಲ್ಲಿ ಅನೇಕ ಭಾರತೀಯರು ಶಾಶ್ವತವಾಗಿ ನೆಲೆಸಿದ್ದಾರೆ. ಅಲ್ಲಿ ದೀಪಾವಳಿಯನ್ನು ನಮ್ಮಂತೆಯೇ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸುರಕ್ಷೆ ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟಲು ಅಲ್ಲಿ ಸಾರ್ವಜನಿಕವಾಗಿ ಪಟಾಕಿ ಹಾರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇಲ್ಲಿಯ ದೀಪಾಲಂಕಾರದಲ್ಲಿ ಭಾರತದ ರಾಷ್ಟ್ರೀಯ ಪಕ್ಷಿಯಾಗಿರುವ ನವಿಲಿನ ಆಕರ್ಷಕ ರೂಪವನ್ನು ಎಲ್ಲೆಡೆಯೂ ಅಧಿಕ ಪ್ರಮಾಣದಲ್ಲಿ  ಉಪಯೋಗಿಸುವುದು ಕಂಡು ಬರುತ್ತದೆ.

೪. ಗೊಂಬೆಗಳ ಆಟದ ಮೂಲಕ  ರಾಮಾಯಣ ಮತ್ತು ಮಹಾಭಾರತಗಳ ದರ್ಶನವನ್ನು ಮಾಡಿಸಿ ದೀಪಾವಳಿ ಆಚರಿಸುವ ಮಲೇಶಿಯಾ

ಮಲೇಶಿಯಾದಲ್ಲಿ ದೀಪಾವಳಿಯಲ್ಲಿ ‘ಶಾಡೋ ಪಪೆಟ್ ಎಂದರೆ ನೆರಳಿನ ಆಟವನ್ನು ದೊಡ್ಡ ಪ್ರಮಾಣದಲ್ಲಿ ತೋರಿಸಲಾಗುತ್ತದೆ. ರಾಮಾಯಣ ಮತ್ತು ಮಹಾಭಾರತದ ಕಥೆ ಗೊಂಬೆಗಳ ಆಟಗಳ ಮೂಲಕ ತೋರಿಸುವ ಈ ಕಲಾಕೃತಿ ಕುಸುರಿ ಕೆಲಸವಾಗಿದ್ದು, ಈ ಆಕೃತಿಗಳನ್ನು ಎಮ್ಮೆಯ ಚರ್ಮದಿಂದ ತಯಾರಿಸಲಾಗುತ್ತದೆ. ಅವುಗಳಿಗೆ ಬಣ್ಣ ಹಚ್ಚಿ, ಎಲ್ಲ ತರಹದ ಆಭರಣಗಳು, ವಸ್ತ್ರಾಲಂಕಾರ ಮತ್ತು ಕಿರೀಟವನ್ನು ಹಾಕಿ ಅವುಗಳ ನೃತ್ಯವನ್ನು ತೋರಿಸಲಾಗುತ್ತದೆ.

೫. ನದಿಯಲ್ಲಿ ದೀಪ ತೇಲಿಸಿ ದೀಪಾವಳಿ ಆಚರಿಸುವ ಥೈಲ್ಯಾಂಡ್

ಥೈಲ್ಯಾಂಡನಲ್ಲಿ ದೀಪಾವಳಿಯನ್ನು ಲುಯಿ ಕ್ರಥೋಂಗ ಎಂದು ಆಚರಿಸಲಾಗುತ್ತದೆ. ದೀಪಾವಳಿಯ ನಿಮಿತ್ತ ಸಿದ್ದಪಡಿಸಿರುವ ದೀಪಗಳನ್ನು ಬಾಳೆ ಎಲೆಗಳಿಂದ ತಯಾರಿಸಲಾಗುತ್ತದೆ. ಹೀಗೆ ಸಾವಿರಾರು ದೀಪಗಳನ್ನು ನದಿಯಲ್ಲಿ ತೇಲಿ ಬಿಡುತ್ತಾರೆ. ಈ ದೀಪೋತ್ಸವ ಅತ್ಯಂತ ನಯನಮನೋಹರವಾಗಿರುತ್ತದೆ.

೬. ದೀಪಾಲಂಕಾರಗಳ ಸ್ಪರ್ಧೆಯನ್ನು ಆಯೋಜಿಸುವ ಫಿಜಿ

ಫಿಜಿ ಈ ಫೆಸಿಫಿಕ ದ್ವೀಪಕ್ಕೆ ಉದ್ಯೋಗಕ್ಕಾಗಿ ಅನೇಕ ವರ್ಷಗಳ ಹಿಂದೆ ಹೋದ ಭಾರತೀಯ ಕಾರ್ಮಿಕರು ಶಾಶ್ವತವಾಗಿ ಅಲ್ಲಿಯೇ ನೆಲೆಸಿದ್ದಾರೆ. ಸದ್ಯ ಫಿಜಿಯಲ್ಲಿ ಶೇ. ೩೮ ರಷ್ಟು ಜನರು ಭಾರತೀಯ ವಂಶಜರಾಗಿದ್ದು, ಅಲ್ಲಿ ಪಾರಂಪರಿಕ ಪದ್ಧತಿಯಿಂದ ಅತ್ಯಂತ ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸಲಾಗುತ್ತದೆ. ನಾದಿ ನಗರದಲ್ಲಿ ಸಿಗಾಲೋಕಾ, ಲಾವುಟೋಕಾ ಮತ್ತು ಡೆನಾರಾವೂ ಈ ಅಕ್ಕಪಕ್ಕದ ನಗರಗಳಿಂದ ಮತ್ತು ಗ್ರಾಮಗಳಿಂದ ವಿಶೇಷವಾಗಿ ದೀಪಾವಳಿಗಾಗಿ ವಿಶೇಷ ಬಸ್ಸುಗಳ ವ್ಯವಸ್ಥೆ ಇರುತ್ತದೆ. ಈ ನಗರದ ಒಂದು ವಿಭಿನ್ನವಾದ ಪರಂಪರೆಯೆಂದರೆ ದೀಪಾಲಂಕಾರ ಸ್ಪರ್ಧೆ. ಈ ಸ್ಪರ್ಧೆಯನ್ನು ಫಿಜಿಯ ಪ್ರಧಾನಮಂತ್ರಿಗಳ ಹಸ್ತದಿಂದ ದೀಪ ಪ್ರಜ್ವಲಿಸಿ ಪ್ರಾರಂಭಿಸಲಾಗುತ್ತದೆ.

೭. ಮಹಾರಾಷ್ಟ್ರದಲ್ಲಿ ಮಾಡಿದಂತೆ ತಿಂಡಿತಿನಿಸು ತಯಾರಿಸಿ ಆಚರಿಸುವ ಅಮೇರಿಕಾದ ದೀಪಾವಳಿ

ಅಮೇರಿಕಾದಲ್ಲಿಯೂ ದೀಪಾವಳಿಯ ಹಬ್ಬ ಆನಂದದ ಸುರಿಮಳೆಗರೆಯುತ್ತದೆ. ಅಲ್ಲಿಯ ಸಾವಿರಾರು ಭಾರತೀಯ ಜನರು ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿ ಆಚರಿಸುತ್ತಾರೆ. ಆದರೆ ಈಗ ಭಾರತೀಯರಿರುವ ಅನೇಕ ಸ್ಥಳಗಳಲ್ಲಿ ದೀಪಾವಳಿಯ ಕಾರಣದಿಂದ ವಿಶೇಷ ಮಿಠಾಯಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಅಮೇರಿಕಾ, ಇಂಗ್ಲೆಂಡ, ನ್ಯೂಝಿಲೆಂಡ ಈ ದೇಶಗಳಲ್ಲಿ ನೆಲೆಸಿರುವ ಅನೇಕ ಗುಜರಾತಿ ಸ್ತ್ರೀಯರೂ ಈ ಗೃಹೋದ್ಯೋಗ ಪ್ರಾರಂಭಿಸಿದ್ದಾರೆ. ಚಕ್ಕುಲಿ, ಲಾಡು, ಶಂಕರಪಾಳೆಗಳಂತಹ ಪದಾರ್ಥಗಳನ್ನು ಪೂರೈಸಲು ಅವರು ತಿಂಗಳ ಮೊದಲೇ ಕಾರ್ಯನಿರತರಾಗಿರುತ್ತಾರೆ. ಜಾರ್ಜ ಬುಶ ಅಮೇರಿಕಾದ ಅಧ್ಯಕ್ಷರಾಗಿರುವಾಗ (೨೦೦೩ ರಿಂದ) ವೈಟ್ ಹೌಸನಲ್ಲಿ ದೀಪಾವಳಿ ಆಚರಿಸುವ ಪದ್ಧತಿಯನ್ನು ಪ್ರಾರಂಭಿಸಿದರು. ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷ ಬರಾಕ ಒಬಾಮಾ ೨೦೦೯ ರಲ್ಲಿ ತಮ್ಮ ಮನೆಯ ಪೂರ್ವದ ಕೊಠಡಿಯಲ್ಲಿ ವೈದಿಕ ಮಂತ್ರ ಘೋಷದಿಂದ ದೀಪಪ್ರಜ್ವಲನಗೊಳಿಸಿದ್ದರು.

೮. ಯುಕೆ.ಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ದೀಪಾವಳಿ

ಯುಕೆ.ಯಲ್ಲಿಯೂ (ಯುನೈಟೆಡ್ ಕಿಂಗಡಮ್ ಎಂದರೆ ಯು.ಕೆ.) ಭಾರತೀಯರ ಮನೆಗಳಲ್ಲಿ ದೀಪಾವಳಿ ಆಚರಣೆ ವಿಭಿನ್ನವಾಗಿರುತ್ತದೆ.  ಪ್ರತಿಯೊಬ್ಬ ಭಾರತೀಯನು ಬಹಳ ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸುತ್ತಾನೆ. ಶಿಕ್ಷಣದ ತವರುಮನೆಯಾಗಿರುವ ಇಲ್ಲಿಯ ವಿದ್ಯಾಪೀಠದಲ್ಲಿಯೂ ವಿದ್ಯಾರ್ಥಿಗಳು ಬಹುದೊಡ್ಡ ಪ್ರಮಾಣದಲ್ಲಿ ದೀಪಾವಳಿ ಆಚರಿಸುತ್ತಾರೆ.

ಯೂನಿವರ್ಸಿಟಿ ಆಫ್ ಸಸೆಕ್ಸ ವತಿಯಿಂದ ದೀಪಾವಳಿ ನಿಮಿತ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಹಜವಾಗಿ ೪೦೦ ರಿಂದ ೫೦೦ ಜನರ ಉಪಸ್ಥಿತಿರುತ್ತದೆ. ಇದನ್ನು ಹೊರತು ಪಡಿಸಿ ಲಂಡನ ನಗರದಿಂದ ದೀಪಾವಳಿಯ ನಿಮಿತ್ತ ಒಂದು ದೊಡ್ಡ ಮೆರವಣಿಗೆ ಹೊರಡುತ್ತದೆ. ಅದರಲ್ಲಿ ಅನೇಕ ಭಾರತೀಯರು ಮತ್ತು ವಿದೇಶಿ ಜನರು ಭಾಗವಹಿಸುತ್ತಾರೆ. ಮೆರವಣಿಗೆಯಲ್ಲಿ ಭಾರತೀಯ ವಾದ್ಯಗಳು, ನೃತ್ಯ ಮತ್ತು ವಸ್ತ್ರಗಳ ನಯನ ಮನೋಹರ ದರ್ಶನವಾಗು ತ್ತದೆ. ಆಯುರ್ವೇದಿಕ ಮಸಾಜ (ನಮ್ಮಲ್ಲಿಯ ಅಭ್ಯಂಗಸ್ನಾನ) ಮೆಹಂದಿ, ಸೀರೆ ಉಡುವುದು ಮತ್ತು ಉಡಿಸುವುದು ಈ ಪಾರಂಪರಿಕ ವಿಷಯಗಳನ್ನು ಉತ್ಸಾಹದಿಂದ ಆಚರಿಸುತ್ತಾರೆ.

೯. ಎರಡು ವಾರಗಳ ಕಾಲ ದೀಪಾವಳಿ ಆಚರಿಸುವ ನ್ಯೂಝಿಲೆಂಡ

ನ್ಯೂಝಿಲೆಂಡನಲ್ಲಿ ಸಿಡಿ ಕೌನ್ಸಿಲ (ಅಂದರೆ ನಮ್ಮಲ್ಲಿಯ ಪುರಸಭೆ) ಬಹಳ ವಿಭಿನ್ನವಾಗಿದೆ ಆಕ್‌ಲೆಂಡ ನಗರ ಮತ್ತು ವೆಲ್ಲಿಂಗ್ಟನ ಈ ನ್ಯೂಝಿಲೆಂಡನ ರಾಜಧಾನಿಯ ನಗರದಲ್ಲಿ ಪ್ರತ್ಯಕ್ಷ ದೀಪಾವಳಿಯ ಎರಡು ವಾರ ಮೊದಲು ದೀಪಾವಳಿ ಉತ್ಸವವನ್ನು ಆಚರಿಸಲಾಗುತ್ತದೆ. ನೇರವಾಗಿ ಪ್ರಧಾನಮಂತ್ರಿಗಳ ಹಸ್ತದಿಂದ ದೀಪಪ್ರಜ್ವಲನೆಯೊಂದಿಗೆ ಅದರ ಉದ್ಘಾಟನೆಯನ್ನು ಮಾಡಲಾಗುತ್ತದೆ. ಬೀ ಹೈವ್ ಹೆಸರಿನ ಪಾರ್ಲಿಮೆಂಟ ಕಟ್ಟಡದ ಎದುರು ದೊಡ್ಡದಾದ ರಂಗೋಲಿಯನ್ನು ಬಿಡಿಸುತ್ತಾರೆ. ಇದರಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾರತೀಯ ನೃತ್ಯ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ರಂಗೋಲಿಗಳ ಕಾರ್ಯಾಗಾರ ಇತ್ಯಾದಿಗಳ ಸಮಾವೇಶವಿರುತ್ತದೆ.

೧೦. ದೇಶವಿದೇಶಗಳಲ್ಲಿ ದೇವಸ್ಥಾನಗಳಲ್ಲಿನ ದೀಪಾವಳಿ

ದೇಶವಿದೇಶಗಳಲ್ಲಿ ಹರಡಿರುವ ಹರೇಕೃಷ್ಣ ದೇವಸ್ಥಾನಗಳಿಂದ ಮತ್ತು ಸ್ವಾಮಿನಾರಾಯಣ ದೇವಸ್ಥಾನದಿಂದಲೂ ದೀಪಾವಳಿ ಆಚರಿಸಲಾಗುತ್ತದೆ. ವಿಶೇಷವಾಗಿ ಹರೇಕೃಷ್ಣ ದೇವಸ್ಥಾನದಲ್ಲಿ ಜುಟ್ಟು ಬಿಟ್ಟಿರುವ, ಪಂಚೆ ಧರಿಸಿರುವ ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ, ಕೃಷ್ಣ ಹರೇ ಹರೇ ಎನ್ನುತ್ತ ಕುಣಿಯುವ ಮತ್ತು ಗಂಟೆಗಟ್ಟಲೆ ಹಾರ್ಮೋನಿಯಂ ಮೇಲೆ ಈ ಜಪವನ್ನು ನುಡಿಸುವ ವಿದೇಶಿ ಭಕ್ತರು ದೀಪಾವಳಿಯ ದಾರಿ ಕಾಯುತ್ತಿರುತ್ತಾರೆ. ನ್ಯೂಝಿಲೆಂಡನಲ್ಲಿರುವ ಭಾರತೀಯ ದೇವಸ್ಥಾನಗಳಿಂದ ದೀಪಾವಳಿ ನಿಮಿತ್ತ ಔತಣಕೂಟ ಎಂದರೆ ಅನ್ನ ಸಂತರ್ಪಣೆಯ ಆಯೋಜನೆಯನ್ನು ಮಾಡುತ್ತಾರೆ; ಭಕ್ತರು ಅಕ್ಷರಶಃ ಸಾವಿರಾರು ಪ್ರಕಾರಗಳ ಪದಾರ್ಥಗಳನ್ನು ಸಿದ್ಧಪಡಿಸಿ ಅದನ್ನು ಆಕರ್ಷಕವಾಗಿ ಜೋಡಿಸಿರುತ್ತಾರೆ. ಲಕ್ಷ್ಮೀ ಪೂಜೆಯ ದಿನದಂದು ಖಾತೆಪುಸ್ತಕದ ಪೂಜೆಯನ್ನು ಈ ದೇವಸ್ಥಾನದಲ್ಲಿ ಹಾಗೂ ವಿವಿಧ ಭಾರತೀಯ ಅಂಗಡಿಗಳಲ್ಲಿ ಮಾಡಲಾಗುತ್ತದೆ. ಅನೇಕ ಭಾರತೀಯರ ಅಂಗಡಿಗಳಲ್ಲಿ ಈ ದಿನದಂದು ಲೆಕ್ಕ ಬರೆಯುವ ಪುಸ್ತಕಗಳ ಪೂಜೆಗೆ ಎಲ್ಲ ಕಾರ್ಮಿಕರನ್ನು ಕರೆಯಿಸಿ ಮಿಠಾಯಿ ಮತ್ತು ಬೋನಸ ವಿತರಿಸುತ್ತಾರೆ. ಆನಂದದ ಈ ದೀಪಾವಳಿ ಎಲ್ಲೆಡೆಯೂ ಚೈತನ್ಯದ ಮೆರುಗು ಹೆಚ್ಚಿಸುತ್ತದೆ. ಭಾರತೀಯ ದೀಪಾವಳಿ ಈಗ ಜಾಗತಿಕ ಮಟ್ಟದಲ್ಲಿ ಆಚರಣೆಯಾಗುತ್ತಿದೆ. – ಕಲ್ಯಾಣಿ ಗಾಡಗೀಳ (ಲೋಕಮತ ದಿನಪತ್ರಿಕೆ, ಅಕ್ಟೋಬರ ೨೦೧೬)