ಗೋವತ್ಸ ದ್ವಾದಶಿ (ನವೆಂಬರ್ ೧೨)
ಹಬ್ಬವನ್ನು ಆಚರಿಸುವ ಪದ್ಧತಿ : ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂಕಾಲ ಕರು ಸಮೇತವಿರುವ ಆಕಳ ಪೂಜೆಯನ್ನು ಮಾಡುತ್ತಾರೆ.
ಗೋವತ್ಸದ್ವಾದಶಿಯ ಮಹತ್ವ
ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬಾ ಮಹತ್ವವಿದೆ. ಅವಳನ್ನು ಮಾತೆಯೆಂದು ಸಂಬೋಧಿಸಲಾಗುತ್ತದೆ. ಅವಳು ಸಾತ್ತ್ವಿಕಳಾಗಿರುವುದರಿಂದ ಅವಳ ಪೂಜೆಯನ್ನು ಮಾಡಿ ಎಲ್ಲರೂ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದಿರುತ್ತದೆ. ತನ್ನ ಸಹವಾಸದಿಂದ ಇತರರನ್ನು ಪಾವನಗೊಳಿಸುವ, ತನ್ನ ಹಾಲಿನಿಂದ ಸಮಾಜವನ್ನು ಬಲಿಷ್ಠಗೊಳಿಸುವ, ಕೃಷಿಗಾಗಿ ತನ್ನ ಸೆಗಣಿಯಿಂದ ಗೊಬ್ಬರವನ್ನು ನೀಡುವ, ಕೃಷಿಗೆ ಉಪಯುಕ್ತವಾದ ಎತ್ತುಗಳಿಗೆ ಜನ್ಮ ನೀಡುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆಯಿರುವ ಗೋಮಾತೆ ಯನ್ನು ಈ ದಿನದಂದು ಪೂಜೆ ಮಾಡಬೇಕು. ಎಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಸಂವರ್ಧನೆಯಾಗುತ್ತದೆ ಹಾಗೂ ಪೂಜ್ಯ ಭಾವದಿಂದ ಅವಳ ಪೂಜಿಸಲಾಗುತ್ತದೆ. ಅಲ್ಲಿನ ವ್ಯಕ್ತಿಗಳು, ಆ ಸಮಾಜ ಮತ್ತು ಆ ರಾಷ್ಟ್ರದ ಸಮೃದ್ಧಿಯು ನಿಶ್ಚಿತವಾಗಿ ಆಗುತ್ತದೆ. ಇಂತಹ ಗೋಮಾತೆಯನ್ನು ಅವಳ ಕರುಗಳ ಸಹಿತ ಪೂಜಿಸಿ ದೀಪಾವಳಿ ಆಚರಿಸಬೇಕು. – ಪ.ಪೂ. ಪರಶರಾಮ ಪಾಂಡೆ ಮಹಾರಾಜರು.
ಧನತ್ರಯೋದಶಿ (ನವೆಂಬರ್ ೧೩)
ಆಶ್ವಯುಜ ಕೃಷ್ಣ ತ್ರಯೋದಶಿ ಈ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು (ಕೋಶಾಗಾರ) ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆ ಕಿರ್ದಿಗಳನ್ನು (ಪುಸ್ತಕಗಳನ್ನು) ಈ ದಿನವೇ ತರುತ್ತಾರೆ. ವಾಸ್ತವದಲ್ಲಿ ಲಕ್ಷ್ಮೀ ಪೂಜೆಯ ಸಮಯ ದಲ್ಲಿ ಇಡೀ ವರ್ಷದ ಜಮಾಖರ್ಚನ್ನು ಕೊಡುವುದಿರುತ್ತದೆ. ಜಮೆ-ಖರ್ಚಿನ ಬಗ್ಗೆ ವರದಿಯನ್ನಿಟ್ಟು ಲಕ್ಷ್ಮೀಯ ಪೂಜೆ ಮಾಡುತ್ತಾರೆ.
ಭಾವಾರ್ಥ: ನಮ್ಮ ಜೀವನವು ಧನದಿಂದಾಗಿ ಸರಿಯಾಗಿ ನಡೆದಿರುತ್ತದೆ, ಆದುದರಿಂದ ಈ ಧನವನ್ನು ಪೂಜಿಸುತ್ತಾರೆ. ಇಲ್ಲಿ ‘ಧನ’ವೆಂದರೆ ಶುದ್ಧ ಲಕ್ಷ್ಮೀ. ಶ್ರೀಸೂಕ್ತದಲ್ಲಿ ವಸು, ಜಲ, ವಾಯು, ಅಗ್ನಿ ಮತ್ತು ಸೂರ್ಯ ಇವೆಲ್ಲವನ್ನು ಧನವೆಂದೇ ಪರಿಗಣಿಸಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅವಳೇ ನಿಜವಾದ ಲಕ್ಷ್ಮೀ !
ಧನತ್ರಯೋದಶಿಯವರೆಗೆ ಬಾಕಿ ಉಳಿದ ಸಂಪತ್ತನ್ನು ಪ್ರಭುಕಾರ್ಯಕ್ಕಾಗಿ ಖರ್ಚು ಮಾಡಬೇಕು, ಸತ್‌ಕಾರ್ಯಕ್ಕಾಗಿ ಧನವು ಖರ್ಚು ಮಾಡಿದುದರಿಂದ ಧನಲಕ್ಷ್ಮೀಯು ಕೊನೆತನಕ ಲಕ್ಷ್ಮೀರೂಪದಲ್ಲಿ ಮನೆಯಲ್ಲಿ ಇರುತ್ತಾಳೆ.