ಬಂಗಾಲದಲ್ಲಿ ದೀಪಾವಳಿಯಲ್ಲಿ ಪಟಾಕಿ ಹೊಡೆಯುವುದು ಹಾಗೂ ಮಾರಾಟ ಮಾಡಲು ನಿಷೇಧ ! – ಕೋಲಕಾತಾ ಉಚ್ಚ ನ್ಯಾಯಾಲಯ

  • ನ್ಯಾಯಾಲಯಕ್ಕೆ ಈ ರೀತಿ ಏಕೆ ಆದೇಶ ನೀಡಬೇಕಾಗುತ್ತದೆ ? ಸರಕಾರಕ್ಕೆ ಅದರ ಮಹತ್ವ ತಿಳಿದಿಲ್ಲವೇ ? ಅಥವಾ ಈ ರೀತಿಯ ನಿರ್ಣಯದಿಂದಾಗಿ ಜನರು ಅಸಮಧಾನಗೊಂಡರೆ ಮತಗಳ ಮೇಲೆ ಪರಿಣಾಮವಾಗಬಹುದು, ಈ ಭಯದಿಂದ ಜನರ ಆರೋಗ್ಯವನ್ನು ದುರ್ಲಕ್ಷಿಸುತ್ತಾರೆಯೇ ?

  • ದೇಶವು ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ ಪಟಾಕಿಗಳ ಮೇಲೆ ಕೋಟಿಗಟ್ಟಲೆ ರೂಪಾಯಿಗಳ ದುಂದುವೆಚ್ಚ ಮಾಡುವ ಭಾರತದಲ್ಲಿ ಕೇವಲ ದೀಪಾವಳಿಯಷ್ಟೇ ಅಲ್ಲದೇ ಅವುಗಳನ್ನು ಶಾಶ್ವತವಾಗಿ ನಿಷೇಧಿಸಬೇಕು

ಕೋಲಕಾತಾ (ಬಂಗಾಲ) – ಕೋಲಕಾತಾ ಉಚ್ಚ ನ್ಯಾಯಾಲಯವು ಕೊರೋನಾದ ವಿಪತ್ತಿನ ಹಿನ್ನಲೆಯಲ್ಲಿ ರಾಜ್ಯದ ಶ್ರೀ ಮಹಾಕಾಳಿ ಪೂಜೆ, ಛಟ ಪೂಜೆ, ಗುರುನಾನಕ ಜಯಂತಿ ಹಾಗೂ ದೀಪಾವಳಿ ಇಂತಹ ಹಬ್ಬಗಳಲ್ಲಿ ಪಟಾಕಿಯನ್ನು ಹೊಡೆಯುವುದು ಅಥವಾ ಅದರ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಿದೆ.

ನ್ಯಾಯಾಲಯವು ಈ ಬಗ್ಗೆ ಬಂಗಾಲದ ಸರಕಾರಕ್ಕೆ ಆದೇಶ ನೀಡಿದೆ. ನ್ಯಾಯಾಲಯವು, ಈ ಹಬ್ಬಗಳ ಸಮಯದಲ್ಲಿ ನಾಗರಿಕರ ಒಳಿತಿಗಾಗಿ ಹಾಗೂ ವ್ಯಾಪಕ ಸಾರ್ವಜನಿಕರ ಹಿತದ ದೃಷ್ಟಿಯಿಂದ ಕೇವಲ ಎಣ್ಣೆಯ ದೀಪ ಅಥವಾ ಮೇಣದ ಬತ್ತಿಯ ದೀಪ ಹಚ್ಚಿದರೂ ಸಾಕು ಎಂದೂ ಹೇಳಿದೆ. (ಮೇಣದ ಬತ್ತಿಯ ತುಲನೆಯಲ್ಲಿ ತುಪ್ಪದ ಅಥವಾ ಎಣ್ಣೆಯ ದೀಪ ಹಚ್ಚುವುದು ಅಧ್ಯಾತ್ಮಶಾಸ್ತ್ರಾನುಸಾರ ಶ್ರೇಷ್ಠವಾಗಿದೆ ಅಂದರೆ ಲಾಭದಾಯಕವಾಗಿದೆ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)