ಪೂ. ರಮಾನಂದಣ್ಣ ಇವರು ಮೋಕ್ಷಗುರು ಗುರುದೇವರ ಬಗ್ಗೆ ವ್ಯಕ್ತಪಡಿಸಿದ ಭಾವಪೂರ್ಣ ಕೃತಜ್ಞತೆ !

ಪೂ. ರಮಾನಂದ ಗೌಡ

೨೭.೮.೨೦೨೦ ರಂದು ಕರ್ನಾಟಕ ರಾಜ್ಯದ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಸಾಧಕರಲ್ಲಿ ಕೆಲವು ಸಾಧಕರ ಅಧೋಗತಿಯಾಯಿತು, ಕೆಲವು ಜನರ ಆಧ್ಯಾತ್ಮಿಕ ಮಟ್ಟವು ಅಷ್ಟೇ ಉಳಿಯಿತು ಮತ್ತು ಕೆಲವು ಸಾಧಕರ ಪ್ರಗತಿಯಾಯಿತು. ಇಂತಹ ಎಲ್ಲ ಸಾಧಕರಿಗಾಗಿ ಒಂದು ಮಾರ್ಗದರ್ಶನವನ್ನು ಏರ್ಪಡಿಸಲಾಗಿತ್ತು.

ಈ ಸತ್ಸಂಗದಲ್ಲಿ ಎಲ್ಲ ಸ್ತರದ ಕೆಲವು ಸಾಧಕರು ಸಾಧನೆಯಲ್ಲಿ ಎಲ್ಲಿ ಕಡಿಮೆ ಬಿದ್ದರು, ಯಾವ ದೋಷಗಳಿಂದಾಗಿ ಸಾಧನೆಯಲ್ಲಿ ಹಿಂದೆ ಉಳಿದರು ಎಂಬ ಚಿಂತನೆಯನ್ನು ಹೇಳಿದರು. ನಂತರ ಪೂ. ರಮಾನಂದ ಅಣ್ಣನವರು ಸಾಧನೆಯಲ್ಲಿ ಮುಂದೆ ಹೋಗಲು ಯಾವ ರೀತಿ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು, ಭವಿಷ್ಯದಲ್ಲಿ ಹೇಗೆ ಪ್ರಯತ್ನ ಮಾಡಬೇಕು, ನಮ್ಮಲ್ಲಿ ಶಿಷ್ಯಭಾವ ಹೇಗಿರಬೇಕು ಎಂಬ ಬಗ್ಗೆ ಮಾರ್ಗದರ್ಶನ ಮಾಡಿದರು ಮತ್ತು ನಮ್ಮಲ್ಲಿ ಏನು ಕೊರತೆ ಇದೆ, ಯಾವ ಗುಣಗಳ ಅಭಾವದಿಂದಾಗಿ ನಾವು ಕಡಿಮೆ ಬಿದ್ದೆವು ಎಂಬ ಚಿಂತನೆ ಮಾಡಿ ನಮ್ಮಲ್ಲಿ ಬದಲಾವಣೆ ಮಾಡಿಕೊಳ್ಳೋಣ ಮತ್ತು ದೀಪಾವಳಿಯವರೆಗೆ ಧ್ಯೇಯವಿಟ್ಟುಕೊಂಡು ಪ್ರಯತ್ನಿಸೋಣ, ಎಂದು ಹೇಳಿದರು.

ಆ ಮಾರ್ಗದರ್ಶನದ ಕೊನೆಯಲ್ಲಿ ಪೂ. ರಮಾನಂದ ಅಣ್ಣನವರು ಕೃತಜ್ಞತಾಭಾವದಿಂದ ಮತ್ತು ಶರಣಾಗತಭಾವದಿಂದ ಒಂದು ಪ್ರಾರ್ಥನೆಯನ್ನು ಮಾಡಿದರು. ಈ ಪ್ರಾರ್ಥನೆಯು ಅವರಿಗೆ ಆಂತರ್ಯದಿಂದ ಬಂದಿತ್ತು. ಈ ಪ್ರಾರ್ಥನೆಯನ್ನು ಕೇಳಿ ಎಲ್ಲ ಸಾಧಕರ ಭಾವಜಾಗೃತಿಯಾಯಿತು. ಎಲ್ಲ ಸಾಧಕರು ಆ ಸಮಯದಲ್ಲಿ ಬೇರೆಯೇ ಸ್ಥಿತಿಯನ್ನು ಅನುಭವಿಸಿದರು. ಇದೆಲ್ಲವನ್ನು ನಾವು ಸಹ ನಮ್ಮ ಜೀವನದಲ್ಲಿ ಅನುಭವಿಸಿದ್ದೇವೆ, ಎಂದು ಬಹಳಷ್ಟು ಸಾಧಕರಿಗೆ ಅನಿಸಿತು. ಈ ಪ್ರಾರ್ಥನೆಯನ್ನು ಕೇಳುವಾಗ ವಾತಾವರಣದಲ್ಲಿಯೂ ಬದಲಾವಣೆಯಾಗಿತ್ತು. ಈ ಕೃತಜ್ಞತಾಪೂರ್ವಕವಾಗಿ ಮಾಡಲಾದ ಪ್ರಾರ್ಥನೆಯನ್ನು ಕೆಳಗೆ ಕೊಡಲಾಗಿದೆ.

೧. ಹೇ ದಯಾಸಾಗರ, ಹೇ ಕೃಪಾಸಿಂಧು-ಗುರುದೇವ ಅನೇಕ ಜನ್ಮಗಳಲ್ಲಿ ನಾನು ಮಾಡಿದ ಕರ್ಮಗಳಿಂದ ‘ಪುನರಪಿ ಜನನಂ, ಪುನರಪಿ ಮರಣಂ ಈ ಚಕ್ರದಲ್ಲಿ ಸಿಲುಕಿದ ಈ ಅನಾಥನಿಗೆ ದಿಕ್ಕು ಕಾಣದಾಗಿತ್ತು.

ನೀವು ಈ ಜನ್ಮದಲ್ಲಿ ಬಂದು ಕೈಹಿಡಿದು, ನಾನು ಮಾಡಿದ ಅನೇಕ ಜನ್ಮಗಳ ಪಾಪವನ್ನು ಮನ್ನಿಸಿ, ನನಗೆ ಗುರುಕೃಪಾಯೋಗಾನುಸಾರ ಸಾಧನೆಯ ಮಾರ್ಗವನ್ನು ನೀಡಿ, ಈ ಜೀವಕ್ಕೆ ಆಶ್ರಯವನ್ನು ನೀಡಿದಿರಿ, ನಿಮ್ಮ ಅಪಾರ ಕೃಪೆಯಿಂದಲೇ ನನ್ನನ್ನು ಈ ಜನ್ಮ – ಮೃತ್ಯು ಚಕ್ರದಿಂದ ಮುಕ್ತನನ್ನಾಗಿ ಮಾಡಿದಿರಿ.

೨. ಸದ್ಗುರುಗಳು ಜನ್ಮವಿಲ್ಲದಂತೆ ಮಾಡುವರು. ಆದರೆ ಇವತ್ತು ನಮ್ಮ ಜೀವನದಲ್ಲಿ ಪರಾತ್ಪರ ಗುರುಗಳಾಗಿ ನೀವೇ ಲಭಿಸಿದ್ದೀರಿ. ನೀವೇ ಈ ಜೀವನೋದ್ಧಾರಕರಾಗಿದ್ದೀರಿ…. ನೀವು ನೀಡಿದಂತಹ ಪ್ರೀತಿಯನ್ನು ಹೇಗೆ ಬಣ್ಣಿಸಲಿ. ನಿಮ್ಮ ಲೀಲೆಯನ್ನು ಹೇಗೆ ವರ್ಣಿಸಲಿ…

೩. ನಾನು ಅದೆಷ್ಟೋ ಬಾರಿ ಜೀವನದುದ್ದಕ್ಕೂ ಅನುಭವವನ್ನು ಮಾಡಿದ್ದೇನೆ.

ನನ್ನೊಳಗೆ ಮಾಯೆ, ಮೋಹ, ಕ್ರೋಧ, ಲೋಭ, ವಾಸನೆಗಳು ತುಂಬಿ ಹೋಗಿವೆ. ಇದನ್ನು ದೂರ ಮಾಡುವವರು ಕೇವಲ ನೀವು ಮಾತ್ರ ಗುರುದೇವಾ. ನೀವೇ ತಮ್ಮ ದಿವ್ಯ ದೃಷ್ಟಿಯಿಂದಲೇ ಇದನ್ನು ನಷ್ಟ ಮಾಡಬೇಕಾಗಬಹುದು. ನನ್ನಲ್ಲಿ ಅದನ್ನು ಕಡಿಮೆ ಮಾಡಲು ತೃಣಮಾತ್ರವೂ ಶಕ್ತಿ ಇಲ್ಲ.

೪. ನೀವು ಮಾಡಿದ ಕೃಪೆಗಾಗಿ ನಾನು ಇನ್ನೆಷ್ಟೋ ಜನ್ಮ ತೆಗೆದುಕೊಂಡು ಬಂದರೂ, ನಿಮ್ಮ ಋಣದಿಂದ ಮುಕ್ತನಾಗಲು ಸಾಧ್ಯವಿಲ್ಲ. ಈ ಕಲಿಯುಗದ ಘೋರ ಅಂಧಕಾರದ ಸುಳಿವಿನಲ್ಲಿ ಈ ಜೀವ ಸಿಲುಕಿ ಹಾಕಿಕೊಂಡಿತು. ಅಜ್ಞಾನದ ತುತ್ತ ತುದಿಯಲ್ಲಿ ಇದ್ದಂತಹ ಈ ಪಾಪಿ ಜೀವವನ್ನು, ಅನಂತ ಅಪರಾಧಗಳನ್ನು ಮಾಡಿದ ನನ್ನನ್ನು ಇದೆಲ್ಲದರಿಂದ ಹೊರತೆಗೆದು, ಅಷ್ಟು ಮಾತ್ರವಲ್ಲ ಅವೆಲ್ಲವನ್ನು ಕ್ಷಮಿಸಿ, ಜನ್ಮ-ಮೃತ್ಯು ಚಕ್ರದಿಂದ ಕೇವಲ ನೀವೇ ಪಾರು ಮಾಡಿದ್ದೀರಿ. ಇದೆಲ್ಲವೂ ನಿಮ್ಮ ಕೃಪಾದೃಷ್ಟಿಯಿಂದ ಮಾತ್ರ ಸಾಧ್ಯವಾಯಿತು. ಇದರಲ್ಲಿ ನನ್ನದೇನೂ ಪಾತ್ರವೇ ಇಲ್ಲ. ನನ್ನ ಮನಸ್ಸು, ಬುದ್ಧಿಯಲ್ಲಿ ಜನ್ಮಜನ್ಮದ ಕಲ್ಮಶಗಳು ತುಂಬಿದ್ದನ್ನು ನೀವೇ ದೂರ ಮಾಡಿದ್ದೀರಿ.

ಅಷ್ಟು ಮಾತ್ರವಲ್ಲದೇ, ನನ್ನ ಅಂತರ್ಮನಸ್ಸನ್ನು ಶುದ್ಧ ಮಾಡಿ, ಅಲ್ಲಿ ಸಾಧನೆಯ ಸಂಸ್ಕಾರವನ್ನು ನಿರ್ಮಾಣ ಮಾಡಿದ್ದೀರಿ. ಮತ್ತು ಹೃದಯದಲ್ಲಿ ಸಾಧನೆಯನ್ನು ಸ್ಥಿರಗೊಳಿಸಿದ್ದೀರಿ. ಅದಕ್ಕಾಗಿ ನಿಮ್ಮ ಚರಣದಲ್ಲಿ ಅನಂತ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

೫. ನನಗೆ ಎಂತಹ ಜ್ಞಾನವನ್ನು ನೀಡಿದ್ದೀರಿ.. ಜನಸಾಮಾನ್ಯರು ಅರ್ಥ ಮಾಡಿಕೊಳ್ಳಲಾಗದಂತಹ, ಗ್ರಹಣ ಮಾಡಿಕೊಳ್ಳಲಾಗದಂತಹ ಸ್ಥಿತಿಯಲ್ಲಿರುವರು. ಆದರೆ ನೀವೆಷ್ಟು ಕೃಪಾಳು ಇದ್ದೀರಿ. ನನ್ನ ಮನಸ್ಸು, ಬುದ್ಧಿಯ ಅಜ್ಞಾನವನ್ನು ದೂರ ಮಾಡಿ, ನನಗೆ ಯೋಗ್ಯತೆ ನೀಡಿ, ನಿಮ್ಮ ಜ್ಞಾನವನ್ನು ಗ್ರಹಣ ಮಾಡುವ ಕ್ಷಮತೆಯನ್ನು ವೃದ್ಧಿಸಿ, ನನ್ನಲ್ಲಿ ಈ ಸ್ಥಿತಿಯನ್ನು ನೀವೇ ನಿರ್ಮಾಣ ಮಾಡಿದ್ದೀರಿ. ಈ ನಿಮ್ಮ ಕೃಪೆಗಾಗಿ ಇನ್ನು ಜೀವನಪೂರ್ತಿ ಆಯುಷ್ಯವನ್ನು ಸಾಧನೆಗಾಗಿಯೇ ಮುಡಿಪಾಗಿಡುವೆನು. ಜೀವನ್ಮುಕ್ತ ಮತ್ತು ಬಂಧನ್ಮುಕ್ತಕ್ಕಾಗಿ ನೀವು ತೋರಿಸಿದ, ಈ ಮೋಕ್ಷದ ಮಾರ್ಗದಲ್ಲಿ ಅನೇಕ ಸಾಧಕರು, ಜನ್ಮ ಮೃತ್ಯುವಿನ ಚಕ್ರದಿಂದ ಬಿಡುಗಡೆಯಾದರೆ, ಇನ್ನೂ ಕೆಲವರು ಸಂತರಾದರು, ಸದ್ಗುರುಗಳಾದರು, ಪರಾತ್ಪರ ಗುರುಗಳ ಪದವಿಯನ್ನು ತಲುಪಿದರು.

ಈ ಶ್ರೇಷ್ಠ ಪದವಿಯನ್ನು ತಲುಪಲು ಸಚ್ಚಿದಾನಂದ ಸ್ವರೂಪಿ ಸರ್ವಶಕ್ತ (ಪ.ಪೂ. ಡಾಕ್ಟರರ) ಕೃಪೆಯಿಂದಲೇ ಸಾಧ್ಯವಾಯಿತು. ಇದೇ ಮಾರ್ಗದಲ್ಲಿ ನೀವೇ ನಮ್ಮನ್ನು ಮುಂದೆ ಕರೆದುಕೊಂಡು ಹೋಗುವಿರೆಂದು ಸಮರ್ಪಣಾಭಾವದಿಂದ ಬೇಡುತ್ತಿದ್ದೇನೆ ಗುರುದೇವಾ.

೬. ನನ್ನ ಜೀವನದಲ್ಲಿ ನೀವು ಬಂದ ನಂತರ, ನನ್ನ ಅನೇಕ ಜನ್ಮದ ಪ್ರಾರಾಬ್ಧಗಳನ್ನು, ಅಂದರೆ ಶಾರೀರಿಕ ತೊಂದರೆ (ದೇಹ ಪ್ರಾರಬ್ಧ), ಮಾನಸಿಕ ತೊಂದರೆ (ಮನೋಪ್ರಾರಬ್ಧ,) ಅನೇಕ ರೀತಿಯ ಕೌಟುಂಬಿಕ ಅಡಚಣೆ, ಆರ್ಥಿಕ ಅಡಚಣೆ (ಕೊಡುಕೊಳ್ಳುವ ಲೆಕ್ಕಾಚಾರ) ಮತ್ತು ಆಧ್ಯಾತ್ಮಿಕ ತೊಂದರೆಗಳು, ಇಷ್ಟು ಮಾತ್ರವಲ್ಲದೇ ಈ ಶರೀರದಿಂದ ಈ ಪ್ರಾಣ ಹೋಗುವಂತಹ ಮೃತ್ಯುಯೋಗವು ಅನೇಕ ಬಾರಿ ಬಂದಿರಬಹುದು. ಅಂತಹ ಸ್ಥಿತಿಯಲ್ಲಿ ನನಗೆ ನೀವೇ ಪ್ರಾಣದಾನವನ್ನು ನೀಡಿದ್ದೀರಿ. ಇಂತಹ ಘೋರ ಪ್ರಾರಬ್ಧದಲ್ಲಿ ಸಿಲುಕಿ, ನಲುಗಿದ ನನ್ನನ್ನು ಕೃಪೆ ತೋರಿ ನೀವೇ ಬಿಡಿಸಿದ್ದೀರಿ.

೭. ನಾನು ಮಾಡಿದ್ದು ಏನೂ ಇಲ್ಲ. ನೀವೇ ಎಲ್ಲವನ್ನು ಮಾಡಿದ್ದೀರಿ. ಈ ನಿಮ್ಮ ಕೃಪೆಗಾಗಿ ನಾನು ಎಷ್ಟು ಕೃತಜ್ಞತೆ ವ್ಯಕ್ತ ಪಡಿಸಿದರೂ ಕಡಿಮೆಯೇ ಗುರುದೇವಾ.

ಒಂದು ವೇಳೆ ನಾನು ನಿಮ್ಮನ್ನು ಹಿಡಿದುಕೊಂಡಿದ್ದರೆ, ನಾನು ಯಾವಾಗಲೋ ಜಾರಿ ಹೋಗುತ್ತಿದ್ದೆ. ಇವತ್ತು ನೀವೇ ನನ್ನ ಕೈ ಹಿಡಿದುಕೊಂಡಿದ್ದೀರಿ. ಆದ್ದರಿಂದ ನಾನು ಬದುಕುಳಿಯಲು ಮತ್ತು ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ಇವತ್ತು ನಾನು ಇಂತಹ ಸ್ಥಿತಿಯಲ್ಲಿರಲು ನೀವೇ ಕಾರಣರಿದ್ದೀರಿ. ಗುರುದೇವಾ.

೮. ಇವತ್ತು ನನ್ನ ತಂದೆ, ತಾಯಿ, ಹೆಂಡತಿ, ಮಕ್ಕಳು, ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ನನ್ನ ಮೇಲೆ ನಿಗಾವನ್ನು ಇಡಲಾರರು.

ಇವತ್ತು ನನ್ನ ಮೇಲೆ ತಾವೇ ನಿಗಾ ಇಟ್ಟು, ತಮ್ಮ ಕೃಪಾ ಕಟಾಕ್ಷದಿಂದಲೇ, ನನ್ನ ಮನಸ್ಸು, ಬುದ್ಧಿ ಮತ್ತು ಅಹಂ ಅನ್ನು ಸಂಘರ್ಷ ಮಾಡಿ, ಜಯಿಸುವ ಶಕ್ತಿಯನ್ನು ನೀವೇ ಕರುಣಿಸಿದ್ದೀರಿ. ಜೊತೆಗೆ ಹಿಂದೂ ರಾಷ್ಟ್ರಸ್ಥಾಪನೆಯ ಈ ಮಹಾನ್ ಕಾರ್ಯದಲ್ಲಿ ನನ್ನನ್ನು ಜೋಡಿಸಿಕೊಂಡಿದ್ದೀರಿ. ಇದಕ್ಕಾಗಿ ಎಷ್ಟು ಕೃತಜ್ಞತೆ ವ್ಯಕ್ತ ಮಾಡಿದರೂ ಕಡಿಮೆಯೇ ಇದೆ ಗುರುದೇವಾ. ಈಗ ನಿಮ್ಮ ಅಖಂಡ ಸ್ಮರಣೆ ಒಂದೇ, ನನ್ನ ಅಂತರ್ಮನಸ್ಸಿನಲ್ಲಿ ನಡೆಯುತ್ತಿರಲಿ.

೯. ಈ ನಿಮ್ಮ ಕೃಪೆಗಾಗಿ ಇನ್ನೆಷ್ಟೋ ಜನ್ಮ ತೆಗೆದುಕೊಂಡರೂ, ನಿಮ್ಮ ಋಣವನ್ನು ತೀರಿಸಲು ಸಾಧ್ಯವಿಲ್ಲ ಗುರುದೇವಾ…ನಿಮ್ಮಲ್ಲಿ ಬೇಡಲು ಏನೂ ಉಳಿದಿಲ್ಲ..ನೀವು ಎಲ್ಲವನ್ನು ಬೇಡದೆಯೇ ನೀಡಿದ್ದೀರಿ.. ಹೇ ಗುರುದೇವಾ.. ನನ್ನನ್ನು ಈ ಭವ ಬಂಧನದಿಂದ ಮುಕ್ತನನ್ನಾಗಿ ಮಾಡುವವರು, ಈ ಪೃಥ್ವಿಯಲ್ಲಿ ನೀವು ಬಿಟ್ಟರೆ ಬೇರೆ ಯಾರೂ ಇಲ್ಲ. ಬೇರೆ ಯಾರಿಂದಲೂ ಸಾಧ್ಯವಿಲ್ಲ.

೧೦. ನಿಮ್ಮ ಪಾದ ಪದ್ಮಗಳ ಆಸರೆ ಬಯಸಿ ಬಂದಿದ್ದೇನೆ. ನನಗೆ ದಯೆ ತೋರುವವರು ನೀವೊಬ್ಬರೇ ಶ್ರೀಹರಿ….ನನ್ನ ಹೃದಯ ನಿಮಗಾಗಿ ವ್ಯಾಕುಲಗೊಳ್ಳುತ್ತಿದೆ. ಇನ್ನು ನನಗೆ ಉಳಿದದ್ದು ಒಂದೇ ಧ್ಯೇಯ. ನಿಮ್ಮ ಚರಣ ಸೇರುವುದು.

ಅದಕ್ಕಾಗಿ ನನ್ನಲ್ಲಿ ತೀವ್ರ ತಳಮಳ, ಅಖಂಡ ಭಾವಾವಸ್ಥೆ, ಅಚಲವಾದ ಶ್ರದ್ಧೆ, ನೀವೇ ನಿರ್ಮಾಣ ಮಾಡಿರೆಂದು ನಿಮ್ಮ ಚರಣದಲ್ಲಿ ಪರಿಪರಿಯಾಗಿ ಪ್ರಾರ್ಥಿಸಿ ಬೇಡಿಕೊಳ್ಳುತ್ತಿದ್ದೇನೆ.

೧೧. ಇನ್ನು ಮುಂದೆ ಈ ಜೀವಕ್ಕೆ ಆಧಾರವು ನೀವೇ. ಈ ದೇಹದಿಂದ ಪ್ರಾಣ ಹೋಗುವ ಮುಂಚೆ ನಿಮ್ಮ ಚರಣದ ಧೂಳಾಗಿ ಸಮರ್ಪಣೆಯನ್ನು ಮಾಡಿಸಿಕೊಳ್ಳಿರಿ. ಇದಕ್ಕಾಗಿ ನಿಮ್ಮ ಆಶೀರ್ವಾದ, ಕೃಪೆಗಾಗಿ ಅಂಗಲಾಚಿ ಶರಣಾಗತಿಯಿಂದ ಬೇಡಿಕೊಳ್ಳುತ್ತಿರುವೆನು.

– ಪೂ. ರಮಾನಂದ ಗೌಡ, ಮಂಗಳೂರು. (೨೭.೮.೨೦೨೦)