ಬಹುಗುಣಿ ಭೀಮಸೇನಿ ಆಯುರ್ವೇದಿಕ ಕರ್ಪೂರ !

ಹಿಂದೂ ಧರ್ಮದಲ್ಲಿ ಪೂಜೆಯಲ್ಲಿ ಕರ್ಪೂರದಾರತಿಗೆ ಕರ್ಪೂರವನ್ನು ಉಪಯೋಗಿಸಲಾಗುತ್ತದೆ. ಇದರ ಜೊತೆಗೆ ಕರ್ಪೂರದಿಂದ ಅನೇಕ ಉಪಯೋಗಗಳಿವೆ. ಆ ಬಗ್ಗೆ ಇಲ್ಲಿ ಮಾಹಿತಿ ಪಡೆಯೋಣ.

೧. ಆಕಾರ

ಭೀಮಸೇನಿ ಆಯುರ್ವೇದಿಕ ಕರ್ಪೂರಕ್ಕೆ ವಿಶಿಷ್ಟವಾದ ಆಕಾರವಿರುವುದಿಲ್ಲ. ಈ ಕರ್ಪೂರವು ಸ್ಫಟಿಕದಂತೆ ಕಾಣಿಸುತ್ತದೆ. ಇದನ್ನು ಗೋಲಾಕಾರ ಅಥವಾ ಚೌಕೋನ ಆಕಾರ ಮಾಡಲು ಬರುವುದಿಲ್ಲ; ಏಕೆಂದರೆ ಸಾಮಾನ್ಯವಾಗಿ ದೊರಕುವ ಕರ್ಪೂರದಂತೆ ಇದರಲ್ಲಿ ಮೇಣ ಇರುವುದಿಲ್ಲ.

೨. ಔಷಧಿಗಾಗಿ ಭೀಮಸೇನಿ ಆಯುರ್ವೇದಿಕ ಕರ್ಪೂರದ ಉಪಯೋಗ

೨ ಅ. ಶೀತ ಮತ್ತು ಕೆಮ್ಮು ಇವುಗಳನ್ನು ಗುಣಪಡಿಸುತ್ತದೆ.

೧. ಶೀತ, ಕೆಮ್ಮು ಇದ್ದಾಗ ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದರಲ್ಲಿ ಈ ಕರ್ಪೂರದ ಪುಡಿಯನ್ನು ಹಾಕಬೇಕು ಮತ್ತು ಅದರ ಹಬೆ ತೆಗೆದುಕೊಳ್ಳಬೇಕು.

೨. ವ್ಯಕ್ತಿಯ ಮೂಗು, ಹಣೆ ಮತ್ತು ಎದೆ ಇವುಗಳಿಗೆ ಕರ್ಪೂರವನ್ನು ಹಚ್ಚಬೇಕು. ಚಿಕ್ಕ ಮಕ್ಕಳಿಗೂ ಕರ್ಪೂರ ಹಚ್ಚಬಹುದು. ಕರವಸ್ತ್ರದಲ್ಲಿ ಕರ್ಪೂರದ ಪುಡಿ ಹಾಕಿ ಅದರ ಪರಿಮಳವನ್ನು ತೆಗೆದುಕೊಳ್ಳಬೇಕು ಅಥವಾ ಒಂದು ಚಿಕ್ಕ ಡಬ್ಬಿಯಲ್ಲಿ ಕರ್ಪೂರವನ್ನಿಟ್ಟು ಆ ಡಬ್ಬವನ್ನು ಜೊತೆಗಿಟ್ಟುಕೊಳ್ಳಬೇಕು. ‘ವಿಕ್ಸ್’ನ ಅಭ್ಯಾಸವನ್ನು ತಪ್ಪಿಸಬೇಕು.

೩. ಕರವಸ್ತ್ರದಲ್ಲಿ ಕರ್ಪೂರದ ಕೆಲವು ತುಂಡುಗಳನ್ನು ದಾರದಿಂದ ಕಟ್ಟಿಟ್ಟರೆ ಕರವಸ್ತ್ರಕ್ಕೆ ಸುಗಂಧ ಬರುತ್ತದೆ ಮತ್ತು ಕರ್ಪೂರದ ಪರಿಮಳ ತೆಗೆದುಕೊಳ್ಳಲು ಸುಲಭವಾಗುತ್ತದೆ. ಆ ಕರವಸ್ತ್ರವನ್ನು ತೊಳೆದರೂ ಕರ್ಪೂರದ ಕಲೆ ಬೀಳುವುದಿಲ್ಲ ಮತ್ತು ಕರ್ಪೂರವು ಸಾಬೂನಿನಲ್ಲಿ ಕರಗುವುದಿಲ್ಲ.

೪. ಕೆಮ್ಮಿನ ಔಷಧಿ ತಯಾರಿಸಲು ಆಯುರ್ವೇದಿಕ ಔಷಧ ಕಂಪನಿಗಳು ಇದೇ ಕರ್ಪೂರವನ್ನು ಉಪಯೋಗಿಸುತ್ತವೆ.

೨ ಆ. ಪ್ರಯಾಣದ ಸಮಯದಲ್ಲಿ ಹಿಮಯುಕ್ತ ಸ್ಥಳದಲ್ಲಿ ಶ್ವಾಸವು ಕಟ್ಟುತ್ತಿದ್ದ ಈ ಕರ್ಪೂರದ ಪರಿಮಳ ತೆಗೆದುಕೊಳ್ಳಬೇಕು.

೨ ಇ. ಸಂದುನೋವು : ಎಳ್ಳಿನ ಎಣ್ಣೆಯಲ್ಲಿ ಕರ್ಪೂರದ ಪುಡಿಯನ್ನು ಹಾಕಿ ಆ ಎಣ್ಣೆಯನ್ನು ಸಂದುಗಳಿಗೆ ಹಚ್ಚಿಕೊಳ್ಳಬೇಕು. ಎಳ್ಳಿನ ಎಣ್ಣೆಯ ವಾಸನೆಯು ಉಗ್ರವಿರುವುದರಿಂದ ಈ ಕರ್ಪೂರಮಿಶ್ರಿತ ಎಣ್ಣೆಯನ್ನು ಹಚ್ಚಿಕೊಂಡಾಗ ಬಟ್ಟೆಗಳಿಗೆ ವಾಸನೆ ಬರುತ್ತದೆ. ಆದ್ದರಿಂದ ಅದರ ಬಗ್ಗೆ ಯೋಗ್ಯ ಕಾಳಜಿಯನ್ನು ವಹಿಸಬೇಕು.

೨ ಈ. ಹಲ್ಲು ನೋವು : ಭೀಮಸೇನಿ ಕರ್ಪೂರದ ಚಿಕ್ಕ ತುಂಡನ್ನು ಹುಳುಕು ಹಲ್ಲಿರುವಲ್ಲಿ ಇಟ್ಟುಕೊಳ್ಳಬೇಕು. ಅದು ತನ್ನಿಂದ ತಾನೆ ಕರಗುತ್ತದೆ ಮತ್ತು ಲಾಲಾರಸವು ಹೊಟ್ಟೆಗೆ ಹೋದರೂ ಏನೂ ಅಪಾಯವಿಲ್ಲ.

೨ ಉ. ಕೂದಲಿನಲ್ಲಾಗುವ ಹೊಟ್ಟಿಗೆ ಉಪಾಯ : ಕೊಬ್ಬರಿ ಎಣ್ಣೆಯಲ್ಲಿ ಈ ಕರ್ಪೂರವನ್ನು ಸೇರಿಸಿ ಆ ಎಣ್ಣೆಯನ್ನು ಕೂದಲುಗಳ ಬೇರುಗಳಿಗೆ ಹಚ್ಚಬೇಕು. ಹೊಟ್ಟಾಗಿರುವ ವ್ಯಕ್ತಿಗೆ ಶೀತದ ತೊಂದರೆ ಇದ್ದಲ್ಲಿ ಕೊಬ್ಬರಿ ಎಣ್ಣೆಯ ಬದಲು ಎಳ್ಳೆಣ್ಣೆಯನ್ನು ಉಪಯೋಗಿಸಬೇಕು.

೩. ಧಾರ್ಮಿಕ ವಿಧಿಯಲ್ಲಿ ಉಪಯೋಗ

ಅ. ಇತರ ಕರ್ಪೂರಗಳಲ್ಲಿ ಮೇಣವಿರುತ್ತದೆ. ಈ ಕರ್ಪೂರ ಶುದ್ಧವಿರುವುದರಿಂದ ಅದನ್ನು ಧಾರ್ಮಿಕ ಕಾರ್ಯದಲ್ಲಿ ಉಪಯೋಗಿಸುತ್ತಾರೆ. ಆರತಿ ಮಾಡುವಾಗ ಈ ಕರ್ಪೂರವನ್ನು ಉರಿಸಬೇಕು. ಗಂಧ ತೇಯುವಾಗ ಅದರಲ್ಲಿ ಕರ್ಪೂರ ಹಾಕಬೇಕು.

ಆ. ದೇವರಿಗೆ ತಾಂಬೂಲ ನೀಡುವಾಗ ಇದೇ ಕರ್ಪೂರ ಇಟ್ಟು ತಾಂಬೂಲ ನೀಡುತ್ತಾರೆ. ದಕ್ಷಿಣ ಭಾರತದಲ್ಲಿ ತೀರ್ಥಕ್ಕೆ ಏಲಕ್ಕಿ ಮತ್ತು ಭೀಮಸೇನಿ ಕರ್ಪೂರವನ್ನು ಬಳಸುತ್ತಾರೆ. ತಿರುಪತಿಯ ಶ್ರೀ ಬಾಲಾಜಿ ದೇವಸ್ಥಾನದಲ್ಲಿನ ಸುಪ್ರಸಿದ್ಧ ಲಾಡುಗಳಲ್ಲಿಯೂ ಇದನ್ನು ಉಪಯೋಗಿಸುತ್ತಾರೆ.

೪. ದೃಷ್ಟಿ ತೆಗೆಯುವುದು

ಈ ಕರ್ಪೂರದ ಎರಡು ಚಿಕ್ಕ ತುಂಡುಗಳನ್ನು ಕೈಯಲ್ಲಿ ತೆಗೆದು ಕೊಂಡು ಸಾಯಂಕಾಲ ಮನೆಯ ದೃಷ್ಟಿಯನ್ನು ತೆಗೆಯಬೇಕು. ನಂತರ ಮನೆಯ ಹೊರಗಡೆ ಹಳೆಯ ಹಣತೆಯಲ್ಲಿ ಅಥವಾ ಒಂದು ಹಳೆಯ ಪಾತ್ರೆಯಲ್ಲಿ ಈ ಕರ್ಪೂರವನ್ನು ಉರಿಸಬೇಕು.

೫. ಇತರ ಉಪಯೋಗ

ಅ. ಪ್ರಯಾಣದ ಬ್ಯಾಗ್ ಅಥವಾ ಬಟ್ಟೆಗಳನ್ನು ಇಡುವ ಬ್ಯಾಗ್‌ಗಳಲ್ಲಿ ಈ ಕರ್ಪೂರವನ್ನಿಟ್ಟರೆ ಅಥವಾ ಇತರ ವಾಸನೆ ಬರದೇ ಸುಗಂಧ ಬರುತ್ತದೆ, ಹಾಗೆಯೇ ಬಟ್ಟೆಗಳಿಗೆ ಗೆದ್ದಲು ಹಿಡಿಯುವುದಿಲ್ಲ ಮತ್ತು ಜಿರಲೆಗಳು ಆಗುವುದಿಲ್ಲ.

ಆ. ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಅವು ಹಸಿ ಇರುತ್ತವೆ. ಇಂತಹ ಬಟ್ಟೆಗಳನ್ನು ಚೀಲದಲ್ಲಿಟ್ಟರೆ ಕಮಟು ವಾಸನೆ ಬರುತ್ತದೆ. ಚೀಲದಲ್ಲಿ ಕರ್ಪೂರ ಇಟ್ಟರೆ ಕಮಟು ವಾಸನೆ ಬರುವುದಿಲ್ಲ.

ಇ. ಕರ್ಪೂರವನ್ನು ಕಾಲುಚೀಲಗಳಲ್ಲಿ ಹಾಕಿದರೆ ಕಾಲುಚೀಲಗಳಿಗೆ ಮತ್ತು ಕಾಲುಗಳಿಗೆ ಕಮಟು ವಾಸನೆ ಬರುವುದಿಲ್ಲ. ಕೆಲವು ಜನರಿಗೆ ಕಾಲುಚೀಲಗಳನ್ನು ಹಾಕಿದರೆ ಕಾಲುಗಳಿಗೆ ತುರಿಕೆ ಬರುತ್ತದೆ. ಕಾಲು ಚೀಲಗಳಲ್ಲಿ ಕರ್ಪೂರ ಹಾಕಿದರೆ ಕಾಲುಗಳಿಗೆ ತುರಿಕೆ ಬರುವುದಿಲ್ಲ.

ಈ. ರಾತ್ರಿ ನಮ್ಮ ಸುತ್ತಲೂ ಕರ್ಪೂರ ಪುಡಿಯನ್ನು ಉದುರಿಸಿದರೆ ಸೊಳ್ಳೆಗಳು ಹತ್ತಿರ ಹಾರಾಡುವುದಿಲ್ಲ, ಹಾಗೆಯೇ, ಇತರ ಕೀಟಗಳು ಮತ್ತು ಇಲಿಗಳಂತಹ ಪ್ರಾಣಿಗಳು ದೂರ ಹೋಗುತ್ತವೆ.

ಉ. ಮನೆಯಲ್ಲಿ ಸೊಳ್ಳೆಗಳಿದ್ದರೆ, ನಾವು ‘ಗುಡ್ ನೈಟ್’ ಯಂತ್ರದಲ್ಲಿ ಮ್ಯಾಟ್ (ಸೊಳ್ಳೆಗಳ ತೊಂದರೆಯನ್ನು ದೂರಮಾಡು ಬಿಲ್ಲೆ) ಹಚ್ಚುತ್ತೇವೆ. ಈ ಯಂತ್ರದಲ್ಲಿ ಮ್ಯಾಟ್ ಬದಲು ಕರ್ಪೂರವನ್ನಿಟ್ಟು ಯಂತ್ರವನ್ನು ಚಾಲು ಮಾಡಬೇಕು. ಕರ್ಪೂರ ಕರಗಿ ಹವೆಯಲ್ಲಿ ಸುಗಂಧವು ಹರಡುತ್ತದೆ ಮತ್ತು ಸೊಳ್ಳೆಗಳು ಓಡಿ ಹೋಗುವವು. ಇದು ಮ್ಯಾಟ್‌ಗಿಂತ ಹೆಚ್ಚು ಸುರಕ್ಷಿತವಿದೆ.

ಊ. ಯಾವತ್ತಾದರೂ ಒಲೆ ಹೊತ್ತಿಸಲು ಅಡಚಣೆಯಾದರೆ ಕೆಲವು ಕರ್ಪೂರದ ತುಂಡುಗಳನ್ನು ಬಳಸಿ ಆ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು. (ಆಧಾರ : ವಾಟ್ಸ್‌ಆಪ್)

ಸಂಧಿವಾತಕ್ಕೂ ಭೀಮಸೇನಿ ಕರ್ಪೂರವು ಉಪಯುಕ್ತ !

ಪುದಿನಾದ ಹೂವುಗಳು, ಅಜ್ವಾನದ ಹೂವುಗಳು ಮತ್ತು ಭೀಮಸೇನಿ ಕರ್ಪೂರ ಇವುಗಳನ್ನು ಸಮಪ್ರಮಾಣದಲ್ಲಿ ಸೇರಿಸಿದಾಗ ಸ್ವಲ್ಪ ಹೊತ್ತಿನ ನಂತರ ಅದು ಎಣ್ಣೆಯಲ್ಲಿ ರೂಪಾಂತರಗೊಳ್ಳುತ್ತದೆ. ಈ ಎಣ್ಣೆಗೆ ‘ಅಮೃತಧಾರಾ ಎಣ್ಣೆ’ ಎನ್ನುತ್ತಾರೆ. ಈ ಎಣ್ಣೆ ಸಂಧಿವಾತಕ್ಕೆ ಅತ್ಯಂತ ಉಪಯುಕ್ತವಾಗಿದೆ.’ – ವೈದ್ಯೆ (ಸೌ.) ಪ್ರಾಚಿ ದಳವಿ-ಮೊಡಕ, ಠಾಣೆ, ಮಹಾರಾಷ್ಟ್ರ (೧೯.೧೨.೨೦೧೭)

(‘ಸನಾತನ-ನಿರ್ಮಿತ ಭೀಮಸೇನಿ ಕರ್ಪೂರವನ್ನು ಸಹ ಮೇಲಿನಂತೆ ಉಪಯೋಗಿಸಲು ಬರುತ್ತದೆ.’ – ಸಂಕಲನಕಾರರು)