ಸಪ್ಟೆಂಬರ್ ೩ ರಿಂದ ಆರಂಭವಾಗಲಿರುವ ಮಹಾಲಯಾರಂಭದ ನಿಮಿತ್ತ…

ಶ್ರಾದ್ಧವನ್ನು ಮಾಡುವುದರ ಮಹತ್ವ

‘ಶ್ರಾದ್ಧ ಎಂದು ಹೇಳಿದೊಡನೆ ಇಂದಿನ ವಿಜ್ಞಾನ ಯುಗದ ಯುವ ಪೀಳಿಗೆಯ ಮನಸ್ಸಿನಲ್ಲಿ ‘ಅಶಾಸ್ತ್ರೀಯ ಮತ್ತು ಅವಾಸ್ತವ ಕರ್ಮಕಾಂಡದ ಆಡಂಬರ ಎಂಬ ತಪ್ಪುಕಲ್ಪನೆಯು ಮೂಡುತ್ತದೆ. ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮವನ್ನು ಅರ್ಥಮಾಡಿಕೊಳ್ಳುವಲ್ಲಿನ ಅನಾಸಕ್ತಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಹಿಂದೂವಿರೋಧಿ ಸಂಘಟನೆಗಳಿಂದ ಹಿಂದೂ ಧರ್ಮದ ರೂಢಿ-ಪರಂಪರೆಗಳ ಮೇಲೆ ಸತತವಾಗಿ ಆಗುತ್ತಿರುವ ದ್ವೇಷಪೂರ್ವಕ ಟೀಕೆ ಇತ್ಯಾದಿಗಳಿಂದ ಈ ಪರಿಣಾಮವಾಗಿದೆ. ಶ್ರಾದ್ಧದ ವಿಷಯದಲ್ಲಿ ಮುಂದಿನ ವಿಚಾರಸರಣಿಯು ಸಮಾಜದಲ್ಲಿ ಕಂಡು ಬರುತ್ತದೆ. ಪೂಜೆ ಅರ್ಚನೆ,  ಶ್ರಾದ್ಧಪಕ್ಷ ಮುಂತಾದವುಗಳ ಮೇಲೆ ವಿಶ್ವಾಸವನ್ನಿಡದ ಅಥವಾ ಸಮಾಜಕಾರ್ಯವೇ ಸರ್ವಶ್ರೇಷ್ಠವಾಗಿದೆ ಎಂದು ಹೇಳುವವರು ಪಿತೃಗಳಿಗಾಗಿ ಶ್ರಾದ್ಧ ವಿಧಿಗಳನ್ನು ಮಾಡದೇ ಅದರ ಬದಲು, ‘ಬಡವರಿಗೆ ಅನ್ನದಾನ ಮಾಡುವೆವು ಅಥವಾ ಶಾಲೆಗಳಿಗೆ ಸಹಾಯ ಮಾಡುವೆವು ಎಂದು ಹೇಳುತ್ತಾರೆ ! ಅನೇಕ ಜನರು ಇದೇ ರೀತಿ ಮಾಡುತ್ತಾರೆ ! ಹೀಗೆ ಮಾಡುವುದೆಂದರೆ, ‘ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ಮಾಡದೇ ಅದರ ಬದಲಾಗಿ ನಾವು ಬಡವರಿಗೆ ಅನ್ನದಾನ ಮಾಡುವೆವು, ಶಾಲೆಗೆ ಸಹಾಯ ಮಾಡುವೆವು ಎಂದು ಹೇಳಿದಂತೆಯೇ ಆಗಿದೆ. ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ್ಮಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿಸಿಗಲು ಸಾಧ್ಯವಾಗುತ್ತದೆ. ಹಾಗಾಗಿ ಮೇಲಿನ ಹೇಳಿಕೆಗಳು ಹಾಸ್ಯಾಸ್ಪದವೆನಿಸಿಕೊಳ್ಳುತ್ತವೆ.

ಹಿಂದೂ ಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧ ಕರ್ಮವು ಆವಶ್ಯಕವಾಗಿದೆ. ತಂದೆ ತಾಯಿ ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಬೇಕೆಂದು ಮಾಡಬೇಕಾದ ಸಂಸ್ಕಾರಕ್ಕೆ ‘ಶ್ರಾದ್ಧ ಎನ್ನುತ್ತಾರೆ. ಶ್ರಾದ್ಧಕರ್ಮಗಳಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವ ಸೂಕ್ಷ್ಮಶಕ್ತಿ ಇದೆ. ಶ್ರಾದ್ಧ ಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗವನ್ನು ಕೊಡುವುದರಿಂದ ಅವರು ಸಂತುಷ್ಟರಾಗುತ್ತಾರೆ. ಶ್ರಾದ್ಧವನ್ನು ಮಾಡದಿದ್ದರೆ ಪಿತೃಗಳ ಆಸೆಗಳು ಅತೃಪ್ತವಾಗಿ ಉಳಿಯುತ್ತವೆ ಮತ್ತು ಈ ವಾಸನಾಯುಕ್ತ ಪಿತೃಗಳು ದುಷ್ಟ ಶಕ್ತಿಗಳ ಅಧೀನಕ್ಕೊಳಪಟ್ಟು ಅವರ ಗುಲಾಮರಾಗುತ್ತಾರೆ. ದುಷ್ಟ ಶಕ್ತಿಗಳು ವಾಸನಾಯುಕ್ತ ಪಿತೃಗಳ ಮೂಲಕ ಕುಟುಂಬದವರಿಗೆ ತೊಂದರೆಗಳನ್ನು ಕೊಡುವ ಸಂಭವವೂ ಇರುತ್ತದೆ. ಶ್ರಾದ್ಧವನ್ನು ಮಾಡುವುದರಿಂದ ಪಿತೃಗಳು ಆ ತೊಂದರೆಗಳಿಂದ ಮುಕ್ತರಾಗುವರು ಹಾಗೂ ನಮ್ಮ ಜೀವನವೂ ಸುಖಮಯವಾಗುತ್ತದೆ.

ಶ್ರಾದ್ಧಕ್ಕೆ ಇಷ್ಟೊಂದು ಮಹತ್ವವಿದ್ದರೂ ಇಂದು ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮಶಾಸ್ತ್ರದ ಮೇಲಿನ ಅವಿಶ್ವಾಸ, ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆ ಇತ್ಯಾದಿಗಳಿಂದ ಶ್ರಾದ್ಧ ವಿಧಿಯನ್ನು ದುರ್ಲಕ್ಷಿಸಲಾಗುತ್ತದೆ. ಶ್ರಾದ್ಧಕರ್ಮವನ್ನು ಅವಾಸ್ತವ ಅಯೋಗ್ಯ ಕರ್ಮಕಾಂಡವೆಂದು ಪರಿಗಣಿಸಲಾಗುತ್ತಿದೆ. ಆದುದರಿಂದ ಶ್ರಾದ್ಧ ಸಂಸ್ಕಾರವೂ ಇತರ ಸಂಸ್ಕಾರಗಳಷ್ಟೇ ಆವಶ್ಯಕವಾಗಿದೆ ಎಂಬುದನ್ನು ಹೇಳುವುದು ಆವಶ್ಯಕವಾಗಿದೆ.