ಶ್ರಾದ್ಧವನ್ನು ಯಾವಾಗ ಮಾಡಬೇಕು ?

ಅ. ಸಾಧಾರಣ ಯೋಗ್ಯ ತಿಥಿಗಳು : ಸಾಮಾನ್ಯವಾಗಿ ಅಮಾವಾಸ್ಯೆ, ವರ್ಷದ ಹನ್ನೆರಡು ಸಂಕ್ರಾಂತಿಗಳು, ಚಂದ್ರ ಸೂರ್ಯಗ್ರಹಣ, ಯುಗಾದಿ ಮತ್ತು ಮನ್ವಾದಿ ತಿಥಿಗಳು, ಅರ್ಧೋದ ಯಾದಿ ಪರ್ವಗಳು, ಮರಣಹೊಂದಿದ ದಿನ, ಶ್ರೋತ್ರೀಯ ಬ್ರಾಹ್ಮಣರ ಆಗಮನ ಇತ್ಯಾದಿ ತಿಥಿಗಳು ಶ್ರಾದ್ಧವನ್ನು ಮಾಡಲು ಯೋಗ್ಯವಾಗಿವೆ.

೧. ಸಾಮಾನ್ಯವಾಗಿ ಪ್ರತಿವರ್ಷ ಮರಣ ಹೊಂದಿದ ತಿಥಿಯ ದಿನ (ಆಂಗ್ಲ ದಿನದರ್ಶಿಕೆಯ ದಿನಾಂಕಕ್ಕನುಸಾರವಲ್ಲ, ಹಿಂದೂ ಪಂಚಾಂಗದ ಪ್ರಕಾರ ಇರುವ ತಿಥಿಯಂದು) ಶ್ರಾದ್ಧವನ್ನು ಮಾಡಬೇಕು. ಮೃತ್ಯುವಿನ ತಿಥಿಯು ಗೊತ್ತಿಲ್ಲದೇ, ಕೇವಲ ತಿಂಗಳು ಮಾತ್ರಗೊತ್ತಿದ್ದರೆ ಆ ತಿಂಗಳ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಬೇಕು.

೨. ಮೃತ್ಯುವಿನ ತಿಥಿ ಮತ್ತು ತಿಂಗಳು ಎರಡೂ ಗೊತ್ತಿಲ್ಲದಿದ್ದರೆ ಮಾಘ ಅಥವಾ ಮಾರ್ಗಶಿರ ಅಮಾವಾಸ್ಯೆಗೆ ಶ್ರಾದ್ಧವನ್ನು ಮಾಡಬೇಕು.

೩. ನಿಶ್ಚಿತವಾಗಿ ಮರಣದ ತಿಥಿಯು ಗೊತ್ತಿಲ್ಲದಿದ್ದರೆ ಮರಣದ ವಾರ್ತೆಯು ತಿಳಿದ ದಿನದಂದು ಶ್ರಾದ್ಧವನ್ನು ಮಾಡಬೇಕು.

೪. ಪಿತೃಗಳ ಶ್ರಾದ್ಧವನ್ನು ಪ್ರತಿದಿನ ಮಾಡಬೇಕು. ಇದನ್ನು ನೀರಿನಿಂದ ಅಂದರೆ ಪಿತೃಗಳಿಗೆ ತರ್ಪಣವನ್ನು ನೀಡಿ ಮಾಡಬಹುದು.

೫. ಪಿತೃಗಳ ಶ್ರಾದ್ಧವನ್ನು ಪ್ರತಿದಿನ ಮಾಡಲು ಸಾಧ್ಯವಾಗದಿದ್ದರೆ, ದರ್ಶ ಶ್ರಾದ್ಧವನ್ನು ಮಾಡಬೇಕು. ಇದರಿಂದ ನಿತ್ಯ ಶ್ರಾದ್ಧದ ಸಿದ್ಧಿ ಆಗುತ್ತದೆ. ದರ್ಶ ಎಂದರೆ ಅಮಾವಾಸ್ಯೆ. ಪ್ರತಿ ತಿಂಗಳ ಅಮಾವಾಸ್ಯೆಯಂದು ಮಾಡುವ ಶ್ರಾದ್ಧವೇ ದರ್ಶಶ್ರಾದ್ಧ.

೬. ಪ್ರತಿ ತಿಂಗಳು ದರ್ಶಶ್ರಾದ್ಧವನ್ನು ಮಾಡಲು ಆಗದಿದ್ದರೆ ಚೈತ್ರ, ಭಾದ್ರಪದ ಮತ್ತು ಆಶ್ವಯುಜ ಮಾಸಗಳ ಅಮಾವಾಸ್ಯೆಯಂದು ಮಾಡಬೇಕು.

೭. ದರ್ಶಶ್ರಾದ್ಧವನ್ನು ಚೈತ್ರ, ಭಾದ್ರಪದ ಮತ್ತು ಆಶ್ವಯುಜ ಮಾಸಗಳ ಅಮಾವಾಸ್ಯೆಯಂದು ಮಾಡಲು ಆಗದಿದ್ದರೆ ಭಾದ್ರಪದ ತಿಂಗಳಿನ ಪಿತೃ ಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನಾದರೂ ಅವಶ್ಯವಾಗಿ ಮಾಡಬೇಕು.

ಇದೂ ಸಾಧ್ಯವಾಗದಿದ್ದರೆ ಭಾದ್ರಪದ ಅಮಾವಾಸ್ಯೆಗೆ ಎಂದರೆ (ಸರ್ವಪಿತ್ರೀ ಅಮಾವಾಸ್ಯೆಯಂದು) ಶ್ರಾದ್ಧವನ್ನು ಮಾಡಬೇಕು.

ಸರ್ವಪಿತ್ರೀ ಅಮಾವಾಸ್ಯೆಯ ಮಹತ್ವ

ಅ. ಭಾದ್ರಪದ ಅಮಾವಾಸ್ಯೆಯಂದು ನಮ್ಮ ಕುಲದಲ್ಲಿದ್ದ ಎಲ್ಲ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡಲಾಗುತ್ತದೆ. ಆದುದರಿಂದ ಈ ಅಮಾವಾಸ್ಯೆಯನ್ನು ಸರ್ವಪಿತ್ರೀ ಅಮಾವಾಸ್ಯೆ ಎಂದು ಕರೆಯಲಾಗಿದೆ. ಪಿತೃಪಕ್ಷದ ಅಮಾವಾಸ್ಯೆಗೆ ‘ಸರ್ವಪಿತ್ರೀ ಅಮಾವಾಸ್ಯೆ ಎನ್ನುತ್ತಾರೆ. ಈ ತಿಥಿಯಂದು ಎಲ್ಲರೂ ಶ್ರಾದ್ಧ ಮಾಡುವುದು ಅತ್ಯಂತ ಆವಶ್ಯಕವಾಗಿದೆ; ಏಕೆಂದರೆ ಪಿತೃಪಕ್ಷದಲ್ಲಿ ಇದು ಕೊನೆಯ ತಿಥಿಯಾಗಿದೆ.

ಆ. ವ್ಯಕ್ತಿಯ ಮೃತ್ಯುವಿನ ತಿಥಿಯು ಗೊತ್ತಿಲ್ಲದಿದ್ದರೆ ಅವರು ಮೃತಪಟ್ಟ ತಿಂಗಳಿನ ಅಮಾವಾಸ್ಯೆಯಂದು ಶ್ರಾದ್ಧಕರ್ಮವನ್ನು ಮಾಡಬಹುದು ಎಂದು ಹಾಗೂ ಅದು ಕೂಡ ಗೊತ್ತಿಲ್ಲದಿದ್ದರೆ ಸರ್ವಪಿತ್ರೀ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಬೇಕೆಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಅಮಾವಾಸ್ಯೆಯು ಶ್ರಾದ್ಧ ಮಾಡಲು ಹೆಚ್ಚು ಯೋಗ್ಯವಾದ ತಿಥಿಯಾಗಿದೆ ಮತ್ತು ಪಿತೃಪಕ್ಷದ ಅಮಾವಾಸ್ಯೆಯು ಎಲ್ಲಕ್ಕಿಂತಲೂ ಹೆಚ್ಚು ಸೂಕ್ತವಾದ ತಿಥಿಯಾಗಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಇ. ಇತರ ದಿನಗಳಲ್ಲಿ ಅಥವಾ ವ್ಯಕ್ತಿ ಮೃತಪಟ್ಟ ತಿಥಿಯಂದು ಶ್ರಾದ್ಧವನ್ನು ಮಾಡಲು ಆಗದಿದ್ದರೆ ಸರ್ವಪಿತ್ರೀ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡುವುದರಿಂದ ಮೃತ ವ್ಯಕ್ತಿಗೆ ಅದರ ಲಾಭವಾಗುತ್ತದೆ.

ಈ. ಮೃತ ವ್ಯಕ್ತಿಯ ಶ್ರಾದ್ಧವನ್ನು ಮಾಡುವ ತಿಥಿಯು ಜನನಾಶೌಚ ಅಥವಾ ಮರಣಾಶೌಚ ಇರುವ ಸಮಯದಲ್ಲಿ ಬಂದರೆ ಆಗ ಸರ್ವಪಿತ್ರೀ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಬಹುದು.

ಉ. ಈ ದಿನದಂದು ಹೆಚ್ಚಿನ ಎಲ್ಲ ಮನೆಗಳಿಂದ ಕನಿಷ್ಟ ಒಬ್ಬ ಬ್ರಾಹ್ಮಣನನ್ನಾದರೂ ಭೋಜನಕ್ಕೆ ಕರೆಯುತ್ತಾರೆ. ಕೆಲವರಲ್ಲಿ ಬ್ರಾಹ್ಮಣರಿಗೆ ಆಹಾರಸಾಮಗ್ರಿಗಳನ್ನು ಕೊಡುವ ರೂಢಿಯಿದೆ. (ಹಿಂದೂಧರ್ಮವು ಇಷ್ಟೊಂದು ಅವಕಾಶಗಳನ್ನು ಮಾಡಿಕೊಟ್ಟಿದ್ದರೂ ಹಿಂದೂಗಳು ಶ್ರಾದ್ಧ ಮುಂತಾದ ವಿಧಿಗಳನ್ನು ಮಾಡುವುದಿಲ್ಲ. ಹೀಗಿರುವಾಗ ಇಂತಹ ಹಿಂದೂಗಳಿಗೆ ಯಾರು ಸಹಾಯ ಮಾಡಬೇಕು ? – ಸಂಕಲನಕಾರರು)

ಊ. ಶ್ರಾದ್ಧವನ್ನು ದಿನದಲ್ಲಿನ ಯಾವ ಸಮಯದಲ್ಲಿ ಮಾಡಬೇಕು (ಯೋಗ್ಯಕಾಲ) ? : ದಿನವನ್ನು ೫ ಭಾಗಗಳಾಗಿ ಮಾಡಿದರೆ ಅದರ ನಾಲ್ಕನೆಯ ಭಾಗಕ್ಕೆ ‘ಅಪರಾಹ್ನ ಎನ್ನುತ್ತಾರೆ. ಇದನ್ನು ಶ್ರಾದ್ಧಕ್ಕೆ ಯೋಗ್ಯಕಾಲವೆಂದು ತಿಳಿಯಬೇಕು.

ಪಿತೃಪಕ್ಷದಲ್ಲಿ ದತ್ತನ ನಾಮಜಪ ಮಾಡುವುದರ ಮಹತ್ವ ಪಿತೃಪಕ್ಷದಲ್ಲಿ ‘ಶ್ರೀ ಗುರುದೇವ ದತ್ತ | ಈ ನಾಮಜಪವನ್ನು ಆದಷ್ಟು ಹೆಚ್ಚು ಮಾಡಿದರೆ ಪಿತೃಗಳಿಗೆ ಸದ್ಗತಿ ದೊರಕಲು ಸಹಾಯವಾಗುತ್ತದೆ. (ಆಧಾರ : ಸನಾತನ ನಿರ್ಮಿಸಿದ ಗ್ರಂಥ ‘ಶ್ರಾದ್ಧ – ೨ ಭಾಗಗಳು)

ಶ್ರಾದ್ಧವಿಧಿಯನ್ನು ಒಂದು ವಿಶಿಷ್ಟ ಸಮಯದಲ್ಲಿ ಮಾಡಲು ಆಗಲಿಲ್ಲ, ಅದಕ್ಕೆ ಶ್ರಾದ್ಧ ಮಾಡಲಿಲ್ಲ ಎಂದು ಹೇಳಲು ಯಾರಿಗೂ ಅವಕಾಶವನ್ನು ನೀಡದ ಹಿಂದೂ ಧರ್ಮ !