ಕೊರೋನಾ ರೋಗದಿಂದ ನಿರ್ಮಾಣವಾದ ಆಪತ್ಕಾಲದಲ್ಲಿ ಜಗತ್ತು ಹಿಂದೂ ಧರ್ಮದ ಆಚರಣೆ ಮಾಡದೇ ಪರ್ಯಾಯವಿಲ್ಲ, ಇದರಿಂದ ಹಿಂದೂ ಧರ್ಮ ಶ್ರೇಷ್ಟತೆ ಸಿದ್ಧವಾಗಲಿದೆ

ಸದ್ಗುರು ರಾಜೇಂದ್ರ ಶಿಂದೆ

‘ಸದ್ಯ ಕೊರೋನಾ ರೋಗಾಣುಗಳಿಂದ ಸಂಪೂರ್ಣ ಜಗತ್ತು ಅಲ್ಲೋಲಕಲ್ಲೋಲವಾಗಿದೆ. ಈ ರೋಗಾಣು ಎಲ್ಲರನ್ನೂ ಭಯಭೀತರನ್ನಾಗಿಸಿದೆ. ‘ಇಂತಹ ಸಂಕಟದ ಘಟನೆಯಿಂದ ಈಶ್ವರನಿಗೆ ಏನು ಕಲಿಸುವುದಿದೆ ? ಹಿಂದೂ ಧರ್ಮ ಮತ್ತು ಧರ್ಮಾಚರಣೆಯ ಮಹತ್ವ ಏನು ? ಸಾಧನೆ ಮಾಡಲು ಏಕೆ ಪ್ರಯತ್ನದ ಪರಾಕಾಷ್ಠೆ ಮಾಡಬೇಕು ? ಎಂಬುದರ ಬಗ್ಗೆ ಕೆಲವು ವಿಷಯಗಳನ್ನು ಮುಂದೆ ನೀಡಲಾಗಿದೆ.

೧. ಕೊರೋನಾ ರೋಗಾಣುಗಳ ಸಂಕಟವನ್ನು ಎದುರಿಸಲು ಈಶ್ವರನಿಗೆ ಶರಣಾಗುವುದೊಂದೇ ಪರ್ಯಾಯ

‘ಕೊರೋನಾ ರೋಗಾಣುವಿನ ಭಯಂಕರ ಸಂಕಟವನ್ನು ಎದುರಿಸಲು ಸದ್ಯ ಈಶ್ವರನಿಗೆ ಶರಣಾಗಬೇಕಾಗಿದೆ, ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಸಂಕಟದ ಮೂಲಕ ಮನುಷ್ಯ ತನ್ನ ಪ್ರಾರಬ್ಧವನ್ನು ಅನುಭವಿಸುತ್ತಿದ್ದಾನೆ. ಪ್ರಾರಬ್ಧವನ್ನು ಅನುಭವಿಸುವ ಈ ಪ್ರಕ್ರಿಯೆಯಲ್ಲಿ ಮಾನವನು ಸರ್ವಶಕ್ತಿಶಾಲಿ ಈಶ್ವರನಿಗೆ ಶರಣಾದರೆ ಕೃಪಾಳು ಹಾಗೂ ದಯಾಳು ಈಶ್ವರನು ಅವನಿಗೆ ಪ್ರಾರಬ್ಧವನ್ನು ಅನುಭವಿಸಲು ಶಕ್ತಿಯನ್ನು ನೀಡುತ್ತಾನೆ, ಆದುದರಿಂದ ಅವನಿಗೆ ದುಃಖವನ್ನು ಸಹಿಸಲು ಸಾಧ್ಯವಾಗುತ್ತದೆ.

೨. ಈ ಸಂಕಟದಿಂದ ಭಗವಂತನು ಮಾಡಿರುವ ಕೃಪೆ !

ಅ. ಸಾರ್ವಜನಿಕ ಸ್ಥಳಗಳು, ಶಾಲೆ-ಮಹಾವಿದ್ಯಾಲಯಗಳು, ರೈಲ್ವೆ, ಮತ್ತು ಬಸ್ ನಿಲ್ದಾಣಗಳು, ರಾಷ್ಟ್ರೀಯ ಹೆದ್ದಾರಿ ಇತ್ಯಾದಿಗಳನ್ನು ಚೆನ್ನಾಗಿ ಸ್ವಚ್ಚತೆ ಮಾಡಲು ಆರಂಭಿಸಿದ್ದಾರೆ. ಅದರಿಂದ ಎಲ್ಲರಿಗೂ ಲಾಭವಾಗಲಿದೆ.

ಆ. ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯಾಗದಂತೆ ನಿರ್ಬಂಧ ವಿರುವುದರಿಂದ ಪ್ರತಿಯೊಬ್ಬರೂ ಹೆಚ್ಚಿನ ಸಮಯವನ್ನು ತಮ್ಮ ಕುಟುಂಬದವರ ಜೊತೆಗಿರುವುದರಿಂದ ಪರಸ್ಪರರಲ್ಲಿ ಆತ್ಮೀಯತೆ ಹೆಚ್ಚಾಗುವುದು.

ಇ. ಜಗತ್ತಿನ ಬಲಿಷ್ಠ ರಾಷ್ಟ್ರಗಳಿಗೆ ಈ ಸಂಕಟದಿಂದ ಅಹಂಕಾರ ಕಡಿಮೆಯಾಗಲು ಆರಂಭವಾಗಿದೆ. ‘ಬುದ್ಧಿ ಮತ್ತು ಸಂಪತ್ತು ಇದರ ಪ್ರಭಾವದಿಂದ ಏನು ಬೇಕಾದರೂ ಮಾಡಬಹುದು, ಎಂಬ ಮಾನವನ ಅಹಂಕಾರಕ್ಕೆ ದೇವರು ದೊಡ್ಡ ಪ್ರಮಾಣದಲ್ಲಿ ಆಘಾತ ಮಾಡಿದ್ದಾರೆ.

೩. ಕೊರೋನಾದ ಸಂಕಟದ ಸತ್ತ್ವ ಪರೀಕ್ಷೆಯಿಂದ ಸಿದ್ಧವಾದ ಹಿಂದೂ ಧರ್ಮಾಚರಣೆಯ ಮಹತ್ವ, ಶ್ರೇಷ್ಟತೆ ಮತ್ತು ಅಲೌಕಿಕತೆ !

೩ ಅ. ಸಸ್ಯಾಹಾರ ಮಾಡುವುದು : ಅನೇಕ ಜನರು ಮಾಂಸಾಹಾರವನ್ನು ತೊರೆದು ಸಸ್ಯಾಹಾರ ಭೋಜನವನ್ನು ಆರಂಭಿಸಿದ್ದಾರೆ. ಆದ್ದರಿಂದ ಅವರ ತಮೋಗುಣಿ ಆಹಾರದ ಬದಲು ಸತ್ತ್ವಗುಣಿ ಆಹಾರ ಸೇವಿಸಲು ಪ್ರಾರಂಭವಾಗಿದೆ.

೩ ಆ. ಮನೆಯ ಸಾತ್ತ್ವಿಕ ಆಹಾರವನ್ನು ಸೇವಿಸುವುದು : ಸಾರ್ವಜನಿಕ ಉಪಹಾರಗೃಹಗಳು ಮತ್ತು ಮದ್ಯದಂಗಡಿಗಳು ಮುಚ್ಚಿರುವುದರಿಂದ ಜನರಿಗೆ ಹೊರಗಿನ ತಾಮಸಿಕ ತಿಂಡಿ-ತಿನಸುಗಳು ಸಿಗಲಿಲ್ಲ. ಅದರಿಂದಾಗಿ ಮಾನವನು ಮನೆಯಲ್ಲಿನ ಸಾತ್ತ್ವಿಕ ಆಹಾರವನ್ನು ಸೇವಿಸುವುದರಿಂದ ಅವನ ಸಾತ್ತ್ವಿಕತೆ ಹೆಚ್ಚಾಗುವುದು.

೩ ಇ. ಧ್ಯಾನಧಾರಣೆ ಮತ್ತು ಯೋಗ ಮಾಡುವುದು : ಇಂತಹ ಆಪತ್ಕಾಲದ ಪರಿಸ್ಥಿತಿಯನ್ನು ಎದುರಿಸಲು ಜಗತ್ತಿನ ಅನೇಕ ಪ್ರಖ್ಯಾತ ವಿದ್ಯಾಪೀಠಗಳು ಹಿಂದೂ ಧರ್ಮ ಹೇಳಿರುವಂತಹ ‘ಧ್ಯಾನಧಾರಣೆ ಮತ್ತು ಯೋಗಾಸನ ಮಾಡಿರಿ, ಎಂದು ಹೇಳಿದೆ.

೩ ಈ. ಪರಸ್ಪರ ಭೇಟಿಯಾಗುವಾಗ ನಮಸ್ಕಾರ ಮಾಡುವುದು : ಪರಸ್ಪರ ಭೇಟಿಯಾಗುವಾಗ ಹಸ್ತಲಾಘವ ಮಾಡುವುದು, ಆಲಂಗಿಸುವುದು, ಚುಂಬಿಸುವುದು ಇತ್ಯಾದಿಗಳನ್ನು ನಿಲ್ಲಿಸಿ ಮನುಷ್ಯ ತನ್ನಿಂತಾನೆ ಹಿಂದೂ ಧರ್ಮಕ್ಕನುಸಾರ ‘ನಮಸ್ಕಾರ ಮಾಡಲು ಆರಂಭಿಸಿದ್ದಾನೆ. ಇದರಿಂದ ಕೊರೋನಾದಂತಹ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಯಂತೂ ಆಗುತ್ತದೆ ಅದರೊಂದಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುವ ಜನರಿಂದಲೂ ರಕ್ಷಣೆಯಾಗುವುದು ಮತ್ತು ಯೋಗ್ಯವಾದ ಧರ್ಮಾಚರಣೆಯ ಲಾಭವೂ ಆಗುತ್ತದೆ.

೪. ಭಗವಂತನೆ ಮನುಷ್ಯನಿಗೆ ಹಿಂದೂ ಧರ್ಮವನ್ನು ಅಧ್ಯಯನ ಮಾಡುವಂತಹ ಪ್ರಸಂಗವನ್ನು ನಿರ್ಮಾಣ ಮಾಡಿ ಕಡಿಮೆ ಅವಧಿಯಲ್ಲಿ ಜಗತ್ತಿನಾದ್ಯಂತ ಹಿಂದೂ ಧರ್ಮದ ಪ್ರಸಾರ ಮಾಡುತ್ತಿದ್ದಾನೆ !

ಭಗವಂತನು ಈ ಸಂಕಟದಿಂದ ಜಗತ್ತಿನಲ್ಲಿ ಎಲ್ಲರಿಗೂ ಹಿಂದೂ ಧರ್ಮಾಚರಣೆಯ ಕೃತಿಯನ್ನು ಕಲಿಸಲು ಆರಂಭಿಸಿದ್ದಾನೆ. ಇದು ಭಗವಂತನು ಮಾನವನ ಮೇಲೆ ಮಾಡಿದ ದೊಡ್ಡ ಕೃಪೆಯಾಗಿದೆ. ‘ಹಿಂದೂ ಧರ್ಮ ಹೇಳಿರುವ ಎಲ್ಲ ರೀತಿ-ನೀತಿಗಳು ಎಷ್ಟು ಯೋಗ್ಯವಾಗಿವೆ ?, ಎಂಬುದನ್ನು ಹೊಸತಾಗಿ ಅಧ್ಯಯನ ಮಾಡಲು ಇಡೀ ಜಗತ್ತಿನಾದ್ಯಂತ ಆರಂಭವಾಗಿದೆ. ಏಕೆಂದರೆ ಇದುವರೆಗೆ ಇವೆಲ್ಲವೂ ಹಳೆಯಕಾಲದ, ನಿರುಪಯೋಗಿ ವಿಚಾರಗಳಾಗಿವೆ, ಎಂದು ಎಲ್ಲ ಪಾಶ್ಚಾತ್ಯರು ಮತ್ತು ಅವರ ಬೊಗಸೆಯಲ್ಲಿ ನೀರು ಕುಡಿಯುವ ಭಾರತದಲ್ಲಿನ ಬುದ್ಧಿಜೀವಿಗಳು ಹೇಳುತ್ತಿದ್ದರು. ಇದೊಂದೇ ಪ್ರಸಂಗದಿಂದ ದೇವರು ಅವರಿಗೆ ಹಿಂದೂ ಧರ್ಮದಲ್ಲಿನ ಈ ಸಂಸ್ಕಾರಗಳ ಮತ್ತು ಪರಂಪರೆಗಳ ಮಹತ್ವವನ್ನು ಅರಿವು ಮಾಡಿಸಿಕೊಟ್ಟರು. ಭಗವಂತನೇ ಕಡಿಮೆ ಸಮಯದಲ್ಲಿ ಈ ಶ್ರೇಷ್ಠವಾದ ಹಿಂದೂ ಧರ್ಮವನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿದನು. ಇದರಿಂದಲೇ ಇನ್ನು ಕೆಲವು ಜಿಜ್ಞಾಸುಗಳು ಹಿಂದೂ ಸಂಸ್ಕೃತಿಯನ್ನು ಅಧ್ಯಯನ ಮಾಡಿ ಅದನ್ನು ಅಂಗೀಕರಿಸಲು ಆರಂಭಿಸುವರು. ಈ ರೀತಿಯಲ್ಲಿ ‘ಕೆಟ್ಟವರಲ್ಲಿಯೂ ಏನಾದರೂ ಒಳ್ಳೆಯ ಗುಣವಿರುತ್ತದೆ, ಎನ್ನುವ ಅನುಭವ ನಮಗಾಗುತ್ತದೆ. ಭಗವದ್ಗೀತೆಯ ವಚನದಂತೆ ‘ಆಗುವುದೆಲ್ಲವೂ ನಮ್ಮ ಒಳ್ಳೆಯದಕ್ಕಾಗಿಯೇ, ಎಂಬುದು ಎಲ್ಲರಿಗೂ ಅನುಭವವಾಗುವುದು.

೫.ಕೊರೋನಾದ ಸಂಕಟದಿಂದ ಪ್ರಸ್ತುತ ಎಲ್ಲ ವ್ಯವಹಾರಗಳು ನಿಂತಿರುವುದರಿಂದ ಧೃತಿಗೆಟ್ಟಿರುವ ಮಾನವನಿಗೆ ಹನ್ನೆರಡು ಕುಲಕಸುಬುದಾರ ಪದ್ಧತಿಯ ಮಹತ್ವದ ಅರಿವಾಗುವುದು !

ಕೊರೋನಾದ ಸಂಕಟದಿಂದ ಸದ್ಯ ಎಲ್ಲ ವ್ಯವಹಾರಗಳು ನಿಂತಿರುವುದರಿಂದ ಮಾನವ ಧೃತಿಗೆಟ್ಟಿದ್ದಾನೆ. ಅವನಿಗೆ ‘ತಾನು ಹೇಗೆ ಬದುಕಲಿ ?, ಎಂದೆನಿಸುತ್ತದೆ. ‘ನಾಳೆ ಸಾರಿಗೆಯೆಲ್ಲ ನಿಂತರೆ ಆಹಾರ ಪದಾರ್ಥಗಳನ್ನು ಎಲ್ಲಿಂದ ತರುವುದು ? ಹೊಟ್ಟೆ ತುಂಬಿಸುವುದು ಹೇಗೆ ?, ಎನ್ನುವ ದೊಡ್ಡ ಪ್ರಶ್ನೆ ಅವನ ಮುಂದೆ ನಿಂತಿದೆ. ಆಗ ಭಾರತೀಯ ಸಂಸ್ಕೃತಿಯಲ್ಲಿನ ಹನ್ನೆರಡು ಕುಲಕಸುಬುದಾರ ಪದ್ಧತಿಯ ಮಹತ್ವದ ಅರಿವಾಗುವುದು. (ಹನ್ನೆರಡು ಕುಲಕಸುಬುದಾರ ಎಂದರೆ ಬಡಗಿ, ದೇವಸ್ಥಾನದ ಪರಿಚಾರಕ, ಕ್ಷೌರಿಕ, ಅಗಸ, ಕುಂಭಾರ, ಸಮಗಾರ, ಗಾಣಿಗ, ಮೊಗವೀರ, ಅಕ್ಕಸಾಲಿಗ ಮತ್ತು ಇತರರು) ಹಿಂದೆ ಪ್ರತಿಯೊಂದು ಊರು ಸ್ವಾವಲಂಬಿಯಾಗಿರುತ್ತಿತ್ತು. ಊರಿನ ಎಲ್ಲ ಆವಶ್ಯಕತೆಗಳು ಸಾಧ್ಯವಿರುವಷ್ಟು ಅದೇ ಊರಿನಲ್ಲಿಯೇ ಪೂರೈಕೆಯಾಗುತ್ತಿದ್ದವು. ಊರಿನವರಿಗೆ ಹೆಚ್ಚಾಗಿ ಬೇರೆಯವರನ್ನು ಅವಲಂಬಿಸುವ ಆವಶ್ಯಕತೆಯಿರಲಿಲ್ಲ; ಆದರೆ ಮಾನವ ಈಗ ಎಲ್ಲದರಲ್ಲೂ ಪರಾವಲಂಬಿಯಾಗಿದ್ದಾನೆ, ಅಂದರೆ ಸ್ವಲ್ಪ ಸಮಯ ವ್ಯವಹಾರ ನಿಂತರೆ ಅವನಿಗೆ ಬದುಕುವುದೇ ಕಷ್ಟವೆನಿಸುತ್ತಿದೆ. ಇದರಿಂದ ‘ಪುನಃ ಭಾರತೀಯ ಪಾರಂಪರಿಕ ಜೀವನಪದ್ಧತಿಯ ಅಭ್ಯಾಸವಾಗುವುದು ಹಾಗೂ ಅದರ ಮಹತ್ವವು ಜಗತ್ತಿಗೆ ಇಷ್ಟವಾಗುವುದು, ಎಂದೇ ಹೇಳಬೇಕಾಗುತ್ತದೆ.

೬. ಈ ಭೀಕರ ಆಪತ್ಕಾಲದಿಂದ ಕೊನೆಗೆ ಈಶ್ವರನ ಭಕ್ತಿ ಮತ್ತು ಸಾಧನೆಯೇ ಕಾಪಾಡಲು ಸಾಧ್ಯ

ಈ ಭೀಕರ ಆಪತ್ಕಾಲದಿಂದ ಹೊರಗೆ ಬರಲು ‘ಭಗವಂತನ ಭಕ್ತಿ ಮಾಡುವುದು ಮತ್ತು ಸಾಧನೆ ಮಾಡುವುದು ಇದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ಕಾಲವು ವೇಗವಾಗಿ ಹೋಗುತ್ತಿದೆ. ಈಗ ಸಮಯ ವ್ಯರ್ಥ ಮಾಡದೆ ಜೀವನ ಪರಮಪಾವನ ಮಾಡಿಕೊಳ್ಳಲು ಈಶ್ವರನು ಹೇಳಿರುವ ನಿಯಮಗಳಿಗನುಸಾರವೇ ಕೃತಿ ಮಾಡೋಣ, ಅಂದರೆ ಹಿಂದೂ ಧರ್ಮಕ್ಕನುಸಾರ ಆಚರಣೆ ಮಾಡಿ ದೇವರಿಗೆ ಶರಣಾಗೋಣ ಹಾಗೂ ಸಾಧನೆ ಮಾಡಲು ಪ್ರಯತ್ನಿಸೋಣ. ಇದರಲ್ಲಿಯೇ ನನ್ನ, ಸಮಾಜದ, ರಾಷ್ಟ್ರದ ಮತ್ತು ವಿಶ್ವದ ಕಲ್ಯಾಣವಿದೆ !

– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ್, ಪನವೇಲ್. (೧೭.೩.೨೦೨೦)