ಇ-ರಿಕ್ಷಾ ನಿಯಂತ್ರಿಸುತ್ತಿದ್ದ ಚೀನಿ ಆ್ಯಪ್‌ಗಳಿಗೆ ಕೇಂದ್ರದ ಬ್ಯಾನ್ : Chinese Apps Ban India

ನವದೆಹಲಿ – ಕೇಂದ್ರ ಸರಕಾರವು ‘ಗೂಗಲ್ ಪ್ಲೇ ಸ್ಟೋರ್’ ಮತ್ತು ‘ಆಪಲ್ ಆಪ್ ಸ್ಟೋರ್’ನಿಂದ ೨ ಚೀನಾದ ‘ಮೊಬೈಲ್ ಆಪ್ಸ್’ಗಳನ್ನು ತೆಗೆದುಹಾಕಲು ಆದೇಶಿಸಿದೆ. ಈ ಆದೇಶದ ಅನ್ವಯ, ‘ಬ್ಯಾಟ್-ಬಿಎಂಎಸ್’ (Bat-BMS) ಮತ್ತು ‘ಈಪೋಚ್ ಲಿ-ಅಯಾನ್’ (Epoch Li-ion) ಎಂಬ ೨ ಆಪ್‌ಗಳನ್ನು ತೆಗೆದುಹಾಕಲಾಗಿದೆ. ಈ ಎರಡೂ ಆಪ್‌ಗಳನ್ನು ಬಳಸಿ ರಸ್ತೆಯಲ್ಲಿ ಚಲಿಸುವ ಇ-ರಿಕ್ಷಾಗಳನ್ನು ಬಂದ್ ಮಾಡಲಾಗುತ್ತಿತ್ತು. ಅನೇಕ ಜನರು ಈ ಆಪ್‌ಗಳ ಸಹಾಯದಿಂದ ಇ-ರಿಕ್ಷಾಗಳನ್ನು ಎಲ್ಲಿಂದಲಾದರೂ ನಿಯಂತ್ರಿಸುತ್ತಿದ್ದರು ಮತ್ತು ರಸ್ತೆಯಲ್ಲಿ ಹೋಗುವ ಇ-ರಿಕ್ಷಾಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸುತ್ತಿದ್ದರು. ಇದರಿಂದಾಗಿ ಹಲವು ರೀತಿಯ ಅಪಾಯಗಳು ಹೆಚ್ಚಾಗಿದ್ದವು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತಕ್ಷಣವೇ ಈ ಎರಡೂ ಆಪ್‌ಗಳನ್ನು ತೆಗೆದುಹಾಕಲು ಆದೇಶ ನೀಡಿದೆ.

೧. ‘ಬ್ಯಾಟ್-ಬಿಎಂಎಸ್’ ಆಪ್ ಅನ್ನು ‘ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್’ ನಿಯಂತ್ರಿಸಲು ಬಳಸಲಾಗುತ್ತದೆ. ಪ್ರತಿ ಇ-ರಿಕ್ಷಾದಲ್ಲಿ ಅಳವಡಿಸಲಾಗಿರುವ ಲಿಥಿಯಂ-ಅಯಾನ್ ಬ್ಯಾಟರಿಯಲ್ಲಿ ‘ಬ್ಲೂಟೂತ್-ಎನೇಬಲ್ಡ್ ಬಿಎಂಎಸ್’ ವ್ಯವಸ್ಥೆ ಇರುತ್ತದೆ. ‘ಬ್ಯಾಟ್-ಬಿಎಂಎಸ್’ ಆಪ್ ಆ ಸಿಸ್ಟಮ್ ಅನ್ನು ‘ಹ್ಯಾಕ್’ ಮಾಡುವ ಮೂಲಕ ರಿಕ್ಷಾವನ್ನು ಬಂದ್ ಮಾಡುತ್ತಿತ್ತು ಎಂದು ಹೇಳಲಾಗಿದೆ.

೨. ಈ ವಿಷಯದ ಕುರಿತು ಸೈಬರ್ ತಜ್ಞ ಸಾಕ್ಷರ್ ದುಗ್ಗಲ್ ಅವರೂ ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಇದನ್ನು ಸೈಬರ್ ಸುರಕ್ಷತೆಯ ದೊಡ್ಡ ಸಮಸ್ಯೆ ಎಂದು ಕರೆದಿದ್ದಾರೆ. ಭಾರತವು ಕಳೆದ ೨ ವರ್ಷಗಳಿಂದ ‘ಇವಿ’ (ಎಲೆಕ್ಟ್ರಿಕ್ ವೆಹಿಕಲ್) ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ ಮತ್ತು ಇಡೀ ವಿಶ್ವದ ಗಮನ ಭಾರತದ ಮೇಲಿದೆ; ಆದರೆ ‘ಇವಿ’ ಕ್ಷೇತ್ರವು ಇನ್ನು ಹೊಸದಾಗಿದೆ. ವಿಷಯಗಳು ಮುಂದುವರಿದಂತೆ, ಸವಾಲುಗಳೂ ಹೆಚ್ಚಾಗುತ್ತಾ ಹೋಗುತ್ತವೆ ಎಂದು ಅವರು ತಿಳಿಸಿದ್ದಾರೆ.

೩. ಸೈಬರ್ ತಜ್ಞರ ಅಭಿಪ್ರಾಯದ ಪ್ರಕಾರ, ‘ಬಿಎಂಎಸ್’ ಅಂದರೆ ‘ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್’ಗಳು ಅತ್ಯಂತ ಅಗ್ಗವಾಗಿರುತ್ತವೆ. ಆದ್ದರಿಂದ ಅವುಗಳಲ್ಲಿ ಯಾವುದೇ ಕಠಿಣ ಸುರಕ್ಷತಾ ಮಾನದಂಡಗಳು ಅಥವಾ ವ್ಯವಸ್ಥೆ ಇರುವುದಿಲ್ಲ. ಈ ಕಾರಣದಿಂದಾಗಿ ಅವುಗಳ ಬ್ಲೂಟೂತ್ ಯಾವಾಗಲೂ ಆನ್ ಆಗಿರುತ್ತದೆ. ಇ-ರಿಕ್ಷಾಗಳಲ್ಲಿ ಈ ವ್ಯವಸ್ಥೆ ಇರುವುದರಿಂದ, ಯಾರಾದರೂ ಅದರ ಪ್ರವೇಶವನ್ನು (ಆಕ್ಸೆಸ್) ಪಡೆದುಕೊಂಡು ಚಲಿಸುವ ರಿಕ್ಷಾದ ಬ್ಯಾಟರಿಯನ್ನು ಇದ್ದಕ್ಕಿದ್ದಂತೆ ‘ಬಂದ್’ ಮಾಡಿದರೆ ದೊಡ್ಡ ಸಮಸ್ಯೆ ಉಂಟಾಗಬಹುದು. ಇದು ಚಲಿಸುವ ಇ-ರಿಕ್ಷಾದ ಭೀಕರ ಅಪಘಾತಕ್ಕೆ ಕಾರಣವಾಗಬಹುದು.