ಖಮೇನಿ ಅವರ ಅಂತ್ಯಸಂಸ್ಕಾರದ ವೇಳೆ ದಾಳಿ ನಡೆಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು! : Iran

ಇರಾನ್‌ನಿಂದ ಅಮೆರಿಕ ಮತ್ತು ಇಸ್ರೇಲ್‌ಗೆ ಎಚ್ಚರಿಕೆ


ಟೆಹ್ರಾನ್ (ಇರಾನ್) – ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಸಂಸ್ಕಾರದ ಸಮಯದಲ್ಲಿ ಯಾವುದೇ ರೀತಿಯ ದಾಳಿ ನಡೆಸಿದರೆ, ಅದರ ಪರಿಣಾಮಗಳು ಅತ್ಯಂತ ಗಂಭೀರ ಹಾಗೂ ಭಯಾನಕವಾಗಿರಲಿವೆ ಎಂದು ಇರಾನ್ ದೇಶವು ಅಮೆರಿಕ ಮತ್ತು ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ. ಫೆಬ್ರವರಿ 28 ರಂದು ಇವರಿಬ್ಬರು ನಡೆಸಿದ ದಾಳಿಯಲ್ಲಿ ಖಮೇನಿ ಅವರು ಮೃತಪಟ್ಟಿದ್ದರು. ಅಂದಿನಿಂದ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆದಿರಲಿಲ್ಲ. ಈಗ ಸುಮಾರು 4 ತಿಂಗಳುಗಳ ನಂತರ, ಜುಲೈ 9 ರಂದು ಖಮೇನಿ ಅವರ ಅಂತ್ಯಸಂಸ್ಕಾರವು ಸರಕಾರಿ ಗೌರವಗಳೊಂದಿಗೆ ನೆರವೇರಲಿದೆ. ಜುಲೈ 4 ರಿಂದ ಟೆಹ್ರಾನ್‌ನಿಂದ ಅಂತ್ಯಯಾತ್ರೆ ಆರಂಭವಾಗಲಿದೆ. ಖಮೇನಿ ಅವರ ಮೂಲ ಗ್ರಾಮವಾದ ಮಶಹದ್‌ನಲ್ಲಿ ಅವರ ದೇಹವನ್ನು ದಫನ ಮಾಡಲಾಗುವುದು. ಈ ಅವಧಿಯಲ್ಲಿ ಇರಾನ್‌ನ ನೆರೆಯ ರಾಷ್ಟ್ರಗಳಲ್ಲಿ ಶೋಕಸಭೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸುಮಾರು 2 ಕೋಟಿ ಜನರು ಭಾಗವಹಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗಳಾದ ಲಾರಾ ಲೂಮರ್ ಅವರು ಸಾಮಾಜಿಕ ಮಾಧ್ಯಮದಲ್ಲಿ, ‘ಖಮೇನಿ ಅವರ ಅಂತ್ಯಸಂಸ್ಕಾರವು ಇಸ್ರೇಲ್‌ಗೆ ಬಾಂಬ್ ದಾಳಿ ನಡೆಸಲು ಒಂದು ದೊಡ್ಡ ಅವಕಾಶವಾಗಿದೆ’ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ಇರಾನ್‌ನ ‘ಖಾತಮ್ ಅಲ್-ಅಂಬಿಯಾ ಸೆಂಟ್ರಲ್ ಹೆಡ್‌ಕ್ವಾರ್ಟರ್ಸ್’ ಕಮಾಂಡರ್ ಅಲಿ ಅಬ್ದುಲ್ಲಾ ಅವರು ಸರಕಾರಿ ಮಾಧ್ಯಮಗಳ ಮೂಲಕ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ಅಮೆರಿಕ ಮತ್ತು ಇಸ್ರೇಲ್‌ಗೆ ಯಾವುದೇ ತಪ್ಪು ಹೆಜ್ಜೆ ಇಡದಂತೆ ಎಚ್ಚರಿಸಿದ್ದಾರೆ. “ನಮ್ಮ ದೇಶದ ಮೇಲೆ ಯಾವುದೇ ದಾಳಿ ನಡೆದರೆ, ನಮ್ಮ ಸಶಸ್ತ್ರ ಪಡೆಗಳು ಎಷ್ಟು ಭೀಕರವಾಗಿ ಪ್ರತ್ಯುತ್ತರ ನೀಡಬಲ್ಲವು ಎಂಬುದನ್ನು ಅವರು ಯೋಚಿಸಬೇಕು” ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ, ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘಾಚಿ ಅವರೂ ಸಹ ಇರಾನ್‌ನ ಜನತೆ ಅಥವಾ ನಾಯಕತ್ವದ ಮೇಲೆ ದಾಳಿ ನಡೆಸುವ ಯಾವುದೇ ಪ್ರಯತ್ನ ನಡೆದರೆ, ಅದಕ್ಕೆ ತಕ್ಷಣ ಹಾಗೂ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದರು.