ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’

ಇಂದಿನ ವೇಗದ ಜೀವನಶೈಲಿಯಲ್ಲಿ ದೇಹದ ನೋವು ಸಾಮಾನ್ಯ ಸಮಸ್ಯೆಯಾಗಿದೆ. ಕುತ್ತಿಗೆ ನೋವು, ಬೆನ್ನು ನೋವು, ಸಂಧಿ ನೋವು, ಸ್ನಾಯು ನೋವು ಇವುಗಳಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

AI Image

೧. ‘ವಾತವ್ಯಾಧಿ’ ಅಂದರೇನು ? ಮತ್ತು ನೋವು ಹೆಚ್ಚಾಗುವ ಹಿಂದಿನ ಕಾರಣಗಳು

ಹೆಚ್ಚಿನವರು ತಕ್ಷಣದ ಪರಿಹಾರಕ್ಕಾಗಿ ಔಷಧಿ ಮಾರಾಟ ಅಂಗಡಿಯಲ್ಲಿ (ಮೆಡಿಕಲ್ ಶಾಪ್‌ನಲ್ಲಿ) ದೊರೆಯುವ ‘ಪೇನ್‌ಕಿಲ್ಲರ’ (ನೋವುನಿವಾರಕ) ಮಾತ್ರೆಗಳತ್ತ ಮುಖ ಮಾಡುತ್ತಾರೆ. ಆದರೆ ನೋವುನಿವಾರಕ ಮಾತ್ರೆಗಳನ್ನು ನಿರಂತರವಾಗಿ ಬಳಸುವುದರಿಂದ ದೇಹದ ಮೇಲೆ ದುಷ್ಪರಿಣಾಮಗಳಾಗುವ ಸಾಧ್ಯತೆ ಇದೆ. ವಿಶೇಷವಾಗಿ ಜಠರ, ಮೂತ್ರಪಿಂಡ ಹಾಗೂ ಯಕೃತ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗುತ್ತದೆ. ಆಯುರ್ವೇದದಲ್ಲಿ ಇಂತಹ ನೋವುಗಳನ್ನು ‘ವಾತವ್ಯಾಧಿ’ ಎಂದು ಪರಿಗಣಿಸಲಾಗುತ್ತದೆ. ವಾತದೋಷ ಅಸಮತೋಲನಗೊಂಡಾಗ ದೇಹದಲ್ಲಿ ನೋವು, ಬಿಗಿತ ಅಥವಾ ಗಟ್ಟಿತನ ಹೆಚ್ಚಾಗುವುದು, ಸಂಧಿಗಳ ಚಲನೆ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂದಿನ ಅಸಮರ್ಪಕ ಆಹಾರ ಪದ್ಧತಿ, ಹೆಚ್ಚು ಮಾನಸಿಕ ಒತ್ತಡ, ವ್ಯಾಯಾಮದ ಕೊರತೆ, ನಿದ್ರಾಹೀನತೆ ಹಾಗೂ ಅತಿಯಾದ ಕುಳಿತು ಕೆಲಸ ಮಾಡುವ ಅಭ್ಯಾಸಗಳು ವಾತ ಹೆಚ್ಚಲು ಪ್ರಮುಖ ಕಾರಣಗಳಾಗಿವೆ.

ವೈದ್ಯೆ (ಕು.) ನಿತ್ಯಶ್ರೀ ವೈ

೨. ನೋವು ಕಡಿಮೆಯಾಗಲು ಆಯುರ್ವೇದ ಚಿಕಿತ್ಸೆ

ಆಯುರ್ವೇದವು ಕೇವಲ ತಾತ್ಕಾಲಿಕವಾಗಿ ನೋವನ್ನು ಕಡಿಮೆ ಮಾಡುವುದಲ್ಲ; ಅದರ ಮೂಲ ಕಾರಣವನ್ನು ಸರಿಪಡಿಸುವತ್ತ ಗಮನ ಹರಿಸುತ್ತದೆ. ಇದರಲ್ಲಿ ಜೀವನಶೈಲಿ, ಆಹಾರ, ಔಷಧಿ ಮತ್ತು ಪಂಚಕರ್ಮ ಚಿಕಿತ್ಸೆಗೆ ಮಹತ್ವ ನೀಡಲಾಗುತ್ತದೆ.

ಅ. ವಾತವ್ಯಾಧಿ ನಿಯಂತ್ರಣಕ್ಕೆ ‘ಅಭ್ಯಂಗ’ (ತೈಲ ಮಸಾಜ್) ಬಹಳ ಪರಿಣಾಮಕಾರಿ ವಿಧಾನವಾಗಿದೆ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಅಭ್ಯಂಗ ಮಾಡುವುದರಿಂದ ವಾತ ಶಮನವಾಗುತ್ತದೆ ಹಾಗೂ ಸ್ನಾಯುಗಳು ಮತ್ತು ಸಂಧಿಗಳಿಗೆ ಬಲ ಸಿಗುತ್ತದೆ. ವಿಶೇಷವಾಗಿ ‘ಧನ್ವಂತರಿ’ ತೈಲ, ‘ಮುರಿವೆಣ್ಣೆ’ ತೈಲ, ‘ನಾರಾಯಣ’ ತೈಲ ಮುಂತಾದ ಆಯುರ್ವೇದ ತೈಲಗಳನ್ನು ಬಳಸುವುದರಿಂದ ನೋವು ಮತ್ತು ಗಟ್ಟಿತನ ಕಡಿಮೆಯಾಗಲು ಸಹಕಾರಿ.

ಆ. ಜೊತೆಗೆ ‘ಸ್ವೇದನ’ (ಹಬೆ ನೀಡುವುದು/ಶಾಖ ನೀಡುವುದು) ಚಿಕಿತ್ಸೆಯಿಂದ ದೇಹದ ಬಿಗಿತ ಕಡಿಮೆಯಾಗುತ್ತದೆ ಮತ್ತು ನೋವಿನಿಂದ ಆರಾಮ ಸಿಗುತ್ತದೆ. ಮನೆಯಲ್ಲಿಯೇ ಬಿಸಿ ನೀರಿನಲ್ಲಿ ಸ್ನಾನ ಮಾಡುವುದೂ ಸ್ವೇದನದಂತೆಯೇ ಕಾರ್ಯನಿರ್ವಹಿಸಿ ದೇಹಕ್ಕೆ ಹಿತಕರ ಅನುಭವ ನೀಡುತ್ತದೆ. ರಾತ್ರಿ ಸಮಯದಲ್ಲಿ ‘ಪಾದಾಭ್ಯಾಂಗ’ (ಪಾದ ಮಸಾಜ್) ಮಾಡಿಕೊಳ್ಳುವುದರಿಂದ ದೇಹದ ದಣಿವು ಕಡಿಮೆಯಾಗುತ್ತದೆ ಹಾಗೂ ಉತ್ತಮ ನಿದ್ರೆಗೆ ಸಹಕಾರಿಯಾಗುತ್ತದೆ.

೩. ಆಹಾರ ಮತ್ತು ಯೋಗ ಇವುಗಳ ಮೂಲಕ ವಹಿಸಬೇಕಾದ ಕಾಳಜಿ

ಆಹಾರದಲ್ಲಿಯೂ ವಿಶೇಷ ಕಾಳಜಿ ಅಗತ್ಯ. ಹೆಚ್ಚು ಒಣ, ತಂಪು ಹಾಗೂ ಪ್ರಕ್ರಿಯೆ ಮಾಡಿದ (Processed) ಆಹಾರವು ವಾತವನ್ನು ಹೆಚ್ಚಿಸುತ್ತದೆ. ಅದರ ಬದಲು ಬಿಸಿಯಾದ, ಸಾತ್ತ್ವಿಕ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ ಉತ್ತಮ. ದಿನನಿತ್ಯ ಯೋಗ, ಪ್ರಾಣಾಯಾಮ ಹಾಗೂ ಸರಳ ವ್ಯಾಯಾಮಗಳನ್ನು ಪಾಲಿಸುವುದರಿಂದ ದೇಹದ ಚಲನೆ ಸುಧಾರಿಸುತ್ತದೆ ಮತ್ತು ನೋವು ಕಡಿಮೆಯಾಗಲು ಸಹಕಾರಿ.

೪. ದೀರ್ಘಕಾಲ ಆರೋಗ್ಯ ಕಾಪಾಡಲು ಆಯುರ್ವೇದ !

ಇಂದಿನ ಕಾಲದಲ್ಲಿ ನೋವುನಿವಾರಕ ಔಷಧಿಗಳ ಅವಲಂಬನೆ ಹೆಚ್ಚುತ್ತಿರುವಾಗ, ಆಯುರ್ವೇದವು ದೇಹಕ್ಕೆ ಹಾನಿ ಮಾಡದೇ ಸಹಜ ಹಾಗೂ ಸಮಗ್ರ ರೀತಿಯ ನೋವು ನಿರ್ವಹಣೆಯ ಮಾರ್ಗವನ್ನು ನೀಡುತ್ತದೆ. ಆರೋಗ್ಯಕರ ಜೀವನಶೈಲಿ ಮತ್ತು ಆಯುರ್ವೇದದ ಸರಿಯಾದ ಅನುಸರಣೆ ಮೂಲಕ ದೀರ್ಘಕಾಲದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

– ವೈದ್ಯೆ (ಕು.) ನಿತ್ಯಶ್ರೀ ವೈ, ಶ್ರೀ ಶಾರದಾ ಆಯುರ್ವೇದಾಲಯ, ಹೊಳೆಹೊನ್ನೂರು, ಭದ್ರಾವತಿ ತಾಲೂಕು, ಶಿವಮೊಗ್ಗ ಜಿಲ್ಲೆ