ಆದರ್ಶ ರಾಷ್ಟ್ರ ನಿರ್ಮಾಣಕ್ಕಾಗಿ ಇಂದಿನ ಪೀಳಿಗೆಯನ್ನು ಸುಸಂಸ್ಕೃತಗೊಳಿಸುವುದು ಎಲ್ಲರ ನೈತಿಕ ಕರ್ತವ್ಯವೇ ಆಗಿದೆ !

ಜೀವನದ ವಾಸ್ತವವನ್ನು ಎದುರಿಸಲು ಗುಣಗಳ ಅವಶ್ಯಕತೆ !

ಮಾನವನ ಗುಣಗಳು ಕಾಲಚಕ್ರದಲ್ಲೂ ತಮ್ಮ ಮುದ್ರೆಯನ್ನು ಮೂಡಿಸುತ್ತಿರುವುದು !

ಕಾಲದ ಅಖಂಡ ಮಹಾಪ್ರವಾಹದಲ್ಲಿ ಯಾವ ವಿಷಯವು ನಿಸ್ಸಂದೇಹವಾಗಿ ತನ್ನ ಅವಿಸ್ಮರಣೀಯ ಮುದ್ರೆಯನ್ನು ಮೂಡಿಸಿ ಹೋಗಿದೆಯೋ, ಅದುವೇ ಮಾನವೀಯ ಗುಣಗಳು ! ವಿಚಾರಗಳ ಪ್ರಾಮಾಣಿಕತೆ, ಅದಕ್ಕನುಗುಣವಾದ ಆಚಾರ, ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಿದ ‘ಶಿಷ್ಟಾಚಾರ’ಗಳ ಮೇಲೆ ಅಚಲ ನಿಷ್ಠೆ ಮತ್ತು ಪತನದ ಕಡೆಗೆ ಸೆಳೆಯುವ ನೈಸರ್ಗಿಕ ಪ್ರವೃತ್ತಿಯೊಂದಿಗೆ ನಿರಂತರ ಹೋರಾಡುವ ವೃತ್ತಿ ಈ ಮಾನವೀಯ ಗುಣಗಳು ಎಲ್ಲಿ ಒಂದಾಗುತ್ತವೆಯೋ, ಅಲ್ಲಿ ಒಬ್ಬ ನಿಜವಾದ ಜೀವಂತ ಮನುಷ್ಯ ಸಾಕಾರಗೊಳ್ಳುತ್ತಾನೆ ! ಅವನಿಗೆ ತನ್ನದೇ ಆದ ವ್ಯಕ್ತಿತ್ವವಿರುತ್ತದೆ ಮತ್ತು ಆ ವ್ಯಕ್ತಿತ್ವದಲ್ಲಿ

ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವಿರುತ್ತದೆ !

ಗುಣವಂತ ಅಥವಾ ಸಮರ್ಥ ವ್ಯಕ್ತಿಯು ಯಾವುದೇ ಸವಾಲುಗಳನ್ನು ಅತ್ಯಂತ ಸುಲಭವಾಗಿ ಎದುರಿಸಬಲ್ಲವನಾಗಿರುವುದರಿಂದ, ಆತ ಜೀವನವನ್ನು ಹೆಚ್ಚು ಜಾಗರೂಕತೆಯಿಂದ ನೋಡಲು ಸಾಧ್ಯವಾಗುತ್ತದೆ.

೧. ನಾಲ್ಕೂ ದಿಕ್ಕುಗಳಿಂದ ಕುಸಂಸ್ಕಾರದ ಸಂಕಟದಿಂದ ಸುತ್ತುವರೆದಿರುವ ಹೊಸ ಪೀಳಿಗೆ

ಭಾರತೀಯ ಸಂಸ್ಕೃತಿಯು ಚಾರಿತ್ರ್ಯ ಮತ್ತು ಸಂಸ್ಕಾರಗಳ ಜನನಿ ಯಾಗಿದೆ. ಪ್ರಸ್ತುತ ಭೌತಿಕವಾದ ಮತ್ತು ಅಭಿವೃದ್ಧಿಯ ಸ್ಪರ್ಧೆಯಲ್ಲಿ ನಾವು ಮಾನವೀಯ ಮೌಲ್ಯಗಳನ್ನು ಹಿಂದೆ ಬಿಟ್ಟಿದ್ದೇವೆ. ಸದ್ಯದ ವಿಜ್ಞಾನ ಯುಗದ ಸಂಪನ್ನತೆಯು ನಮ್ಮ ಮುಂದೆ ಶಾಪವಾಗಿ ಬಂದು ನಿಂತಿದೆ. ಯಾವ ವಸ್ತುಗಳಲ್ಲಿ ನಾವು ಭೌತಿಕ ಸುಖವನ್ನು ಕಾಣುತ್ತೇವೆಯೋ, ಆ ವಸ್ತುಗಳೇ ನಮ್ಮ ವಿನಾಶಕ್ಕೆ ಕಾರಣವಾಗುತ್ತಿವೆ. ಕುಸಂಸ್ಕಾರದ ಸಂಕಟವು ಹೊಸ ಪೀಳಿಗೆಯನ್ನು ನಾಲ್ಕೂ ದಿಕ್ಕುಗಳಿಂದ ಸುತ್ತುವರೆದಿದೆ.

೨. ಮಕ್ಕಳಲ್ಲಿ ಸುಸಂಸ್ಕಾರವನ್ನು ಮೂಡಿಸಲು ಸಹಾಯಕವಾಗುವ ಘಟಕಗಳು ಮತ್ತು ಪೋಷಕರ ಜವಾಬ್ದಾರಿ !

ಮನಸ್ಸು, ಮಾತು ಮತ್ತು ಕರ್ಮಗಳ ಪಾವಿತ್ರ್ಯಕ್ಕಾಗಿ ಸುಸಂಸ್ಕಾರಗಳನ್ನು ಅಳವಡಿಸಿಕೊಳ್ಳುವುದು ನಮ್ಮೆಲ್ಲರ ನೈತಿಕ ಕರ್ತವ್ಯವಾಗಿದೆ. ಬಾಲ್ಯಾವಸ್ಥೆಯಿಂದ ಕಿಶೋರಾವಸ್ಥೆಯವರೆಗಿನ ಹಂತವು ಹೆಚ್ಚು ಸಂವೇದನಾಶೀಲವಾಗಿರುತ್ತದೆ ಮತ್ತು ಇದೇ ಹಂತದಲ್ಲಿ ಚಾರಿತ್ರ್ಯ ನಿರ್ಮಾಣವಾಗುತ್ತಿರುತ್ತದೆ. ಚಾರಿತ್ರ್ಯ ನಿರ್ಮಾಣದ ಪ್ರಕ್ರಿಯೆಯು ಕಿಶೋರಾವಸ್ಥೆಯಲ್ಲಿ ಪೂರ್ಣಗೊಳ್ಳುತ್ತದೆ.ಆದ್ದರಿಂದ ಅವಿಭಕ್ತ ಕುಟುಂಬ ವ್ಯವಸ್ಥೆ, ಆತ್ಮೀಯತೆ, ಪ್ರೀತಿ, ಹಾಗೆಯೇ ಯೋಗ್ಯ ಮಾರ್ಗದರ್ಶನ ಮತ್ತು ತಂದೆ-ತಾಯಿ ಚಾರಿತ್ರ್ಯವಂತರಾಗಿ ಇರುವುದು ಹಾಗೂ ಅವರಲ್ಲಿನ ಸದ್ಗುಣಗಳು ಈ ಎಲ್ಲ ಘಟಕಗಳು ಮಕ್ಕಳಲ್ಲಿ ಸುಸಂಸ್ಕಾರವನ್ನು ಮೂಡಿಸಲು ಸಹಾಯಕವಾಗುತ್ತವೆ. ಶಿಸ್ತು, ತ್ಯಾಗ, ಕರ್ತವ್ಯನಿಷ್ಠೆ ಮತ್ತು ದೃಢ ಸಂಕಲ್ಪ ಇವು ಯಶಸ್ಸಿನ ಮೆಟ್ಟಿಲು ಗಳಾಗಿವೆ. ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಹತ್ತುವುದರಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು.

೩. ಪೋಷಕರು ಮಕ್ಕಳನ್ನು ಸುಸಂಸ್ಕೃತ ಮತ್ತು ಸ್ವಾವಲಂಬಿಗಳನ್ನಾಗಿಸಲು ಯೋಗ್ಯ ನಿರ್ಧಾರ ತೆಗೆದುಕೊಳ್ಳುವುದು ಅಪೇಕ್ಷಿತವಾಗಿದೆ

ಅನೈತಿಕತೆಯಿಂದ ಗಳಿಸಿದ ಸಂಪತ್ತಿನಿಂದ ಮಕ್ಕಳ ಭಾವನೆಗಳು ದಾರಿ ತಪ್ಪುತ್ತವೆ. ಆದ್ದರಿಂದ ತಂದೆ-ತಾಯಿ ಇಬ್ಬರೂ ಪ್ರಾಮಾಣಿಕ ಪರಿಶ್ರಮದಿಂದ ಗಳಿಸಿದ ಹಣವು ಮಕ್ಕಳಿಗೆ ಸರಿಯಾದ ಮಾರ್ಗ ದರ್ಶನ ನೀಡಬಲ್ಲದು. ಅವಶ್ಯಕತೆಗಿಂತ ಹೆಚ್ಚಿನ ಸುಖ-ಸೌಕರ್ಯಗಳು ಮಕ್ಕಳಿಗೆ ವರದಾನವಾಗದೆ ಶಾಪವಾಗುತ್ತವೆ; ಏಕೆಂದರೆ ಅವು ಮಕ್ಕಳನ್ನು ಸ್ವಾವಲಂಬಿಗಳಾಗುವುದಕ್ಕೆ ಅಡ್ಡಿಯುಂಟು ಮಾಡುತ್ತವೆ. (ಆಧಾರ : ‘ಸಂಸ್ಕಾರಮ್’ ಜುಲೈ, ೨೦೧೩)