ಚೀನಾ ಸಹಾಯದಿಂದ ಮುನ್ನಡೆಯುತ್ತಿರುವ ಪಾಕಿಸ್ತಾನದ ಬಾಹ್ಯಾಕಾಶ ಯೋಜನೆ!

  • ೧೬ ತಿಂಗಳುಗಳಲ್ಲಿ ೬ ಉಪಗ್ರಹಗಳ ಉಡಾವಣೆ ಮಾಡಿದ ಪಾಕ್!

  • ಭಾರತದ ಭೂಭಾಗದ ಮೇಲೆ ನಿಗಾ ಇಡುವ ಸಾಮರ್ಥ್ಯ!

ನವದೆಹಲಿ – ಪಾಕಿಸ್ತಾನವು ಕೇವಲ ೧೬ ತಿಂಗಳುಗಳಲ್ಲಿ ೬ ಭೂ-ಪರಿವೀಕ್ಷಣಾ (ಅರ್ಥ್ ಅಬ್ಸರ್ವೇಶನ್) ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇವುಗಳಲ್ಲಿ ಕೆಲವು ಉಪಗ್ರಹಗಳನ್ನು ಚೀನಾದ ಸಹಾಯದಿಂದ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಈ ಬೆಳವಣಿಗೆಗಳು ಭಾರತೀಯ ರಕ್ಷಣಾ ತಜ್ಞರಲ್ಲಿ ಕಳವಳ ಉಂಟುಮಾಡಿವೆ.

೧. ‘ಆಪರೇಷನ್ ಸಿಂದೂರ್’ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ನಡೆದು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಈಗ ಚೀನಾದ ಸಹಾಯದಿಂದ ಪಾಕಿಸ್ತಾನ ನಡೆಸುತ್ತಿರುವ ಕಣ್ಗಾವಲು ಜಾಲದ (ಸರ್ವೇಲನ್ಸ್ ನೆಟ್‌ವರ್ಕ್) ಕುರಿತು ಆತಂಕಗಳು ಹೆಚ್ಚುತ್ತಿವೆ.

೨. ಪಾಕಿಸ್ತಾನದ ಈ ಉಪಗ್ರಹಗಳ ಸರಣಿಯನ್ನು ಅದರ ಸ್ವಂತ ಬಾಹ್ಯಾಕಾಶ ಸಾಮರ್ಥ್ಯ ಎಂದು ನೋಡಲಾಗುತ್ತಿಲ್ಲ, ಬದಲಿಗೆ ದಕ್ಷಿಣ ಏಷ್ಯಾದಲ್ಲಿ ಚೀನಾದ ಹೆಚ್ಚುತ್ತಿರುವ ಗುಪ್ತಚರ ಮತ್ತು ಕಣ್ಗಾವಲು ಸಾಮರ್ಥ್ಯದ ವಿಸ್ತರಣೆ ಎಂದೇ ಪರಿಗಣಿಸಲಾಗುತ್ತಿದೆ.

೩. ಪಾಕಿಸ್ತಾನದ ಈ ಉಪಗ್ರಹಗಳು ಭಾರತೀಯ ಭೂಭಾಗದ ವಿವರವಾದ ಚಿತ್ರಗಳನ್ನು ತೆಗೆದುಕೊಳ್ಳಲು, ಸೇನಾ ನಿಯೋಜನೆಯ ಮೇಲೆ ನಿಗಾ ಇಡಲು, ಹಿಂದೂ ಮಹಾಸಾಗರದಲ್ಲಿ ನೌಕಾಪಡೆಯ ಚಲನವಲನಗಳನ್ನು ಪತ್ತೆಹಚ್ಚಲು ಮತ್ತು ಭೂಮಿಯ ಮೇಲಿನ ಆಯಕಟ್ಟಿನ ಆಸ್ತಿಗಳನ್ನು (ಸ್ಟ್ರಾಟೆಜಿಕ್ ಅಸ್ಸೆಟ್ಸ್) ಗುರುತಿಸಲು ಸಮರ್ಥವಾಗಿವೆ. ಇದರಿಂದಾಗಿ ಭಾರತದ ಕಡೆಗೆ ಕಣ್ಗಾವಲು ಇಡುವ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ.

೪. ರಕ್ಷಣಾ ವೀಕ್ಷಕರ ಪ್ರಕಾರ, ಉಪಗ್ರಹಗಳ ಕ್ಷಿಪ್ರ ನಿಯೋಜನೆ ಮತ್ತು ಪಾಕಿಸ್ತಾನದೊಂದಿಗೆ ಚೀನಾದ ದೀರ್ಘಾವಧಿಯ ವ್ಯೂಹಾತ್ಮಕ ಪಾಲುದಾರಿಕೆಯನ್ನು ಗಮನಿಸಿದರೆ, ಈ ಉಪಗ್ರಹಗಳು ಪಾಕಿಸ್ತಾನದ ಧ್ವಜದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ವಾಸ್ತವವಾಗಿ ಭಾರತೀಯ ಉಪಖಂಡದ ಮೇಲೆ ಚೀನಾದ ಕಣ್ಗಾವಲು ಸಾಮರ್ಥ್ಯವನ್ನು ಬಲಪಡಿಸುತ್ತಿವೆ.

೫. ಚೀನಾದ ನಿರಂತರ ಬೆಂಬಲವಿಲ್ಲದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾಕಿಸ್ತಾನದ ಇತ್ತೀಚಿನ ಪ್ರಗತಿ ಸಾಧ್ಯವಾಗುತ್ತಿರಲಿಲ್ಲ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

೬. ಚೀನಾದ ಬೆಂಬಲದೊಂದಿಗೆ ಪಾಕಿಸ್ತಾನ ತನ್ನದೇ ಆದ ಬಾಹ್ಯಾಕಾಶ ಆಧಾರಿತ ಕಣ್ಗಾವಲು ಸಾಮರ್ಥ್ಯವನ್ನು ವೇಗವಾಗಿ ಸಶಕ್ತಗೊಳಿಸುತ್ತಿರುವಾಗ, ಭಾರತವೂ ಕೂಡ ತನ್ನದೇ ಆದ ವ್ಯೂಹಾತ್ಮಕ ಬಾಹ್ಯಾಕಾಶ ಯೋಜನೆಗಳನ್ನು ತೀವ್ರಗೊಳಿಸುವುದು ಅತ್ಯಗತ್ಯ ಎಂದು ತಜ್ಞರು ಹೇಳುತ್ತಾರೆ.