ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !

ವೈದಿಕ ಪರಂಪರೆಯಲ್ಲಿ ಯಜ್ಞವು ಕೇವಲ ವಿಧಿಯಲ್ಲ, ಅದು ಧರ್ಮಸಂವರ್ಧನೆ, ಸಾಧಕರ ರಕ್ಷಣೆ ಹಾಗೂ ಸಮಷ್ಟಿ ಕಲ್ಯಾಣಕ್ಕಾಗಿನ ಪರಿಣಾಮಕಾರಿ ಸಾಧನೆಯಾಗಿದೆ. ಇಂದು ಯಜ್ಞಸಂಸ್ಕೃತಿ ಲೋಪವಾಗುತ್ತಿರುವಾಗ ಅದರ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ) ಅತ್ಯಂತ ಸೂಕ್ಷ್ಮ, ಶಾಸ್ತ್ರನಿಷ್ಠ ಮತ್ತು ವ್ಯಾಪಕವಾದ ದೃಷ್ಟಿಕೋನವನ್ನು ನೀಡಿದ್ದಾರೆ. ಅವರ ಮಾರ್ಗದರ್ಶನದಿಂದ ಯಜ್ಞವನ್ನು ನೋಡುವ ಸರಿಯಾದ ದೃಷ್ಟಿಕೋನ, ಆಚಾರದಲ್ಲಿನ ಶುದ್ಧತೆ ಹಾಗೂ ಸಮಷ್ಟಿ ಹಿತದ ಭಾವನೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ.

ಸಪ್ತರ್ಷಿಗಳ ಆಜ್ಞೆಯಂತೆ ನಡೆಯುತ್ತಿದ್ದ ರುದ್ರ ಯಾಗದ ವೇಳೆ ಪೂಜೆಯಲ್ಲಿನ (ರಾಮನಾಥಿ ಆಶ್ರಮ, ೨೯.೫.೨೦೧೬) ರುದ್ರಪೀಠದ ರಚನೆ ವೀಕ್ಷಿಸುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು

೧. ಯಜ್ಞದಲ್ಲಿನ ಆಚಾರ ಶುದ್ಧಿಯ ಮಹತ್ವ !

ಕೆಲವು ವರ್ಷಗಳ ಹಿಂದೆ ಯಜ್ಞಕ್ಕಾಗಿ ಕುಳಿತುಕೊಳ್ಳುವ ಯಜಮಾನರ ಪೈಕಿ ಕೆಲವರು ಕೃತಕ ಆಭರಣ ಧರಿಸಿರುವುದು ಕಂಡು ಬಂದಿತು. ಆಗ ಗುರುದೇವರು, ‘ಯಜ್ಞದಂತಹ ಸಾತ್ತ್ವಿಕ ಕ್ರಿಯೆಯಲ್ಲಿ ಕೃತಕ ಆಭರಣ ಧರಿಸಿದರೆ ಅವುಗಳಿಂದ ಸಾತ್ತ್ವಿಕ ಸ್ಪಂದನಗಳು ಹೇಗೆ ಪ್ರಕ್ಷೇಪಿತ ಗೊಳ್ಳುತ್ತವೆ ?’ ಎಂದರು. ಇದರಿಂದ ಯಜ್ಞದ ಸಮಯದಲ್ಲಿ ಶುದ್ಧ, ನೈಸರ್ಗಿಕ ಮತ್ತು ಸಾತ್ತ್ವಿಕ ಆಚಾರಗಳನ್ನು ಪಾಲಿಸುವುದು ಆವಶ್ಯಕವಾಗಿದೆ ಎಂಬುದು ತಿಳಿಯಿತು. ಅನಂತರ ಯಜ್ಞಕ್ಕೆ ಕುಳಿತುಕೊಳ್ಳುವಾಗ ನಿಜವಾದ ಆಭರಣಗಳನ್ನೇ ಧರಿಸುವ ಶಾಸ್ತ್ರಸಮ್ಮತ ಪದ್ಧತಿಯನ್ನು ಅಳವಡಿಸಿಕೊಳ್ಳಲಾಯಿತು.

೨. ಸಂಕಲ್ಪದಲ್ಲಿನ ವ್ಯಾಪಕತೆ !

ಯಜ್ಞದ ಸಂಕಲ್ಪವನ್ನು ಮಾಡುವಾಗ ಆರಂಭದಲ್ಲಿ ಅದು ಕೇವಲ ಸನಾತನ ಸಂಸ್ಥೆ ಮತ್ತು ಸಾಧಕರಿಗಷ್ಟೇ ಸೀಮಿತವಾಗಿತ್ತು; ಆದರೆ ಗುರುದೇವರು ಅದಕ್ಕೆ ವ್ಯಾಪಕ ದಿಶೆಯನ್ನು ನೀಡಿದರು. ಹಿಂದೂ ರಾಷ್ಟ್ರದ (ರಾಮ ರಾಜ್ಯ) ಸ್ಥಾಪನೆ ಆದಷ್ಟು ಬೇಗನೆ ಆಗಲಿ, ಹಾಗೆಯೇ ಮುಂಬರುವ ಆಪತ್ಕಾಲದಲ್ಲಿ ಸಂಪೂರ್ಣ ಮಾನವಕುಲದ ರಕ್ಷಣೆಯಾಗಲಿ ಎಂಬಂತಹ ಸಮಾಜ ಕಲ್ಯಾಣದ ಸಂಕಲ್ಪಗಳಿಗಾಗಿ ಅವರು ಆಗ್ರಹಿಸಿದರು. ಇದರಿಂದ ಗುರುದೇವರ ಕಾರ್ಯವು ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಆಗಿದೆ ಎಂಬುದು ತೀವ್ರವಾಗಿ ಅರಿವಾಯಿತು.

ಶ್ರೀ. ಸಿದ್ಧೇಶ ಕರಂದೀಕರ

೩. ಸಂಕಲ್ಪದಲ್ಲಿ ಉಚ್ಚಾರಣೆಯ ಶುದ್ಧತೆ !

ಯಜ್ಞದ ಆರಂಭದಲ್ಲಿ ಗುರುದೇವರು ಸ್ವತಃ ಸಂಕಲ್ಪ ಮಾಡಲು ಉಪಸ್ಥಿತರಿರುತ್ತಿದ್ದರು. ಆ ಸಮಯದಲ್ಲಿ ಯಾವುದಾದರೊಂದು ಶಬ್ದ ಸರಿಯಾಗಿ ಕೇಳಿಸದಿದ್ದರೆ ಅಥವಾ ಉಚ್ಚಾರಣೆ ಸರಿ ಆಗದಿದ್ದರೆ ಅವರು ಅದನ್ನು ಮತ್ತೊಮ್ಮೆ ಹೇಳಲು ಹೇಳುತ್ತಿದ್ದರು. ಸಂಕಲ್ಪವನ್ನು ನಿಖರವಾಗಿ ಓದಿ ಹೇಳಲು ಸಾಧ್ಯವಾಗಲಿ ಎಂಬ ಉದ್ದೇಶದಿಂದ, ಅವರು ಸಂಕಲ್ಪವನ್ನು ಲಿಖಿತ ರೂಪದಲ್ಲಿ ನೀಡುವಂತೆ ಪುರೋಹಿತರಿಗೆ ಹೇಳಿದರು. ಇದರಿಂದ ಸಂಕಲ್ಪದ ಪ್ರತಿಯೊಂದು ಶಬ್ದ, ಅದರ ಉಚ್ಚಾರಣೆ ಮತ್ತು ಶುದ್ಧತೆ ಅತ್ಯಂತ ಮಹತ್ವದ್ದಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

೪. ಯಜ್ಞಸಂಸ್ಕೃತಿಯನ್ನು ರಕ್ಷಿಸಲು ಮಾಡಿದ ಕಾರ್ಯ !

ಇಂದಿನ ಕಾಲದಲ್ಲಿ ಯಜ್ಞ ಸಂಸ್ಕೃತಿಯ ಮಹತ್ವವು ಕಡಿಮೆಯಾಗುತ್ತಿರುವಾಗ, ಅದರ ರಕ್ಷಣೆ ಮತ್ತು ಸಂವರ್ಧನೆಗಾಗಿ ಗುರುದೇವರು ದೊಡ್ಡ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಋಷಿಮುನಿಗಳು ನೀಡಿದ ಧರ್ಮಶಾಸ್ತ್ರ ಮತ್ತು ಅದರಲ್ಲಿನ ಯಜ್ಞ ಪರಂಪರೆಯು ಎಲ್ಲರಿಗೂ ತಲುಪಬೇಕೆಂಬ ಉದ್ದೇಶದಿಂದ ಅವರು ‘ಸನಾತನ ಪುರೋಹಿತ ಪಾಠಶಾಲೆ’ಯನ್ನು ಸ್ಥಾಪಿಸಿದರು. ಈ ಮಾಧ್ಯಮದಿಂದ ವೇದಾಧ್ಯಯನ, ಯಜ್ಞವಿಧಿ ಮತ್ತು ಧರ್ಮಶಿಕ್ಷಣದ ಸಂವರ್ಧನೆಯಾಗುತ್ತಿದೆ.

೫. ಧರ್ಮಶಾಸ್ತ್ರಕ್ಕನುಸಾರ ಆಚರಣೆಗೆ ಆದ್ಯತೆ !

ಗುರುದೇವರ ೮೩ ನೇ ಜನ್ಮೋತ್ಸವದ ನಿಮಿತ್ತ ಗೋವಾದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಕಾರ್ಯಕ್ರಮವನ್ನು ಆಯೋಜಿಸುವಾಗ, ಉಪಸ್ಥಿತರಿಗೆ ಯಜ್ಞವು ಸ್ಪಷ್ಟವಾಗಿ ಕಾಣಿಸಲು ಸಾಧ್ಯವಾಗಬೇಕೆಂದು ಆರಂಭದಲ್ಲಿ ಯಜ್ಞಕುಂಡವನ್ನು ಎತ್ತರದ ವೇದಿಕೆಯ ಮೇಲೆ ನಿರ್ಮಿಸಲು ಆಯೋಜಿಸಲಾಗಿತ್ತು; ಆದರೆ ಗುರುದೇವರು, ಯಜ್ಞಕುಂಡವು ಭೂಮಿಯ ಜೊತೆಗೆ ಸಂಪರ್ಕದಲ್ಲಿರುವುದು ಆವಶ್ಯಕವಾಗಿದೆ; ಏಕೆಂದರೆ ಅದರಿಂದಲೇ ಸಮಾಜಕ್ಕೆ ಯೋಗ್ಯ ಲಾಭವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದರು. ಇದರಿಂದ ದೃಶ್ಯದ ಆಕರ್ಷಣೆಗಿಂತ ಧರ್ಮಶಾಸ್ತ್ರದ ಪ್ರಕಾರ ಯೋಗ್ಯ ಆಚರಣೆಯೇ ಹೆಚ್ಚು ಮಹತ್ವದ್ದಾಗಿದೆ ಎಂಬುದು ಸ್ಪಷ್ಟವಾಯಿತು.

೬. ಸರ್ವಸಮಾವೇಶಕ ಸಹಭಾಗಿತ್ವದ ದೃಷ್ಟಿ !

ಆಶ್ರಮದಲ್ಲಿ ನಡೆಯುವ ಯಜ್ಞಗಳ ಲಾಭವು ಎಲ್ಲಾ ಸಾಧಕರಿಗೂ ಸಿಗಬೇಕೆಂದು ಗುರುದೇವರು ವಿಶೇಷ ಆಯೋಜನೆಯನ್ನು ಮಾಡಿಸಿಕೊಂಡರು. ಯಜ್ಞವನ್ನು ಪ್ರತ್ಯಕ್ಷ ನೋಡಲು ಸಾಧ್ಯವಾಗಬೇಕೆಂದು, ದೊಡ್ಡ ಪರದೆಯ (ಸ್ಕ್ರೀನ್) ಮೇಲೆ ಅದರ ನೇರ ಪ್ರಸಾರವನ್ನು ಮಾಡಲಾಯಿತು. ಅದೇ ರೀತಿ ಜಗತ್ತಿನಾದ್ಯಂತದ ಸಾಧಕರಿಗೂ ಈ ಯಜ್ಞಗಳ ಲಾಭವಾಗಬೇಕೆಂದು ಕಂಪ್ಯೂಟರ್ ತಂತ್ರಜ್ಞಾನದ (ಆನ್‌ಲೈನ್) ಮೂಲಕ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲು ಅವರು ಸೂಚಿಸಿದರು. ಇದರಿಂದ ಅವರ ವಿಶಾಲ ಮತ್ತು ಸರ್ವಸಮಾವೇಶಕ ದೃಷ್ಟಿಕೋನವು ಕಂಡುಬರುತ್ತದೆ.

೭. ಸ್ಥೂಲ ಮತ್ತು ಸೂಕ್ಷ್ಮ ನಿರೀಕ್ಷಣೆ

ಗುರುದೇವರು ಸ್ವತಃ ತಮ್ಮ ದೈಹಿಕ ಅಸಮರ್ಥತೆಯ ನಡುವೆಯೂ, ಯಜ್ಞಸ್ಥಳದಲ್ಲಿ ಕೆಲಕಾಲ ಉಪಸ್ಥಿತರಿದ್ದು ನಿರೀಕ್ಷಣೆ ಮಾಡುತ್ತಿದ್ದರು. ಅವರು ಕೇವಲ ಬಾಹ್ಯ (ಸ್ಥೂಲ) ವಿಷಯಗಳ ಕಡೆಗಷ್ಟೇ ಅಲ್ಲ, ಸೂಕ್ಷ್ಮ ಸ್ತರದಲ್ಲಿ ನಡೆಯುವ ಸ್ಪಂದನಗಳ ಕಡೆಗೂ ಗಮನ ಹರಿಸುತ್ತಿದ್ದರು. ಆಹುತಿಯು ಏಕಕಾಲದಲ್ಲಿ ಸಮರ್ಪಣೆಯಾಗಬೇಕೆಂದು ಮಾರ್ಗದರ್ಶನ ಮಾಡುವುದು, ಹಾಗೆಯೇ ಸಾಧಕರಲ್ಲಿ ಉತ್ಪನ್ನವಾಗುವ ಶಾಂತಿ ಮತ್ತು ಆನಂದದ ಸ್ಪಂದನಗಳನ್ನು ವೀಕ್ಷಿಸುವುದು ಈ ವಿಷಯಗಳು ಅವರ ಸೂಕ್ಷ್ಮದೃಷ್ಟಿಯ ದ್ಯೋತಕವಾಗಿವೆ. ಹಾಗೆಯೇ ಸಣ್ಣಪುಟ್ಟ ಆಚರಣೆಗಳಲ್ಲಿನ ತಪ್ಪುಗಳನ್ನು ಸಹ ಅವರು ಗಮನಕ್ಕೆ ತಂದು ಕೊಟ್ಟರು.

೮. ಅನುಭವಗಳನ್ನು ಬರೆಯಲು ಪ್ರೇರಣೆ ನೀಡುವುದು

ಯಜ್ಞದ ಸ್ಥಳದಲ್ಲಿ ಗಮನಕ್ಕೆ ಬಂದ ಅಂಶಗಳನ್ನು ಗುರುದೇವರು ತಕ್ಷಣವೇ ಬರೆದು ಪ್ರಸಿದ್ಧಪಡಿಸುತ್ತಿದ್ದರು, ಇದರಿಂದ ಎಲ್ಲಾ ಸಾಧಕರಿಗೂ ಅದರಿಂದ ಕಲಿಯಲು ಸಾಧ್ಯವಾಗುತ್ತಿತ್ತು. ಅದೇ ರೀತಿ ಯಜ್ಞದಲ್ಲಿ ಭಾಗವಹಿಸಿದ ಸಾಧಕರಿಗೆ ತಮಗೆ ಬಂದ ಅನುಭೂತಿಗಳು ಮತ್ತು ಅನಿಸಿದ್ದನ್ನು ಬರೆದಿಡಲು ಹೇಳುತ್ತಿದ್ದರು. ಇದರಿಂದ ಸಾಧಕರಲ್ಲಿ ಜಾಗರೂಕತೆ ಹೆಚ್ಚಾಗಿ, ಯಜ್ಞದ ಮಹತ್ವವು ಇನ್ನಷ್ಟು ಸ್ಪಷ್ಟವಾಗುತ್ತಿತ್ತು.

೯. ನಿಷ್ಕರ್ಷ

ಯಜ್ಞ ಸಂಸ್ಕೃತಿಯ ಕಡೆಗೆ ನೋಡುವ ಗುರುದೇವರ ದೃಷ್ಟಿಕೋನವು ಶಾಸ್ತ್ರನಿಷ್ಠ, ಸೂಕ್ಷ್ಮ, ವ್ಯಾಪಕ ಮತ್ತು ಸಮಷ್ಟಿಗೆ ಕಲ್ಯಾಣಕಾರಿಯಾಗಿದೆ. ಅವರ ಮಾರ್ಗದರ್ಶನದಿಂದಾಗಿ ಯಜ್ಞವು ಕೇವಲ ಒಂದು ಸಾಂಪ್ರದಾಯಿಕ ಕೃತಿಯಾಗಿ ಉಳಿಯದೆ ಆಧ್ಯಾತ್ಮಿಕ ಉನ್ನತಿ ಮತ್ತು ಧರ್ಮಸಂವರ್ಧನೆಯ ಪರಿಣಾಮಕಾರಿ ಮಾಧ್ಯಮವಾಗಿದೆ.

– ಶ್ರೀ. ಸಿದ್ಧೇಶ ಕರಂದೀಕರ, ಢವಳಿ, ಫೋಂಡಾ, ಗೋವಾ.

  • ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ
  • ಸೂಕ್ಷ್ಮ-ಪರೀಕ್ಷಣೆ : ಯಾವುದಾದರೂ ಘಟನೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅನಿಸುತ್ತದೆಯೋ, ಅದನ್ನು ‘ಸೂಕ್ಷ್ಮ-ಪರೀಕ್ಷಣೆ’ ಎನ್ನುತ್ತಾರೆ.