ಉರೂಸ್ ನಿಮಿತ್ತ ವಿಶಾಲಗಡದಲ್ಲಿ ಪ್ರಾಣಿ ಬಲಿ ನೀಡಲು ನ್ಯಾಯಾಲಯದ ಅನುಮತಿ!

(ಉರುಸ್ ಎಂದರೆ ಮುಸ್ಲಿಂ ಧರ್ಮಗುರುವೊಬ್ಬರ ಪುಣ್ಯತಿಥಿಯ ನೆನಪಿಗಾಗಿ ಆಯೋಜಿಸಲಾಗುವ ಉತ್ಸವ)

ಕೊಲ್ಲಾಪುರ, 28 ಮೇ (ಸುದ್ದಿ) – ಪುರಾತತ್ವ ಇಲಾಖೆ ಮತ್ತು ಆಡಳಿತ ಮಂಡಳಿಯು ವಿಶಾಲಗಡದಲ್ಲಿ ಉರುಸ್ ಹಾಗೂ ‘ಬಕ್ರೀದ್’ ಹಿನ್ನೆಲೆಯಲ್ಲಿ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದವು. ಇದರ ವಿರುದ್ಧ ವಿಶಾಲಗಡದ ‘ದರ್ಗಾ ಟ್ರಸ್ಟಿ’ಗಳು ‘ಸರ್ಕ್ಯೂಟ್ ಬೆಂಚ್’ನಲ್ಲಿ (ಉಚ್ಚನ್ಯಾಯಾಲಯದ ನ್ಯಾಯಾಧೀಶರು ನಿಯತಕಾಲಿಕವಾಗಿ ಬಂದು ಮೊಕದ್ದಮೆಗಳನ್ನು ನಡೆಸುವ ತಾತ್ಕಾಲಿಕ ನ್ಯಾಯಾಲಯದ ಸ್ಥಳ) ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ರಣಜಿತಸಿಂಗ್ ಭೋಸಲೆ ಅವರ ಎದುರು ನಡೆದ ವಿಚಾರಣೆಯಲ್ಲಿ, ನ್ಯಾಯಾಧೀಶರು 2024ರಲ್ಲಿ ಮುಂಬಯಿ ಉಚ್ಚನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿಯುತ್ತಾ, ‘ಬಕ್ರೀದ್’ ಮತ್ತು ‘ಉರುಸ್’ ನಿಮಿತ್ತ ಪ್ರಾಣಿ ಬಲಿ ನೀಡಲು ಅನುಮತಿ ನೀಡಿದ್ದಾರೆ. ಬಲಿ ನೀಡಿದ ನಂತರ ಮಾಂಸ ಹಾಗೂ ಅದರಿಂದ ಬರುವ ತ್ಯಾಜ್ಯ ವಸ್ತುಗಳನ್ನು ಯೋಗ್ಯ ರೀತಿಯಲ್ಲಿ ವಿಲೇವಾರಿ ಮಾಡಲು ಜಾಗ್ರತೆ ವಹಿಸಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಮೂಲ ಅರ್ಜಿಯ ವಿಚಾರಣೆಯು ಇನ್ನು ಬಾಕಿ ಉಳಿದಿದ್ದು, ಮುಂದಿನ ವಿಚಾರಣೆಯು ಜೂನ್ 8 ರಂದು ನಡೆಯಲಿದೆ ಎಂದು ನ್ಯಾಯಾಲಯ ಘೋಷಿಸಿದೆ.

ನ್ಯಾಯಾಧೀಶರು ತೀರ್ಪು ನೀಡಿದ ತಕ್ಷಣ, ಅಲ್ಲಿ ಉಪಸ್ಥಿತರಿದ್ದ ಓರ್ವ ಸರಕಾರಿ ಅಧಿಕಾರಿಯು ದರ್ಗಾ ಟ್ರಸ್ಟ್ ನ ಕೆಲವು ಸದಸ್ಯರೊಂದಿಗೆ ನ್ಯಾಯಾಲಯದಲ್ಲೇ ವಿಜಯದ ಉನ್ಮಾದದಲ್ಲಿ ಹಸ್ತಲಾಘವ ಮಾಡಿದರು. ಸರಕಾರದ ಪಕ್ಷ ‘ದರ್ಗಾ ಟ್ರಸ್ಟಿ’ಗಳ ವಿರುದ್ಧ ಹೋರಾಡುತ್ತಿರುವಾಗ, ಆ ಅಧಿಕಾರಿ ದರ್ಗಾ ಟ್ರಸ್ಟ್ ನ ಸದಸ್ಯರೊಂದಿಗೆ ಹಸ್ತಲಾಘವ ಮಾಡಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ.

ಈ ಅರ್ಜಿಯಲ್ಲಿ ಸರಕಾರದ ಪರವಾಗಿ ಸರಕಾರಿ ನ್ಯಾಯವಾದಿ ಶುಭಾಂಗಿ ದೇಶಮುಖ್, ಹಾಗೂ ಮುಂಬಯಿಯಿಂದ ನ್ಯಾಯವಾದಿ ನೇಹಾ ಬಿಡೆ ಅವರು ‘ಆನ್ ಲೈನ್’ ಮೂಲಕ ಸರಕಾರದ ಪರವಾಗಿ ವಾದ ಮಂಡಿಸಿದರು. ವಿಚಾರಣೆಯ ಸಮಯದಲ್ಲಿ ‘ದರ್ಗಾ ಟ್ರಸ್ಟ್’ನ ಸಂಚಾಲಕ ಪ್ರತಿನಿಧಿಗಳು, ಶಾಹೂವಾಡಿ ತಹಶೀಲ್ದಾರ ಸೀಮಾ ಸೋನವಣೆ, ಪೊಲೀಸ್ ನಿರೀಕ್ಷಕ ರಾಜೇಂದ್ರ ಸಾವಂತ್ರೆ, ಹಾಗೂ ಹಿಂದುತ್ವವಾದಿ ಸಂಘಟನೆಗಳ ಪ್ರತಿನಿಧಿಯಾಗಿ ಹಿಂದೂ ಏಕತಾ ಆಂದೋಲನದ ಜಿಲ್ಲಾಧ್ಯಕ್ಷರಾದ ಶ್ರೀ. ದೀಪಕ ದೇಸಾಯಿ ಉಪಸ್ಥಿತರಿದ್ದರು.

ಸರಕಾರದ ಪರವಾಗಿ ವಾದ ಮಂಡನೆಯಲ್ಲಿ ಪ್ರಸ್ತಾಪಿಸಲಾದ ಕೆಲವು ಮುಖ್ಯಾಂಶಗಳು

1. ವಿಶಾಲಗಡ ಪರಿಸರದಲ್ಲಿ ಅಲ್ಲಿನ ಅತಿಕ್ರಮಣಗಳಿಂದಾಗಿ ಈ ಹಿಂದೆ ಗಲಭೆ ನಡೆದಿದೆ, ಹಾಗೂ ಕಾನೂನು-ಸುವ್ಯವಸ್ಥೆಯ ಸಮಸ್ಯೆ ನಿರ್ಮಾಣವಾಗಿದೆ.

2. ವಿಶಾಲಗಡ ಪುರಾತತ್ವ ನಿಯಮ 1962ರ ಕಲಂ 8 (ಕ) ಪ್ರಕಾರ ಸ್ಮಾರಕ ಪರಿಸರದಲ್ಲಿ ಆಹಾರ ಬೇಯಿಸುವುದನ್ನು ನಿಷೇಧಿಸಲಾಗಿದೆ ಮತ್ತು ಉಚ್ಚನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪಶುಬಲಿ ನೀಡುವುದಕ್ಕೆ ತಡೆಯಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮೇ 27 ರಿಂದ ಜೂನ್ 1, 2026 ರವರೆಗೆ ಅಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

3. ವಿಶಾಲಗಡದಲ್ಲಿ ಪಶುಬಲಿ ನೀಡಲು ಅನುಮತಿ ನೀಡಿದರೆ, ಪರಿಸ್ಥಿತಿ ಗಂಭೀರವಾಗಬಹುದು. ಸಾಮಾಜಿಕ ಜಾಲತಾಣಗಳಲ್ಲಿ ‘ರೆಹಾನ್ ಮಲಿಕ್ ಎಂಬ ಹೆಸರಿನಲ್ಲಿ ಆಯೋಜಿಸಲಾಗುವ ಉರುಸ್ ಗೆ ಅನುಮತಿ ನೀಡೋಣ’ ಎಂಬ ಆಶಯದ ಪೋಸ್ಟ್ ಗಳು ಹರಿದಾಡುತ್ತಿವೆ. ಈ ಉರುಸ್ ಆಚರಿಸುವುದನ್ನು ಹಿಂದುತ್ವವಾದಿ ಸಂಘಟನೆಗಳು ವಿರೋಧಿಸಿವೆ.

4. ಗುಂಪು ಸಂಖ್ಯೆ 19 ಕಸಾಯಿಖಾನೆಯಲ್ಲ. ಆದ್ದರಿಂದ ಅಲ್ಲಿ ಪಶುಬಲಿ ನೀಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಅಲ್ಲಿ ಸ್ವಚ್ಛತೆ ಕಾಪಾಡಲು ಅವರ ಬಳಿ ಯಾವುದೇ ಸಾಮಗ್ರಿಗಳಿಲ್ಲ, ವ್ಯವಸ್ಥೆಯೂ ಇಲ್ಲ.

5. ಗುಂಪು ಸಂಖ್ಯೆ 19 ಖಾಸಗಿ ಜಾಗವಾಗಿದ್ದರೂ ಸಹ, ಈ ಕೋಟೆಯು ಪುರಾತತ್ವ ಇಲಾಖೆಗೆ ಒಳಪಡುತ್ತದೆ, ಹಾಗೂ ಅರಣ್ಯ ಇಲಾಖೆಯ ಕ್ಷೇತ್ರದಲ್ಲಿ ಬರುತ್ತದೆ.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿದ ಕೆಲ ಅಂಶಗಳು

1. ಗುಂಪು ಸಂಖ್ಯೆ 19ರಲ್ಲಿ ಏನಾದರೂ ತಪ್ಪು ನಡೆಯುತ್ತಿದ್ದರೆ, ಅದು ಕಸಾಯಿಖಾನೆಯಾಗಿರದಿದ್ದರೆ ಹಾಗೂ ಅಲ್ಲಿ ಯೋಗ್ಯ ಕೆಲಸ ನಡೆಯುತ್ತಿಲ್ಲ ಎಂಬುದು ಸರಕಾರದ ವಾದವಾಗಿದ್ದರೆ, ಈವರೆಗೆ ಆ ಕುರಿತು ಸರಕಾರ ಕೈಗೊಂಡ ಕ್ರಮಗಳೇನು?

2. ಜೂನ್ 3, 2025ರ ನಂತರ ವಿಶಾಲಗಡ ಪರಿಸರದಲ್ಲಿ ಕಾನೂನು-ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಸುವಂತಹ ಏನಾದರೂ ಘಟನೆ ನಡೆದಿದೆಯೇ?