ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಅವತಾರಿ ಪುರುಷರೆನ್ನಲು ಕಾರಣವೇನು ?

...ನನಗೆ ಅರಿವಾದ ಅಂಶಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಮೇಲೆ ಶ್ರದ್ಧೆ ಇರುವವರು ಅವರನ್ನು ಅವತಾರಿ ಪುರುಷ ಎಂದು ನಂಬುತ್ತಾರೆ. ಸನಾತನದ ಸಾಧಕರು ಅವರನ್ನು ಗುರುಸ್ಥಾನದಲ್ಲಿ ಕಾಣುತ್ತಾರೆ ಮತ್ತು ಅವರಂತಹ ಗುರುಗಳನ್ನು ಎಲ್ಲೂ ನೋಡಿಲ್ಲ ಎಂಬುದು ಅವರ ಭಾವವಾಗಿದೆ. ಇವೆರಡಕ್ಕೂ ಕಾರಣವೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಸಿದ ’ಗುರುಕೃಪಾಯೋಗಾನುಸಾರ ಸಾಧನೆ’ ಮತ್ತು ಸಾಧಕರಿಗಾಗಿ ಒದಗಿಸಿದ ಅಪಾರ ಗುರುಸೇವೆ ! ಇದರ ಮಹತ್ವವನ್ನು ನನ್ನ ಅಲ್ಪ ಬುದ್ಧಿಗೆ ತಕ್ಕಂತೆ ಇಲ್ಲಿ ಮಂಡಿಸಲು ಪ್ರಯತ್ನಿಸಿದ್ದೇನೆ. (ಈ ಲೇಖನದಲ್ಲಿ ಪ.ಪೂ. ಡಾಕ್ಟರ್ ಎಂದು ಉಲ್ಲೇಖಿಸಲಾಗಿದೆ, ಅದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಬಗ್ಗೆ ಇದೆ. – ಸಂಕಲನಕಾರರು)

೧. ಗುರುಕೃಪಾಯೋಗ

ಒಮ್ಮೆ ಪ.ಪೂ. ಡಾಕ್ಟರರ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರು ’ಸರ್ವಶ್ರೇಷ್ಠ ಯೋಗ ಯಾವುದು ?’, ಎಂದು ಕೇಳಿದರು. ಆಗ ಶಿಷ್ಯನ ಅತ್ಯುತ್ತಮ ಗುಣಗಳಿರುವ ಪ.ಪೂ. ಡಾಕ್ಟರರು ಪ್ರಚಲಿತ ಧ್ಯಾನಯೋಗ, ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗಗಳಲ್ಲಿ ಯಾವುದೂ ಒಂದನ್ನೂ ಹೇಳದೆ, ’ಗುರುಕೃಪಾಯೋಗ’ ಎಂದರು. ಅದನ್ನು ಕೇಳಿ ಪ.ಪೂ. ಭಕ್ತರಾಜ ಮಹಾರಾಜರು ’ಹೌದು, ಸರಿಯಾಗಿದೆ’ ಎಂದರು. ಎಲ್ಲಿಂದ ಬಂತು ಈ ಯೋಗ ? ’ಗುರುಕೃಪೆಯಿಲ್ಲದೆ ಯಾವುದೂ ಸಾಧ್ಯವಿಲ್ಲ’ ಎಂಬುದರ ಅನುಭೂತಿ ಪಡೆದಿದ್ದ ಶಿಷ್ಯ ಪ.ಪೂ. ಡಾ. ಜಯಂತ ಆಠವಲೆ ಅವರಿಗೆ ಮಾತ್ರ ಇದು ಹೊಳೆಯಲು ಸಾಧ್ಯ. ಆದ್ದರಿಂದ ಯಾವುದೇ ಯೋಗಾನುಸಾರ ಸಾಧನೆ ಮಾಡಿದರೂ, ಆಯಾ ಯೋಗದ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ಗುರುಕೃಪೆ ಪಡೆದರೆ ಫಲಕಾರಿಯಾಗುತ್ತದೆ. ಆದ್ದರಿಂದಲೇ ’ಗುರುಕೃಪಾಯೋಗ’ವೇ ಶ್ರೇಷ್ಠ ! ಸ್ವಾಮಿ ವಿವೇಕಾನಂದರು  ಸಹ ಭಾರತದ ವೈಶಿಷ್ಟ್ಯವನ್ನು ಹೇಳುವಾಗ ’ಭಾರತದ ವೈಶಿಷ್ಟ್ಯವೆಂದರೆ ಗುರು-ಶಿಷ್ಯ ಪರಂಪರೆ’ ಎಂದಿದ್ದಾರೆ.

೨.‘ವ್ಯಕ್ತಿಗನುಗುಣವಾಗಿ ಪ್ರಕೃತಿ, ಅದಕ್ಕನುಗುಣವಾಗಿ ಸಾಧನಾಮಾರ್ಗ’, ಇದರಂತೆ ವಿಸ್ತರಿಸಿದ ಕಾರ್ಯ !


ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಧ್ಯಾತ್ಮದ ಕಾರ್ಯವನ್ನು ನೋಡಿದರೆ ಅದರ ವ್ಯಾಪಕತೆ ಅರಿವಿಗೆ ಬರುತ್ತದೆ. ಆರಂಭದಲ್ಲಿ ಕೇವಲ ಪ್ರವಚನಗಳು ಮತ್ತು ಸಾಪ್ತಾಹಿಕ ಸತ್ಸಂಗಗಳ ಮೂಲಕ ಆರಂಭವಾದ ಈ ಕಾರ್ಯದ ಆಲದ ಮರವು ಪ್ರಸ್ತುತ ಬೆಳೆದು ನಿಂತಿದೆ ಮಾತ್ರವಲ್ಲ, ಅದರ ಬೇರುಗಳು ಭೂಮಿಯೊಳಗೆ ಭದ್ರವಾದ ಹಿಡಿತವನ್ನು ಸಾಧಿಸಿವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಧ್ಯಾತ್ಮದ ವೈಶಿಷ್ಟ್ಯ ಹೇಳುವಾಗ ’ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನಾಮಾರ್ಗಗಳು’, ಎಂದರು. ಅವರು ಸಾಧಕರ ಪ್ರಕೃತಿಯಂತೆ ಸಾಧನೆ ಪೂರೈಸಿದರು. ಪ್ರಕೃತಿ ಮತ್ತು ಕೌಶಲ್ಯದಂತೆ  ಗುರುಸೇವೆ ಲಭ್ಯವಾಯಿತು. ಅಧ್ಯಾತ್ಮ ಪ್ರಸಾರ ಮತ್ತು ಸಾಧಕರನ್ನು ರೂಪಿಸುವುದು ಅವರ ಕಾರ್ಯದ ತಳಹದಿಯಾಗಿತ್ತು.

ಕಲೆಯ ಮಾಧ್ಯಮದಿಂದ ಸಾಧನೆ

ಗುರುದೇವರು ಕಲಾ ಶಿಕ್ಷಣ ಪಡೆದ ಸಾಧಕರಿಂದ ದೇವರ ಸಾತ್ತ್ವಿಕ ಚಿತ್ರ ಮತ್ತು ಮೂರ್ತಿಗಳನ್ನು ಮಾಡಿಸಿದರು. ರಂಗೋಲಿ ಕಲೆಯಿದ್ದವರಿಗೆ ಸಾತ್ತ್ವಿಕ ರಂಗೋಲಿ ಗುರುತಿಸಲು ಕಲಿಸಿದರು. ದೇವತೆಗಳ ನಾಮಪಟ್ಟಿಗಳು ಮತ್ತು ಸಾತ್ತ್ವಿಕ ಉತ್ಪನ್ನಗಳಿಂದ (ಕರ್ಪೂರ, ಊದುಬತ್ತಿ ಇತ್ಯಾದಿ) ಸಮಾಜದಲ್ಲಿ ಸಾತ್ತ್ವಿಕತೆ ಮೂಡಿಸಲು ಸಾಧಕರಿಗೆ ಉತ್ತಮ ಅವಕಾಶವನ್ನು ಸೃಷ್ಟಿಸಿದರು.

ಸಂಗೀತ ಮತ್ತು ನೃತ್ಯ

ಸಂಗೀತ ಮತ್ತು ನೃತ್ಯ ಕಲೆಗಳಿರುವವರು ಆ ಮೂಲಕ ಸಾಧನೆ ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಗುರುಗಳು ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯ ಸ್ಥಾಪಿಸಿದರು. ಇದರಲ್ಲಿ ಸಮಾಜದ ಕಲಾವಿದರೂ ಸೇರಿ ಸಾಧನೆ ಮಾಡತೊಡಗಿದರು.

ಆಧ್ಯಾತ್ಮಿಕ ಸಂಶೋಧನೆ

ವಸ್ತು ಮತ್ತು ವಾಸ್ತುಗಳನ್ನು ವೈಜ್ಞಾನಿಕ ಉಪಕರಣಗಳಿಂದ ಸಂಶೋಧಿಸುವ ಸೇವೆ ಕೆಲವು ಉನ್ನತ ಶಿಕ್ಷಣ ಪಡೆದ ಸಾಧಕರು ಮತ್ತು ಸಾಧನೆಯ ಮೂಲಕ ಆರನೇ ಇಂದ್ರಿಯ ಜಾಗೃತವಾಗಿರುವ ಸೂಕ್ಷ್ಮವನ್ನು ಅರಿಯುವ ಸಾಧಕರು, ಹಾಗೂ ಸಂತರು ಮಾಡುತ್ತಿದ್ದಾರೆ. ಹಿಂದೂ ಧರ್ಮದ ವಿಷಯಗಳು ವ್ಯಕ್ತಿಯ ಸಕಾರಾತ್ಮಕತೆ ಹೆಚ್ಚಿಸಲು ಸಹಾಯಕವಾಗಿವೆ ಎಂಬುದರ ಸಂಶೋಧನೆ ನಡೆಯುತ್ತಿದೆ.

‘ಸನಾತನ ಪ್ರಭಾತ’ ನಿಯತಕಾಲಿಕೆಗಳು

ಗುರುದೇವರು ಪ್ರಾರಂಭಿಸಿದ ’ಸನಾತನ ಪ್ರಭಾತ’ ನಿಯತಕಾಲಿಕೆಗಳು ಅಧ್ಯಾತ್ಮ, ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರಸಾರ ಮಾಡುವ ಮಾಧ್ಯಮಗಳಷ್ಟೇ ಅಲ್ಲದೇ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದುತ್ವನಿಷ್ಠರಿಗೆ ವೈಚಾರಿಕ ವೇದಿಕೆಯಾಗಿವೆ.

ಗ್ರಂಥನಿರ್ಮಿತಿ

ನೂರಾರು ವಿಷಯಗಳ ಕುರಿತು ವಿವಿಧ ಭಾಷೆಗಳಲ್ಲಿ ಗ್ರಂಥನಿರ್ಮಿತಿಯ ಸೇವೆಯನ್ನು ಅನೇಕ ಸಾಧಕರು ಮಾಡುತ್ತಿದ್ದು, ಆ ಸೇವೆಯು ಮುಂದಿನ ಹಲವು ವರ್ಷಗಳ ಕಾಲ ನಡೆಯಲಿದೆ.

ಧ್ವನಿಚಿತ್ರೀಕರಣ ಮತ್ತು ರಕ್ಷಣೆ

ಆಶ್ರಮ ಅಥವಾ ಹೊರಗೆ ನಡೆಯುವ ಕಾರ್ಯಕ್ರಮಗಳ ಚಿತ್ರೀಕರಣ, ಛಾಯಾಚಿತ್ರ ಗಳನ್ನು ತೆಗೆಯುವುದು, ವೀಡಿಯೊಗಳನ್ನು ಮಾಡುವುದು, ಅಪರೂಪದ ವಸ್ತುಗಳ ರಕ್ಷಣೆ, ಅವುಗಳ ಪ್ರದರ್ಶನವನ್ನು ಏರ್ಪಡಿಸುವುದು ಮುಂತಾದ ಸೇವೆಗಳ ನಡೆಯುತ್ತಿದೆ.

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ

ಧರ್ಮಶಿಕ್ಷಣದ ಪ್ರಸಾರ, ಧರ್ಮರಕ್ಷಣೆ ಮತ್ತು ರಾಷ್ಟ್ರರಕ್ಷಣೆಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರೇರಣೆಯಿಂದ ಹಿಂದೂ ಜನಜಾಗೃತಿ ಸಮಿತಿಯ ಸ್ಥಾಪನೆಯಾಗಿ ಅದರ ಕಾರ್ಯವು ಪ್ರಾರಂಭವಾಯಿತು.

೩. ಸಾಧಕರಿಗೆ ಸಾಧನೆಯ ಪರ್ವಕಾಲವಾದ ಸೇವೆಗಳು

ಶ್ರೀ. ವೀರೇಂದ್ರ ಮರಾಠೆ

ಈ ವಿವಿಧ ಸೇವೆಗಳನ್ನು ಉಲ್ಲೇಖಿಸಲು ಕಾರಣವೇನೆಂದರೆ, ’ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು’, ಅದರಂತೆ ಸಾಧಕರಿಗೆ ಅವರ ಸಾಧನೆಗಾಗಿ ಈ ಸೇವೆಗಳು ಲಭ್ಯವಾದವು. ಅಕ್ಷರಶಃ ಶೂನ್ಯದಿಂದ ಎದ್ದು ನಿಂತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಅಪಾರ ಕಾರ್ಯವು ಪ.ಪೂ. ಭಕ್ತರಾಜ ಮಹಾರಾಜರು ಹೇಳಿದಂತೆ ’ದುಃಖಿಗಳು ಜಿಜ್ಞಾಸುಗಳಾಗಲಿ, ಜಿಜ್ಞಾಸುಗಳು ಮುಮುಕ್ಷುಗಳಾಗಲಿ, ಮುಮುಕ್ಷುಗಳು ಸಾಧಕರಾಗಲಿ, ಮತ್ತು ಸಾಧಕರು ಮೋಕ್ಷಕ್ಕೆ ಹೋಗಲಿ’, ಇದಕ್ಕಾಗಿಯೇ ಇದೆ. ಸಾಧನೆ ಎಂದು ತಮಗೆ ವಹಿಸಿಕೊಟ್ಟ ಸೇವೆಗಳನ್ನು ಮಾಡುವುದು ಮತ್ತು ಅವುಗಳನ್ನು ಮಾಡುವಾಗ ಗುರುಕೃಪಾಯೋಗಾನುಸಾರ ಅಷ್ಟಾಂಗ ಸಾಧನೆಯನ್ನು ಅದಕ್ಕೆ ಜೋಡಿಸಿ ಅದರಿಂದ ಆನಂದವನ್ನು ಪಡೆಯುವುದು, ಇದು ಸಾಧಕರಿಗೆ ಒಂದು ಹಬ್ಬವೇ ಆಗಿದೆ. ಆ ಮೂಲಕ ಅನೇಕ ಸಾಧಕರು ತಮ್ಮ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡಿದ್ದಾರೆ.

೪. ಸರ್ವ ಪ್ರಾಣಿಮಾತ್ರರ ಕಲ್ಯಾಣಕ್ಕಾಗಿಯೇ !

ನಿಜವಾಗಿ ಹೇಳಬೇಕೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಟ್ಟಿರುವ ಈ ಅಪಾರ ಕಾರ್ಯವಿಶ್ವವು, ಜಗತ್ತಿನಾದ್ಯಂತ ಅವರ ಖ್ಯಾತಿಯಾಗಲಿ, ಅವರಿಗೆ ಸನ್ಮಾನವಾಗಲಿ, ಸಮಾಜವು ಅವರನ್ನು ಗೌರವಿಸಲಿ ಎಂಬುದಕ್ಕಾಗಿ ಮಾಡಿದ್ದಲ್ಲ. ಅಂತಹ ವಿಚಾರವು ಸೂಕ್ಷ್ಮ ಮಟ್ಟದಲ್ಲಿಯೂ ಎಂದಿಗೂ ಗುರುದೇವರ ಮನಸ್ಸಿನಲ್ಲಿ ಬಂದಿಲ್ಲ ಎಂಬುದು ಖಚಿತ ! ಅವರ ತೀವ್ರ ಜಿಜ್ಞಾಸುವೃತ್ತಿ, ಸಾಧಕರ ಮೇಲಿನ ಪ್ರೀತಿ, ಸರ್ವಪ್ರಾಣಿಮಾತ್ರರ ಕಲ್ಯಾಣವಾಗಲಿ ಎಂಬ ತುಡಿತ, ಇವುಗಳಿಂದಾಗಿಯೇ ಈ ಅಪಾರ ಕಾರ್ಯ ವಿಶ್ವವು ನಿರ್ಮಾಣವಾಗಿದೆ. ಎಲ್ಲಾ ಕಾರ್ಯಗಳು ಅವರ ಮಾರ್ಗದರ್ಶನದಂತೆಯೇ ಪ್ರಾರಂಭವಾದವು ಮತ್ತು ಅದರಂತೆಯೇ ನಡೆಯುತ್ತಿವೆ; ಆದರೆ ಅವರು ಮಾತ್ರ ಅದರಿಂದ ನಿರ್ಲಿಪ್ತರಾಗಿದ್ದಾರೆ. ಆದ್ದರಿಂದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಅದ್ವಿತೀಯ ಮತ್ತು ಅವತಾರಿ ಪುರುಷರಾಗಿದ್ದಾರೆ. ಅವರ ಚರಣ ಸೇವೆ ಎಂದರೆ, ಅವರ ಈ ಕಾರ್ಯದ ಜವಾಬ್ದಾರಿಯನ್ನು ನಿಭಾಯಿಸುವುದು ಮತ್ತು ಅವರಂತೆಯೇ ನಿರ್ಲಿಪ್ತರಾಗಿರುವುದೇ ಆಗಿದೆ !

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕ ವಿಶ್ವಸ್ಥರು, ಸನಾತನ ಸಂಸ್ಥೆ (೧.೫.೨೦೨೬)

ಇಲ್ಲಿ ಪ್ರಸಿದ್ಧಪಡಿಸಲಾದ ಅನುಭೂತಿಗಳು ಕೆಲವು ಬಾರಿ ಕೆಷ್ಟ ಶಕ್ತಿಗಳಿಂದ ಅಥವಾ ‘ಭಾವವಿದ್ದಲ್ಲಿ ದೇವ’ ಎಂಬ ಉಕ್ತಿಯಂತೆ ಸಾಧಕರಿಗೆ / ಸಂತರಿಗೆ / ಧರ್ಮಪ್ರೇಮಿಗಳಿಗೆ ಬಂದಿರುವ ವೈಯಕ್ತಿಕ ಅನುಭೂತಿಗಳಾಗಿವೆ. ಅವು ಎಲ್ಲರಿಗೂ ಬರುತ್ತವೆ ಎಂದೇನಿಲ್ಲ. - ಸಂಪಾದಕರು