ಕಾಯ್ದೆಯನ್ನು ವಿಳಂಬವಿಲ್ಲದೆ ಮತ್ತು ಶಾಶ್ವತವಾಗಿ ರದ್ದುಗೊಳಿಸಲು ಬಲವಾದ ಒತ್ತಾಯ
ಕಾಯ್ದೆ ರದ್ದುಗೊಳಿಸದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟದ ಎಚ್ಚರಿಕೆ

ಪುಣೆ – ಮಹಾರಾಷ್ಟ್ರದ ಸಾಂಸ್ಕೃತಿಕ ಅಸ್ಮಿತೆ ಮತ್ತು ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ಅಷ್ಟವಿನಾಯಕ ದೇವಸ್ಥಾನಗಳ ನೂರಾರು ಎಕರೆ ಭೂಮಿಗೆ ಕುತ್ತು ತರುತ್ತಿರುವ ಮಹಾರಾಷ್ಟ್ರ ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಅಧಿನಿಯಮ, 2026 ಅನ್ನು ಯಾವುದೇ ಷರತ್ತುಗಳಿಲ್ಲದೆ ರಾಜ್ಯ ಸರಕಾರವು ತಕ್ಷಣವೇ ಹಿಂಪಡೆಯಬೇಕು ಎಂದು ಅಷ್ಟವಿನಾಯಕ ಮಂದಿರಗಳ ವಿಶ್ವಸ್ಥರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಿದರು.
ಕಂದಾಯ ಮತ್ತು ಅರಣ್ಯ ಇಲಾಖೆಯು ಮುಂಚೂಣಿಗೆ ತಂದಿರುವ ಈ ಕರಡು ಮಸೀದೆಯು ಹಿಂದೂ ದೇವಸ್ಥಾನಗಳ ಸ್ವಾಯತ್ತತೆ ಮತ್ತು ಅವುಗಳ ಐತಿಹಾಸಿಕ ಆದಾಯದ ಮೂಲಗಳನ್ನು ಬುಡಸಮೇತ ನಾಶಮಾಡುವ ವ್ಯವಸ್ಥಿತ ಪಿತೂರಿಯಾಗಿದೆ. ಒಂದು ಕಡೆ ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಕಾನೂನಾತ್ಮಕ ಭದ್ರತೆಯ ಕವಚವನ್ನು ನೀಡುವುದು, ಮತ್ತೊಂದು ಕಡೆ ಹಿಂದೂಗಳ ಪವಿತ್ರ ದೇವಾಲಯಗಳ ಆಸ್ತಿಯನ್ನು ಖಾಸಗಿ ವ್ಯಕ್ತಿಗಳ ಪಾಲಾಗಿಸುವುದು—ಈ ಸರಕಾರಿ ತಾರತಮ್ಯವನ್ನು ಅಷ್ಟವಿನಾಯಕ ಮಂದಿರಗಳು ಎಂದಿಗೂ ಸಹಿಸುವುದಿಲ್ಲ. ನಾವು ಈ ಪ್ರಸ್ತಾವಿತ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಚಿಂಚವಡ ದೇವಸ್ಥಾನ ಟ್ರಸ್ಟ್ ನ ವಿಶ್ವಸ್ಥರಾದ ಶ್ರೀ ಕೇಶವ್ ವಿದ್ವಾನ್ಸ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಷ್ಟವಿನಾಯಕ ಮಂದಿರಗಳ ಸಮಿತಿ ಯ ಪರವಾಗಿ ಶ್ರೀ ಮಯೂರೇಶ್ವರ (ಮೋರಗಾಂವ್), ಶ್ರೀ ಚಿಂತಾಮಣಿ (ಥೇವುರ್), ಶ್ರೀ ಸಿದ್ಧಿವಿನಾಯಕ (ಸಿದ್ಧಟೇಕ್) ಮತ್ತು ಶ್ರೀ ಮೊರಯಾ ಗೋಸಾವಿ ಸಂಜೀವನ ಸಮಾಧಿ ಮಂದಿರ ಮುಂತಾದವುಗಳ ನಿರ್ವಹಣೆಯನ್ನು ನೋಡಿಕೊಳ್ಳುವ ಚಿಂಚವಡ ದೇವಸ್ಥಾನ ಟ್ರಸ್ಟ್ ನ ವಿಶ್ವಸ್ಥರಾದ ಶ್ರೀ ಕೇಶವ್ ವಿದ್ವಾನ್ಸ್, ಶ್ರೀ ಬಲ್ಲಾಳೇಶ್ವರ ದೇವಸ್ಥಾನ (ಪಾಲಿ) ಟ್ರಸ್ಟ್ ನ ಶ್ರೀ ಜಿತೇಂದ್ರ ಗದ್ರೆ, ಉಪಾಧ್ಯಕ್ಷರಾದ ಶ್ರೀ ವೈಭವ್ ಆಪ್ಟೆ, ಶ್ರೀ ವಿಘ್ನಹರ ಗಣಪತಿ ದೇವಸ್ಥಾನ ಟ್ರಸ್ಟ್, ಓಝರ್ ನ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಕವಡೆ, ಶ್ರೀ ಗಣಪತಿ ದೇವಸ್ಥಾನ, ಮಹಡ್ ನ ವಿಶ್ವಸ್ಥರಾದ ಶ್ರೀ ಕಿರಣ್ ಕಾಶೀಕರ್ ಮತ್ತು ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕರಾದ ಶ್ರೀ ಸುನಿಲ್ ಘನವಟ್ ಉಪಸ್ಥಿತರಿದ್ದರು. ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ಕಾಡುತ್ತಿರುವ ಈ ಸಂಭವನೀಯ ಸಂಕಷ್ಟದ ವಿರುದ್ಧ ಈಗ ಮಹಾರಾಷ್ಟ್ರದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈಭವವಾಗಿರುವ ಪವಿತ್ರ ಅಷ್ಟವಿನಾಯಕ ಮಂದಿರಗಳೂ ಸಹ ಮುಂಚೂಣಿಗೆ ಬಂದಿದ್ದು, ಈ ಕಾಯ್ದೆಯನ್ನು ಕಟುವಾಗಿ ವಿರೋಧಿಸಿವೆ.
ಮಂದಿರಗಳ ಖಡಕ್ ನಿಲುವು!
ಹಿಂದೂ ಮಂದಿರಗಳ ಆದಾಯದ ಮೂಲಗಳನ್ನು ನಾಶಪಡಿಸಿ ಅವುಗಳನ್ನು ಪರಾವಲಂಬಿಯನ್ನಾಗಿ ಮಾಡುವ ಕ್ರೂರ ಕಾಯ್ದೆಯನ್ನು ರದ್ದುಗೊಳಿಸಿ! – ಚಿಂಚವಡ ದೇವಸ್ಥಾನ ಟ್ರಸ್ಟ್
ಈ ಸಂದರ್ಭದಲ್ಲಿ ಚಿಂಚವಡ ದೇವಸ್ಥಾನ ಟ್ರಸ್ಟ್ ನ ಶ್ರೀ ವಿದ್ವಾನ್ಸ್ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜ್, ಪೇಶ್ವೆಗಳು ಮತ್ತು ಐತಿಹಾಸಿಕ ರಾಜಮನೆತನಗಳು ಮೋರಗಾಂವ್, ಸಿದ್ಧಟೇಕ್, ಪಾಲಿ, ಮಹಡ್, ಥೇವುರ್, ಲೆಣ್ಯಾದ್ರಿ, ಓಝರ್ ಮತ್ತು ರಂಜಣಗಾಂವ್ ಈ ಅಷ್ಟವಿನಾಯಕರ ಮಂದಿರಗಳಲ್ಲಿ ತ್ರಿಕಾಲ ಪೂಜೆ, ಮಹಾಪ್ರಸಾದ, ನಿರಂತರ ಅನ್ನದಾನ, ನೈವೇದ್ಯ ಮತ್ತು ವಾರ್ಷಿಕ ಉತ್ಸವಗಳು ನಿರಂತರವಾಗಿ ನಡೆಯಲು ನೂರಾರು ಎಕರೆ ಭೂಮಿಯನ್ನು ಇನಾಮು ಆಗಿ ನೀಡಿವೆ. ಈ ಪ್ರಸ್ತಾವಿತ ಕಾಯ್ದೆಯ ಕಲಂ 3 ಮತ್ತು 4 ರ ಪ್ರಕಾರ, ಒಂದೇ ಏಟಿಗೆ ಈ ಐತಿಹಾಸಿಕ ಇನಾಮುಗಳು ರದ್ದಾಗಿ, ದೇವರ ಭೂಮಿಯನ್ನು ಸಾಗುವಳಿದಾರರು, ಮಿಲಾಸುದಾರರು ಅಥವಾ ಅರ್ಚಕರ ಹೆಸರಿಗೆ ಖಾಸಗಿ ಆಸ್ತಿಯಾಗಿ ವರ್ಗಾಯಿಸಲಾಗುತ್ತದೆ.
ಇದರ ಪರಿಣಾಮವಾಗಿ, ತಲೆಮಾರುಗಳಿಂದ ಕೇವಲ ದೇವರ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ಬಳಕೆಯಾಗುತ್ತಿದ್ದ ಭೂಮಿಗಳು ವಾಣಿಜ್ಯೀಕರಣಗೊಂಡು ಅಲ್ಲಿ ಕಮರ್ಷಿಯಲ್ ಮಾಲ್ ಗಳು ಅಥವಾ ಹೋಟೆಲ್ ಗಳು ತಲೆಎತ್ತಲಿವೆ ಮತ್ತು ಭೂಮಾಫಿಯಾಗಳು ಮಂದಿರಗಳ ಭೂಮಿಯನ್ನು ನುಂಗಿಹಾಕಲಿವೆ. ಆದಾಯದ ಮೂಲವೇ ನಾಶವಾಗುವುದರಿಂದ, ಈ ಸ್ವಾಭಿಮಾನಿ ದೇವಸ್ಥಾನಗಳು ಭವಿಷ್ಯದಲ್ಲಿ ಸರಕಾರಿ ಅನುದಾನದ ಮೇಲೆ ಪರಾವಲಂಬಿ ಮತ್ತು ಅಸಹಾಯಕವಾಗಲಿವೆ ಎಂದರು.
ಭಾರತದಂತಹ ಜಾತ್ಯತೀತ ದೇಶದಲ್ಲಿ ಕೇವಲ ಹಿಂದೂ ಮಂದಿರಗಳನ್ನು ಗುರಿ ಮಾಡುವ ಕಾಯ್ದೆಗಳು ಆಕ್ರೋಶದಾಯಕ! – ಶ್ರೀ ಬಲ್ಲಾಳೇಶ್ವರ ದೇವಸ್ಥಾನ (ಪಾಲಿ) ಟ್ರಸ್ಟ್
ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಬಲ್ಲಾಳೇಶ್ವರ ದೇವಸ್ಥಾನ (ಪಾಲಿ) ಟ್ರಸ್ಟ್ ನ ಶ್ರೀ ಜಿತೇಂದ್ರ ಗದ್ರೆ, ಅಧಿನಿಯಮದ ಕರಡಿನ ಕಲಂ 1 (ಉಪಕಲಂ 2) ಅತ್ಯಂತ ಪಕ್ಷಪಾತದಿಂದ ಕೂಡಿದ್ದು, ಖಂಡನೀಯವಾಗಿದೆ. ಇದರ ಮೂಲಕ ವಕ್ಫ್ ಬೋರ್ಡ್ ವ್ಯಾಪ್ತಿಯ ಭೂಮಿಯನ್ನು ಈ ಕಾಯ್ದೆಯಿಂದ ಸಂಪೂರ್ಣವಾಗಿ ಹೊರಗಿಟ್ಟು ವಿಶೇಷ ರಕ್ಷಣೆ ನೀಡಲಾಗಿದೆ. ಕೇವಲ ಹಿಂದೂ ಮಂದಿರಗಳ ಭೂಮಿಯನ್ನು ನಿರ್ಮೂಲನೆ ಮಾಡುವುದು ಮತ್ತು ಇತರ ಧರ್ಮಗಳ ಸಂಸ್ಥೆಗಳನ್ನು ಬೆಂಬಲಿಸುವುದು ಸಂವಿಧಾನದ ಕಲಂ 14 ರ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಜಾತ್ಯತೀತ ನೀತಿಯನ್ನು ಪಾಲಿಸುವ ದೇಶದಲ್ಲಿ ಬಹುಸಂಖ್ಯಾತ ಹಿಂದೂ ಸಮಾಜಕ್ಕೆ ಮತ್ತು ಅವರ ಮಂದಿರಗಳಿಗೆ ಇಂತಹ ದ್ವಿತೀಯ ದರ್ಜೆಯ ನಡೆಸಿ ಕೊಳ್ಳುವುದು, ಹಿಂದೂ ಮಂದಿರಗಳನ್ನು ಗುರಿ ಮಾಡುವ ಕಾಯ್ದೆಗಳನ್ನು ತರುವುದು ಅತ್ಯಂತ ಆಕ್ರೋಶದಾಯಕವಾಗಿದೆ ಎಂದರು.
ಈ ಕಾಯ್ದೆಯ ಕಲಂ 18 ರ ಪ್ರಕಾರ, ಕಂದಾಯ ಅಧಿಕಾರಿಗಳು (ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳು) ನೀಡುವ ಯಾವುದೇ ನಿರಂಕುಶ ನಿರ್ಧಾರದ ವಿರುದ್ಧ ಭಕ್ತರು ಅಥವಾ ದೇವಸ್ಥಾನದ ವಿಶ್ವಸ್ಥರು ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯ ಕೋರಲು ಸಾಧ್ಯವಿಲ್ಲ ಎಂಬ ಪ್ರಜಾಪ್ರಭುತ್ವ ವಿರೋಧಿ ನಿಯಮವನ್ನು ತರಲಾಗಿದೆ. ನ್ಯಾಯಾಲಯದ ಬಾಗಿಲುಗಳನ್ನು ಮುಚ್ಚುವ ಮೂಲಕ ಸರಕಾರವು ಆಡಳಿತಾತ್ಮಕ ದಬ್ಬಾಳಿಕೆಯನ್ನು ಹೇರಲು ಪ್ರಯತ್ನಿಸುತ್ತಿದೆ. ಅದಕ್ಕಿಂತಲೂ ಆಘಾತಕಾರಿ ವಿಷಯವೆಂದರೆ, ದೇವಸ್ಥಾನದ ಭೂಮಿಯಲ್ಲಿರುವ ಕಾನೂನುಬಾಹಿರ ಒತ್ತುವರಿಗಳನ್ನು ತೆರವುಗೊಳಿಸುವ ಬದಲು, ಜನವರಿ 1, 2011 ಕ್ಕಿಂತ ಮುಂಚಿನ ಒತ್ತುವರಿದಾರರಿಗೆ ನೇರವಾಗಿ ಮಾಲೀಕತ್ವದ ಹಕ್ಕನ್ನು ನೀಡುವುದು ದೇವಸ್ಥಾನದ ಪವಿತ್ರ ಆಸ್ತಿಯನ್ನು ಕಾನೂನುಬದ್ಧವಾಗಿ ಲೂಟಿ ಮಾಡಿದಂತೆಯೇ ಸರಿ ಎಂದು ಅವರು ಕಿಡಿಕಾರಿದರು.
ಹಿಂದೂ ದೇವಸ್ಥಾನಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಈ ಕ್ರೂರ ಕರಡನ್ನು ತಕ್ಷಣ ರದ್ದುಗೊಳಿಸಿ! – ಮಂದಿರ ಮಹಾಸಂಘ
ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ ಘನವಟ್ ಮಾತನಾಡಿ, ಮೊದಲನೆಯದಾಗಿ, ಹಿಂದೂ ದೇವಸ್ಥಾನಗಳ ಅಸ್ತಿತ್ವವನ್ನು ಅಪಾಯಕ್ಕೆ ತಳ್ಳುವ ಈ ಕ್ರೂರ ಕರಡನ್ನು ಸರಕಾರವು ಯಾವುದೇ ಷರತ್ತುಗಳಿಲ್ಲದೆ ತಕ್ಷಣವೇ ಮತ್ತು ಶಾಶ್ವತವಾಗಿ ರದ್ದುಗೊಳಿಸಬೇಕು. ಸಾಮಾನ್ಯ ಭಕ್ತರು, ಗ್ರಾಮಸ್ಥರು ಮತ್ತು ದುರ್ಗಮ ಪ್ರದೇಶಗಳ ಮಂದಿರಗಳಿಗೂ ಈ ವಿಷಯ ತಲುಪಲು ಆಕ್ಷೇಪಣೆಗಳನ್ನು ಸಲ್ಲಿಸುವ ಗಡುವನ್ನು ಕನಿಷ್ಠ 2 ತಿಂಗಳು ವಿಸ್ತರಿಸಬೇಕು. ಗುಜರಾತ್ ರಾಜ್ಯದ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಕಠಿಣ ಭೂ ಕಬಳಿಕೆ ತಡೆ ಕಾಯ್ದೆ ಯನ್ನು ಜಾರಿಗೆ ತಂದು ದೇವಸ್ಥಾನಗಳ ಭೂಮಿಗೆ ವಿಶೇಷ ಕಾನೂನು ರಕ್ಷಣೆ ನೀಡಬೇಕು. ದೇವಸ್ಥಾನಗಳ ಭೂಮಿಯ ಅಕ್ರಮ ಹಸ್ತಾಂತರ ಅಥವಾ ಮಾರಾಟವನ್ನು ಶಾಶ್ವತವಾಗಿ ತಡೆಯಲು 7/12 ದಾಖಲೆಗಳಲ್ಲಿ ಹಸ್ತಾಂತರ ಮಾಡಲಾಗದ ಮತ್ತು ದೇವಸ್ಥಾನದ ಭೂಮಿ: ನಿರ್ಬಂಧಿತ ಆಸ್ತಿ ಪ್ರಕಾರ ಎಂದು ಸ್ಪಷ್ಟವಾಗಿ ಮತ್ತು ಕಾನೂನುಬದ್ಧವಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.
ಸರಕಾರವೇನಾದರೂ ಹಿಂದೂ ಸಮಾಜದ ಭಾವನೆಗಳನ್ನು ತುಳಿದು ಈ ಕಾಯ್ದೆಯನ್ನು ಮುಂದುವರಿಸಲು ಪ್ರಯತ್ನಿಸಿದರೆ, ಧಾರ್ಮಿಕ ಸಂಸ್ಥೆಗಳು, ಸಂಪ್ರದಾಯಗಳು, ಸಮಸ್ತ ಮಂದಿರಗಳ ವಿಶ್ವಸ್ಥರು, ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು ಕೋಟ್ಯಂತರ ಗಣೇಶ ಭಕ್ತರನ್ನು ಒಟ್ಟುಗೂಡಿಸಿ ಮಹಾರಾಷ್ಟ್ರದಾದ್ಯಂತ ತೀವ್ರ ಜನಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ ಘನವಟ್ ಎಚ್ಚರಿಕೆ ನೀಡಿದರು.
ದೇವರ ಭೂಮಿಯು ದೇವರ ಹೆಸರಿನಲ್ಲಿಯೇ ಉಳಿಯಬೇಕು ಮತ್ತು ಎಲ್ಲ ಹಕ್ಕುಗಳು ದೇವಸ್ಥಾನದ ಸುಪರ್ದಿಯಲ್ಲಿಯೇ ಇರಬೇಕು! – ಶ್ರೀ ವಿಘ್ನಹರ ಗಣಪತಿ ದೇವಸ್ಥಾನ ಟ್ರಸ್ಟ್
ಗ್ರಾಮೀಣ ಭಾಗದಲ್ಲಿರುವ ದೇವಾಲಯಗಳು ಭೂಮಿಯ ಆದಾಯದ ಮೇಲೆ ನಡೆಯುತ್ತವೆ. ಓಝರ್ ನಲ್ಲಿ ಅನೇಕ ಸಾಮಾಜಿಕ ಉಪಕ್ರಮಗಳನ್ನು ನಡೆಸಲಾಗುತ್ತದೆ. ಬಡವರಿಗಾಗಿ ದೇವಸ್ಥಾನದ ಉಪಯೋಗವಾಗಬೇಕು ಎಂಬುದು ನಮ್ಮ ಯಾವಾಗಲೂ ಪ್ರಯತ್ನವಾಗಿರುತ್ತದೆ; ಆದರೆ ಈ ಕಾನೂನಿನಿಂದಾಗಿ ನಮ್ಮ ಸ್ವಂತ ಭೂಮಿಯನ್ನೇ ಇತರರಿಗೆ ನೀಡಬೇಕಾಗಿ ಬಂದರೆ, ಅದಕ್ಕಿಂತ ದೊಡ್ಡ ದುರದೃಷ್ಟ ಬೇರೊಂದಿಲ್ಲ. ದೇವರ ಭೂಮಿ ದೇವರ ಹೆಸರಿನಲ್ಲಿಯೇ ಉಳಿಯಬೇಕು ಮತ್ತು ಎಲ್ಲ ಹಕ್ಕುಗಳು ದೇವಸ್ಥಾನದ ಸುಪರ್ದಿಯಲ್ಲಿಯೇ ಇರಬೇಕು. ಸರಕಾರವು ಈ ಕಾನೂನನ್ನು ರದ್ದುಗೊಳಿಸಿ ದೇವಸ್ಥಾನದ ಭೂಮಿಯು ದೇವಸ್ಥಾನದ ಸುಪರ್ದಿಯಲ್ಲಿಯೇ ಉಳಿಯುವಂತೆ ಪ್ರಯತ್ನಿಸಬೇಕು ಎಂದು ಓಝರ್ ನ ವಿಘ್ನಹರ ಗಣಪತಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಶ್ರೀ. ಬಾಲಕೃಷ್ಣ ಕವಡೆ ಅವರು ಹೇಳಿದರು.
ಭಕ್ತರಿಗೆ ಸೌಲಭ್ಯಗಳನ್ನು ಒದಗಿಸಿಕೊಡಲು ದೇವಾಲಯಗಳ ಭೂಮಿಯು ದೇವಸ್ಥಾನಗಳ ಬಳಿಯೇ ಇರಬೇಕು! – ಶ್ರೀ ಗಣಪತಿ ಸಂಸ್ಥಾನ, ಮಹಡ್
ದೇವಸ್ಥಾನದ ಆಸ್ತಿ ಹಸ್ತಾಂತರವಾಗದೆ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸಲು ದೇವಾಲಯಗಳ ಮತ್ತು ದೇವಾಲಯಗಳ ಭೂಮಿಯ ಮಾಲೀಕತ್ವವು ಅಬಾಧಿತವಾಗಿರಬೇಕು ಎಂದು ಮಹಡ್ ನ ಶ್ರೀ ಗಣಪತಿ ಸಂಸ್ಥಾನ ದ ಧರ್ಮದರ್ಶಿ ಕಿರಣ್ ಕಾಶೀಕರ್ ಅವರು ಆಗ್ರಹಿಸಿದ್ದಾರೆ.
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು