‘ಜೆಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ಮೂಲಕ ಮಾನವನಿಂದ ಮೊದಲ ಬಾರಿಗೆ ಹೊರಗ್ರಹದ ಮೇಲ್ಮೈ ಅಧ್ಯಯನ!

ಭೂಮಿಯಿಂದ ೪೮.೫ ಜ್ಯೋತಿರ್ವರ್ಷ ದೂರದಲ್ಲಿರುವ ‘ಎಲ್.ಎಚ್.ಎಸ್. ೩೮೪೪ ಬಿ’ ಎಂಬ ಗ್ರಹದ ಮೇಲ್ಮೈ ಅಧ್ಯಯನ ನಡೆಸಲಾಗಿದೆ!

( ೧ ಜ್ಯೋತಿರ್ವರ್ಷ ಎಂದರೆ ಬೆಳಕಿನ ಅತಿವೇಗದಲ್ಲಿ ೧ ವರ್ಷ ಚಲಿಸಿದರೆ ಕ್ರಮಿಸುವ ದೂರ. ಬೆಳಕಿನ ವೇಗವು ಪ್ರತಿ ಸೆಕೆಂಡಿಗೆ ೩ ಲಕ್ಷ ಕಿ.ಮೀ ಆಗಿದೆ. ಈ ವೇಗದಲ್ಲಿ ಸೂರ್ಯನ ಬೆಳಕು ಭೂಮಿಯನ್ನು ತಲುಪಲು ೮ ನಿಮಿಷ ೨೦ ಸೆಕೆಂಡುಗಳು ಬೇಕಾಗುತ್ತದೆ. ಅಂದರೆ ಸೂರ್ಯ ಭೂಮಿಯಿಂದ ಕೇವಲ ೮.೨೦ ಜ್ಯೋತಿರ್-ನಿಮಿಷಗಳಷ್ಟು ದೂರದಲ್ಲಿದ್ದಾನೆ. )

ನ್ಯೂಯಾರ್ಕ್ (ಅಮೆರಿಕಾ) – ಮಾನವನು ಇದುವರೆಗೆ ಭೂಮಿಯಂತಹ ಅನೇಕ ಹೊರಗ್ರಹಗಳನ್ನು ಪತ್ತೆಹಚ್ಚಿದ್ದಾನೆ, ಅವುಗಳು ತಮ್ಮ ನಕ್ಷತ್ರಗಳ ಸುತ್ತ ಸುತ್ತುತ್ತಿರುತ್ತವೆ. ಹೊರಗ್ರಹಗಳೆಂದರೆ ಸೌರಮಂಡಲದ ಹೊರಗಿರುವ ಗ್ರಹಗಳು. ೧೯೯೫ ರಲ್ಲಿ ಇಂತಹ ಮೊದಲ ಹೊರಗ್ರಹವನ್ನು ಕಂಡುಹಿಡಿಯುವಲ್ಲಿ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಯಶಸ್ವಿಯಾಗಿತ್ತು. ನಂತರದ ಸುಮಾರು ೩೦ ವರ್ಷಗಳಲ್ಲಿ ಮಾನವನು ಸುಮಾರು ೬ ಸಾವಿರ ಹೊರಗ್ರಹಗಳನ್ನು ಪತ್ತೆಹಚ್ಚಿದ್ದಾನೆ. ಬ್ರಹ್ಮಾಂಡದ ಶತಕೋಟಿ ಗ್ರಹಗಳಿಗೆ ಹೋಲಿಸಿದರೆ ಈ ಸಂಖ್ಯೆ ಬಹಳ ಚಿಕ್ಕದಾದರೂ, ಕಳೆದ ೫ ವರ್ಷಗಳಲ್ಲಿ ಈ ಸಂಶೋಧನೆಗಳು ವೇಗ ಪಡೆದುಕೊಂಡಿವೆ. ‘ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ನಂತಹ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸುವ ಅತ್ಯಾಧುನಿಕ ದೂರದರ್ಶಕಗಳ ಮೂಲಕ ಸಂಶೋಧನೆಯ ವೇಗ ಹೆಚ್ಚಾಗಿದೆ. ಈ ಟೆಲಿಸ್ಕೋಪ್‌ನ ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು ಸಂಶೋಧಕರು ಈಗ ದೂರದ ಗ್ರಹಗಳ ಭೂವಿಜ್ಞಾನದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಇದು ಹಿಂದೆಂದೂ ಸಾಧ್ಯವಾಗಿರಲಿಲ್ಲ.

ಹೊರಗ್ರಹದ ಮೇಲೆ ಭೂಮಿಯಂತಹ ಭೌಗೋಳಿಕ ಕ್ರಿಯೆಗಳಿಲ್ಲ!

ಜೆ.ಡಬ್ಲ್ಯು.ಎಸ್.ಟಿ. ಟೆಲಿಸ್ಕೋಪ್ ಮೂಲಕ ‘ಎಲ್.ಎಚ್.ಎಸ್. ೩೮೪೪ ಬಿ’ ಎಂಬ ಹೊರಗ್ರಹದ ಮೇಲ್ಮೈ ರಚನೆಯನ್ನು ವಿಶ್ಲೇಷಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ಗ್ರಹವು ಭೂಮಿಯಿಂದ ೪೮.೫ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಟೆಲಿಸ್ಕೋಪ್‌ನ ವೀಕ್ಷಣಾ ತಂತ್ರಜ್ಞಾನದಿಂದಾಗಿ ವಿಜ್ಞಾನಿಗಳಿಗೆ ಈ ಗ್ರಹದ ಮೇಲ್ಮೈಯಿಂದ ನೇರವಾಗಿ ಹೊರಬರುವ ಶಾಖವನ್ನು ಪ್ರತ್ಯೇಕಿಸಲು ಸಾಧ್ಯವಾಯಿತು. ಈ ವಿಧಾನದಿಂದ ವಾಯುಮಂಡಲದ ಸೂಚನೆಗಳ ಮೇಲೆ ಅವಲಂಬಿತವಾಗದೆ ಭೂರೂಪದ ಅಧ್ಯಯನ ಮಾಡಲು ಸಾಧ್ಯವಾಯಿತು. ಸಂಶೋಧಕರು ಭೂಮಿ, ಚಂದ್ರ ಮತ್ತು ಮಂಗಳ ಗ್ರಹದ ಮೇಲೆ ತಿಳಿದಿರುವ ಶಿಲೆಗಳ ವಿಧಗಳೊಂದಿಗೆ ಈ ಹೊರಗ್ರಹದ ಅತಿಗೆಂಪು ದಾಖಲೆಗಳನ್ನು ಹೋಲಿಕೆ ಮಾಡಿದರು. ಈ ಫಲಿತಾಂಶಗಳು ‘ಗ್ರಾನೈಟ್’ ನಂತಹ ಸಿಲಿಕಾ-ಸಮೃದ್ಧ ಪದಾರ್ಥಗಳ ಇರುವಿಕೆಯನ್ನು ನಿರಾಕರಿಸಿವೆ (ಇವು ಸಾಮಾನ್ಯವಾಗಿ ನೀರಿನ ಪ್ರಭಾವವಿರುವ ವಾತಾವರಣದಲ್ಲಿ ನಿರ್ಮಾಣವಾಗುತ್ತವೆ). ಇದರಿಂದ ಈ ಗ್ರಹದಲ್ಲಿ ಭೂಮಿಯಂತಹ ಭೌಗೋಳಿಕ ಕ್ರಿಯೆಗಳು ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಗ್ರಹದ ತಾಪಮಾನ ೭೨೫ ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುತ್ತದೆ!

ಈ ಹೊರಗ್ರಹದ ಮೇಲ್ಮೈ ಅಧ್ಯಯನದಿಂದ ಅದು ‘ಟೈಡಲ್ ಲಾಕ್ಡ್’ ಆಗಿದೆ ಎಂದು ತಿಳಿದುಬಂದಿದೆ. ಅಂದರೆ ಈ ಗ್ರಹದ ಒಂದು ಭಾಗವು ಯಾವಾಗಲೂ ತನ್ನ ನಕ್ಷತ್ರದ ಕಡೆಗೆ ಮುಖ ಮಾಡಿರುತ್ತದೆ. ಹಗಲಿರುವ ಭಾಗದಲ್ಲಿ ತಾಪಮಾನವು ಅತ್ಯಂತ ಹೆಚ್ಚಾಗಿದ್ದು, ಸುಮಾರು ೭೨೫ ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುತ್ತದೆ. ಇದು ಮೇಲ್ಮೈ ರಚನೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ಗ್ರಹದ ಮೇಲೆ ಘನ ಶಿಲೆ ಅಥವಾ ಸಡಿಲವಾದ ಪದಾರ್ಥಗಳ ಪದರ ಇರಬಹುದು ಎಂದು ಸಂಶೋಧನೆಗಳು ಸೂಚಿಸುತ್ತಿವೆ, ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಷ್ಟವಾಗಲಿದೆ.

ಈ ಅಧ್ಯಯನವು ಬ್ರಹ್ಮಾಂಡದ ಬೇರೆಡೆಗಳಲ್ಲಿ ಭೂಮಿಯಂತಹ ವಾತಾವರಣವನ್ನು ಗುರುತಿಸಲು ಹತ್ತಿರವಾಗಿಸಲಿದೆ!

‘ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ಮೂಲಕ ನಡೆಸಿದ ಈ ಅಧ್ಯಯನದ ಯಶಸ್ಸು, ಭವಿಷ್ಯದಲ್ಲಿ ಇತರ ಹೊರಗ್ರಹಗಳ ಸಂಶೋಧನೆಗೆ ಒಂದು ಮಾರ್ಗಸೂಚಿಯನ್ನು ನೀಡುತ್ತಿದೆ. ಮುಂದೆ ಇದು ಹೊರಗ್ರಹಗಳಲ್ಲಿ ಜೀವವಿಕಾಸಕ್ಕೆ ಪೂರಕವಾದ ರಾಸಾಯನಿಕ ಕುರುಹುಗಳನ್ನು ಪತ್ತೆಹಚ್ಚಲು ಸಹಕಾರಿಯಾಗಬಹುದು. ಗ್ರಹಗಳ ಸಂಶೋಧನೆಯ ಈ ಮುಂದಿನ ಹಂತವು ಗ್ರಹಗಳ ವ್ಯವಸ್ಥೆಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಸುಧಾರಿಸುತ್ತದೆ ಮತ್ತು ಬ್ರಹ್ಮಾಂಡದಲ್ಲಿ ಭೂಮಿಯಂತಹ ವಾತಾವರಣವನ್ನು ಹೊಂದಿರುವ ಗ್ರಹಗಳನ್ನು ಗುರುತಿಸುವ ಸಾಮರ್ಥ್ಯಕ್ಕೆ ನಮ್ಮನ್ನು ಇನ್ನಷ್ಟು ಹತ್ತಿರ ಕೊಂಡೊಯ್ಯಲಿದೆ.