‘ರ‍್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !

ವಿಜ್ಞಾನದ ಜಗತ್ತಿನಲ್ಲಿ ಇಂದು ‘ಪುರಾವೆಗಳ ಆಧಾರಿತ ನೀತಿ’ಯನ್ನು  ನಿರ್ಧರಿಸುವಾಗ (Evidence based policy) ‘ರ‍್ಯಾಂಡಮೈಜ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ)ಗೆ ಸರ್ವೋಚ್ಚ ಸ್ಥಾನವನ್ನು ನೀಡಲಾಗುತ್ತದೆ. ಇದನ್ನು ‘ಗೋಲ್ಡ್ ಸ್ಟ್ಯಾಂಡರ್ಡ್’ (ಅತ್ಯುಚ್ಚ ಮಾನದಂಡ) ಎಂದು ಪರಿಗಣಿಸಿರುವುದರಿಂದ, ಇತರ ಯಾವುದೇ ರೀತಿಯ ಅವಲೋಕನಗಳನ್ನು ಅಥವಾ ಅನುಭವಗಳನ್ನು ಗೌಣವೆಂದು ಭಾವಿಸುವ ಒಂದು ಘಾತಕ ಪ್ರವೃತ್ತಿಯು ಸಂಶೋಧಕರಲ್ಲಿ ನಿರ್ಮಾಣವಾಗಿದೆ. ಇಷ್ಟೇ ಅಲ್ಲದೆ, ಆಯುರ್ವೇದದಲ್ಲಿ ‘ಆರ್.ಸಿಟಿ’ಗಳು ಹೆಚ್ಚಾಗಿ ನಡೆಯದ ಕಾರಣ, ‘ಆಯುರ್ವೇದವು ಒಂದು ಅಸಂಬದ್ಧ ಶಾಸ್ತ್ರ’ ಎಂಬ ಅಭಿಪ್ರಾಯವನ್ನು ವಿಜ್ಞಾನದ ಕುರುಡು ಅನುಯಾಯಿಗಳು ಮಂಡಿಸುತ್ತಿರುತ್ತಾರೆ; ಆದರೆ, ಪ್ರಸ್ತುತ ಜಗತ್ತಿನಾದ್ಯಂತ ಈ ಮಾನಸಿಕತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳು ಮೂಡುತ್ತಿವೆ. ಪ್ರಯೋಗಶಾಲೆಯಲ್ಲಿನ ‘ನಿಯಂತ್ರಿತ ಸತ್ಯ’ ಮತ್ತು ಪ್ರತ್ಯಕ್ಷ ಜಗತ್ತಿನಲ್ಲಿನ ‘ಸಂಕೀರ್ಣ ವಾಸ್ತವ’ಗಳ ನಡುವೆ ದೊಡ್ಡ ಕಂದಕವಿದೆ. ಈ ಕುರಿತು ಕೆಲವು ಮಹತ್ವದ ಅಂಶಗಳನ್ನು ನೋಡೋಣ.

ಆರ್.ಸಿ.ಟಿ. – ಆಧುನಿಕ ವೈದ್ಯಕೀಯ ಸಂಶೋಧನೆಯ ಒಂದು ಮೂಲಭೂತ ವಿಧಾನ

 

೧. ಪ್ರಯೋಗಶಾಲೆಯಲ್ಲಿನ ‘ಯಶಸ್ಸು’ ವಿರುದ್ಧ ವಾಸ್ತವದ ‘ಪರಿಣಾಮ’

‘ಆರ್.ಸಿ.ಟಿ.’ಯು ನಮಗೆ, ಯಾವುದಾದರೊಂದು ಚಿಕಿತ್ಸೆ ಅಥವಾ ಆಯೋಜನೆ ಆದರ್ಶ ಪರಿಸ್ಥಿತಿಯಲ್ಲಿ ‘ಏನು’ ಪರಿಣಾಮ ಬೀರುತ್ತದೆ  ಎಂಬುದನ್ನು(Efficacy) ಮಾತ್ರ ಹೇಳುತ್ತದೆ; ಆದರೆ ಅದೇ ಚಿಕಿತ್ಸೆಯನ್ನು ಸಾಮಾನ್ಯ ವ್ಯಕ್ತಿಯು ಪಡೆದಾಗ ಚಿತ್ರಣವೇ ಬೇರೆಯಾಗಿರುತ್ತದೆ. ವಾಸ್ತವ ಜಗತ್ತಿನಲ್ಲಿ ರೋಗಿಯು ಏಕಕಾಲದಲ್ಲಿ ಅನೇಕ ಕಾಯಿಲೆಗಳಿಂದ ಬಳಲುತ್ತಿರಬಹುದು ಅಥವಾ ಅವನ ಜೀವನಶೈಲಿಯೇ ಭಿನ್ನವಾಗಿರಬಹುದು. ‘ಆರ್.ಸಿ.ಟಿ.’ಯಲ್ಲಿ ಸಾಮಾನ್ಯವಾಗಿ ಇಂತಹ ‘ಸಂಕೀರ್ಣ’ ವ್ಯಕ್ತಿಗಳನ್ನು ಹೊರಗಿಟ್ಟು ಕೇವಲ ‘ಆದರ್ಶ’ ಜನರ ಮೇಲೆ ಮಾತ್ರ ಪ್ರಯೋಗ ಮಾಡಲಾಗುತ್ತದೆ. ಅದರಿಂದಾಗಿ ಪ್ರಯೋಗದಲ್ಲಿ ಯಶಸ್ವಿಯಾದ ಅಂಶವು ಪ್ರತ್ಯಕ್ಷ ಜೀವನದಲ್ಲಿ ವಿಫಲವಾಗಬಹುದು.

೨. ‘ಸರಾಸರಿ’ಯ ಬಲೆ

ವೈದ್ಯ ಪರೀಕ್ಷಿತ ಶೆವಡೆ

‘ಆರ್.ಸಿ.ಟಿ.’ನಲ್ಲಿ ‘ಸರಾಸರಿ ಪರಿಣಾಮ’ವನ್ನು ಅಳೆಯಲಾಗುತ್ತದೆ. ಉದಾಹರಣೆಗೆ, ೧೦೦ ಜನರಲ್ಲಿ ೬೦ ಜನರಿಗೆ ಒಂದು ಔಷಧಿಯಿಂದ ಲಾಭವಾದರೆ, ಆ ಔಷಧಿಯನ್ನು ಯಶಸ್ವಿ ಎಂದು ಘೋಷಿಸಲಾಗುತ್ತದೆ; ಆದರೆ ಉಳಿದ ೪೦ ಜನರ ಕಥೆಯೇನು ? ಅವರಿಗೆ ಏಕೆ ಲಾಭವಾಗಲಿಲ್ಲ ? ಅವರ ಮೇಲೆ ವಿಪರೀತ ಪರಿಣಾಮಗಳಾದವೇ ? ‘ಆರ್.ಸಿ.ಟಿ.’ಯು ವ್ಯಕ್ತಿಯ ಬದಲಾಗಿ ‘ಸಮೂಹದ ಸರಾಸರಿ’ಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇದರಿಂದ ಪ್ರತಿಯೊಂದು ವ್ಯಕ್ತಿಯ ವಿಭಿನ್ನ ಅವಶ್ಯಕತೆ ಮತ್ತು ಶರೀರ ರಚನೆಯನ್ನು (Personalized Medicine)  ಸಂಪೂರ್ಣವಾಗಿ ನಿರ್ಲಕ್ಷಿಸಿದಂತಾಗುತ್ತದೆ.

೩. ನೈತಿಕ ಸಂಕಷ್ಟ : ಮಾನವ ಹಕ್ಕುಗಳೋ ಅಥವಾ ವಿಜ್ಞಾನದ ಶಿಸ್ತೋ ?

‘ಆರ್.ಸಿ.ಟಿ.’ನಲ್ಲಿನ ಅತಿ ದೊಡ್ಡ ಮಿತಿಯೆಂದರೆ ಅದರಲ್ಲಿರುವ ‘ನೈತಿಕ ಸಂಕಷ್ಟ’. ವಿಜ್ಞಾನದ ನಿಖರತೆಗಾಗಿ ನಾವು ಮಾನವೀಯ ಮೌಲ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದೇ? ಯಾವುದಾದರೊಂದು ಪ್ರಾಣಾಪಾಯದ ಕಾಯಿಲೆಗೆ ಒಂದು ಹೊಸ ಔಷಧಿಯು ಆರಂಭದಲ್ಲಿ ಬಹಳ ಪರಿಣಾಮಕಾರಿ ಎಂದು ಕಂಡು ಬಂದಿದೆ ಎಂದು ಭಾವಿಸೋಣ. ಈಗ ಅದರ ‘ಆರ್.ಸಿ.ಟಿ.’ ಮಾಡಲು ಸಂಶೋಧಕರು ರೋಗಿಗಳನ್ನು ೨ ಗುಂಪುಗಳಾಗಿ ಮಾಡುತ್ತಾರೆ. ಒಂದು ಗುಂಪಿಗೆ ಆ ಔಷಧಿಯನ್ನು ನೀಡಲಾಗುತ್ತದೆ, ಆದರೆ ಇನ್ನೊಂದು ಗುಂಪಿಗೆ (Control Group) ಕೇವಲ ‘ತುಲನೆ’ ಮಾಡುವುದಕ್ಕಾಗಿ ಔಷಧಿಯಿಂದ ವಂಚಿತಗೊಳಿಸಲಾಗುತ್ತದೆ. ಔಷಧ ಸಿಗದವರಿಗೆ ಪ್ರಾಣಾಪಾಯವಿರುವಾಗ, ಕೇವಲ ‘ವೈಜ್ಞಾನಿಕ ನಿಖರತೆಗಾಗಿ’ ಅವರನ್ನು ಸಾವಿನ ದವಡೆಗೆ ತಳ್ಳುವುದು ಕ್ರೂರ ಮತ್ತು ಅನೈತಿಕವಾಗಿದೆ.

೪. ಬಾಹ್ಯ ಸತ್ಯತೆಯ ಅಭಾವ

ಪಾಶ್ಚಾತ್ಯ ದೇಶದ ಯಾವುದಾದರೊಂದು ಆಸ್ಪತ್ರೆಯಲ್ಲಿ ಅಥವಾ ಹವಾನಿಯಂತ್ರಿತ ಕೊಠಡಿಯಲ್ಲಿ ಮಾಡಿದ ಪ್ರಯೋಗವು ಭಾರತದ ಗ್ರಾಮೀಣ ಭಾಗಕ್ಕೆ ಅನ್ವಯಿಸುತ್ತದೆ ಎಂದೇನಿಲ್ಲ. ಸ್ಥಳೀಯ ಸಂಸ್ಕೃತಿ, ಹವಾಮಾನ, ರಾಜಕೀಯ ಪರಿಸ್ಥಿತಿ ಮತ್ತು ಮಾನವ ಸ್ವಭಾವದಂತಹ ಘಟಕಗಳನ್ನು ‘ಆರ್.ಸಿ.ಟಿ.’ ಒಳಗೊಳ್ಳಲು ಸಾಧ್ಯವಿಲ್ಲ. ವಿಜ್ಞಾನಕ್ಕೆ ‘ಸ್ಥಳೀಯ ಸಂದರ್ಭದ’ ಅರಿವಿಲ್ಲದಿದ್ದರೆ ಅದು ಪೂರ್ಣವಾಗಲಾರದು.

೫. ಸಮಯ, ಹಣ ಮತ್ತು ‘ಪಬ್ಲಿಕೇಶನ್ ಬಯಾಸ್’ (ಪ್ರಕಟಣೆಯ ಪಕ್ಷಪಾತ)

ಒಂದು ‘ಆರ್.ಸಿ.ಟಿ.’ ಪೂರ್ಣಗೊಳ್ಳಲು ೫ ರಿಂದ ೧೦ ವರ್ಷಗಳು ಮತ್ತು ಅಪಾರ ಹಣದ ಅವಶ್ಯಕತೆಯಿರುತ್ತದೆ. ವಿಕಸನಶೀಲ ದೇಶಗಳಿಗೆ ಈ ಪದ್ಧತಿಯು ಕೈಗೆಟಕುವಂತಿಲ್ಲ. ಇದಲ್ಲದೆ, ಅನೇಕ ಕಂಪನಿಗಳು ಕೇವಲ ‘ಯಶಸ್ವಿ’ಯಾದ ಪರೀಕ್ಷೆಗಳ ಫಲಿತಾಂಶಗಳನ್ನು ಮಾತ್ರ ಪ್ರಕಟಿಸುತ್ತವೆ. ಯಾವ ಪ್ರಯೋಗಗಳಲ್ಲಿ ಸೋಲಾಗಿದೆಯೋ, ಅಂತಹ ಫಲಿತಾಂಶಗಳನ್ನು ದಬ್ಬಲಾಗುತ್ತದೆ. ಇದರಿಂದ ಜಗತ್ತಿನ ಮುಂದೆ ಒಂದು ಸುಳ್ಳು ‘ಸಕ್ಸೆಸ್ ರೇಟ್’ (ಯಶಸ್ಸಿನ ಪ್ರಮಾಣ) ಮಂಡಿಸಲಾಗುತ್ತದೆ, ಇದು ವಾಸ್ತವದಲ್ಲಿ ಅತ್ಯಂತ ಅಪಾಯಕಾರಿ.

೬. ‘ಎವಿಡೆನ್ಸ್ ಹೈಬ್ರಿಡ್ ಮಾಡೆಲ್’ನ ಅವಶ್ಯಕತೆ

‘ಆರ್.ಸಿ.ಟಿ.’ಗಳು ಸಂಪೂರ್ಣವಾಗಿ ಅಯೋಗ್ಯವಾಗಿವೆ ಎಂಬುದು ನಮ್ಮ ಅಭಿಪ್ರಾಯವಲ್ಲ; ಆದರೆ ಅದರ ಬಗೆಗಿನ ‘ಅತಿಆಗ್ರಹ’ವನ್ನು ಕಡಿಮೆ ಮಾಡಬೇಕು. ಭವಿಷ್ಯದಲ್ಲಿನ ಸಂಶೋಧನೆಯು ಕೇವಲ ‘ಆರ್.ಸಿ.ಟಿ.’ ಮೇಲೆ ಆಧಾರಿತವಾಗಿರದೆ, ಅದರಲ್ಲಿ ಈ ಕೆಳಗಿನ ಅಂಶಗಳು ಒಳಗೊಂಡಿರಬೇಕು:

ಅ. ‘ರಿಯಲ್ ವರ್ಲ್ಡ್ ಡೇಟಾ’ : ಪ್ರತ್ಯಕ್ಷ ಆಸ್ಪತ್ರೆಗಳಲ್ಲಿನ ಮತ್ತು ಕ್ಷೇತ್ರಕಾರ್ಯದ (ಫೀಲ್ಡನ) ಅಂಕಿಅಂಶಗಳು (ಡೆಟಾ)

ಆ. ‘ಕ್ವಾಲಿಟೇಟಿವ್ ರಿಸರ್ಚ್’ (ಗುಣಾತ್ಮಕ ಸಂಶೋಧನೆ) : ಜನರ ಅನುಭವಗಳು ಮತ್ತು ಸಂದರ್ಶನಗಳು.

ಇ. ‘ಅಡಾಪ್ಟಿವ್ ಟ್ರಯಲ್ಸ್’ : ಬದಲಾಗುತ್ತಿರುವ ಪರಿಸ್ಥಿತಿಗೆ ತಕ್ಕಂತೆ ಪ್ರಯೋಗದಲ್ಲಿ ಬದಲಾವಣೆ ಮಾಡಿಕೊಳ್ಳುವ ಸ್ಥಿತಿಸ್ಥಾಪಕತ್ವ.

‘ಗೋಲ್ಡ್ ಸ್ಟ್ಯಾಂಡರ್ಡ್’ನ ಹೆಸರಿನಲ್ಲಿ ವಾಸ್ತವದ ಕಡೆಗೆ ಕಣ್ಣುಮುಚ್ಚಿ ಕುಳಿತುಕೊಳ್ಳುವುದನ್ನು ನಿಲ್ಲಿಸಲು ಇದುವೇ ಸೂಕ್ತ ಸಮಯವಾಗಿದೆ. ಕಾಲಕ್ಕೆ ತಕ್ಕಂತೆ ಪ್ರಾಮಾಣಿಕ ಬದಲಾವಣೆ ಅನಿವಾರ್ಯವಾಗಿದೆ. ಆದರೆ ಈ ಔಷಧ ಮಾಫಿಯಾದವರು ಇದನ್ನು ಪ್ರಾಮಾಣಿಕವಾಗಿ ನಡೆಯಲು ಬಿಡುತ್ತಾರೆಯೇ ? ಎಂಬುದು ಅನುಮಾನವೇ ಸರಿ !

– ವೈದ್ಯ ಪರೀಕ್ಷಿತ ಶೆವಡೆ, ಆಯುರ್ವೇದ ವಾಚಸ್ಪತಿ, ಡೊಂಬಿವಲಿ, ಮಹಾರಾಷ್ಟ್ರ.