ಭಾಗ್ಯನಗರ (ತೆಲಂಗಾಣ) ಇಲ್ಲಿ ಬಂಧಿಸಲ್ಪಟ್ಟಿರುವ ಸಯೀದಾ ಬೇಗಂ ಇಸ್ಲಾಮಿಕ್ ಸ್ಟೇಟ್ ನ ‘ಖವಾತೀನ್’ (ಮಹಿಳಾ) ಸಂಘಟನೆಯ ಮುಖ್ಯಸ್ಥೆ ! – Terror Links Sayeeda Begum

ಇನ್ಫ್ಲುಯೆನ್ಸರ್’ ಹೆಸರಿನಲ್ಲಿ ನಡೆಸುತ್ತಿದ್ದಳು ಜಿಹಾದಿ ಭಯೋತ್ಪಾದಕ ಚಟುವಟಿಕೆ !

(‘ಇನ್ಫ್ಲುಯೆನ್ಸರ್’ ಎಂದರೆ ಪ್ರಭಾವ ಬೀರುವವರು)

ವಿಜಯವಾಡ (ಅಮರಾವತಿ) – ಕಳೆದ ತಿಂಗಳು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ ಭಾಗ್ಯನಗರದ ೩೮ ವರ್ಷದ ಇನ್ಸ್ಟಾಗ್ರಾಮ್ ‘ಇನ್ಫ್ಲುಯೆನ್ಸರ್’ ಸಯೀದಾ ಬೇಗಂಳ ವಿಚಾರಣೆಯಲ್ಲಿ ಗಂಭೀರ ಮಾಹಿತಿಗಳು ಹೊರಬಂದಿವೆ. ಸಯೀದಾ ಮೇಲೆ ಅಂತರರಾಜ್ಯ ಭಯೋತ್ಪಾದಕ ‘ಮಾಡ್ಯೂಲ್’ (ಭಯೋತ್ಪಾದಕ ಕೃತ್ಯಗಳ ಯೋಜನೆ ಮತ್ತು ಅದರ ಅನುಷ್ಠಾನಕ್ಕಾಗಿ ರಚಿಸಲಾದ ತಂಡ) ನೊಂದಿಗೆ ಸಂಬಂಧ ಹೊಂದಿರುವ ಮತ್ತು ‘ಖವಾತೀನ್’ ಹೆಸರಿನ ಮಹಿಳೆಯರ ಸ್ವತಂತ್ರ ಭಯೋತ್ಪಾದಕ ಶಾಖೆಯನ್ನು ಸ್ಥಾಪಿಸಲು ಸಿದ್ಧತೆ ನಡೆಸಿದ ಆರೋಪವಿದೆ. ವಿಜಯವಾಡದಲ್ಲಿ ಪತ್ತೆಯಾದ ದೊಡ್ಡ ‘ಮಾಡ್ಯೂಲ್’ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದರ ತನಿಖೆ ಇನ್ನೂ ನಡೆಯುತ್ತಿದೆ. ಈ ಕಾರ್ಯಾಚರಣೆಯಲ್ಲಿ ಇದುವರೆಗೆ ೬ ರಾಜ್ಯಗಳಿಂದ ೧೨ ಶಂಕಿತರನ್ನು ಬಂಧಿಸಲಾಗಿದೆ.

ಆನ್ ಲೈನ್ ಮೂಲಭೂತವಾದ ಮತ್ತು ೪೨ ಮಹಿಳೆಯರ ನೇಮಕಾತಿಯ ಆರೋಪ !

ಸಯೀದಾ ಬೇಗಂ ಆನ್ ಲೈನ್ ವೇದಿಕೆಗಳ ಮೂಲಕ ಮೂಲಭೂತವಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಳು. ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಸಂಘಟನೆಗಳಿಗೆ ಸಂಬಂಧಿಸಿದ ಆನ್ ಲೈನ್ ಗುಂಪುಗಳ ಮೂಲಕ ಆಕೆ ೪೨ ಮಹಿಳೆಯರನ್ನು ಈ ಜಾಲಕ್ಕೆ ಸೇರಿಸಿದ್ದಳು. ಈ ಗುಂಪುಗಳಲ್ಲಿ ಅಲ್-ಖೈದಾದ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನ ವಿಡಿಯೋಗಳು ಮತ್ತು ಜಾಕಿರ್ ನಾಯ್ಕ್ ಹಾಗೂ ಇಸ್ರಾರ್ ಅಹ್ಮದ್ ಅಂತಹ ಮೂಲಭೂತವಾದಿ ಪ್ರಚಾರಕರ ಪ್ರಚೋದನಾಕಾರಿ ಭಾಷಣಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಸಯೀದಾ ಈ ಗುಂಪುಗಳಲ್ಲಿ ಜಿಹಾದಿ ಸಾಹಿತ್ಯವನ್ನು ಪ್ರಸಾರ ಮಾಡಲು ಜನರನ್ನು ಪ್ರೇರೇಪಿಸುತ್ತಿದ್ದಳು ಮತ್ತು ಯುವಕರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಳು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.

‘ಖವಾತೀನ್’ ಶಾಖೆ ಮತ್ತು ದಾಳಿಯ ಸಂಚು !

ಪೊಲೀಸರ ಮಾಹಿತಿಯ ಪ್ರಕಾರ, ಸಯೀದಾಳನ್ನು ‘ಖವಾತೀನ್’ (ಮಹಿಳೆಯರು) ಎಂಬ ಹೆಸರಿನ ಮಹಿಳಾ ಭಯೋತ್ಪಾದಕ ಶಾಖೆಯ ನೇತೃತ್ವ ವಹಿಸಲು ಸಿದ್ಧಪಡಿಸಲಾಗುತ್ತಿತ್ತು. ಈ ಶಾಖೆಯ ಅಡಿಯಲ್ಲಿ ಮಹಿಳೆಯರಿಗೆ ಶಸ್ತ್ರಾಸ್ತ್ರಗಳನ್ನು ಬಳಸುವುದು, ‘ಸ್ನೈಪರ್ ರೈಫಲ್ಸ್’ ಮತ್ತು ಸ್ಫೋಟಕಗಳ ಬಳಕೆಯ ತರಬೇತಿ ನೀಡುವ ಯೋಜನೆಯಿತ್ತು, ಇದರಿಂದ ದೇಶಾದ್ಯಂತ ಭಯೋತ್ಪಾದಕ ದಾಳಿಗಳನ್ನು ನಡೆಸಬಹುದಾಗಿತ್ತು. ಈ ‘ಮಾಡ್ಯೂಲ್’ನ ನಂಟು ಪಾಕಿಸ್ತಾನದ ‘ಹ್ಯಾಂಡ್ಲರ್ಸ್’ (ಭಯೋತ್ಪಾದಕರನ್ನು ನಿರ್ವಹಿಸುವವರು) ಗಳೊಂದಿಗೆ ಬೆಸೆದುಕೊಂಡಿದೆ. ಸಯೀದಾ ಈ ನೆಟ್ ವರ್ಕ್ ನ ಮುಖ್ಯ ಆರೋಪಿ ರಹಮತುಲ್ಲಾ ಶರೀಫ್ ಜೊತೆಗೆ ಕೆಲಸ ಮಾಡುತ್ತಿದ್ದಳು. ಈತನನ್ನು ಮಾರ್ಚ್ ೨೪, ೨೦೨೬ ರಂದು ವಿಜಯವಾಡದಿಂದ ಬಂಧಿಸಲಾಗಿದೆ.

ಸಾಮಾನ್ಯ ಮಹಿಳೆಯಿಂದ ಭಯೋತ್ಪಾದಕಿಯವರೆಗೆ !

ಸಯೀದಾ ಬೇಗಂ ಚಂಚಲಗುಡ ಭಾಗದಲ್ಲಿ ತನ್ನ ತಂದೆ-ತಾಯಿ ಮತ್ತು ೬ ವರ್ಷದ ಮಗನೊಂದಿಗೆ ಸಣ್ಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಪತಿಯಿಂದ ದೂರಾದ ನಂತರ ಆಕೆ ಮನೆಗೆಲಸ ಮಾಡಿ ಕುಟುಂಬವನ್ನು ಸಲಹುತ್ತಿದ್ದಳು. ಆಕೆ ಮನೆಯಲ್ಲಿ ಅಡುಗೆ ಮಾಡುವಾಗ ತನ್ನದೇ ಆದ ರೀಲ್ಸ್ ತಯಾರಿಸುತ್ತಿದ್ದಳು, ನಂತರ ಸ್ಥಳೀಯ ದರ್ಜಿಗಳು ಮತ್ತು ಸಣ್ಣ ಉದ್ಯಮಿಗಳ ಜಾಹೀರಾತು ವಿಡಿಯೋಗಳನ್ನು ತಯಾರಿಸಿ ೫೦೦ ರಿಂದ ೧೦೦೦ ರೂಪಾಯಿಗಳವರೆಗೆ ಸಂಪಾದಿಸುತ್ತಿದ್ದಳು.

ಸಂಪಾದಕೀಯ ನಿಲುವು

ಇಂತಹವರನ್ನು ಕಾರಾಗೃಹದಲ್ಲಿ ಇಟ್ಟು ಪೋಷಿಸುವ ಬದಲು ಅವರ ಮೇಲೆ ತ್ವರಿತಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು !