ಮೂರನೇ ಮಹಾಯುದ್ಧಕ್ಕೆ ನಾಂದಿ?

ಅಮೆರಿಕ ಮತ್ತು ಇಸ್ರೇಲ್‌ ದೇಶಗಳು ಜಂಟಿಯಾಗಿ ಇರಾನ್‌ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ, ಇರಾನ್‌ ೬ ದೇಶಗಳಲ್ಲಿನ ಅಮೆರಿಕದ ಸೇನಾನೆಲೆಗಳ ಮೇಲೆ ದಾಳಿ ಮಾಡಿದೆ. ಇರಾನ್‌ ನಗರ ಪ್ರದೇಶಗಳ ಮೇಲೂ ದಾಳಿ ಮಾಡಿರುವುದನ್ನು ಗಮನಿಸಿದರೆ, ‘ಮೂರನೇ ಮಹಾಯುದ್ಧ ಪ್ರಾರಂಭವಾಗಿದೆಯೇ?’ ಎಂಬ ಪ್ರಶ್ನೆ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಮೂಡಿದೆ. ಇದಕ್ಕೆ ಉತ್ತರ ಸಿಗಲು ಬಹುಶಃ ಇನ್ನು ಕೆಲವು ದಿನಗಳ ಕಾಲ ಕಾಯಬೇಕಾಗಬಹುದು; ಏಕೆಂದರೆ ಇರಾನ್‌ ಮೇಲಿನ ದಾಳಿಯ ಹಿಂದೆ ಅಮೆರಿಕ ಮತ್ತು ಇಸ್ರೇಲ್‌ನ ಉದ್ದೇಶವೇ ಬೇರೆಯಾಗಿದೆ ಮತ್ತು ಇರಾನ್‌ ಇದನ್ನು ವ್ಯಾಪಕಗೊಳಿಸಲು ಪ್ರಯತ್ನಿಸಿದೆ. ದಾಳಿಗೊಳಗಾದ ಇತರ ದೇಶಗಳು ಅಮೆರಿಕದ ಮೇಲೆ ಒತ್ತಡ ಹೇರುತ್ತವೆಯೇ ಅಥವಾ ಇರಾನ್‌ ವಿರುದ್ಧ ಕ್ರಮ ಕೈಗೊಳ್ಳುತ್ತವೆಯೇ? ಮತ್ತು ಇರಾನ್‌ನ ಸಹಾಯಕ್ಕೆ ಯಾರಾದರೂ ಧಾವಿಸುತ್ತಾರೆಯೇ? ಎಂಬುದರ ಮೇಲೆ ಮೂರನೇ ಮಹಾಯುದ್ಧ ನಡೆಯುತ್ತದೆಯೇ ಇಲ್ಲವೇ ? ಎಂಬುದು ಸ್ಪಷ್ಟವಾಗಲಿದೆ. ಸದ್ಯಕ್ಕೆ ಈ ದಾಳಿ ಇರಾನ್‌ಗೆ ಮಾತ್ರ ಸೀಮಿತವಾಗಿದೆ.

ದಾಳಿಯ ಮೂಲ ಉದ್ದೇಶ ತೈಲ ಮತ್ತು ಅಣು ಯೋಜನೆ!

ಇರಾನ್‌ ವಿಶ್ವದ ಮೂರನೇ ಅತಿದೊಡ್ಡ ತೈಲ ಉತ್ಪಾದಕ ದೇಶವಾಗಿದೆ. ಇದು ವಿಶ್ವದ ಏಕೈಕ ಶಿಯಾ ಬಹುಸಂಖ್ಯಾತ ದೇಶ. ಉಳಿದ ಇಸ್ಲಾಮಿಕ್‌ ದೇಶಗಳು ಸುನ್ನಿ ಬಹುಸಂಖ್ಯಾತವಾಗಿವೆ. ಶಿಯಾ ಮತ್ತು ಸುನ್ನಿಗಳ ನಡುವೆ ಶತಮಾನಗಳಿಂದ ದ್ವೇಷವಿದೆ. ಈ ಕಾರಣದಿಂದಾಗಿ, ಯಾವುದೇ ಸುನ್ನಿ ದೇಶವು ಇರಾನ್‌ ಅನ್ನು ಬಹಿರಂಗವಾಗಿ ಬೆಂಬಲಿಸಿದ ಅಥವಾ ಸಹಾಯ ಮಾಡಿದ ಉದಾಹರಣೆಗಳಿಲ್ಲ. ಮುಸಲ್ಮಾನರ ಪ್ರಮುಖ ದೇಶವೆಂದು ಗುರುತಿಸಲ್ಪಡುವ ಸೌದಿ ಅರೇಬಿಯಾದಿಂದಲೂ ಇರಾನ್‌ಗೆ ಎಂದೂ ಸಹಾಯ ಸಿಕ್ಕಿಲ್ಲ. ಈಗಲೂ ಸಹ, ಸೌದಿ ಅರೇಬಿಯಾವೇ ಟ್ರಂಪ್‌ ಅವರಿಗೆ ಇರಾನ್‌ ಮೇಲೆ ದಾಳಿ ಮಾಡಲು ನಿರಂತರವಾಗಿ ದೂರವಾಣಿ ಕರೆ ಮಾಡಿ ಪ್ರೇರೇಪಿಸಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಇಸ್ಲಾಮಿಕ್‌ ದೇಶಗಳ ನೈಜ ಮನಸ್ಥಿತಿ ಅರ್ಥವಾಗುತ್ತದೆ.

ಅಮೆರಿಕದ ಕಣ್ಣು ಇರಾನ್‌ನ ತೈಲ ನಿಕ್ಷೇಪಗಳ ಮೇಲಿದ್ದರೆ, ಇಸ್ರೇಲ್‌ ಮಾತ್ರ ‘ಇರಾನ್‌ ಅಣುಬಾಂಬ್‌ ತಯಾರಿಸಬಾರದು’ ಎಂದು ಬಯಸುತ್ತಿದೆ. ‘ಇರಾನ್‌ ಅಣುಬಾಂಬ್‌ ತಯಾರಿಸಿದರೆ ಅದನ್ನು ಇಸ್ರೇಲ್‌ ವಿರುದ್ಧವೇ ಬಳಸುತ್ತದೆ’ ಎಂಬುದು ಸ್ಪಷ್ಟವಿರುವುದರಿಂದ ಇಸ್ರೇಲ್‌ ಇರಾನ್‌ ಅನ್ನು ವಿರೋಧಿಸುತ್ತಿದೆ. ಇದಕ್ಕೆ ಅಮೆರಿಕ ಸಾಥ್‌ ನೀಡಿದ್ದು, ಕಳೆದ ಕೆಲವು ತಿಂಗಳುಗಳಿಂದ ಅಣುಬಾಂಬ್‌ ತಯಾರಿಸದಂತೆ ಇರಾನ್‌ ಮೇಲೆ ಒತ್ತಡ ಹೇರುತ್ತಿತ್ತು. ಆದರೆ ಇರಾನ್‌ ಅದಕ್ಕೆ ಮಣಿಯಲಿಲ್ಲ. ಕಳೆದ ಜೂನ್‌ ತಿಂಗಳಲ್ಲಿ ಅಮೆರಿಕ ಮತ್ತು ಇಸ್ರೇಲ್‌ ಇರಾನ್‌ನ ಅಣು ಸ್ಥಾವರಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶಪಡಿಸಲು ಪ್ರಯತ್ನಿಸಿದ್ದವು; ಆದರೆ ಆ ಪ್ರಯತ್ನ ವಿಫಲವಾಗಿತ್ತು. ಈ ಪ್ರಯತ್ನ ವಿಫಲವಾದ ನಂತರ, ಅಮೆರಿಕವು ಇರಾನ್‌ನಲ್ಲಿ ಖಮೇನಿ ವಿರುದ್ಧ ಅಸಮಾಧಾನ ಮೂಡಿಸಲು ಪ್ರಯತ್ನಿಸಿತು ಮತ್ತು ಅದು ಸಾಕಷ್ಟು ಯಶಸ್ವಿಯಾಯಿತು. ಇರಾನ್‌ ಮೇಲೆ ಖಮೇನಿ ಅವರ ಇಸ್ಲಾಮಿಕ್‌ ಆಡಳಿತ ಇರುವವರೆಗೆ ಅಣು ಯೋಜನೆ ನಿಲ್ಲುವುದಿಲ್ಲ ಮತ್ತು ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಅಮೆರಿಕದ ನಿಯಂತ್ರಣ ಬರುವುದಿಲ್ಲ. ಇದೇ ಕಾರಣಕ್ಕೆ ಖಮೇನಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಆರಂಭವಾಯಿತು. ಅದಕ್ಕಾಗಿ ಮೊದಲು ಅಸಮಾಧಾನ ಮೂಡಿಸಲಾಯಿತು ಮತ್ತು ಈಗ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ. ಇರಾನ್‌ ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದರೂ, ಅದು ಇನ್ನು ಕೇವಲ ೨-೩ ದಿನಗಳ ಕಾಲ ಮಾತ್ರ ಉಳಿಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ ಶಕ್ತಿಯ ಮುಂದೆ ಇರಾನ್‌ ನಿಲ್ಲಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಇರಾನ್‌ ಬಳಿ ವಾಯುಪಡೆ ಇಲ್ಲ, ಯುದ್ಧ ವಿಮಾನಗಳಿಲ್ಲ ಮತ್ತು ವಾಯು ರಕ್ಷಣಾ ವ್ಯವಸ್ಥೆಯೂ ಇಲ್ಲ. ಅದರ ಬಳಿ ಕೇವಲ ಕ್ಷಿಪಣಿಗಳಿವೆ. ಅವುಗಳ ಸಂಗ್ರಹ ಮುಗಿದ ನಂತರ ಇರಾನ್‌ ಶಕ್ತಿಹೀನವಾಗುವುದು ಖಚಿತ. ಅದಕ್ಕೆ ಬಹಿರಂಗವಾಗಿ ಸಹಾಯ ಮಾಡಲು ಯಾರೂ ಮುಂದೆ ಬಂದಿಲ್ಲ. ಹೀಗಾಗಿ ಅದರ ಸೋಲು ನಿಶ್ಚಿತವಾಗಿದೆ. ಜೂನ್‌ ತಿಂಗಳಿನಲ್ಲಾದ ಆಕ್ರಮಣದ ಸಮಯದಲ್ಲಿಯೂ ಅದು ಕೆಲವು ಕ್ಷಿಪಣಿಗಳನ್ನು ಹಾರಿಸಿದ ನಂತರ ಹಿಂಜರಿದಿತ್ತು, ಎಂಬುದನ್ನು ಮರೆಯಲಾಗದು, ಇರಾನ್‌ ಸೋಲೊಪ್ಪಿಕೊಂಡ ನಂತರ, ಸ್ಥಳೀಯ ಜನರು ಅಮೆರಿಕದ ಆಂತರಿಕ ಆದೇಶದ ಮೇರೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರತಿಭಟನೆ ಆರಂಭಿಸಬಹುದು. ಆಗ ಅಲ್ಲಿ ೧೯೭೯ರ ಇಸ್ಲಾಮಿಕ್‌ ಕ್ರಾಂತಿಗಿಂತ ಮುಂಚೆ ಇದ್ದ ರಾಜಪ್ರಭುತ್ವ ಜಾರಿಗೆ ಬರಬಹುದು ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣವಾಗಬಹುದು. ಏನೇ ಆದರೂ ಅವರು ಅಮೆರಿಕದ ಕೈಗೊಂಬೆಗಳಾಗಿರುತ್ತಾರೆ ಎಂಬುದು ಸ್ಪಷ್ಟ. ಇದಕ್ಕಾಗಿಯೇ ಈಗಿನ ದಾಳಿಗಳು ಮುಂದುವರಿದಿದ್ದು ಇದು ಅದಕ್ಕೆ ಲಭಿಸಿದ ಕೊನೆಯ ಯಶಸ್ಸಾಗುವುದು.

ಟ್ರಂಪ್‌ ದಬ್ಬಾಳಿಕೆಯ ಮುಂದೆ ಮೌನವಾದ ಜಗತ್ತು !

ಕೆಲವು ವಾರಗಳ ಹಿಂದೆ ಅಮೆರಿಕ ತನ್ನ ನೆರೆಯ ದ್ವೀಪ ರಾಷ್ಟ್ರವಾದ ವೆನೆಜುವೆಲಾದ ಮೇಲೆ ಮಾದಕ ದ್ರವ್ಯ ಕಳ್ಳಸಾಗಣೆ ಆರೋಪ ಹೊರಿಸಿ ದಾಳಿ ಮಾಡಿತ್ತು. ಅಲ್ಲಿನ ಅಧ್ಯಕ್ಷ ಮಡೂರೊ ಮತ್ತು ಅವರ ಪತ್ನಿಯನ್ನು ಬಂಧಿಸಿ ಅಮೆರಿಕಕ್ಕೆ ಕರೆತಂದು ವಿಚಾರಣೆ ಆರಂಭಿಸಿದೆ. ನಂತರ ವೆನೆಜುವೆಲಾದ ತೈಲ ನಿಕ್ಷೇಪಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಇದು ಸಂಪೂರ್ಣ ದಬ್ಬಾಳಿಕೆಯಾಗಿತ್ತು. ಈ ದಬ್ಬಾಳಿಕೆಯನ್ನು ಕೇವಲ ಮೌಖಿಕವಾಗಿ ವಿರೋಧಿಸುವುದನ್ನು ಬಿಟ್ಟರೆ ಯಾವ ದೇಶವೂ ಅಮೆರಿಕವನ್ನು ಎದುರಿಸಲಿಲ್ಲ. ಇರಾನ್‌ ದಾಳಿಯ ನಂತರವೂ ಇದೇ ಪರಿಸ್ಥಿತಿ ಕಾಣಿಸುತ್ತಿದೆ. ಯುರೋಪಿಯನ್‌ ದೇಶಗಳು ವಿರೋಧಿಸಿದರೂ ಅಮೆರಿಕದ ಮೇಲೆ ಒತ್ತಡ ಹೇರಲು ಅವುಗಳಿಂದ ಸಾಧ್ಯವಾಗುತ್ತಿಲ್ಲ. ರಷ್ಯಾ ಮತ್ತು ಚೀನಾ ಕೂಡ ಇದೇ ನಿಲುವನ್ನು ತಳೆದಿವೆ. ಇದರಿಂದ ತುಘಲಕ್‌ ಮನಸ್ಥಿತಿಯ ಟ್ರಂಪ್‌ ಇಡೀ ಜಗತ್ತನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಮತ್ತು ತಮಗೆ ಬೇಕಾದಂತೆ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಯಾರೂ ಅವರನ್ನು ವಿರೋಧಿಸಲು ಸಾಧ್ಯವಾಗುತ್ತಿಲ್ಲ ಎಂಬುದು ವಾಸ್ತವ. ಟ್ರಂಪ್‌ ಅವರಿಗೆ ಜಗತ್ತಿನ ತೈಲ ನಿಕ್ಷೇಪಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶವಿದೆ ಎಂಬುದು ತಿಳಿಯುತ್ತದೆ. ರಷ್ಯಾದ ಬಳಿಯೂ ದೊಡ್ಡ ತೈಲ ನಿಕ್ಷೇಪವಿದೆ. ಉಕ್ರೇನ್‌ ಯುದ್ಧದ ನಂತರ ಅಮೆರಿಕ ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿದ್ದರಿಂದ, ಭಾರತ ಮತ್ತು ಚೀನಾವನ್ನು ಹೊರತುಪಡಿಸಿ ಯಾರೂ ಅವರಿಂದ ತೈಲ ಖರೀದಿಸುತ್ತಿಲ್ಲ. ಚೀನಾದ ಮೇಲೆ ಒತ್ತಡ ಹೇರುವುದು ಸಾಧ್ಯವಿಲ್ಲದ ಕಾರಣ, ಟ್ರಂಪ್‌ ಭಾರತದ ಮೇಲೆ ದಬ್ಬಾಳಿಕೆ ನಡೆಸಿ ತೈಲ ಖರೀದಿಯನ್ನು ನಿಲ್ಲಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಭಾರತ ಇದಕ್ಕೆ ಸೊಪ್ಪು ಹಾಕದಿದ್ದಾಗ, ಆಮದು ಸುಂಕ ಹೆಚ್ಚಿಸಿ ಒತ್ತಡ ಹೇರಲು ಪ್ರಯತ್ನಿಸಿದರು. ಆದರೆ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಆ ಹೆಚ್ಚುವರಿ ಸುಂಕವನ್ನು ಕಾನೂನುಬಾಹಿರ ಎಂದು ಘೋಷಿಸಿ ಟ್ರಂಪ್‌ ಅವರಿಗೆ ಆಘಾತ ನೀಡಿದೆ. ಆದರೂ ಟ್ರಂಪ್‌ ಸುಧಾರಿಸಿಲ್ಲ. ಏನೇ ಆದರೂ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಲಿದೆ. ವೆನೆಜುವೆಲಾದಿಂದ ತೈಲ ಖರೀದಿಸುವಂತೆ ಟ್ರಂಪ್‌ ಭಾರತದ ಮೇಲೆ ಒತ್ತಡ ಹೇರಿದ್ದರೂ ಭಾರತ ಅದನ್ನು ಒಪ್ಪಿಲ್ಲ. ಒಟ್ಟಾರೆಯಾಗಿ ಇದೆಲ್ಲವೂ ತೈಲಕ್ಕಾಗಿ ನಡೆಯುತ್ತಿರುವ ಹಠಾತ್ತನೆಯ ಹೋರಾಟ ಎಂಬುದು ವಾಸ್ತವ.

ಆಪತ್ಕಾಲಕ್ಕೆ ಸಿದ್ಧರಾಗಿ!

ಈಗಿನ ಯುದ್ಧವು ೨-೩ ದಿನಗಳಲ್ಲಿ ಕೊನೆಗೊಳ್ಳುವ ಲಕ್ಷಣಗಳಿರುವುದರಿಂದ ವಿಶ್ವದ ಮೇಲೆ ವಿಶೇಷ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ. ತೈಲ ಬೆಲೆ ಏರಿಕೆಯಿಂದ ಹಣದುಬ್ಬರ ಹೆಚ್ಚಾಗುವ ಸಾಧ್ಯತೆಯೂ ಸದ್ಯಕ್ಕೆ ಕಡಿಮೆ. ಇತರ ದೇಶಗಳು ಇರಾನ್‌ ಸಹಾಯಕ್ಕೆ ಧಾವಿಸಿ ಯುದ್ಧದ ಸ್ವರೂಪ ವ್ಯಾಪಕವಾದರೆ ಮಾತ್ರ ಮೂರನೇ ಮಹಾಯುದ್ಧ ಮತ್ತು ಅದರ ಪರಿಣಾಮಗಳು ಜಗತ್ತಿನ ಮೇಲೆ ಉಂಟಾಗುತ್ತವೆ. ಆದರೆ ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ. ಒಂದು ವಿಷಯ ಮಾತ್ರ ಖಚಿತ, ಈಗ ಜಗತ್ತಿನ ರಾಜಕೀಯ ಸ್ಥಿತಿ ನಿರೀಕ್ಷೆಗೂ ಮೀರಿ ಬದಲಾಗಿದೆ. ಜಗತ್ತಿನಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು, ಆದ್ದರಿಂದ ಮುಂಬರುವ ಆಪತ್ಕಾಲವನ್ನು ಎದುರಿಸಲು ಪ್ರತಿಯೊಬ್ಬರೂ ಎಚ್ಚರದಿಂದ ಇರುವುದು, ಆರ್ಥಿಕವಾಗಿ ಸಿದ್ಧತೆ ಮಾಡಿಕೊಳ್ಳುವುದು ಮತ್ತು ಅದರೊಂದಿಗೆ ಈಶ್ವರೀ ಅನುಸಂಧಾನದಲ್ಲಿರುವುದು ಅವಶ್ಯಕವಾಗಿದೆ!

ಮೂರನೇ ಮಹಾಯುದ್ಧ ಇನ್ನೂ ಪ್ರಾರಂಭವಾಗದಿದ್ದರೂ, ಅದು ಸಂಭವಿಸುವುದು ವಿಧಿಲಿಖಿತವಾಗಿದೆ. ಆದ್ದರಿಂದ ತಮ್ಮ ರಕ್ಷಣೆಯಾಗಲು ಸಾಧನೆ ಮಾಡಿ!