ಸರ್ವೋಚ್ಚ ನ್ಯಾಯಾಲಯದಿಂದ ಎನ್.ಸಿ.ಇ.ಆರ್.ಟಿ. ಪುಸ್ತಕದ ಮೇಲೆ ನಿಷೇಧ!

ಶಾಲಾ ಪುಸ್ತಕದಲ್ಲಿ ನ್ಯಾಯಾಂಗದ ಭ್ರಷ್ಟಾಚಾರದ ಕುರಿತು ಪಾಠ

(‘ಎನ್.ಸಿ.ಇ.ಆರ್.ಟಿ.’ ಎಂದರೆ ‘ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್’ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ)

ನವ ದೆಹಲಿ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್.ಸಿ.ಇ.ಆರ್.ಟಿ.ಯು) 8ನೇ ತರಗತಿಯ ಹೊಸ ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರದ ಕುರಿತು ಒಂದು ಪಾಠವನ್ನು ಸೇರಿಸಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಶಾಲಾ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಮತ್ತು ಎನ್.ಸಿ.ಇ.ಆರ್.ಟಿ. ನಿರ್ದೇಶಕರಿಗೆ ಈ ಸಂದರ್ಭದಲ್ಲಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ‘ಅವರ ವಿರುದ್ಧ ನ್ಯಾಯಾಂಗ ನಿಂದನೆ ಹಾಗೂ ಇತರ ಕಾನೂನು ನಿಬಂಧನೆಗಳ ಅಡಿಯಲ್ಲಿ ಕ್ರಮ ಏಕೆ ತೆಗೆದುಕೊಳ್ಳಬಾರದು?’, ಎಂದು ನ್ಯಾಯಾಲಯ ಪ್ರಶ್ನಿಸಿದೆ. ಹಾಗೆಯೇ ನ್ಯಾಯಾಲಯದಿಂದ ಆಕ್ಷೇಪಾರ್ಹ ಬರಹಗಳನ್ನು ಹೊಂದಿರುವ ಪುಸ್ತಕದ ಪ್ರಕಟಣೆ, ಮರುಮುದ್ರಣ ಹಾಗೂ ಡಿಜಿಟಲ್ ಪ್ರಸಾರದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಯಾವುದೇ ರೂಪದಲ್ಲಿ ಬರಹದ ಪ್ರಸಾರವಾದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ‘ಈ ಪುಸ್ತಕವನ್ನು ಮುದ್ರಿತ ಅಥವಾ ಡಿಜಿಟಲ್ ರೂಪದಲ್ಲಿ ವಿತರಿಸುವ ಯಾವುದೇ ಪ್ರಯತ್ನವನ್ನು ನ್ಯಾಯಾಲಯದ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆ ಎಂದು ಪರಿಗಣಿಸಲಾಗುವುದು’, ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ‘ಮೇಲ್ನೋಟಕ್ಕೆ ಈ ಪ್ರಕಟಣೆಯು ನ್ಯಾಯಾಂಗಕ್ಕೆ ಕಳಂಕ ತರುವ ಉದ್ದೇಶದಿಂದಲೇ ಮಾಡಲಾದ ಕೃತ್ಯ ಎಂದು ಸಾಬೀತಾದರೆ, ಅದು ಗಂಭೀರ ದುರ್ನಡತೆಯಾಗಿದ್ದು ಕ್ರಿಮಿನಲ್ ನಿಂದನೆಯ ವ್ಯಾಪ್ತಿಗೆ ಬರಬಹುದು’, ಎಂದು ನ್ಯಾಯಾಲಯ ಹೇಳಿದೆ. ಮಾರ್ಚ್ 11 ರಂದು ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಎನ್.ಸಿ.ಇ.ಆರ್.ಟಿ. ಕ್ಷಮಾಪಣೆ

ಎನ್.ಸಿ.ಇ.ಆರ್.ಟಿ. ಈ ಪಾಠದ ಪ್ರಕರಣದಲ್ಲಿ ಕ್ಷಮೆಯಾಚಿಸಿದೆ. ಪಠ್ಯಪುಸ್ತಕವನ್ನು ಪುನರ್ ಲೇಖನ ಮಾಡಲು ಹಾಗೂ ಈ ಪುಸ್ತಕದ ವಿತರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಎನ್.ಸಿ.ಇ.ಆರ್.ಟಿ. ತಿಳಿಸಿದೆ. ‘ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ರಕ್ಷಕ ಮತ್ತು ಮೂಲಭೂತ ಹಕ್ಕುಗಳ ಸಂರಕ್ಷಕವಾಗಿದೆ,’ ಎಂದು ಎನ್.ಸಿ.ಇ.ಆರ್.ಟಿ.ಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರ ನೇತೃತ್ವದ ಪೀಠವು, ಎನ್.ಸಿ.ಇ.ಆರ್.ಟಿ. ವ್ಯಕ್ತಪಡಿಸಿದ ಸಾರ್ವಜನಿಕ ಕ್ಷಮೆಯು ಪ್ರಾಮಾಣಿಕವಾಗಿದೆಯೇ ಅಥವಾ ಕ್ರಿಮಿನಲ್ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳುವ ಪ್ರಯತ್ನವೇ?, ಎಂಬುದನ್ನು ಪರೀಕ್ಷಿಸಲಾಗುವುದು ಎಂದು ಹೇಳಿದೆ.

ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಲು ಆದೇಶ

ಪುಸ್ತಕದ ಎಲ್ಲಾ ಮುದ್ರಿತ ಪ್ರತಿಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳ ಸಮನ್ವಯದೊಂದಿಗೆ ಎನ್.ಸಿ.ಇ.ಆರ್.ಟಿ.ಗೆ ಈ ಸೂಚನೆ ನೀಡಲಾಗಿದ್ದು, ಪುಸ್ತಕದ ಎಲ್ಲಾ ಪ್ರತಿಗಳು ಚಿಲ್ಲರೆ ಮಾರಾಟಗಾರರ ಬಳಿ ಇರಲಿ ಅಥವಾ ಶಾಲೆಗಳಲ್ಲಿರಲಿ, ಅಥವಾ ಡಿಜಿಟಲ್ ರೂಪದಲ್ಲಿ ಲಭ್ಯವಿರಲಿ, ಅವುಗಳನ್ನು ತಕ್ಷಣವೇ ಸಾರ್ವಜನಿಕ ಪ್ರವೇಶದಿಂದ ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ತಿಳಿಸಲಾಗಿದೆ. ಎನ್.ಸಿ.ಇ.ಆರ್.ಟಿ. ನಿರ್ದೇಶಕರಿಗೆ ಶಾಲೆಗಳಿಗೆ ಕಳುಹಿಸಲಾದ ಎಲ್ಲಾ ಪ್ರತಿಗಳ ತಕ್ಷಣದ ಮುಟ್ಟುಗೋಲನ್ನು ಖಚಿತಪಡಿಸಿ ಅನುಸರಣಾ ವರದಿಯನ್ನು ಸಲ್ಲಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು ಸಂಬಂಧಿತ ಪುಸ್ತಕದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಯಾವುದೇ ಬೋಧನೆ ಮಾಡಬಾರದೆಂದು ಸಹ ನಿರ್ದೇಶನ ನೀಡಿದೆ.

ಎಲ್ಲಾ ರಾಜ್ಯಗಳ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಎರಡು ವಾರಗಳ ಒಳಗೆ ಅನುಸರಣಾ ವರದಿಯನ್ನು ಸಲ್ಲಿಸಲು ಆದೇಶಿಸಲಾಗಿದೆ. ನ್ಯಾಯಾಲಯವು ಎನ್.ಸಿ.ಇ.ಆರ್.ಟಿ. ನಿರ್ದೇಶಕರಿಗೆ ಆಕ್ಷೇಪಾರ್ಹ ಅಧ್ಯಾಯದ ಸಿದ್ಧತೆಯಲ್ಲಿ ಭಾಗಿಯಾದ ವ್ಯಕ್ತಿಗಳ ಹೆಸರುಗಳು ಮತ್ತು ಅವರ ಅರ್ಹತೆಯನ್ನು ಸಲ್ಲಿಸಲು ನಿರ್ದೇಶಿಸಿದೆ. ಹಾಗೆಯೇ ಯಾವ ಸಭೆಯಲ್ಲಿ ಅಧ್ಯಾಯದ ಬಗ್ಗೆ ಚರ್ಚಿಸಿ ಅದನ್ನು ಅಂತಿಮಗೊಳಿಸಲಾಯಿತೋ, ಆ ಸಭೆಯ ಮೂಲ ನಡಾವಳಿಗಳನ್ನು ಮುಂದಿನ ವಿಚಾರಣೆಯ ಸಮಯದಲ್ಲಿ ಸಲ್ಲಿಸಲು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರ ನೇತೃತ್ವದ ಪೀಠವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಈ ಆದೇಶ ನೀಡಿದೆ.

ಸರ್ವೋಚ್ಚ ನ್ಯಾಯಾಲಯದ ಗಂಭೀರ ಟಿಪ್ಪಣಿ

ಅಧ್ಯಾಯದಲ್ಲಿ ನ್ಯಾಯಾಧೀಶರ ವಿರುದ್ಧ ಸ್ವೀಕರಿಸಲಾದ ದೂರುಗಳ ಸಂಖ್ಯೆಯನ್ನು ಉಲ್ಲೇಖಿಸುವಾಗ, ಅದರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬಂತೆ ಬಿಂಬಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಾಗೆಯೇ ಮಾಜಿ ನ್ಯಾಯಮೂರ್ತಿ ಭೂಷಣ್ ಗವಾಯಿ ಅವರ ಟಿಪ್ಪಣಿಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ, ಇದರಿಂದ ಸ್ವತಃ ಮುಖ್ಯ ನ್ಯಾಯಮೂರ್ತಿಗಳೇ ಭ್ರಷ್ಟಾಚಾರ ನಡೆಯುತ್ತಿರುವುದು ಒಪ್ಪಿಕೊಂಡಿದ್ದಾರೆ ಎಂಬ ಭ್ರಮೆ ಮೂಡುತ್ತದೆ. ಪೀಠವು ಎನ್.ಸಿ.ಇ.ಆರ್.ಟಿ. ನಿರ್ದೇಶಕರಿಂದ ಸರ್ವೋಚ್ಚ ನ್ಯಾಯಾಲಯದ ಸೆಕ್ರೆಟರಿ ಜನರಲ್ ಅವರಿಗೆ ಪುಸ್ತಕದ ಬರಹವನ್ನು ಬೆಂಬಲಿಸಿ ಬರೆಯಲಾದ ಪತ್ರದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದು, ಅದನ್ನು ಅವಮಾನಕಾರಿ ಮತ್ತು ನಿರ್ಲಕ್ಷ್ಯತನದ್ದು ಎಂದು ಕರೆದಿದೆ.

ನ್ಯಾಯಾಂಗದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಅವರು, ಇದು ಒಂದು ಸುಯೋಜಿತ ಪ್ರಯತ್ನದಂತೆ ಕಾಣುತ್ತಿದೆ, ಇದರ ಉದ್ದೇಶ ನ್ಯಾಯಾಂಗದ ಸಾಂಸ್ಥಿಕ ಅಧಿಕಾರವನ್ನು ಕಡಿಮೆ ಅಂದಾಜು ಮಾಡುವುದು ಮತ್ತು ಅದರ ಪ್ರತಿಷ್ಠೆಗೆ ಧಕ್ಕೆ ತರುವುದಾಗಿದೆ ಎಂದು ಹೇಳಿದ್ದಾರೆ. ಇದನ್ನು ಅಡೆತಡೆಯಿಲ್ಲದೆ ಪ್ರಕಟಿಸಲು ಬಿಟ್ಟರೆ, ವಿಶೇಷವಾಗಿ ಪ್ರಭಾವಕ್ಕೊಳಗಾಗುವ ಯುವ ಮನಸ್ಸುಗಳಲ್ಲಿ ನ್ಯಾಯಾಂಗದ ವರ್ಚಸ್ಸು ಕಡಿಮೆಯಾಗಬಹುದು.

ನ್ಯಾಯೋಚಿತ ಟೀಕೆಯನ್ನು ಹತ್ತಿಕ್ಕುವ ಪ್ರಯತ್ನವಲ್ಲ! – ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟನೆ

ಅಧ್ಯಾಯದಲ್ಲಿ ನ್ಯಾಯಾಂಗವು ಕೈಗೊಂಡಿರುವ ಐತಿಹಾಸಿಕ ಮತ್ತು ಪ್ರಶಂಸನೀಯ ಹೆಜ್ಜೆಗಳ ಬಗ್ಗೆ ಹಾಗೂ ಪ್ರಜಾಪ್ರಭುತ್ವದ ರಚನೆಯನ್ನು ಬಲಪಡಿಸುವಲ್ಲಿ ಅದರ ಕೊಡುಗೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ನಮೂದಿಸಿದೆ. ಈ ಮೌನವು ವಿಶೇಷವಾಗಿ ಆಕ್ಷೇಪಾರ್ಹವಾಗಿದೆ. ಈ ನ್ಯಾಯಾಲಯವು ಅನೇಕ ಉನ್ನತ ಅಧಿಕಾರಿಗಳಿಗೆ ಭ್ರಷ್ಟ ನಡವಳಿಕೆ ಮತ್ತು ಸಾರ್ವಜನಿಕ ನಿಧಿಯ ದುರುಪಯೋಗಕ್ಕಾಗಿ ಕಠಿಣವಾಗಿ ತರಾಟೆ ತೆಗೆದುಕೊಂಡಿದೆ. ಆದಾಗ್ಯೂ, ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಕೈಗೊಂಡ ಈ ಪ್ರಕ್ರಿಯೆಯ ಉದ್ದೇಶ ಯಾವುದೇ ನ್ಯಾಯೋಚಿತ ಟೀಕೆಯನ್ನು ಹತ್ತಿಕ್ಕುವುದು ಅಥವಾ ನ್ಯಾಯಾಂಗ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳ ವಿಮರ್ಶೆಯ ಹಕ್ಕನ್ನು ಬಳಸದಂತೆ ಯಾರನ್ನೂ ತಡೆಯುವುದಲ್ಲ ಎಂದು ಸ್ಪಷ್ಟಪಡಿಸಿದೆ.