
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ‘ಲಷ್ಕರ್-ಎ-ತೊಯ್ಬಾ’ ಜಿಹಾದಿ ಭಯೋತ್ಪಾದಕ ಸಂಘಟನೆಯಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಈ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಅವನ ಆಪ್ತರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ. ಈ ಕುರಿತು ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಲಭ್ಯವಾಗಿದೆ. ಈ ಬಿರುಕಿನಿಂದಾಗಿ ಪಾಕಿಸ್ತಾನದ ಆಂತರಿಕ ಭದ್ರತೆಗೆ ಹೊಸ ಸವಾಲು ಎದುರಾಗಬಹುದು. ಭಾರತದ ಭದ್ರತಾ ಸಂಸ್ಥೆಗಳು ಈ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇರಿಸಿವೆ ಎಂದು ವರದಿಯಾಗಿದೆ.
೧. ಬಿರುಕಿನ ಹಿಂದೆ ‘ಆಪರೇಷನ್ ಸಿಂದೂರ್’ ಪರಿಣಾಮ !
ಲಷ್ಕರ್-ಎ-ತೊಯ್ಬಾ ಇದುವರೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ನ ನೀತಿಯಂತೆಯೇ ಕೆಲಸ ಮಾಡುತ್ತಾ ಬಂದಿತ್ತು. ಇತ್ತೀಚಿನ ದಿನಗಳಲ್ಲಿ ಈ ಸಂಘಟನೆಯಲ್ಲಿ ಆಂತರಿಕ ಒತ್ತಡ ಹೆಚ್ಚಾಗತೊಡಗಿದೆ. ಕಳೆದ ತಿಂಗಳು ತೆಗೆದುಕೊಳ್ಳಲಾದ ಕೆಲವು ನಿರ್ಧಾರಗಳಿಂದಾಗಿ ಸಂಘಟನೆಯಲ್ಲಿನ ಕೆಲವು ಭಯೋತ್ಪಾದಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಸಂಘಟನೆಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಎರಡು ಗುಂಪುಗಳಾಗಿವೆ ಎಂದು ಭಾರತೀಯ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಭಯೋತ್ಪಾದಕ ಸಂಘಟನೆಯಲ್ಲಿನ ಈ ಆಂತರಿಕ ಅಸಮಾಧಾನವು ಭಾರತದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಪರಿಣಾಮವಾಗಿದೆ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

೨. ‘ಆಪರೇಷನ್ ಸಿಂದೂರ್’ ವೇಳೆ ಪಾಕ್ ಸೈನ್ಯದಿಂದ ರಕ್ಷಣೆ ಸಿಗಲಿಲ್ಲ !
ಆಪರೇಷನ್ ಸಿಂದೂರ್ ನಿಂದಾಗಿ ಲಷ್ಕರ್-ಎ-ತೊಯ್ಬಾದ ಮೂಲಭೂತ ಸೌಕರ್ಯ ಮತ್ತು ಜಾಲಕ್ಕೆ ಭಾರಿ ಹಾನಿಯಾಗಿದೆ. ಇದರಿಂದ ಸಂಘಟನೆಯು ಚೇತರಿಸಿಕೊಳ್ಳುವುದು ಕಷ್ಟಕರವಾಗಿದೆ ಎಂದು ಹೇಳಲಾಗುತ್ತಿದೆ. ಅನೇಕ ಭಯೋತ್ಪಾದಕ ಕಮಾಂಡರ್ ಗಳು ಮತ್ತು ಕಾರ್ಯಕರ್ತರು ಈಗ ಐ.ಎಸ್.ಐ. ಮತ್ತು ಪಾಕಿಸ್ತಾನಿ ಸೈನ್ಯದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಭಾರತದ ಈ ಕಾರ್ಯಾಚರಣೆಯ ವೇಳೆ ಪಾಕಿಸ್ತಾನಿ ಸೈನ್ಯವು ನಮಗೆ ಸಾಕಷ್ಟು ರಕ್ಷಣೆ ನೀಡಲಿಲ್ಲ ಎಂಬ ಭಾವನೆ ಭಯೋತ್ಪಾದಕರಲ್ಲಿ ಮೂಡಿದೆ ಎಂದು ಭಾರತೀಯ ಗುಪ್ತಚರ ಅಧಿಕಾರಿ ತಿಳಿಸಿದ್ದಾರೆ.
೩. ಪಾಕ್ ಸೈನ್ಯಕ್ಕೆ ಸಹಾಯ ಮಾಡುವುದಿಲ್ಲ !
ಕಳೆದ ಕೆಲವು ವರ್ಷಗಳಿಂದ ‘ಬಲೋಚ್ ನ್ಯಾಷನಲ್ ಆರ್ಮಿ’ ಮತ್ತು ‘ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಸಂಘಟನೆಗಳು ಪಾಕಿಸ್ತಾನದಲ್ಲಿ ಭಾರಿ ಭಯದ ವಾತಾವರಣ ನಿರ್ಮಿಸಿವೆ. ಇವುಗಳನ್ನು ಹತ್ತಿಕ್ಕಲು ಪಾಕ್ ಸರಕಾರವು ಲಷ್ಕರ್-ಎ-ತೊಯ್ಬಾದ ಸಹಾಯ ಕೋರಿತ್ತು; ಆದರೆ ಸಂಘಟನೆಯ ಒಂದು ದೊಡ್ಡ ಗುಂಪು ಈ ನಿರ್ಧಾರವನ್ನು ಖಡಾಖಂಡಿತವಾಗಿ ವಿರೋಧಿಸಿದೆ. ಭಾರತೀಯ ಗುಪ್ತಚರ ಸಂಸ್ಥೆಯ ಅಧಿಕಾರಿಗಳ ಪ್ರಕಾರ, ಪಾಕ್ ಸರಕಾರವು ಪ್ರಸ್ತುತ ಚೀನಾ ಮತ್ತು ಪಾಶ್ಚಿಮಾತ್ಯ ದೇಶಗಳ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಅಪರೂಪದ ಖನಿಜಗಳ ಮೇಲೆ ಚೀನಾ ಸೇರಿದಂತೆ ಅಮೆರಿಕದ ಕಣ್ಣೂ ಬಿದ್ದಿದೆ. ಈ ಭಾಗದಲ್ಲಿನ ‘ಬಲೋಚ್ ನ್ಯಾಷನಲ್ ಆರ್ಮಿ’ ಮತ್ತು ‘ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್’ ಈ ಎರಡು ಸಂಘಟನೆಗಳು ಪಾಕ್ ಸರಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಯಾವುದೇ ಪರಿಸ್ಥಿತಿಯಲ್ಲೂ ತಮ್ಮ ಪ್ರಾಂತ್ಯದ ಅಮೂಲ್ಯ ಲೋಹಗಳನ್ನು ವಿದೇಶಗಳಿಗೆ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಅವು ನಿರ್ಧರಿಸಿವೆ.
೪. ನಮ್ಮವರ ವಿರುದ್ಧವೇ ಏಕೆ ಹೋರಾಡಬೇಕು? – ಪಾಕ್ ಸರಕಾರಕ್ಕೆ ತೊಯ್ಬಾ ಭಯೋತ್ಪಾದಕರ ಪ್ರಶ್ನೆ
‘ಚೀನಾ ಮತ್ತು ಪಾಶ್ಚಿಮಾತ್ಯ ದೇಶಗಳ ಹಿತರಕ್ಷಣೆಗಾಗಿ ನಾವು ನಮ್ಮವರ ವಿರುದ್ಧವೇ (ಟಿಟಿಪಿ ಮತ್ತು ಬಲೋಚ್ ಆರ್ಮಿ) ಏಕೆ ಹೋರಾಡಬೇಕು?’ ಎಂಬ ಪ್ರಶ್ನೆಯನ್ನು ಲಷ್ಕರ್-ಎ-ತೊಯ್ಬಾದ ಅನೇಕರು ಪಾಕ್ ಸರಕಾರಕ್ಕೆ ಕೇಳಲಾರಂಭಿಸಿದ್ದಾರೆ. ‘ನಮ್ಮ ಸಂಘಟನೆ ಸ್ಥಾಪನೆಯಾದಾಗಿನಿಂದ ಯಾವಾಗಲೂ ತಾಲಿಬಾನ್ ಗೆ ಬಹಿರಂಗ ಬೆಂಬಲ ನೀಡಿದ್ದೇವೆ. ಪಾಕ್ ಸೈನ್ಯವು ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಪರ ಗುಂಪುಗಳ ವಿರುದ್ಧ ಆರಂಭಿಸಿರುವ ಕ್ರಮವನ್ನು ನಾವು ಸಹಿಸುವುದಿಲ್ಲ’ ಎಂಬ ಎಚ್ಚರಿಕೆಯನ್ನೂ ಈ ಸಂಘಟನೆಯ ಒಂದು ಗುಂಪು ನೀಡಿದೆ. ‘ನಾವೆಲ್ಲರೂ ಒಗ್ಗೂಡಿ ಕೇವಲ ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳ ವಿರುದ್ಧ ಹೋರಾಡಬೇಕು’ ಎಂಬುದು ಅವರ ವಾದವಾಗಿದೆ. ಈ ಹಿಂದೆ ಸಂಘಟನೆಯೊಳಗಿನ ವಿವಾದವನ್ನು ಮುಚ್ಚಿಡಲಾಗುತ್ತಿತ್ತು; ಆದರೆ ಈಗ ಅದು ಬಹಿರಂಗವಾಗಿ ವ್ಯಕ್ತವಾಗುತ್ತಿರುವುದರಿಂದ ಪಾಕ್ ಸರಕಾರದ ಆತಂಕ ಇನ್ನಷ್ಟು ಹೆಚ್ಚಾಗಿದೆ.
೫. ಪಾಕಿಸ್ತಾನ ನಮ್ಮನ್ನು ಬಳಸಿಕೊಂಡಿತು ! – ಲಷ್ಕರ್ ಕಮಾಂಡರ್ ಮಹಮ್ಮದ್ ಅಶ್ಫಾಕ್ ರಾಣಾ
ಲಷ್ಕರ್-ಎ-ತೊಯ್ಬಾ ಕಮಾಂಡರ್ ಮಹಮ್ಮದ್ ಅಶ್ಫಾಕ್ ರಾಣಾ ಎಂಬಾತನ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ಟೀಕಿಸಲಾಗಿದೆ. ‘ಸರಕಾರ ಮತ್ತು ಸೈನ್ಯ ನಮ್ಮನ್ನು ಕೇವಲ ಸ್ವಾರ್ಥಕ್ಕಾಗಿ ಬಳಸಿಕೊಂಡಿವೆ. ಸಂಕಷ್ಟದ ಸಮಯದಲ್ಲಿ ಅವರು ನಮ್ಮನ್ನು ರಕ್ಷಿಸಲು ವಿಫಲರಾದರು. ಪಾಕಿಸ್ತಾನವು ಪ್ರಸ್ತುತ ಸಾಲದ ಸುಳಿಯಲ್ಲಿದೆ. ಪಡೆದ ಸಾಲದಲ್ಲಿ ಅರ್ಧದಷ್ಟನ್ನಾದರೂ ಭ್ರಷ್ಟಾಚಾರಕ್ಕೆ ಬಲಿಯಾಗದಂತೆ ಸರಿಯಾದ ಕೆಲಸಕ್ಕೆ ಬಳಸಿದ್ದರೆ, ನಮ್ಮ ದೇಶ ಪ್ರಗತಿ ಹೊಂದುತ್ತಿತ್ತು’ ಎಂದು ಅಶ್ಫಾಕ್ ಹೇಳಿದ್ದಾನೆ.
ಒಂದು ವೇಳೆ ಅತೃಪ್ತ ಭಯೋತ್ಪಾದಕರು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನದಂತಹ ಸಂಘಟನೆಗಳನ್ನು ಸೇರಿಕೊಂಡರೆ, ಪಾಕಿಸ್ತಾನ ಸರಕಾರದ ಮುಂದೆ ಭಯೋತ್ಪಾದನೆಯ ದೊಡ್ಡ ಸವಾಲು ಎದುರಾಗಬಹುದು. ಇದರ ಪರಿಣಾಮ ಇಡೀ ದಕ್ಷಿಣ ಏಷ್ಯಾ ಪ್ರದೇಶದ ಭದ್ರತೆಯ ಮೇಲೂ ಉಂಟಾಗಬಹುದು. ಆದ್ದರಿಂದ ಲಷ್ಕರ್-ಎ-ತೊಯ್ಬಾದಲ್ಲಿನ ಒಡಕನ್ನು ತಡೆಯಲು ಪಾಕಿಸ್ತಾನ ಸರಕಾರವು ಯಾವ ಪ್ರಯತ್ನಗಳನ್ನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !