ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇ. 25 ರಷ್ಟು ಆಮದು ಸುಂಕ ಹೇರಿಕೆ! : Trump Iran Terrif

  • ಅಮೆರಿಕ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ

  • ವ್ಯಾಪಾರ ಮಾಡುವವರಲ್ಲಿ ಭಾರತವೂ ಸೇರಿದೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ ಡಿಸಿ (ಅಮೆರಿಕ) – ಇರಾನ್ ದೇಶದೊಂದಿಗೆ ಯಾರು ವ್ಯಾಪಾರ ಮಾಡುತ್ತಾರೋ, ಅವರು ಅಮೆರಿಕದೊಂದಿಗೆ ನಡೆಸುವ ವ್ಯಾಪಾರದ ಮೇಲೆ ಶೇ. 25 ರಷ್ಟು ಆಮದು ಸುಂಕವನ್ನು ವಿಧಿಸಲಾಗುವುದು ಎಂದು ಅಮೆರಿಕ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ನಿರ್ಧಾರವು ‘ತಕ್ಷಣದಿಂದಲೇ ಜಾರಿಗೆ ಬರಲಿದೆ’ ಎಂದು ಟ್ರಂಪ್ ಹೇಳಿದ್ದಾರೆ. ಆದರೆ, ಇನ್ನೊಂದೆಡೆ ಶ್ವೇತಭವನದಿಂದ ಈ ಸುಂಕದ ಬಗ್ಗೆ ಅಧಿಕೃತ ಆದೇಶವಿನ್ನೂ ಹೊರಬಿದ್ದಿಲ್ಲ.

ಅಮೆರಿಕ ಈಗಾಗಲೇ ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದೆ. ಇರಾನ್ ಜೊತೆ ವ್ಯಾಪಾರ ಮಾಡುವ ಪ್ರಮುಖ ದೇಶಗಳಲ್ಲಿ ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಭಾರತ ಸೇರಿವೆ. ಈ ಸುಂಕ ಜಾರಿಯಾದರೆ, ಈ ದೇಶಗಳ ಅಮೆರಿಕದೊಂದಿಗಿನ ವ್ಯಾಪಾರದ ಮೇಲೆ ಪರಿಣಾಮ ಬೀರಬಹುದು. ವಿಶ್ವಬ್ಯಾಂಕ್ ಅಂಕಿಅಂಶಗಳ ಪ್ರಕಾರ, ಇರಾನ್ 2022 ರ ವರ್ಷದಲ್ಲಿ 147 ದೇಶಗಳೊಂದಿಗೆ ವ್ಯಾಪಾರ ನಡೆಸಿತ್ತು.

ಇರಾನ್‌ನಲ್ಲಿನ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಇದುವರೆಗೆ 648 ಸಾವು!

ಇರಾನ್‌ನಲ್ಲಿ ಕಳೆದ 17 ದಿನಗಳಿಂದ ಸರಕಾರ ಮತ್ತು ಸರ್ವೋಚ್ಚ ನಾಯಕ ಅಯತೊಲ್ಲಾ ಖಾಮೇನಿ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆರ್ಥಿಕ ಬಿಕ್ಕಟ್ಟಿನಿಂದ ಆರಂಭವಾದ ಈ ಪ್ರತಿಭಟನೆಗಳು ಈಗ ಅಧಿಕಾರದ ವಿರುದ್ಧ ತಿರುಗಿವೆ. ನಾರ್ವೆಯ ಮಾನವ ಹಕ್ಕುಗಳ ಸಂಘಟನೆಯ ಪ್ರಕಾರ, ಪ್ರತಿಭಟನೆಗಳಲ್ಲಿ ಈವರೆಗೆ 648 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 9 ಅಪ್ರಾಪ್ತ ಮಕ್ಕಳೂ ಸೇರಿದ್ದಾರೆ. ಇಂಟರ್ನೆಟ್ ಸೇವೆ ಸ್ಥಗಿತಗೊಂಡಿರುವುದರಿಂದ ವಾಸ್ತವ ಪರಿಸ್ಥಿತಿ ತಿಳಿಯುತ್ತಿಲ್ಲ ಎಂದು ಸಂಘಟನೆ ಸ್ಪಷ್ಟಪಡಿಸಿದೆ. ಮೃತರ ಸಂಖ್ಯೆ 6 ಸಾವಿರಕ್ಕೆ ತಲುಪುವ ಭೀತಿ ವ್ಯಕ್ತವಾಗಿದೆ. ಇರಾನ್ ಸರಕಾರ ಪ್ರತಿಭಟನೆಯಲ್ಲಿ ಮೃತಪಟ್ಟವರ ಅಥವಾ ಗಾಯಗೊಂಡವರ ಅಧಿಕೃತ ಸಂಖ್ಯೆಯನ್ನು ಘೋಷಿಸಿಲ್ಲ.

ಇರಾನ್ ಅಪಾಯದ ಗೆರೆಯನ್ನು ದಾಟುತ್ತಿದೆ! – ಟ್ರಂಪ್

ಇರಾನ್ ಸರಕಾರವು ಪ್ರತಿಭಟನೆಯನ್ನು ಹತ್ತಿಕ್ಕಲು ಅಪಾಯದ ಗೆರೆಯನ್ನು ದಾಟುತ್ತಿದೆ ಎಂದು ಅಮೆರಿಕ ರಾಷ್ಟ್ರಾಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಅಮೆರಿಕ ಕಠಿಣ ಆಯ್ಕೆಗಳ ಬಗ್ಗೆ ಯೋಚಿಸುತ್ತಿದೆ. ಇರಾನ್ ಅಮೆರಿಕವನ್ನು ಸಂಪರ್ಕಿಸಿ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿದೆ. ಸಭೆಯನ್ನು ನಿಗದಿಪಡಿಸುವ ಕುರಿತು ಚರ್ಚೆ ನಡೆಯುತ್ತಿದೆ. ಆದಾಗ್ಯೂ, ಪರಿಸ್ಥಿತಿಯನ್ನು ನೋಡಿದರೆ ಇರಾನ್ ವಿರುದ್ಧ ಮೊದಲು ಕ್ರಮ ಕೈಗೊಳ್ಳಬೇಕಾಗಬಹುದು; ಏಕೆಂದರೆ ಮೃತರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಬಂಧನ ಪ್ರಕ್ರಿಯೆ ಮುಂದುವರಿಯುತ್ತಿದೆ.

ಭಾರತ-ಇರಾನ್ ವ್ಯಾಪಾರದ ಮಹತ್ವ ಎಷ್ಟು?

1. ಅಮೆರಿಕದ ‘OEC’ ಎಂದರೆ ಆರ್ಗನೈಸೇಶನ್ ಆಫ್ ಎಕನಾಮಿಕ್ ಕಾಂಪ್ಲೆಕ್ಸಿಟಿ ಸಂಸ್ಥೆಯ ಮಾಹಿತಿಯ ಪ್ರಕಾರ, 2024-25ರ ಹಣಕಾಸು ವರ್ಷದಲ್ಲಿ ಭಾರತ ಮತ್ತು ಇರಾನ್ ನಡುವೆ 1.68 ಬಿಲಿಯನ್ ಡಾಲರ್ ಅಂದರೆ ಸುಮಾರು 14 ರಿಂದ 15 ಸಾವಿರ ಕೋಟಿ ರೂಪಾಯಿ ವ್ಯಾಪಾರ ನಡೆದಿದೆ. ಇದರಲ್ಲಿ ಭಾರತವು ಹೆಚ್ಚಿನ ಮೌಲ್ಯದ ರಫ್ತು ಮಾಡಿದೆ.

2. ಭಾರತವು ಪ್ರಮುಖವಾಗಿ ಬಾಸ್‌ಮತಿ ಮತ್ತು ಇತರ ತಳಿಯ ಅಕ್ಕಿ, ಚಹಾ, ಕಾಫಿ, ಸಕ್ಕರೆ, ಔಷಧಿಗಳು ಮತ್ತು ರಾಸಾಯನಿಕಗಳು, ಬೇಳೆಕಾಳುಗಳು, ಭಾರೀ ಯಂತ್ರೋಪಕರಣಗಳು, ವಿದ್ಯುತ್ ಉಪಕರಣಗಳು ಹಾಗೂ ಆಭರಣಗಳನ್ನು ರಫ್ತು ಮಾಡಿದೆ.

3. ಇನ್ನೊಂದೆಡೆ ಇರಾನ್‌ನಿಂದ ಭಾರತವು ಒಣ ಹಣ್ಣುಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ಕೆಲವು ಖನಿಜಗಳು ಮತ್ತು ಗಾಜಿನ ವಸ್ತುಗಳನ್ನು ಆಮದು ಮಾಡಿಕೊಂಡಿದೆ.

4. ಭಾರತವು ಇತರ ದೇಶಗಳೊಂದಿಗೆ ನಡೆಸುವ ವ್ಯಾಪಾರಕ್ಕೆ ಹೋಲಿಸಿದರೆ, ಇರಾನ್ ಜೊತೆಗಿನ ವ್ಯಾಪಾರವು ತೀರಾ ಕಡಿಮೆ. ಅಮೆರಿಕ ಮತ್ತು ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶಗಳಾಗಿದ್ದು, ಇರಾನ್‌ಗೆ ಹೋಲಿಸಿದರೆ ಭಾರತವು ಇವುಗಳೊಂದಿಗೆ ಸುಮಾರು 120 ಪಟ್ಟು ಹೆಚ್ಚು ವ್ಯಾಪಾರ ಮಾಡುತ್ತದೆ. ವ್ಯಾಪಾರದಲ್ಲಿ 20ನೇ ಸ್ಥಾನದಲ್ಲಿರುವ ಕೆನಡಾದೊಂದಿಗೆ ಭಾರತ ನಡೆಸುವ ವ್ಯಾಪಾರವೂ ಇರಾನ್‌ಗಿಂತ ಕನಿಷ್ಠ 8 ಪಟ್ಟು ಹೆಚ್ಚಿದೆ.

5. ಇಲ್ಲಿ ವ್ಯಾಪಾರಕ್ಕಿಂತಲೂ ಭೂ-ರಾಜಕೀಯ ಪರಿಸ್ಥಿತಿ ಮುಖ್ಯವಾಗಿದೆ. ಇರಾನ್ ಭಾರತಕ್ಕೆ ಒಂದು ಪ್ರಮುಖ ಪಾಲುದಾರ ದೇಶವಾಗಿದೆ. ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲು ಭಾರತ ಮತ್ತು ಇರಾನ್ ಸೇರಿ ‘ಚಾಬಹಾರ್ ಬಂದರು’ ಅಭಿವೃದ್ಧಿಪಡಿಸಲು ಯತ್ನಿಸುತ್ತಿವೆ. ಭೂ-ರಾಜಕೀಯ ವಿಷಯವನ್ನು ಹೊರಗಿಟ್ಟು ನೋಡಿದರೆ, ಭಾರತವು ಇರಾನ್ ಜೊತೆಗಿನ ವ್ಯಾಪಾರವನ್ನು ನಿಲ್ಲಿಸಿದರೂ ವಿಶೇಷ ಹಾನಿಯೇನೂ ಆಗುವುದಿಲ್ಲ. ಆದರೆ, ಅಮೆರಿಕ ವಿಧಿಸುವ ಹೆಚ್ಚುವರಿ ಆಮದು ಸುಂಕವು ಭಾರತಕ್ಕೆ ಮಾರಕವಾಗಬಹುದು. ಆದಾಗ್ಯೂ, ಭಾರತವು ಅಮೆರಿಕದ ದರ್ಪಕ್ಕೆ ತಲೆಬಾಗುವುದಿಲ್ಲ ಎಂಬುದು ಅಷ್ಟೇ ಸತ್ಯವಾಗಿದೆ.

 

ಸಂಪಾದಕೀಯ ನಿಲುವು

ಟ್ರಂಪ್ ಅವರ ಈ ದಾದಾಗಿರಿಯನ್ನು ಮಟ್ಟಹಾಕಲು ವಿಶ್ವದ ದೇಶಗಳು ಸಂಘಟಿತವಾಗಿ ಪ್ರಯತ್ನಿಸುವುದು ಅಗತ್ಯವಾಗಿದೆ ಎಂಬ ಚಿತ್ರಣ ಮೂಡುತ್ತಿದೆ!