ಕಳ್ಳತನದ ಆರೋಪ; ಬೆನ್ನಟ್ಟಿದ ಗುಂಪು, ಕಾಲುವೆಗೆ ಜಿಗಿದ ಯುವಕನ ದುರ್ಮರಣ

ಬಾಂಗ್ಲಾದೇಶ: ಇನ್ನೊಬ್ಬ ಹಿಂದೂವಿನ ಸಾವು

ಢಾಕಾ (ಬಾಂಗ್ಲಾದೇಶ) – ನಾವೋಗಾಂವ್ ಜಿಲ್ಲೆಯ ಹಾಟ್ ಚಕ್ಗೌರಿ ಬಜಾರ್ ಪ್ರದೇಶದಲ್ಲಿ ಮಿಥುನ್ ಸರಕಾರ್ (25 ವರ್ಷ) ಎಂಬ ಹಿಂದೂ ಯುವಕನ ಮೇಲೆ ಕಳ್ಳತನದ ಆರೋಪ ಹೊರಿಸಿ ಮತಾಂಧ ಮುಸ್ಲಿಮರು ಆತನನ್ನು ಹಿಡಿಯಲು ಯತ್ನಿಸಿದರು. ಪ್ರಾಣ ಭಯದಿಂದ ತಪ್ಪಿಸಿಕೊಳ್ಳಲು ಮಿಥುನ್ ಹತ್ತಿರದ ಕಾಲುವೆಗೆ ಜಿಗಿದಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈತ ಭಂಡಾರಪುರ ಗ್ರಾಮದ ನಿವಾಸಿಯಾಗಿದ್ದನು. 4 ಗಂಟೆಗಳ ನಂತರ ಮಿಥುನ್ ಶವವನ್ನು ಕಾಲುವೆಯಿಂದ ಹೊರತೆಗೆಯಲಾಯಿತು. ಮಿಥುನ್ ನಿಜವಾಗಿಯೂ ಕಳ್ಳತನದಲ್ಲಿ ಭಾಗಿಯಾಗಿದ್ದನೇ ಇಲ್ಲವೇ ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಬಾಂಗ್ಲಾದೇಶದಲ್ಲಿ 35 ದಿನಗಳಲ್ಲಿ 11 ಹಿಂದೂಗಳ ಹತ್ಯೆ!

ಬಾಂಗ್ಲಾದೇಶದಲ್ಲಿ ಕಳೆದ 35 ದಿನಗಳಲ್ಲಿ 11 ಹಿಂದೂಗಳನ್ನು ಹತ್ಯೆ ಮಾಡಲಾಗಿದೆ. ಇದಲ್ಲದೆ ಅನೇಕ ಕಡೆಗಳಲ್ಲಿ ಹಿಂದೂಗಳ ಮೇಲೆ ದಾಳಿಗಳು ನಡೆದಿವೆ. ಕೇವಲ ಡಿಸೆಂಬರ್ ತಿಂಗಳೊಂದರಲ್ಲೇ ಇಂತಹ 51 ಘಟನೆಗಳು ದಾಖಲಾಗಿವೆ. ಇತ್ತೀಚೆಗೆ ನರಸಿಂಗದಿಯಲ್ಲಿ 40 ವರ್ಷದ ಹಿಂದೂ ವ್ಯಾಪಾರಿ ಶರತ್ ಚಕ್ರವರ್ತಿ ಮಣಿ ಎಂಬುವವರನ್ನು ಮತಾಂಧ ಮುಸ್ಲಿಮರು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಂದಿದ್ದರು. ಈ ಹತ್ಯೆಯನ್ನು ಪ್ರತಿಭಟಿಸಿ ವ್ಯಾಪಾರಿಗಳು ಮಾರುಕಟ್ಟೆ ಬಂದ್ ಮಾಡಿದ್ದಲ್ಲದೆ, ನ್ಯಾಯಕ್ಕಾಗಿ ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿದ್ದರು. ಹಂತಕರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಒತ್ತಾಯಿಸಲಾಯಿತು. ಹಿಂದೂಗಳು ಎಷ್ಟೇ ಪ್ರತಿಭಟನೆ ನಡೆಸಿದರೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ನಿರಂತರವಾಗಿ ಸಾಗುತ್ತಿದೆ. ಕಟ್ಟರಪಂಥೀಯರ ವಿರುದ್ಧ ಧ್ವನಿ ಎತ್ತಿದರೆ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

1. ಡಿಸೆಂಬರ್ 2, 2025 ರಂದು ನರಸಿಂಗದಿಯ ರಾಯಪುರದಲ್ಲಿ 42 ವರ್ಷದ ಪ್ರತೋಷ್ ಕರ್ಮಕರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅದೇ ದಿನ ಫರೀದ್‌ಪುರ ಜಿಲ್ಲೆಯ ಸಾಲ್ತಾದ ನಿವಾಸಿ, 35 ವರ್ಷದ ಮೀನು ವ್ಯಾಪಾರಿ ಉತ್ಪಲ್ ಸರಕಾರ್ ಅವರನ್ನೂ ಹತ್ಯೆ ಮಾಡಲಾಯಿತು.

2. ಡಿಸೆಂಬರ್ 7 ರಂದು ಸ್ವಾತಂತ್ರ್ಯ ಹೋರಾಟಗಾರ ಮತ್ತು 1971 ರ ಬಾಂಗ್ಲಾದೇಶ ವಿಮೋಚನಾ ಸಂಗ್ರಾಮದ ಯೋಧ ಜೋಗೇಶ್ ಚಂದ್ರ ರಾಯ್ ಮತ್ತು ಅವರ ಪತ್ನಿ ಸುಬೋರ್ಣಾ ರಾಯ್ ಅವರನ್ನು ಮನೆಯಲ್ಲೇ ಗಂಟಲು ಸೀಳಿ ಕೊಲೆ ಮಾಡಲಾಯಿತು ಈ ಘಟನೆ ರಂಗಪುರದಲ್ಲಿ ವರದಿಯಾಗಿತ್ತು.

3. ಡಿಸೆಂಬರ್ 12 ರಂದು ಕುಮಿಲ್ಲಾದಲ್ಲಿ 18 ವರ್ಷದ ರಿಕ್ಷಾ ಚಾಲಕ ಶಾಂತ ದಾಸ್ ಎಂಬುವವರ ಕತ್ತು ಸೀಳಿ, ಶವವನ್ನು ಹೊಲವೊಂದರಲ್ಲಿ ಎಸೆಯಲಾಗಿತ್ತು.

4. ಡಿಸೆಂಬರ್ 18 ಮೈಮನ್ಸಿಂಗ್‌ನ ಭಾಲುಕಾದಲ್ಲಿ 27 ವರ್ಷದ ದೀಪು ದಾಸ್ ಎಂಬ ಯುವಕನನ್ನು ಕಾರ್ಖಾನೆಯಿಂದ ಎಳೆದು ತಂದ ಗುಂಪೊಂದು ಹೊಡೆದು ಸಾಯಿಸಿತು. ನಂತರ ಆತನ ಶವವನ್ನು ಮರಕ್ಕೆ ನೇತುಹಾಕಲಾಯಿತು.

5. ಡಿಸೆಂಬರ್ 24: ರಾಜಬಾರಿ ಜಿಲ್ಲೆಯಲ್ಲಿ ಅಮೃತ್ ಮಂಡಲ್ ಎಂಬುವವರನ್ನು ಹೊಡೆದು ಕೊಲ್ಲಲಾಯಿತು. ಡಿಸೆಂಬರ್ 29 ರಂದು ಅರೆಸೇನಾ ಪಡೆ ‘ಅನ್ಸಾರ್ ವಾಹಿನಿ’ಯ ಹಿಂದೂ ಸದಸ್ಯ ಬಜೇಂದ್ರ ವಿಶ್ವಾಸ್ ಅವರನ್ನು ಗುಂಡಿಕ್ಕಿ ಹತ್ಯೆಮಾಡಲಾಯಿತು. ಈ ಘಟನೆ ಮಾಯಮನಸಿಂಹ ಪ್ರದೇಶದಲ್ಲಿ ನಡೆದಿತ್ತು.

6. ಜನವರಿ 3: ಹಿಂದೂ ವ್ಯಾಪಾರಿ ಖೋಕನ್ ಚಂದ್ರ ದಾಸ್ ಅವರು ಮನೆಗೆ ಹೋಗುತ್ತಿದ್ದಾಗ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಲಾಯಿತು. ನಂತರ ಅವರ ಮೇಲೆ ಪೆಟ್ರೋಲ್ ಸುರಿದು ಜೀವಂತ ಸುಡಲಾಯಿತು.

7. ಜನವರಿ 5 ರಂದು ಸ್ಥಳೀಯ ದಿನಪತ್ರಿಕೆಯ ಕಾರ್ಯಕಾರಿ ಸಂಪಾದಕ ಮತ್ತು ಐಸ್ ಫ್ಯಾಕ್ಟರಿ ಮಾಲೀಕ ರಾಣಾ ಪ್ರತಾಪ್ ಬೈರಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅದರ ಬೆನ್ನಲ್ಲೇ ಜನವರಿ 6 ರಂದು ಶರತ್ ಚಕ್ರವರ್ತಿ ಅವರನ್ನು ಕಟ್ಟರಪಂಥೀಯರು ಹತ್ಯೆ ಮಾಡಿದರು.