ಅಮೆರಿಕದ ರೈತರಿಗೆ ಹಾನಿಯಾಗುತ್ತಿರುವುದರಿಂದ ಭಾರತೀಯ ಅಕ್ಕಿಯ ಮೇಲೆ ಹೆಚ್ಚುವರಿ ಸುಂಕ ವಿಧಿಸಲು ಚಿಂತನೆ! : Indian Rice Trump Tariff

ಅಮೆರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ತುಘಲಕ್’ ಘೋಷಣೆ!

ವಾಷಿಂಗ್ಟನ್ (ಅಮೆರಿಕ) – ಅಮೆರಿಕಕ್ಕೆ ಭಾರತದಿಂದ ಆಮದಾಗುವ ಅಕ್ಕಿ ಮತ್ತು ಕೆನಡಾದಿಂದ ಆಮದಾಗುವ ರಸಗೊಬ್ಬರಗಳ ಮೇಲೆ ಹೆಚ್ಚುವರಿ ಸುಂಕ (ಟ್ಯಾರಿಫ್) ವಿಧಿಸುವ ಬಗ್ಗೆ ಅಮೆರಿಕದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಶ್ವೇತಭವನದಲ್ಲಿ ಮಾತನಾಡುತ್ತಿದ್ದರು. ಟ್ರಂಪ್ ಅವರು ಈಗಾಗಲೇ ಭಾರತದ ಮೇಲೆ ಒಟ್ಟು ಶೇ. 50ರಷ್ಟು ಸುಂಕ ವಿಧಿಸಿದ್ದಾರೆ.

1. ಟ್ರಂಪ್ ಅವರು, ಇತರ ದೇಶಗಳಿಂದ ಬರುತ್ತಿರುವ ಅಗ್ಗದ ಸರಕುಗಳು ಅಮೆರಿಕದ ರೈತರಿಗೆ ಹಾನಿ ಮಾಡುತ್ತಿವೆ ಎಂದರು. ಭಾರತ, ವಿಯೆಟ್ನಾಂ ಮತ್ತು ಥೈಲ್ಯಾಂಡ್‌ನಂತಹ ದೇಶಗಳು ಅಮೆರಿಕದಲ್ಲಿ ಅತ್ಯಂತ ಅಗ್ಗದ ಅಕ್ಕಿಯನ್ನು ಮಾರಾಟ ಮಾಡುತ್ತಿವೆ, ಇದರಿಂದ ಇಲ್ಲಿನ ರೈತರ ಆದಾಯ ಕಡಿಮೆಯಾಗುತ್ತಿದೆ.

2. ಈ ಸಂದರ್ಭದಲ್ಲಿ ಟ್ರಂಪ್ ಅವರು ತಮ್ಮ ಹಣಕಾಸು ಸಚಿವರನ್ನು, ಭಾರತಕ್ಕೆ ಅಕ್ಕಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವಿನಾಯಿತಿ ಸಿಕ್ಕಿದೆಯೇ ಎಂದು ಕೇಳಿದರು. ಇದಕ್ಕೆ ಸಚಿವರು, ಎರಡೂ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಪ್ರಸ್ತುತ ಚರ್ಚೆ ನಡೆಯುತ್ತಿದೆ, ಎಂದು ಉತ್ತರಿಸಿದರು.

ಅಕ್ಕಿಯ ಮೇಲೆ ಸುಂಕ ವಿಧಿಸಿದರೆ ಏನಾಗಬಹುದು?

ಟ್ರಂಪ್ ಅವರು ಭಾರತೀಯ ಅಕ್ಕಿಯ ಮೇಲೆ ಹೆಚ್ಚುವರಿ ಸುಂಕ ವಿಧಿಸಿದರೆ, ಭಾರತದಿಂದ ಅಮೆರಿಕಕ್ಕೆ ಹೋಗುವ ಅಕ್ಕಿ ಬಹಳ ದುಬಾರಿಯಾಗಲಿದೆ. ಇದರಿಂದ ಅಮೆರಿಕದಲ್ಲಿ ಭಾರತೀಯ ಅಕ್ಕಿಯನ್ನು ಖರೀದಿಸುವ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ; ಏಕೆಂದರೆ ಬೆಲೆಗಳು ಹೆಚ್ಚಾಗುತ್ತವೆ. ಅಲ್ಲದೆ, ಅಮೆರಿಕಕ್ಕೆ ಅಕ್ಕಿ ರಫ್ತು ಮಾಡುವ ಭಾರತದ ರೈತರು ಮತ್ತು ರಫ್ತುದಾರರು ನಷ್ಟ ಅನುಭವಿಸಬೇಕಾಗಬಹುದು.

ದುಬಾರಿಯಾದ ಕಾರಣ ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಅಕ್ಕಿಯ ಬೇಡಿಕೆ ಕಡಿಮೆಯಾಗಬಹುದು. ಭಾರತವು ಅಮೆರಿಕಕ್ಕೆ ದೊಡ್ಡ ಪ್ರಮಾಣದಲ್ಲಿ ಅಕ್ಕಿ ರಫ್ತು ಮಾಡುವುದಿಲ್ಲ. ಆದ್ದರಿಂದ ಈ ನಿರ್ಧಾರವು ಭಾರತದ ಸಂಪೂರ್ಣ ಅಕ್ಕಿ ಉದ್ಯಮದ ಮೇಲೆ ಪರಿಣಾಮ ಬೀರುವುದಿಲ್ಲ; ಆದರೆ ಯಾರ ವ್ಯವಹಾರವು ನೇರವಾಗಿ ಅಮೆರಿಕದೊಂದಿಗೆ ಸಂಬಂಧ ಹೊಂದಿದೆಯೋ, ಅವರಿಗೆ ಖಂಡಿತವಾಗಿಯೂ ತೊಂದರೆಯಾಗುತ್ತದೆ. ಭಾರತವು ಮತ್ತೆ ಅಕ್ಕಿ ಮಾರಾಟ ಮಾಡಬಹುದಾದ ಹೊಸ ದೇಶಗಳನ್ನು ಹುಡುಕಬೇಕಾಗುತ್ತದೆ.

ಸಂಪಾದಕೀಯ ನಿಲುವು

ಭಾರತದಿಂದಲ್ಲ, ಬದಲಿಗೆ ಸ್ವತಃ ಟ್ರಂಪ್ ಅವರಿಂದಲೇ ಅಮೆರಿಕಕ್ಕೆ ಹೆಚ್ಚಿನ ಹಾನಿಯಾಗುತ್ತಿದೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದೆ. ಟ್ರಂಪ್ ಇನ್ನೂ 3 ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದ್ದಾರೆ. ಈ ಅವಧಿಯಲ್ಲಿ ಅಮೆರಿಕದ ಪರಿಸ್ಥಿತಿ ಹದಗೆಡುವುದರಲ್ಲಿ ಸಂಶಯವಿಲ್ಲ ಎಂಬ ಚಿತ್ರಣವಿದೆ. ಇದರ ಬಗ್ಗೆ ಅಮೆರಿಕದ ರೈತರು ಮತ್ತು ಸಾರ್ವಜನಿಕರು ಯೋಚಿಸಬೇಕು!